ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದಂತೆಯೇ ಧರ್ಮಸ್ಥಳದ ಹಲವು ಸರಣಿ ಹತ್ಯೆ, ಸಾಕ್ಷಿ ನಾಶ ಪ್ರಕರಣ ಹೊರಬೀಳುತ್ತಿದ್ದಂತೆಯೇ 'ಮಂಗಳೂರು ಮರುನಾಮಕರಣ' ಎಂಬ ಕೂಗು ಎಬ್ಬಿಸಿರುವುದರ ಹಿಂದೆ ಹಲವು ಗುಮಾನಿಗಳು ಅಡಗಿವೆ.
ದಕ್ಷಿಣ ಕನ್ನಡ ಜಿಲ್ಲೆಯನ್ನು ಮಂಗಳೂರು ಜಿಲ್ಲೆ ಎಂದು ಮರುನಾಮಕರಣ ಮಾಡಬೇಕು ಎಂಬ ಕೂಗು ಹೆಚ್ಚಾಗುತ್ತಿದೆ. ಬಿಜೆಪಿ, ಜೆಡಿಎಸ್, ಕೆಲವು ಸಂಘಟನೆಗಳು ಆರಂಭಿಸಿರುವ ಈ ಅಭಿಯಾನಕ್ಕೆ ಕಾಂಗ್ರೆಸ್‌ನ ಕೆಲ ಯುವ ಮುಖಂಡರೂ ಕೈಜೋಡಿಸಿದ್ದಾರೆ. ಈ ಮರುನಾಮಕರಣದ ಒತ್ತಾಯ ಅಪ್ರಸ್ತುತ ಎನ್ನುವ ವಾದವೂ ಕೇಳಿಬಂದಿದೆ. ಮಂಗಳೂರು ಬೇಡ ‘ಕುಡ್ಲ’ ಎಂದು ಬದಲಾಯಿಸಬೇಕು ಎಂಬ ಕೆಲವು ಗುಂಪುಗಳೂ ಇವೆ. ಕಳೆದ ಕೆಲವು ದಿನಗಳಿಂದ ಸಾಮಾಜಿಕ ಜಾಲತಾಣದಲ್ಲಿ ‘ಮಂಗಳೂರು’ ಜಪ ನಡೆಯುತ್ತಿದೆ, ಮುಂದುವರೆದಿದೆ.
“ನಮ್ಮ ಜಿಲ್ಲೆಗೆ ಹಲವು ಹೆಸರುಗಳಿದ್ದವು. ರಾಜಕೀಯ, ಸಾಂಸ್ಕೃತಿಕ ನೆಲೆಗಟ್ಟಿನಲ್ಲಿ ತುಳುನಾಡು ಎಂಬ ಹೆಸರೂ ಇತ್ತು. ಎರಡು ಸಾವಿರ ವರ್ಷಗಳ ಹಿಂದಿನದ್ದು ಎನ್ನಲಾದ ತಮಿಳಿನ ಸಂಗಂ ಸಾಹಿತ್ಯ ‘ಅಗನಾನೂರು’ ಎಂಬ ಕಾವ್ಯಮಾಲೆಯ 13ನೇ ಪದ್ಯದಲ್ಲಿ ತುಳುನಾಡು ಎಂಬ ಉಲ್ಲೇಖವಿದೆ. ಹೊಯ್ಸಳರು, ಪಲ್ಲವರು, ಕೆಳದಿ ರಾಜರು ಮೊದಲಾದವರು ತುಳು ದೇಶ, ತುಳು ರಾಜ್ಯ ಎಂದು ಈ ಪ್ರದೇಶಗಳನ್ನು ಕರೆದಿದ್ದಾರೆ. ಕೆನರಾ ಎಂಬುದು ಪೋರ್ಚುಗೀಸರು ಮತ್ತು ಬ್ರಿಟಿಷರು ನೀಡಿದ ಹೆಸರು. ಬಳಿಕ ಅದು ಕನ್ನಡ ಎಂದು ಅಪಭ್ರಂಶವಾಗಿ ಬದಲಾಗಿದೆ. ವಿಜಯನಗರ ಅರಸರ ಕಾಲದಿಂದಲೂ ಈ ಪ್ರದೇಶಕ್ಕೆ ಇದ್ದ ಹೆಸರು ಮಂಗಳೂರು. ಆ ಹೆಸರನ್ನೇ ಜಿಲ್ಲೆಗೆ ಇಡಬೇಕು ಎಂಬುದು ‘ಮಂಗಳೂರು ಜಿಲ್ಲೆ ತುಳು ಪರ ಹೋರಾಟ ಸಮಿತಿ’ ಆಗ್ರಹ.
