ಅಲಹಾಬಾದ್ ಹೈಕೋರ್ಟ್ ನ್ಯಾಯಮೂರ್ತಿ ಶೇಖರ್ ಕುಮಾರ್ ಯಾದವ್ ಅವರು ನೀಡುವ ವಿವಾದಾತ್ಮಕ ಹೇಳಿಕೆಗಳಿಗಾಗಿ, ಅವರನ್ನು ಹುದ್ದೆಯಿಂದ ವಜಾ ಮಾಡುವ ಮಹಾಭಿಯೋಗ ಪ್ರಕ್ರಿಯೆಯನ್ನು ಮುಂದುವರೆಸಲು ಇಂಡಿಯನ್ ನ್ಯಾಷನಲ್ ಡೆವಲಪ್‌ಮೆಂಟಲ್ ಇನ್ಕ್ಲೂಸಿವ್ ಅಲೈಯನ್ಸ್ (INDIA)ನ ಒಕ್ಕೂಟವು ಮತ್ತೆ ಸಜ್ಜಾಗಿದೆ. ಈ ಬಾರಿಯ ಮುಂಗಾರು ಅಧಿವೇಶನದಲ್ಲಿ ಈ ವಿಚಾರ ಮತ್ತಷ್ಟು ಗಂಭೀರ ಆಯಾಮ ಪಡೆದುಕೊಳ್ಳಲಿದೆ.
ಕಳೆದ ವರ್ಷ ಡಿಸೆಂಬರ್ 8 ರಂದು ಪ್ರಯಾಗ್‌ರಾಜ್‌ನಲ್ಲಿ ವಿಶ್ವ ಹಿಂದೂ ಪರಿಷತ್ ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ಇದೇ ನ್ಯಾಯಮೂರ್ತಿ ಶೇಖರ್ ಯಾದವ್ ಅವರು ಅಲ್ಪಸಂಖ್ಯಾತರನ್ನು, ವಿಶೇಷವಾಗಿ ಮುಸ್ಲಿಮರನ್ನು ಗುರಿಯಾಗಿಸಿಕೊಂಡು ದ್ವೇಷ ಹೇಳಿಕೆ ನೀಡಿದ್ದರು. ‘ಭಾರತವು ಬಹುಸಂಖ್ಯಾತರ ಇಚ್ಛೆಯಂತೆ ಮಾತ್ರ ಕಾರ್ಯನಿರ್ವಹಿಸುತ್ತದೆ. ನಾಲ್ವರು ಪತ್ನಿಯರನ್ನು ಹೊಂದುವುದು ಮತ್ತು ತ್ರಿವಳಿ ತಲಾಖ್‌ನಂತಹ ಆಚರಣೆಗಳಲ್ಲಿ ತೊಡಗಿರುವವರು ರಾಷ್ಟ್ರಕ್ಕೆ ಮಾರಕ’ ಎಂದು ಮುಸ್ಲಿಮರನ್ನು ಗುರಿಯಾಗಿಸಿಕೊಂಡು ಹೇಳಿಕೆ ಮಾಡಿದ್ದರು. ಮಾತ್ರವಲ್ಲದೆ, ಮುಸ್ಲಿಮರ ಒಂದು ವರ್ಗವನ್ನು ಉಲ್ಲೇಖಿಸಲು ಅವರು ‘ಕಠ್ಮುಲ್ಲಾ’ ಎಂಬ ವಿವಾದಾತ್ಮಕ ಪದವನ್ನೂ ಬಳಸಿದ್ದರು.

