ಸಂವಿಧಾನ ಪೀಠಿಕೆಯು ಸಂವಿಧಾನದ ಆಶಯಗಳು, ಮೂಲಭೂತ ತತ್ವಗಳು ಮತ್ತು ಆದರ್ಶಗಳನ್ನು ಪ್ರತಿಫಲಿಸುವ ಕನ್ನಡಿಯಿದ್ದಂತೆ. ಅದು ಸಂವಿಧಾನವನ್ನು ವ್ಯಾಖ್ಯಾಯಿಸಲು ಮಾರ್ಗದರ್ಶಿಕೆಯೂ ಕೂಡ. ಈ ಪೀಠಿಕೆಯು ಭಾರತವನ್ನು ನ್ಯಾಯ, ಸಮಾನತೆ, ಸ್ವಾತಂತ್ರ್ಯ ಮತ್ತು ಭ್ರಾತೃತ್ವಕ್ಕೆ ಬದ್ಧರಾಗಿರುವ ಸಾರ್ವಭೌಮ, ಸಮಾಜವಾದಿ, ಧರ್ಮನಿರಪೇಕ್ಷ, ಪ್ರಜಾಸತ್ತಾತ್ಮಕ ಗಣರಾಜ್ಯವೆಂದು ಘೋಷಿಸುತ್ತದೆ. ಈ ಪೀಠಿಕೆಯು ನೀತಿ ನಿರೂಪಕರಿಗೆ ನೈತಿಕ ಮಾರ್ಗಸೂಚಿಯೂ ಆಗಿದೆ.
ಬಿಜೆಪಿಯವರು ತಮ್ಮ ಪಕ್ಷದ ಸಂವಿಧಾನದಲ್ಲಿ ಭಾರತದ ಸಂವಿಧಾನ ಮತ್ತು ಅದರ ಆಶಯಗಳಾದ ‘ಸಮಾಜವಾದ’ ಮತ್ತು ‘ಜಾತ್ಯತೀತ’ತೆಗೆ ಬದ್ಧರಾಗಿರುವುದಾಗಿ ಘೋಷಿಸಿಕೊಂಡಿದ್ದಾರೆ. ತಾವು ಸಮಾಜೋ-ಆರ್ಥಿಕ ಸಮಸ್ಯೆಗಳನ್ನು ಪರಿಹರಿಸಲು ಗಾಂಧಿವಿಧಾನವನ್ನು ಮತ್ತು ಸಕಾರಾತ್ಮಕ ಜಾತ್ಯತೀತತೆ ಪಾಲಿಸುವದಾಗಿಯೂ ದಾಖಲಿಸಿದ್ದಾರೆ. ವಾಜಪೇಯಿಯವರು ಪ್ರಧಾನಿಯಾಗಿದ್ದಾಗ ತಮ್ಮದು ಗಾಂಧಿ ಸಮಾಜವಾದವೆಂದೇ ಪ್ರತಿಪಾದಿಸುತ್ತಿದ್ದರು. ಗಾಂಧಿಯವರು ಸಮಾಜವಾದವೆಂದರೇನೇ ಸರ್ವಧರ್ಮ ಸಮಭಾವ ಮತ್ತು ಪ್ರಜಾಸತ್ತಾತ್ಮಕ ಸಾಮಾಜಿಕನ್ಯಾಯ, ಈಗ ಬಿಜೆಪಿ ಮತ್ತು ಆರ್.ಎಸ್.ಎಸ್.ನವರು ಸಮಾಜವಾದ ಮತ್ತು ಜಾತ್ಯತೀತತೆ ಪದಗಳನ್ನು ಸಂವಿಧಾನ ಪೀಠಿಕೆಯಿಂದ ಕೈಬಿಡಬೇಕೆಂದು ಆಗ್ರಹಿಸುವ ಮೂಲಕ ಸಾಮಾಜಿಕ ಸೌಹಾರ್ದತೆ ಮತ್ತು ನ್ಯಾಯ ಎರಡನ್ನೂ ನಿರಾಕರಿಸುತ್ತಿದ್ದಾರೆ.