ಇದನ್ನು ಓದಿದ್ದೀರಾ? ‘ದಕ್ಷಿಣ ಕನ್ನಡ’ವನ್ನು ಮಂಗಳೂರು ಜಿಲ್ಲೆಯಾಗಿ ಬದಲಿಸಲು ಪಕ್ಷಾತೀತ ಬೆಂಬಲ-ಬೇಡಿಕೆ
ಜುಲೈ 9ರಂದು ‘ದಕ್ಷಿಣ ಕನ್ನಡ ಜಿಲ್ಲೆಯ ಹೆಸರನ್ನು ಬದಲಿಸಿ, ತುಳು ಅಸ್ಮಿತೆ ಉಳಿಸಿ’ ಅಭಿಯಾನದ ಪೋಸ್ಟರ್ ಅನ್ನು ಮಂಗಳೂರಿನಲ್ಲಿ ಬಿಡುಗಡೆ ಮಾಡಲಾಗಿದೆ. ಅಭಿಯಾನದ ಮುನ್ನೆಲೆಯಲ್ಲಿ ಕಾಣುವ ಮುಖಗಳನ್ನು ನೋಡಿದಾಗ ಇದು ಬಲಪಂಥೀಯರ ಅಜೆಂಡಾ ಎಂಬುದು ಸ್ಪಷ್ಟವಾಗುತ್ತದೆ. ಈವರೆಗೆ ಕೋಮುವಾದ, ಕೋಮುದ್ವೇಷದ ಆಟವಾಡಿ ಬೇಸತ್ತವರು ಇದೀಗ ಪ್ರಾದೇಶಿಕ ಅಸ್ಮಿತೆಗೆ ಕೈಹಾಕಿದ್ದಾರೆ. ನಿರೀಕ್ಷೆಯಂತೆಯೇ ಇಲ್ಲಿ ರಾಜಕೀಯ ಮರೆತು ಜೊತೆಯಾಗಬೇಕು ಎಂಬ ಕೂಗು ಇದೆ. ಭಾಷೆ, ನಾಡು ವಿಚಾರ ಎತ್ತಿದಾಗ ಜನ ನಮ್ಮತ್ತ ತಿರುಗುವುದು ಖಚಿತ ಎಂಬ ‘ಸಾಮಾನ್ಯಜ್ಞಾನ’ದೊಂದಿಗೆ ಆರಂಭಿಸುತ್ತಿರುವ ಅಭಿಯಾನವಿದು ಎಂದರೆ ತಪ್ಪಾಗಲಾರದು.
ದಕ್ಷಿಣ ಕನ್ನಡದ ಇತಿಹಾಸ
ದಕ್ಷಿಣ ಕನ್ನಡ ಹಲವು ಭಾಷೆ, ವಿಭಿನ್ನ ಸಂಸ್ಕೃತಿ, ಆರಾಧನೆಗಳ ನೆಲೆಗೂಡು. ಈ ಹಿಂದೆ ಉತ್ತರ ಕ್ನನಡ ಮತ್ತು ದಕ್ಷಿಣ ಕನ್ನಡ ಸೇರಿದ ಭಾಗವನ್ನು ಕೆನರಾ ಎಂದು ಕರೆಯಲಾಗುತ್ತಿತ್ತು. ಬ್ರಿಟಿಷರು south canara(ದಕ್ಷಿಣ ಕೆನರಾ) ಮತ್ತು north canara(ಉತ್ತರ ಕನ್ನಡ) ಎಂದು ವಿಂಗಡಿಸಿದರು. ಸ್ವಾತಂತ್ರ್ಯದ ಬಳಿಕ ಈ ಕೆನರಾ ಎಂಬುದು ಕನ್ನಡವೆಂದು ಬದಲಾವಣೆಗೊಳಿಸಲಾಗಿದೆ. ದಕ್ಷಿಣ ಕನ್ನಡ, ಉತ್ತರ ಕನ್ನಡ ಎಂದು ಹೆಸರಿಸಲಾಗಿದೆ. ದಕ್ಷಿಣ ಕನ್ನಡ ಅಭಿವೃದ್ಧಿ ಹೊಂದಿದ ಜಿಲ್ಲೆಯಾಗಿದ್ದು ಮಂಗಳೂರು ನಗರ ಜಿಲ್ಲೆಯ ಕೇಂದ್ರ.