‘ಮುಸ್ಲಿಂ ಮಕ್ಕಳು ಆರಂಭಿಕ ಹಂತದಿಂದಲೇ ಹಿಂಸಾಚಾರಕ್ಕೆ, ಪ್ರಾಣಿಗಳ ವಧೆಗೆ ಒಡ್ಡಿಕೊಳ್ಳುವುದರಿಂದ ಅವರು ಸಹಿಷ್ಣು ಮತ್ತು ಉದಾರರಾಗಿರುತ್ತಾರೆ ಎಂದು ನಿರೀಕ್ಷಿಸಲಾಗುವುದಿಲ್ಲ’ ಎಂದು ದ್ವೇಷ ಹೇಳಿಕೆ ನೀಡಿದ್ದರು. ಮುಂದುವರೆದು ಹಿಂದುಗಳಿಗೆ ಚಿಕ್ಕ ವಯಸ್ಸಿನಿಂದಲೇ ದಯೆಯ ಬಗ್ಗೆ ಕಲಿಸಲಾಗುತ್ತಿತ್ತು. ಆದ್ದರಿಂದಲೇ ಅವರ (ಹಿಂದು) ಮಕ್ಕಳಲ್ಲಿ ಅಹಿಂಸೆ ಮತ್ತು ಸಹಿಷ್ಣುತೆ ಬೇರೂರಿತ್ತು ಎಂದು ಹೇಳಿಕೆ ನೀಡುವ ಮೂಲಕ ಅಲ್ಪಸಂಖ್ಯಾತರ ಬಗೆಗೆ ಈ ದೇಶದ ನ್ಯಾಯಮೂರ್ತಿಯೊಬ್ಬರು ತಳೆದಿರುವ ಅಪಕ್ವ ನಿಲುವನ್ನು ತೆರೆದಿಟ್ಟಿದ್ದರು. ಅವರ ದ್ವೇಷದ ಹೇಳಿಕೆಗಳನ್ನು ಕೆಲ ರಾಜಕೀಯ ನಾಯಕರೂ, ನ್ಯಾಯಶಾಸ್ತ್ರಜ್ಞರೂ, ನಾಗರಿಕ ಸಮುದಾಯದವರೂ ತೀವ್ರವಾಗಿ ವಿರೋಧಿಸಿ ಆಕ್ರೋಶ ವ್ಯಕ್ತಪಡಿಸಿದರು.
55 ಮಂದಿ ವಿರೋಧ ಪಕ್ಷದ ಸಂಸದರು, ಹಿರಿಯ ವಕೀಲ ಕಪಿಲ್ ಸಿಬಲ್ ನೇತೃತ್ವದಲ್ಲಿ, ಯಾದವ್ ಅವರ ಭಾಷಣವನ್ನು “ನ್ಯಾಯಾಂಗ ಶಿಸ್ತಿಗೆ ವಿರುದ್ಧ” ಎಂದು ಆರೋಪಿಸಿ, ಅವರ ವಿರುದ್ಧ ಮಹಾಭಿಯೋಗ ಪ್ರಸ್ತಾಪವನ್ನು ರಾಜ್ಯಸಭೆಗೆ ಸಲ್ಲಿಸಿದರು.
ಜಸ್ಟೀಸ್ ಯಾದವ್ ವಿವಾದಾತ್ಮಕ ಹೇಳಿಕೆ ನೀಡಿರುವುದು ಮೊದಲೇನಲ್ಲ
2021ರಲ್ಲಿ ಸಂಭಾಲ್‌ನ ಮುಸ್ಲಿಂ ವ್ಯಕ್ತಿಯೊಬ್ಬರು ಹಸುವನ್ನು ಕದ್ದು ತನ್ನ ಸಹಚರರೊಂದಿಗೆ ಹತ್ಯೆ ಮಾಡಿದ ಆರೋಪಕ್ಕೆ ಗುರಿಯಾಗಿದ್ದರು. ಅವರಿಗೆ ಜಾಮೀನು ನಿರಾಕರಿಸಿದ ಜಸ್ಟೀಸ್ ಯಾದವ್, ಹಸುವನ್ನು “ರಾಷ್ಟ್ರೀಯ ಪ್ರಾಣಿ” ಎಂದು ಘೋಷಿಸಬೇಕು ಮತ್ತು ಗೋ ರಕ್ಷಣೆಯನ್ನು ಹಿಂದೂಗಳ ಮೂಲಭೂತ ಹಕ್ಕಾಗಿ ಸೇರಿಸಬೇಕು ಎಂದು ಪ್ರತಿಪಾದಿಸಿದ್ದರು. ಗೋಹತ್ಯೆಯ ಆರೋಪ ಹೊತ್ತವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಸಂಸತ್ತು ಕಾನೂನು ತರಬೇಕು. ʼದೇಶದ ನಂಬಿಕೆ ಮತ್ತು ಸಂಸ್ಕೃತಿಗೆ ಹಾನಿಯಾದಾಗ, ದೇಶವು ದುರ್ಬಲವಾಗುತ್ತದೆʼ ಎಂದು ವಾದಿಸಿದ್ದರು. ಈ ಮೂಲಕ ದೇಶದಲ್ಲಿ ಈಗಾಗಲೇ ಗೋ ರಕ್ಷಣೆ ಹೆಸರಿನಲ್ಲಿ ನಡೆಯುತ್ತಿರುವ ಅನಾಚಾರ, ಅಲ್ಪಸಂಖ್ಯಾತರ ಮೇಲಿನ ದೌರ್ಜನ್ಯಗಳನ್ನು ಪರೋಕ್ಷವಾಗಿ ಬೆಂಬಲಿಸಿದ್ದರು. ಆದರೆ, ಈ ಹೇಳಿಕೆ ಕುರಿತು ಪರ ವಿರೋಧ ಚರ್ಚೆಗಳು ಹೆಚ್ಚಾಗಿ ವಿವಾದ ಸೃಷ್ಟಿಯಾಯಿತು. ಜಾತ್ಯತೀತ ವಾದವನ್ನು ಪ್ರತಿಪಾದಿಸುವ ದೇಶವಾಸಿಗಳು ಜಸ್ಟೀಸ್ ಅವರ ಹೇಳಿಕೆಯನ್ನು ಸಾರಾಸಗಟಾಗಿ ತಳ್ಳಿಹಾಕಿದ್ದರು.