ಇತ್ತೀಚಿಗೆ ದಿಲ್ಲಿಯಲ್ಲಿ ತುರ್ತುಪರಿಸ್ಥಿತಿ ಕುರಿತ ಸಭೆಯಲ್ಲಿ ಮಾತನಾಡುತ್ತಿದ್ದ ಆರ್.ಎಸ್.ಎಸ್. ಬೌದ್ಧಿಕ ಪ್ರಮುಖ ದತ್ತಾತ್ರೇಯ ಹೊಸಬಾಳೆ ಮತ್ತು ಕೇಂದ್ರ ಸಚಿವ ನಿತಿನ್ ಗಡ್ಕರಿಯವರು ಉಲ್ಲೇಖಿತ ಪದಗಳನ್ನು ಕೈಬಿಡುವಂತೆ ಆಗ್ರಹಿಸಿದ್ದಾರೆ. ಬಿಜೆಪಿಯಲ್ಲಿ ಇದು ಹೊಸ ಬೆಳವಣಿಗೆಯೇನಲ್ಲ. ಬಿಜೆಪಿಯ ಸುಬ್ರಮಣಿಯನ್ ಸ್ವಾಮಿಯವರು, ಬೆಂಬಲಿಗ ನ್ಯಾಯವಾದಿಗಳಾದ ಬಲರಾಮಸಿಂಗ್ ಮತ್ತು ಅಶ್ವಿನ್ ಉಪಾಧ್ಯಾಯರವರು ಈ ಪದಗಳನ್ನು ಸಂವಿಧಾನಬಾಹಿರವೆಂದು ಘೋಷಿಸಬೇಕೆಂದು ಕೋರಿ ವರಿಷ್ಠ ನ್ಯಾಯಾಲಯದಲ್ಲಿ 2020ರಲ್ಲಿಯೇ ವ್ಯಾಜ್ಯ ದಾಖಲಿಸಿದ್ದರು. ಅದಕ್ಕೂ ಮುಂಚೆ ಜನತಾ ಪ್ರಾತಿನಿಧ್ಯ ಕಾಯಿದೆ (ತಿದ್ದುಪಡಿ), 1989ರ ಮೇರೆಗೆ ರಾಜಕೀಯ ಪಕ್ಷಗಳು ನೋಂದಾಯಿಸಿಕೊಳ್ಳುವಾಗ ಸಮಾಜವಾದ ಮತ್ತು ಜಾತ್ಯತೀತತೆಗೆ ಬದ್ಧರಾಗಿರುವದಾಗಿ ಘೋಷಿಸಿಕೊಳ್ಳಬೇಕಾದ ಪ್ರಮೇಯವನ್ನು ವರಿಷ್ಠ ನ್ಯಾಯಾಲಯದಲ್ಲಿ ಪ್ರಶ್ನಿಸಲಾಗಿತ್ತು.