ಜನಜನಿತವಾದ ಮಂಗಳೂರು
ಈ ಮಂಗಳೂರು ಎಂಬುದು ಎಷ್ಟು ಜನಜನಿತವೆಂದರೆ ವ್ಯಕ್ತಿ ಬಂಟ್ವಾಳದವರೇ ಆಗಿರಲಿ ಅಥವಾ ಬೆಳ್ತಂಗಡಿ, ಸುಳ್ಯದವರೇ ಆಗಿರಲಿ ಜಿಲ್ಲೆಯಿಂದ ಹೊರ ಬಂದ ಮೇಲೆ ಇತರೆ ಜಿಲ್ಲೆಯವರು ‘ಮಂಗಳೂರು ಮಂದಿ’ ಎಂದೇ ಗುರುತಿಸುವುದು. ಉತ್ತರ ಕನ್ನಡ, ಉಡುಪಿ ಜಿಲ್ಲೆಯವರನ್ನೂ ಮಂಗಳೂರಿನ ಜನರು ಎಂದು ಗುರುತಿಸುವುದೂ ಇದೆ. ಅವೆಲ್ಲವನ್ನು ತಳುಕುಹಾಕಿ ‘ಮಂಗಳೂರು’ ಎಂದು ಮರುನಾಮಕರಣ ಮಾಡುವುದು ಸೂಕ್ತ ಎಂದು ಹೇಳಿದರೆ ಅದು ಸರಿಹೊಂದದು. ಆದರೆ ಸದ್ಯ ನಡೆಯುತ್ತಿರುವ ಅಭಿಯಾನವು ಇಂತಹ ವಾದ ಸಾಮಾಜಿಕ ಜಾಲತಾಣದಲ್ಲಿ ಹುಟ್ಟುವಂತೆ ಮಾಡಿದೆ. “ನಾವು ದಕ್ಷಿಣ ಕನ್ನಡದವರು ಎಂದು ಹೇಳಿದರೆ ಯಾರಿಗೂ ತಿಳಿಯದು, ಮಂಗಳೂರು ಎಂದರೆ ಮಾತ್ರ ತಿಳಿಯುತ್ತದೆ. ಅಷ್ಟಕ್ಕೂ ನಮ್ಮದು ತುಳುನಾಡು. ನಮ್ಮ ಜಿಲ್ಲೆಯ ಹೆಸರಲ್ಲಿ ಕನ್ನಡ ಎಂದು ಇರುವುದು ಸರಿಯಾಗದು. ಮಂಗಳೂರು ಎಂದು ಮರುನಾಮಕರಣ ಮಾಡುವುದೇ ಸೂಕ್ತ” ಎಂಬ ವಾದಗಳು ಸಾಮಾಜಿಕ ಜಾಲತಾಣದಲ್ಲಿ ಹುಟ್ಟಿಕೊಂಡಿದೆ.
