ರಾಹುಲ್ ಗಾಂಧಿ ಜೊತೆಗೆ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ.ಶಿವಕುಮಾರ್ ಸಭೆ ಮಾಡುತ್ತಾರೆ ಎನ್ನುವುದು ಕೇವಲ ಊಹಾಪೋಹ. ಯಾವುದೇ ತರಹದ ನಾಯಕತ್ವದ ಬಗ್ಗೆ ಚರ್ಚೆ ಮಾಡುವ ಸಭೆ ನಿಗದಿಯಾಗಿಲ್ಲ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ, ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಸ್ಪಷ್ಟಪಡಿಸಿದರು.
ಕೆಪಿಸಿಸಿ ಕಚೇರಿಯಲ್ಲಿ ಬುಧವಾರ ಶಾಸಕರ ಜೊತೆ ಸಭೆ ನಡೆಸುವ ಮುನ್ನ ಮಾಧ್ಯಮಗಳ ಜೊತೆ ಮಾತನಾಡಿ, “ಕೇಂದ್ರದ ಅನುದಾನ ತಾರತಮ್ಯದ ಗಮನ ಸೆಳೆಯಲು ಸಿಎಂ, ಡಿಸಿಎಂ ದೆಹಲಿಗೆ ಹೋಗಿದ್ದಾರೆ. ಕಳಸಾ ಬಂಡೂರಿಗೆ ಕೇಂದ್ರ ಅನುಮತಿ ನೀಡಿಲ್ಲ. ಮೇಕೆದಾಟು ಯೋಜನೆಯನ್ನು ಹಿಡಿದಿಟ್ಟುಕೊಂಡಿದೆ. ಜಿಎಸ್ಟಿ ಪರಿಹಾರವನ್ನು ತಡೆಹಿಡಿಯಲಾಗಿದೆ. ಈ ಬಗ್ಗೆ ಕೇಂದ್ರ ಸಚಿವರನ್ನು ಭೇಟಿಯಾಗಿ ಚರ್ಚಿಸಲಿದ್ದಾರೆ” ಎಂದು ತಿಳಿಸಿದರು.
”ಸಂಪತ್ತಿನ ಅಸಮತೋಲನ ಹೆಚ್ಚಾಗಿದೆ. ಇದರ ಬಗ್ಗೆ ಎಲ್ಲಿಯೂ ಚರ್ಚೆಯಾಗುತ್ತಿಲ್ಲ. ಹಮೀರ್ ಔರ್ ಹಮೀರ್, ದಹೀರ್ ಔರ್ ದಹೀರ್ ಸ್ಥಿತಿ ಇದೆ. ಬಡವರು ಬಡವರಾಗುತ್ತಿದ್ದಾರೆ, ಶ್ರೀಮಂತರು ಶ್ರೀಮಂತರಾಗುತ್ತಿದ್ದಾರೆ. ದೇಶದ ಕ್ಯಾಪಿಟಲ್ ಆದಾಯ ಇಳಿಕೆಯಾಗುತ್ತಿದೆ. ಕಾಂಬೋಡಿಯಾ, ಕೀನ್ಯಾ, ಬಾಂಗ್ಲಾದೇಶಕ್ಕಿಂತ ಭಾರತ ಹಿಂದಿದೆ. ಹಸಿವಿನಿಂದ ಬಳಲುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ. 146 ದೇಶಗಳ ರ್ಯಾಂಕ್ನಲ್ಲಿ ಕೆಳಗಿಳಿದಿದ್ದೇವೆ. ಟೆಕ್ಸ್ ಟೈಲ್ ಆದಾಯ ಶೇ.30ರಷ್ಟು ಕಡಿತಗೊಂಡಿದೆ” ಎಂದು ಹೇಳಿದರು.