ಸಂವಿಧಾನ ಪೀಠಿಕೆಯು ಸಂವಿಧಾನದ ಆಶಯಗಳು, ಮೂಲಭೂತ ತತ್ವಗಳು ಮತ್ತು ಆದರ್ಶಗಳನ್ನು ಪ್ರತಿಫಲಿಸುವ ಕನ್ನಡಿಯಿದ್ದಂತೆ. ಅದು ಸಂವಿಧಾನವನ್ನು ವ್ಯಾಖ್ಯಾನಿಸಲು ಮಾರ್ಗದರ್ಶಿಕೆಯೂ ಕೂಡ. ಈ ಪೀಠಿಕೆಯು ಭಾರತವನ್ನು ನ್ಯಾಯ, ಸಮಾನತೆ, ಸ್ವಾತಂತ್ರ್ಯ ಮತ್ತು ಭ್ರಾತೃತ್ವಕ್ಕೆ ಬದ್ಧರಾಗಿರುವ ಸಾರ್ವಭೌಮ, ಸಮಾಜವಾದಿ, ಧರ್ಮನಿರಪೇಕ್ಷ, ಪ್ರಜಾಸತ್ತಾತ್ಮಕ ಗಣರಾಜ್ಯವೆಂದು ಘೋಷಿಸುತ್ತದೆ. ಈ ಪೀಠಿಕೆಯು ನೀತಿ ನಿರೂಪಕರಿಗೆ ನೈತಿಕ ಮಾರ್ಗಸೂಚಿಯೂ ಆಗಿದೆ. ಸಂವಿಧಾನ ಪೀಠಿಕೆಯು ದೇಶದ ನಾಗರಿಕರ ವೈವಿಧ್ಯಮಯ ಹಿನ್ನೆಲೆ, ಅವರ ಭಾಷಿಕ, ಸಾಂಸ್ಕೃತಿಕ ಮತ್ತು ಧಾರ್ಮಿಕ ವಿವಿಧತೆಗಳನ್ನು ಮಾನ್ಯ ಮಾಡುವುದರ ಜೊತೆಗೆ ದೇಶದ ಏಕತೆ ಮತ್ತು ಸಮಗ್ರತೆಗಳನ್ನು ಎತ್ತಿಹಿಡಿಯುತ್ತದೆ. ಸಂವಿಧಾನ ಪೀಠಿಕೆಯ ಪ್ರಾರಂಭದಲ್ಲಿರುವ “ನಾವು, ಭಾರತದ ಜನತೆ” ಎಂಬ ನುಡಿಗಟ್ಟು ಭಾರತೀಯ ನಾಗರಿಕರೇ ಈ ದೇಶದ ಸಾರ್ವಭೌಮರು ಮತ್ತು ಸರಕಾರವು ನಾಗರಿಕರಿಗೆ ಉತ್ತರದಾಯಿಯಾಗಿದೆ ಮತ್ತು ಅಂತಿಮ ನಿರ್ಧಾರ ಜನಶಕ್ತಿಯೇ ಎಂದು ಸೂಚಿಸುತ್ತದೆ.

ಆಕ್ಷೇಪಣೆಕಾರರು ಉಲ್ಲೇಖಿತ ಪದಗಳನ್ನು ಕೈಬಿಡಲು ತಮ್ಮದೇ ಆದ ಕಾರಣಗಳನ್ನು ಪಟ್ಟಿ ಮಾಡುತ್ತಾರೆ. ಮೊದಲನೆಯದಾಗಿ ಧರ್ಮ ನಿರಪೇಕ್ಷತೆ ಮತ್ತು ಸಮಾಜವಾದ ಪದಗಳು ಮೂಲ ಸಂವಿಧಾನ ಪೀಠಿಕೆಯಲ್ಲಿರಲಿಲ್ಲವೆಂದು ಮತ್ತು ಅವುಗಳ ಸೇರ್ಪಡೆಯನ್ನುಅಂಬೇಡ್ಕರರವರೇ ವಿರೋಧಿಸಿದ್ದರೆಂದು ಪ್ರತಿಪಾದಿಸುತ್ತಾರೆ. ಮೇಲಾಗಿ ಈ ಪದಗಳು ಪಾಶ್ಚಾತ್ಯ ಭಾವವನ್ನು ಸ್ಪುರಿಸುವುದರಿಂದ ಇವು ಭಾರತೀಯತೆಗೆ ವಿರುದ್ಧವಾಗಿವೆ ಎನ್ನುತ್ತಾರೆ. ಮೂಲ ಪೀಠಿಕೆಯಲ್ಲಿಲ್ಲದ ಈ ಪದಗಳನ್ನು 1976ರಲ್ಲಿ ತರಾತುರಿಯಲ್ಲಿ ಪೂರ್ವಾನ್ವಯವಾಗುವಂತೆ ಸೇರಿಸಿರುವುದು ಅಸಂವಿಧಾನಿಕವೆಂದು ಹೇಳಲಾಗುತ್ತಿದೆ. ಸಂವಿಧಾನ ಕರಡು ರಚನಾ ಸಮಿತಿಯ ಸಭೆಯಲ್ಲಿಯೇ ಈ ಪದಗಳನ್ನು ತಿರಸ್ಕರಿಸಲಾಗಿತ್ತು ಎನ್ನಲಾಗುತ್ತಿದೆ.