ಅದೇ ವರ್ಷ ಅಕ್ಟೋಬರ್‌ನಲ್ಲಿ, ನ್ಯಾಯಮೂರ್ತಿ ಯಾದವ್ ತಮ್ಮ ಆದೇಶದಲ್ಲಿ ಮತ್ತೊಂದು ಹೇಳಿಕೆ ನೀಡಿ, ಹಿಂದೂ ದೇವತೆಗಳಾದ ರಾಮ ಮತ್ತು ಕೃಷ್ಣ ಹಾಗೂ ಹಿಂದೂ ಪೌರಾಣಿಕ ಗ್ರಂಥಗಳಾದ ರಾಮಾಯಣ ಮತ್ತು ಗೀತೆ ಹಾಗೂ ಅವುಗಳ ಲೇಖಕರಾದ ವಾಲ್ಮೀಕಿ ಮತ್ತು ವೇದವ್ಯಾಸರಿಗೆ ಸಂಸತ್ತಿನಲ್ಲಿ ಕಾನೂನಿನ ಮೂಲಕ ರಾಷ್ಟ್ರೀಯ ಗೌರವಗಳನ್ನು ನೀಡಬೇಕೆಂದು ಹೇಳಿದ್ದರು. ಈ ಆದೇಶವೂ ವಿವಾದದ ಕಿಡಿ ಹೊತ್ತಿಸಿತ್ತು. ಜಸ್ಟೀಸ್ ತಮ್ಮ ಸಾರ್ವಜನಿಕ ಭಾಷಣಗಳಲ್ಲಿ ಮಾತ್ರವಲ್ಲದೆ ನ್ಯಾಯಾದೇಶಗಳಲ್ಲೂ ತಮ್ಮ ವೈಯಕ್ತಿಕ, ಸೈದ್ಧಾಂತಿಕ ನಿಲುವುಗಳನ್ನು ಸಂವಿಧಾನದಾಚೆಗೆ ತುರುಕಲು ಯತ್ನಿಸುತ್ತಿದ್ದಾರೆ ಎಂದು ಹಲವರು ಆರೋಪಿಸಿದರು.
ಇದನ್ನೂ ಓದಿ: ಸಂವಿಧಾನದ ಪೀಠಿಕೆ ಮತ್ತು ಮೂಲಭೂತ ರಚನೆಯ ಹಿನ್ನೆಲೆಯಲ್ಲಿ ಒಂದು ಚರ್ಚೆ
ಹೆಚ್ಚುತ್ತಿರುವ ಟೀಕೆಯ ಹಿನ್ನೆಲೆ, ಸುಪ್ರೀಂ ಕೋರ್ಟ್ ಕೂಡ ಅಂತರ್ ತನಿಖೆ ಪ್ರಾರಂಭಿಸಲು ಮುಂದಾಗಿತ್ತು. ಆದರೆ ಮಾರ್ಚ್ 2025ರಲ್ಲಿ ರಾಜ್ಯಸಭಾ ಕಾರ್ಯದರ್ಶಿಯವರು ಪತ್ರ ಬರೆದು, “ಈ ವಿಷಯ ಈಗಾಗಲೇ ರಾಜ್ಯಸಭೆಯಲ್ಲಿ ಚರ್ಚೆಯಲ್ಲಿದೆ. ಇದರ ನಿರ್ಧಾರಕ್ಕೆ ಸಂಸತ್ತು ಹಾಗೂ ರಾಷ್ಟ್ರಪತಿಯರವರಿಗೆ ಮಾತ್ರ ಹಕ್ಕಿದೆ” ಎಂದು ತಿಳಿಸಿದ್ದರು. ಇದರ ಬೆನ್ನಲ್ಲೇ ಸುಪ್ರೀಂ ಕೋರ್ಟ್ ತನಿಖೆ ಕೈಬಿಟ್ಟಿತು.
ಮೂಲಗಳ ಪ್ರಕಾರ, ನ್ಯಾಯಮೂರ್ತಿ ಯಾದವ್ ಅವರ ದ್ವೇಷ ಭಾಷಣ, ಅಲ್ಪಸಂಖ್ಯಾತರ ಕುರಿತ ಅವಹೇಳನಕಾರಿ ಹೇಳಿಕೆಗಳಿಗೆ ಆರಂಭದಲ್ಲಿ ಸುಪ್ರೀಂ ಕೋರ್ಟ್‌ಗೆ ಕ್ಷಮೆ ಕೇಳಲು ಒಪ್ಪಿದ್ದರು. ಆದರೆ ನಂತರ, ಅವರು ಅಲಹಾಬಾದ್ ಹೈಕೋರ್ಟ್ ಮುಖ್ಯ ನ್ಯಾಯಾಧೀಶರಿಗೆ ಪತ್ರ ಬರೆದು, ʼತಮ್ಮ ಮಾತುಗಳು ಸರಿಯಾಗಿಯೇ ಇವೆ, ಸಮಾಜದ ಪರವಾಗಿಯೇ ಮಾತನಾಡಿದ್ದೇನೆʼ ಎಂದು ಸಮರ್ಥಿಸಿಕೊಂಡಿದ್ದರು.
ಇದೇ ಸಂದರ್ಭದಲ್ಲಿ, ಮತ್ತೊಬ್ಬ ಹೈಕೋರ್ಟ್ ನ್ಯಾಯಮೂರ್ತಿ ಯಶವಂತ್ ವರ್ಮಾ ಅವರ ವಿರುದ್ಧ ಭ್ರಷ್ಟಾಚಾರದ ಆರೋಪಗಳು ಹೊರಬಿದ್ದಿರುವುದು ಗೊತ್ತೇ ಇದೆ. ಅವರ ನಿವಾಸದಲ್ಲಿ ನಗದು ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿ ಕೇಂದ್ರ ಸರ್ಕಾರ ಅವರನ್ನು ಹುದ್ದೆಯಿಂದ ವಜಾಗೊಳಿಸಲು ತಯಾರಿ ನಡೆಸುತ್ತಿದೆ. ಮುಂಗಾರು ಅಧಿವೇಶನದಲ್ಲಿ ಈ ಬಗ್ಗೆ ಪ್ರತ್ಯಕ್ಷ ನಿರ್ಧಾರವಾಗಲಿದೆ. ಮಾಜಿ ಸಿಜೆಐ ಖನ್ನಾ ಅವರು ರಾಷ್ಟ್ರಪತಿ ಮತ್ತು ಪ್ರಧಾನ ಮಂತ್ರಿಗಳಿಗೆ ಪತ್ರ ಬರೆದು, “ಇದು ಅತ್ಯಂತ ಗಂಭೀರ ವಿಷಯ. ಸುಪ್ರೀಂ ಕೋರ್ಟ್ ನ್ಯಾಯಾಧೀಶರ ಮೇಲೂ ನಂಬಿಕೆ ಕಳೆದುಹೋಗದಂತೆ ತಕ್ಷಣ ಕ್ರಮವಹಿಸಬೇಕು” ಎಂದು ಆಗ್ರಹಿಸಿದ್ದಾರೆ.
ಆದರೆ, “ನಾವು ಡಿಸೆಂಬರ್ 2024ರಲ್ಲಿ 55 ಸಂಸದರ ಸಹಿ ಪಡೆದು ರಾಜ್ಯಸಭೆಗೆ ಮಹಾಭಿಯೋಗ ನೋಟಿಸ್ ನೀಡಿದ್ದೆವು. ಆದರೆ ಇದುವರೆಗೆ ಯಾವುದೇ ಕ್ರಮವಾಗಿಲ್ಲ. ನಾವು ಸರ್ಕಾರದಿಂದ ಸ್ಪಷ್ಟ ಕ್ರಮ ನಿರೀಕ್ಷಿಸುತ್ತೇವೆ” ಎಂದು ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಹೇಳಿರುವುದನ್ನು ಇಲ್ಲಿ ಗಮನಿಸಬಹುದು.