ಭಾರತ ಬಂದ್ ವಿಚಾರಕ್ಕೆ ಪ್ರತಿಕ್ರಿಯೆ ನೀಡಿ, ”ಐಎನ್ಟಿಯುಸಿ, ಟ್ರೇಡ್ ಯೂನಿಯನ್ ಇಂದು ಭಾರತ ಬಂದ್ಗೆ ಕರೆ ನೀಡಿವೆ. ಭಾರತ ಬಂದ್ ಕರೆದಿರುವ ಉದ್ದೇಶ ಕೇಂದ್ರದ ಮೋದಿಯವರ ನಡೆ. ದೇಶದಲ್ಲಿ ಯುವಕರಿಗೆ ಉದ್ಯೋಗ ಸಿಗುತ್ತಿಲ್ಲ. 30 ಲಕ್ಷ ಉದ್ಯೋಗಗಳು ಕೇಂದ್ರದಲ್ಲಿ ಖಾಲಿ ಇದೆ. 2.50 ಲಕ್ಷ ರೈಲ್ವೆ ಉದ್ಯೋಗ, ಆರ್ಮಿ, ನೇವಿ, ಏರ್ ಪೋರ್ಸ್ನಲ್ಲಿ 1 ಲಕ್ಷ ಹುದ್ದೆ, ವಿವಿಧ ಪೊಲೀಸ್ ಪೋರ್ಸ್ನಲ್ಲಿ 80 ಸಾವಿರ ಹುದ್ದೆ ಖಾಲಿ ಇದೆ. ಸಿಆರ್ಪಿಎಫ್, ಬಿಎಸ್ಎಫ್ ನೇಮಕಾತಿ ಪೆಂಡಿಂಗ್ ಇದೆ. ನಿರುದ್ಯೋಗದ ಪ್ರಮಾಣ ಶೇ. 30ಕ್ಕಿಂತ ಹೆಚ್ಚಿದೆ. ಶೇ. 10ರಷ್ಟು ಪದವೀಧರರು ನಿರುದ್ಯೋಗಿಗಳಾಗಿದ್ದಾರೆ. ನರೇಗಾ ಕಾರ್ಮಿಕರು ಕೇಂದ್ರದಿಂದ ದೌರ್ಜನ್ಯಕ್ಕೆ ಒಳಗಾಗುತ್ತಿದ್ದಾರೆ. ಮನರೇಗಾ ಅನುದಾನ ನಿಂತಲ್ಲೇ ನಿಂತಿದೆ” ಎಂದು ಟೀಕಿಸಿದರು.
”ತಿರುಪುರ್, ಪಾಟಿಯಾಲಾ, ಸೂರತ್ನಲ್ಲಿ ಉದ್ಯಮ ಕುಸಿದಿದೆ. ಶೇ. 80ರಷ್ಟು ಅಸಂಘಟಿತ ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಇವರೆಲ್ಲರಿಗೂ ಅಲ್ಲಿ ತೊಂದರೆಯಾಗಿದೆ. ಗುತ್ತಿಗೆ ಆಧಾರದ ಕೆಲಸ ಹೆಚ್ಚಾಗುತ್ತಿದೆ. ಇದನ್ನೆಲ್ಲ ಮುಂದಿಟ್ಟುಕೊಂಡೇ ಸಂಘಟನೆಗಳು ಬೀದಿಗಿಳಿದಿವೆ. ಸಣ್ಣ ಸಣ್ಣ ಉದ್ಯೋಗ ಬಂದ್ ಆಗಿವೆ. ಸರ್ಕಾರಿ ಉದ್ಯೋಗಗಳನ್ನು ಭರ್ತಿ ಮಾಡುತ್ತಿಲ್ಲ. ಇದಕ್ಕೆಲ್ಲ ಮೋದಿಯವರ ನಡೆಯೇ ಕಾರಣ. ಭಾರತ ಬಡತನದತ್ತ ಸಾಗುತ್ತಿದೆ. ಜೀವನ ಮಟ್ಟದಲ್ಲಿ ದೇಶ ಕುಸಿಯುತ್ತಿದೆ. ಉದ್ಯೋಗ ನೀಡುವುದರಲ್ಲೂ ಕುಸಿತವಾಗಿದೆ. 50 ಲಕ್ಷ ಕಾರ್ಮಿಕರು ಬೀದಿಗಿಳಿದಿದ್ದಾರೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.