ಆಕ್ಷೇಪಣೆಕಾರರ ಮುಖ್ಯ ತಕರಾರು ಡಾ. ಅಂಬೇಡ್ಕರ್ ರವರು ಸಂವಿಧಾನ ಕರಡು ರಚನಾ ಸಮಿತಿಯಲ್ಲಿ ತಾಳಿದ ನಿಲುವಿನ ಮೇಲೆ ನಿಂತಿದೆ. ಸಂವಿಧಾನ ಕರಡು ರಚನಾಸಮಿತಿಯ ಸದಸ್ಯರಾಗಿದ್ದ ಪ್ರೊ. ಶಹಾ ಎಂಬುವವರು ಸಂವಿಧಾನದ ಕರಡು ಪ್ರತಿಗೆ ತಿದ್ದುಪಡಿಯನ್ನು ಸೂಚಿಸುತ್ತಾ ಭಾರತವನ್ನು ‘ಜಾತ್ಯತೀತ, ಸಂಯುಕ್ತ ರಾಜ್ಯಗಳ ಸಮಾಜವಾದಿ ಒಕ್ಕೂಟ’ ಎಂದು ಕರೆಯಬೇಕೆಂದು ಪ್ರಸ್ತಾಪಿಸಿದ್ದರು. ಆದರೆ, ಸಂವಿಧಾನ ಕರಡು ರಚನಾ ಸಮಿತಿಯ ಅಧ್ಯಕ್ಷರಾಗಿದ್ದ ಡಾ.ಅಂಬೇಡ್ಕರವರು ಈ ಪದಗಳನ್ನು ಪೀಠಿಕೆಯಲ್ಲಿ ಸೇರಿಸುವುದನ್ನು ವಿರೋಧಿಸಿದ್ದರು. ಭವಿಷ್ಯತ್ತಿನಲ್ಲಿ ದೇಶದ ಸಾಮಾಜಿಕ ಮತ್ತು ಆರ್ಥಿಕ ನೀತಿಯು ಹೇಗಿರಬೇಕೆಂದು ನಿರ್ದೇಶಿಸುವ ಈ ಪದಗಳು ಪ್ರಜಾಪ್ರಭುತ್ವ, ವೈಯಕ್ತಿಕ ಸ್ವಾತಂತ್ರ್ಯ ಮತ್ತು ಜನಸಾರ್ವಭೌಮತ್ವಕ್ಕೆ ವಿರುದ್ಧವಾಗಿವೆ ಎಂದೇ ಅವರು ಪ್ರತಿಪಾದಿಸಿದ್ದರು. ಸದರಿ ಸಾರ್ವಜನಿಕನೀತಿ ಸೂಚಕ ಪದಗಳನ್ನು ಸಂವಿಧಾನದಲ್ಲಿ ಸೇರಿಸುವ ಮೂಲಕ ಮುಂದಿನ ಪೀಳಿಗೆಗಳನ್ನು ಸೈದ್ಧಾಂತಿಕ ಕಟ್ಟಳೆಯಲ್ಲಿ ಬಂಧಿಸುವುದು ಸಾಧುವಲ್ಲ ಎಂಬುದು ಅವರ ಅಭಿಪ್ರಾಯವಾಗಿತ್ತು. ಸಂವಿಧಾನವು ಒಂದು ಜೀವಂತ ದಾಖಲೆಯಾಗಿದ್ದು ಮುಂಬರುವ ಕಾಲದ ಅಗತ್ಯತೆಗಳಿಗೆ ಅನುಸಾರವಾಗಿ ಜನ ಸಾರ್ವಭೌಮರೇ ಸಮಾಜೋ-ಆರ್ಥಿಕ ನೀತಿಗಳನ್ನು ನಿರ್ಧರಿಸಬಹುದು ಎಂದು ಅವರು ಭಾವಿಸಿದ್ದರು. ಸೋಜಿಗವೆಂದರೆ ಸಂವಿಧಾನ ಪೀಠಿಕೆಗೆ ಪ್ರೇರಣೆಯಾಗಿದ್ದ ಪಂಡಿತ್ ನೆಹರುರವರು ಸಂವಿಧಾನ ಸಭೆಯಲ್ಲಿ ಮಂಡಿಸಿದ್ದ ‘ಧ್ಯೇಯಗಳ ಗೊತ್ತುವಳಿ’ ಯಲ್ಲಿ ಈ ಪದಗಳ ಉಲ್ಲೇಖವಿರಲಿಲ್ಲ. ಈ ಪದಗಳನ್ನು ಪೀಠಿಕೆಗೆ ಸೇರಿಸುವ ಕುರಿತಂತೆ ನೆಹರುರವರು ಅಂಬೇಡ್ಕರ್‌ರವರೊಂದಿಗೆ ಸಹಮತ ಹೊಂದಿದ್ದರು. ಹೀಗಾಗಿ ಪ್ರೊ. ಶಹಾ ಅವರ ತಿದ್ದುಪಡಿ ಪ್ರಸ್ತಾಪವು ತಿರಸ್ಕೃತವಾಯಿತು.
ಆದರೆ, ಡಾ. ಅಂಬೇಡ್ಕರರವರು ಪ್ರಜಾಸತ್ತಾತ್ಮಕ ನಿರ್ಧಾರಗಳಿಗೆ ಆದ್ಯತೆ ನೀಡಿದ್ದರೇ ಹೊರತು ಧರ್ಮನಿರಪೇಕ್ಷತೆ ಮತ್ತು ಸಮಾಜವಾದ ತಾತ್ವಿಕವಾಗಿ ವಿರೋಧಿಸಿರಲಿಲ್ಲವೆಂಬುದನ್ನು ಗಮನಿಸಬೇಕು. ಈ ಪದಗಳನ್ನು ಪೀಠಿಕೆಯಲ್ಲಿ ಸೇರಿಸುವ ಕುರಿತಂತೆ ತರಲಾದ ಸಂವಿಧಾನ ಕರಡು ತಿದ್ದುಪಡಿ ಕುರಿತು ಮಾತನಾಡುತ್ತಾ ಸಮಾಜವಾದಿ ವಿಚಾರಗಳು ಪ್ರಸ್ತಾಪಿತ ‘ರಾಜ್ಯನೀತಿಯ ನಿರ್ದೇಶಿತ ತತ್ವ’ಗಳಲ್ಲಿ ಅಡಕವಾಗಿರುವುದರಿಂದ ಸಮಾಜವಾದ ಪದವನ್ನು ಪ್ರತ್ಯೇಕವಾಗಿ ಸೇರಿಸುವ ಅಗತ್ಯವಿಲ್ಲವೆಂದು ಅಭಿಪ್ರಾಯಪಟ್ಟಿದ್ದರು. ಧರ್ಮನಿರಪೇಕ್ಷತೆ ಪದವನ್ನು ಪೀಠಿಕೆಗೆ ಸೇರಿಸುವ ಕುರಿತಂತೆ ಅವರದ್ದು ಇಂತಹದೇ ನಿಲುವಾಗಿತ್ತು. ಸಂವಿಧಾನ ಕರಡು ಪ್ರತಿಯ ಪ್ರಸ್ತಾಪಿತ ಮೂಲಭೂತ ಹಕ್ಕುಗಳು ಧಾರ್ಮಿಕ ಸ್ವಾತಂತ್ರ್ಯವನ್ನು ನೀಡುವುದಾಗಿಯೂ ಮತ್ತು ಧರ್ಮಾಧಾರಿತ ತಾರತಮ್ಯವನ್ನು ತಡೆಗಟ್ಟುವುದಾಗಿಯೂ ಅವರು ಪ್ರತಿಪಾದಿಸಿದ್ದರು.