ದೇಶದ ಇಬ್ಬರು ನ್ಯಾಯಾಧೀಶರು ಬಹು ದೊಡ್ಡ ಆರೋಪಗಳನ್ನು ಎದುರಿಸುತ್ತಿದ್ದಾರೆ. ಭ್ರಷ್ಟಾಚಾರ ಆರೋಪ ಹೊತ್ತಿರುವ ವರ್ಮಾ ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸರ್ಕಾರದ ಮೇಲೆ ಒತ್ತಡ ಹೇರುತ್ತಿರುವ ಈ ಹೊತ್ತಿನಲ್ಲಿ, ಈ ದೇಶದ ಮತ್ತೊಬ್ಬ ನ್ಯಾಯಮೂರ್ತಿಗಳು ತಮ್ಮ ವ್ಯಕ್ತಿಗತ ಧಾರ್ಮಿಕ ಅಭಿಪ್ರಾಯಗಳನ್ನು ಸಾರ್ವಜನಿಕವಾಗಿ, ಅಥವಾ ನ್ಯಾಯಾಲಯದ ನಿರ್ಣಯಗಳಲ್ಲಿ ವ್ಯಕ್ತಪಡಿಸಿ ತಟಸ್ಥ ನ್ಯಾಯವ್ಯವಸ್ಥೆಗೆ ಧಕ್ಕೆ ನೀಡುತ್ತಿದ್ದಾರೆ. ಆದಾಗ್ಯೂ ಅವರ ವಿರುದ್ಧ ಯಾವುದೇ ಕ್ರಮಗಳಾಗುತ್ತಿಲ್ಲ ಎಂಬ ಆರೋಪವು ಹೆಚ್ಚು ಪ್ರಸ್ತುತವಾಗಿದೆ.
ಮಹಾಭಿಯೋಗ ಪ್ರಕ್ರಿಯೆ ಹೇಗೆ?
ಮಹಾಭಿಯೋಗ – ಸರ್ಕಾರಿ ಅಧಿಕಾರದಲ್ಲಿರುವ ವ್ಯಕ್ತಿಯ ವಿರುದ್ಧ ಗಂಭೀರ ಆರೋಪ ಹೊರಿಸಿ, ಆತನನ್ನು ಅಧಿಕಾರದಿಂದ ತೆಗೆದುಹಾಕಲು ಅನುಸರಿಸುವ ಪ್ರಕ್ರಿಯೆ. ಸಾಮಾನ್ಯವಾಗಿ, ರಾಷ್ಟ್ರಪತಿ, ನ್ಯಾಯಾಧೀಶರು ಅಥವಾ ಇತರ ಉನ್ನತ ಹುದ್ದೆಗಳ ಮೇಲಿರುವ ವ್ಯಕ್ತಿಗಳ ವಿರುದ್ಧ ಈ ಪ್ರಕ್ರಿಯೆಯನ್ನು ಕೈಗೊಳ್ಳಲಾಗುತ್ತದೆ.
ನ್ಯಾಯಮೂರ್ತಿಯನ್ನು ಹುದ್ದೆಯಿಂದ ವಜಾಗೊಳಿಸಲು, ರಾಜ್ಯಸಭೆಯಲ್ಲಿ ಕನಿಷ್ಠ 50 ಮತ್ತು ಲೋಕಸಭೆಯಲ್ಲಿ 100 ಸಂಸದರ ಸಹಿ ಬೇಕು. ಈ ಪ್ರಸ್ತಾಪ ಅಂಗೀಕಾರವಾಗಬೇಕಾದರೆ, ಸದನದ ಒಟ್ಟು ಸದಸ್ಯರಲ್ಲಿ ಬಹುಮತದ ಮತವೂ, ಮತ್ತು ಇದ್ದವರು-ಮತದಾನ ಮಾಡಿದವರಲ್ಲಿ ಮೂರನೇ ಎರಡರಷ್ಟು ಬೆಂಬಲವೂ ಬೇಕಾಗುತ್ತದೆ. ಇದರಿಂದ, ಇದು ಕಠಿಣ ಪ್ರಕ್ರಿಯೆಯಾಗಿದ್ದು, ಬಹುಪಕ್ಷಗಳ ಸಹಕಾರ ಅಗತ್ಯವಾಗಿರುತ್ತದೆ.