ಇದನ್ನೂ ಓದಿ ಜಾತ್ಯತೀತ, ಸಮಾಜವಾದ ಬೇಡ; ಇದು ನೂರಕ್ಕೆ ನೂರು ಮೀಸಲಾತಿ ಪಡೆದವರ ಗೊಣಗಾಟ
ಬಿಜೆಪಿಯವರಿಗೆ ಹಣ್ಣಿನ ತಿರುಳು ಮುಖ್ಯವೋ ಅಥವಾ ಅದರ ಸಿಪ್ಪೆಯೋ ಎಂಬುದು ಸಾರ್ವಜನಿಕರಿಗೆ ದಿಗಿಲಾಗಿದೆ. ಏಕೆಂದರೆ, ಅವರು ವಿರೋಧಿಸುವ ಧರ್ಮನಿರಪೇಕ್ಷ ಮತ್ತು ಸಮಾಜವಾದಿ ತತ್ವಗಳು ಅಂಬೇಡ್ಕರವರೇ ಒಪ್ಪಿಕೊಂಡಿರುವಂತೆ ಸಂವಿಧಾನದಲ್ಲಿ ಹಾಸು ಹೊಕ್ಕಾಗಿವೆ. ಉದಾಹರಣೆಗೆ, ರಾಜ್ಯನೀತಿ ನಿರ್ದೇಶಿತ ತತ್ವಗಳಿಗೆ ಸಂಭಂಧಿಸಿದ ವಿಧಿಗಳು (38 ರಿಂದ 42) ಸಮಾಜವಾದಿ ತತ್ವಗಳ ಕುರಿತು ನಿರ್ದೇಶಿಸುತ್ತವೆ. ರಾಜ್ಯನೀತಿ ನಿರ್ದೇಶಿತ ತತ್ವಗಳನ್ನು ನ್ಯಾಯಾಲಯದ ಮೂಲಕ ಜಾರಿ ತರಲು ಆಗದು. ಆದರೆ, ಚುನಾಯಿತ ಸರ್ಕಾರಗಳು, ಆಡಳಿತಗಾರರು ಮತ್ತು ಶಾಸಕರು ನೀತಿನಿರ್ಧಾರಗಳು ಮತ್ತು ಶಾಸನಗಳನ್ನು ರೂಪಿಸುವ ಈ ನಿರ್ದೇಶಿತ ತತ್ವಗಳು ಮಾರ್ಗದರ್ಶಿಕೆಯಾಗಿ ಕಾರ್ಯಮಾಡುತ್ತವೆ. ಸಂವಿಧಾನದ 38ನೇ ವಿಧಿಯು ಆದಾಯ, ಸ್ಥಾನ ಮತ್ತು ಅವಕಾಶಗಳಲ್ಲಿಯ ಅಸಮಾನತೆಗಳನ್ನು ಕಡಿಮೆ ಮಾಡುವುದರ ಮೂಲಕ ಸಮಾನ ಸಾಮಾಜಿಕ ವ್ಯವಸ್ಥೆಯನ್ನು ಪೋಷಿಸಬೇಕೆಂದು ನಿರ್ದೇಶಿಸುತ್ತದೆ. ಸಂವಿಧಾನದ 39ನೇ ವಿಧಿಯು ಸಂಪನ್ಮೂಲಗಳ ಸಮಾನ ಹಂಚಿಕೆ, ಸಂಪತ್ತಿನ ಕೇಂದ್ರೀಕರಣವನ್ನು ನಿರ್ಬಂಧಿಸುವುದು, ಸಮಾನ ಕೆಲಸಕ್ಕೆ ಸಮಾನವೇತನ, ಜೀವನೋಪಾಯಕ್ಕೆ ಸಮರ್ಪಕ ಅವಕಾಶಗಳು, ಕಾರ್ಮಿಕರ ಆರೋಗ್ಯರಕ್ಷಣೆ ಮತ್ತು ಮಕ್ಕಳ ಬೆಳವಣಿಗೆಗಾಗಿ ಸಾಕಷ್ಟು ಅವಕಾಶಗಳನ್ನು ಸೃಷ್ಟಿಸುವ ಕುರಿತಂತೆ ಸರ್ಕಾರಗಳಿಗೆ ನಿರ್ದೇಶಿಸುತ್ತದೆ. 41ನೇ ವಿಧಿಯು ಜನಸಾಮಾನ್ಯರಿಗೆ ಉದ್ಯೋಗ, ಶಿಕ್ಷಣ ಮತ್ತು ಸಾರ್ವಜನಿಕ ಸಹಾಯದ ಹಕ್ಕು ನೀಡುವ ಕುರಿತು ನಿರ್ದೇಶಿಸುತ್ತದೆ. 42ನೇ ವಿಧಿಯು ಕಾರ್ಮಿಕರು ಮತ್ತು ಕೆಲಸಗಾರರಿಗೆ ಕಾರ್ಯನಿರ್ವಹಿಸಲು ನ್ಯಾಯಯುತ ಮತ್ತು ಮಾನವೀಯ ಪರಿಸರವನ್ನು ದೊರಕಿಸಿಕೊಡುವಂತೆಯೂ ಮತ್ತು ಹೆಣ್ಣುಮಕ್ಕಳಿಗೆ ಹೆರಿಗೆ ಪರಿಹಾರವನ್ನು ನೀಡುವಂತೆಯೂ ನಿರ್ದೇಶಿಸುತ್ತದೆ.
ಈ ಸಮಾಜವಾದಿ ನಿರ್ದೇಶಿತ ತತ್ವಗಳು ಕೇವಲ ಸಂವಿಧಾನದ ಪುಟಗಳಿಗೆ ಮಾತ್ರ ಸೀಮಿತವಾಗದೇ ಕಾರ್ಯಕ್ಷೇತ್ರಕ್ಕೆ ಇಳಿದಿರುವುದು ನಿರ್ದೇಶಿತ ತತ್ವಗಳ ಬಗ್ಗೆ ವಿಶ್ವಾಸ ಮೂಡಿಸುತ್ತದೆ. 1970-80ರ ದಶಕಗಳಲ್ಲಿ ಬ್ಯಾಂಕುಗಳ ರಾಷ್ಟ್ರೀಕರಣ, ಕೈಗಾರಿಕೆಗಳು ಮತ್ತು ಗಣಿಗಳ ರಾಷ್ಟ್ರೀಕರಣ. ರಾಜಧನ ರದ್ದತಿ, ಭೂ ಸುಧಾರಣೆಗಳು, ಜೀತ ವಿಮುಕ್ತಿ, ಸಾಹುಕಾರಿ ಸಾಲದ ಶೋಷಣೆಗೆ ತಡೆ, ಕಡ್ಡಾಯ ಪ್ರಾಥಮಿಕ ಶಿಕ್ಷಣ ಮುಂತಾದ ಜನಪರ ಯೋಜನೆಗಳನ್ನು ಹಮ್ಮಿಕೊಳ್ಳುವ ಮೂಲಕ ಭಾರತ ಸರ್ಕಾರವು ಸಮಾಜವಾದ ಪ್ರಣೀತ ಸಮಸಮಾಜವನ್ನು ಕಟ್ಟುವತ್ತ ತನ್ನ ಬದ್ಧತೆಯನ್ನು ಪ್ರದರ್ಶಿಸಿದೆ. 1990ರ ದಶಕದ ಉದಾರವಾದಿ ಯುಗದಲ್ಲಿಯೂ ಎಲ್ಲ ಪ್ರಕರಣಗಳನ್ನು ಇಡಿಯಾಗಿ ಆಲಿಸಿದ ನ್ಯಾಯಾಲಯವು 2024ರಲ್ಲಿ ವಾದಿಗಳ ಮನವಿಯನ್ನು ತಳ್ಳಿಹಾಕುತ್ತ ಸಂವಿಧಾನ ಪೀಠಿಕೆಗೆ ‘ಜಾತ್ಯತೀತ’ ಮತ್ತು ‘ಸಮಾಜವಾದ’ ಪದಗಳ ಸೇರ್ಪಡಿಕೆ ಸಂವಿಧಾನಬದ್ಧವಾಗಿದೆ ಎಂದು ತೀರ್ಪು ನೀಡಿದೆ.