ಮಹಾಭಿಯೋಗವನ್ನು ಸಂವಿಧಾನದ ಉಲ್ಲಂಘನೆ, ಭ್ರಷ್ಟಾಚಾರ ಅಥವಾ ಇತರ ಗಂಭೀರ ಅಪರಾಧಗಳಿಗಾಗಿ ಕೈಗೊಳ್ಳಬಹುದು. ದೋಷಾರೋಪಣೆ ಸಾಬೀತಾದರೆ, ಆ ವ್ಯಕ್ತಿಯನ್ನು ಅಧಿಕಾರದಿಂದ ತೆಗೆದುಹಾಕಲಾಗುತ್ತದೆ ಮತ್ತು ಭವಿಷ್ಯದಲ್ಲಿ ಸಾರ್ವಜನಿಕ ಹುದ್ದೆಗಳನ್ನು ಅಲಂಕರಿಸದಂತೆ ನಿರ್ಬಂಧ ಹೇರಬಹುದು.
ಇದನ್ನೂ ಓದಿ:ಬಿಹಾರ ಮತದಾರ ಪಟ್ಟಿ ಪರಿಷ್ಕರಣೆ: ಮೋದಿ ಮಸಲತ್ತು ಬಹಿರಂಗ?
ನ್ಯಾಯಮೂರ್ತಿಯೊಬ್ಬರು ಧಾರ್ಮಿಕ ಕಾರ್ಯಕ್ರಮದಲ್ಲಿ ಮಾಡಿದ ಭಾಷಣದಿಂದ ಆರಂಭವಾದ ವಿವಾದ, ಇದೀಗ ಸಾಂವಿಧಾನಿಕ ಪ್ರಕ್ರಿಯೆಯೆಡೆಗೆ ಹೋಗುತ್ತಿದೆ. ಒಂದು ಧರ್ಮದ ಕುರಿತು ಶ್ರೇಷ್ಠ, ಮತ್ತೊಂದು ಧರ್ಮದ ಕುರಿತು ಕನಿಷ್ಠ ನಿಲುವಿರುವ ಇವರು ಜಾತ್ಯತೀತ, ಧರ್ಮಾತೀತ ಸಾಂವಿಧಾನಿಕ ಸಂಸ್ಥೆಯಿರುವ ದೇಶದಲ್ಲಿ ನಿಷ್ಪಕ್ಷಪಾತವಾಗಿ, ಪಾರದರ್ಶಕವಾಗಿ ನ್ಯಾಯ ನೀಡುತ್ತಾರೆಂದು ನಿರೀಕ್ಷಿಸುವುದು ಎಷ್ಟು ಸಮಂಜಸವಾದೀತು?
ಇಷ್ಟಾದರೂ ಜಸ್ಟೀಸ್ ಶೇಖರ್ ಯಾದವ್ ವಿರುದ್ಧ ಕ್ರಮವಿಲ್ಲದಿರುವುದ ಕುರಿತು ಹಲವು ಪ್ರಶ್ನೆ ಹುಟ್ಟಿಸಿದೆ. ಅದೇ ಸಮಯದಲ್ಲಿ ಮತ್ತೊಬ್ಬ ನ್ಯಾಯಮೂರ್ತಿ ಮೇಲೆ ತೀವ್ರವಾದ ಕ್ರಮ ಜರುಗಿಸುತ್ತಿರುವುದು ನ್ಯಾಯಾಂಗ ವ್ಯವಸ್ಥೆಯನ್ನು ರಾಜಕೀಯವಾಗಿ ಚರ್ಚೆಗೆ ಎಳೆದುಕೊಂಡಂತಾಗಿದೆ.
ಮುಂಗಾರು ಅಧಿವೇಶನ ಆರಂಭವಾಗುವ ಜುಲೈ 21ರೊಳಗೆ, ಈ ಎರಡೂ ಪ್ರಕರಣಗಳೂ ರಾಷ್ಟ್ರ ರಾಜಕೀಯದಲ್ಲಿ ಮಹತ್ವದ ತಿರುವು ಪಡೆದುಕೊಳ್ಳುವ ಸಾಧ್ಯತೆಗಳಿವೆ.