ಇದನ್ನೂ ಓದಿ ಜಾತ್ಯತೀತತೆ, ಸಮಾಜವಾದದ ಪ್ರಖರ ಪ್ರತಿಪಾದಕ ಬುದ್ಧ; ಇದನ್ನು ಮರೆಮಾಚಲಾಗದು ಆರ್‌ಎಸ್‌ಎಸ್
42 ಸಂವಿಧಾನಿಕ ತಿದ್ದುಪಡಿ ಕುರಿತಂತೆ ನ್ಯಾಯಾಂಗ ವಿಮರ್ಶೆಯು ಅಂತಿಮವಾಗಿರುವಾಗ ಬಿಜೆಪಿ ಮತ್ತು ಮಾತೃಸಂಘಟನೆಯವರು ಇನ್ನೂ ಹಳೆ ವಿವಾದಕ್ಕೇನೇ ಜೋತು ಬೀಳಲು ಕಾರಣವೇನು?! ಒಂದು ಪಕ್ಷ ಅವರು ಆಕ್ಷೇಪಿಸುವ ಪದಗಳನ್ನು ಕೈಬಿಟ್ಟರೆ ಸಂವಿಧಾನದ ಮೂಲಭೂತ ಹಕ್ಕುಗಳೂ ಮತ್ತು ನಿರ್ದೇಶಿತ ತತ್ವಗಳನ್ನೂ ಕೈಬಿಡಲು ಮುಂದೊಂದು ದಿನ ಆಗ್ರಹಿಸಬಹುದು! ಆಗ ಬಿಜೆಪಿಯವರು ಜಾತ್ಯತೀತತೆ ಮತ್ತು ಸಮಾಜವಾದ ಸಿದ್ಧಾಂತಗಳಿಗೆ ಪರ್ಯಾಯವಾಗಿ ಏನನ್ನು ಸ್ಥಾಪಿಸಲು ಬಯಸುತ್ತಾರೆ? ಜಾತ್ಯತೀತ ಭಾರತಕ್ಕೆ ಬದಲಾಗಿ ‘ಹಿಂದುತ್ವ’ವೇ ಮತ್ತು ಸಮಾಜವಾದಿ ಭಾರತಕ್ಕೆ ಪರ್ಯಾಯವಾಗಿ ‘ವೈದಿಕ ಆರ್ಥಿಕತೆ’ಯೇ ಎಂಬುದನ್ನು ಯೋಚಿಸಬೇಕಾಗಿದೆ.

ಅರವಿಂದ ದಳವಾಯಿ
ಪೂರ್ವ ವಾಣಿಜ್ಯ ತೆರಿಗೆ ಸಹಾಯಕ ಆಯುಕ್ತರು ಬೆಳಗಾವಿ ಜಿಲ್ಲೆ