ಇವೆಲ್ಲವುದರ ನಡುವೆ “ಮೊದಲು ನಮ್ಮೊಳಗಿರುವ ಕೋಮುವಾದ, ಕೋಮು ರಾಜಕಾರಣವೆಂಬ ವಿಷ ಬೀಜವನ್ನು ಕಿತ್ತೊಗೆಯೋಣ, ಬಳಿಕ ನಮ್ಮ ಪ್ರಾದೇಶಿಕ ಅಸ್ಮಿತೆ ಪ್ರಶ್ನೆ ಎತ್ತೋಣ” ಎಂಬ ವಾದವೂ ಇದೆ. ಈ ಬಗ್ಗೆ ಸಿಪಿಐಎಂ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯದರ್ಶಿ ಮುನೀರ್ ಕಾಟಿಪಳ್ಳ ಬಹಿರಂಗ ಹೇಳಿಕೆಗಳನ್ನು ನೀಡಿದ್ದಾರೆ. “ಧರ್ಮದ ಹೆಸರಲ್ಲಿ ಎರಡು ದಶಕ ಕಳೆದ ನಾವು ಈಗ ಜಿಲ್ಲೆಯ ಹೆಸರು ಬದಲಾವಣೆ ವಿಚಾರದಲ್ಲಿ ಇತರೆ ಸಮಸ್ಯೆಗಳತ್ತ ಮುಖ ಮಾಡದೆ ಕಳೆದು ಹೋಗುತ್ತೇವೆ” ಎಂಬ ಆತಂಕವನ್ನು ಮುನೀರ್ ವ್ಯಕ್ತಪಡಿಸಿದ್ದಾರೆ. ಒಂದು ಆಯಾಮದಲ್ಲಿ ಇದು ನೈಜ ಸಂಗತಿಯೂ ಹೌದು.
ಇದನ್ನು ಓದಿದ್ದೀರಾ? ತುಳುನಾಡ ಸಂಸ್ಕೃತಿಯಂತೆ ‘ದೈವ’ ಆಗಬೇಕಾಗಿದ್ದ ಸೌಜನ್ಯ ದೇವಿಯಾದಳು; ವೈದಿಕೀಕರಣದ ಹೊಸ ಮಗ್ಗಲು
ಜಿಲ್ಲೆಯಲ್ಲಿರುವ ನಿರುದ್ಯೋಗ ಸಮಸ್ಯೆ, ಹಣ ದೋಚುವ ಖಾಸಗಿ ಆಸ್ಪತ್ರೆಗಳು, ಎಲ್ಲೆಂದರಲ್ಲಿ ನಾಯಿಕೊಡೆಯಂತೆ ಹುಟ್ಟಿ ಬೆಳೆದು ಪೋಷಕರಿಂದ ಡೊನೇಶನ್ ದೋಚುವ ಖಾಸಗಿ ಶಿಕ್ಷಣ ಸಂಸ್ಥೆಗಳು, ಹಿಂದೂ-ಮುಸ್ಲಿಂ ಎಂಬ ವಿಚಾರದಲ್ಲಿ ಕೋಮು ದ್ವೇಷ ಭಾಷಣಗಳನ್ನು ಮಾಡುವ ಆದರೆ ಉದ್ಯಮ ಎಂದಾಗ ಯಾವ ಧರ್ಮ ಎಂಬುದನ್ನು ಮರೆತು ಒಂದಾಗುವ ರಾಜಕಾರಣಿಗಳು- ಇಂತಹ ಜ್ವಲಂತ ಸಮಸ್ಯೆಗಳನ್ನು ಬದಿಗೊತ್ತಿ ಈಗ ದಕ್ಷಿಣ ಕನ್ನಡ ಜಿಲ್ಲೆ ಎಂಬ ಹೆಸರೇ ದೊಡ್ಡ ಸಮಸ್ಯೆ ಎಂದರೆ ಆದೀತೆ?
ಸದ್ಯ ಪ್ರಾದೇಶಿಕ ಅಸ್ಮಿತೆ, ಭಾಷೆ, ಮೊದಲಾದ ವಿಚಾರಗಳ ಬಗ್ಗೆ ಚರ್ಚಿಸುವುದಕ್ಕೂ ಅಗತ್ಯ ಎನಿಸುವ ವಿಚಾರಗಳು ಇವೆ ಎಂಬುದು ಸ್ಪಷ್ಟ, ಕಣ್ಣಿಗೆ ರಾಚುವಂತದ್ದು. ಜೊತೆಗೆ ದಕ್ಷಿಣ ಕನ್ನಡದಲ್ಲಿ ನಡೆಯುತ್ತಿರುವ ಪ್ರಸಕ್ತ ವಿದ್ಯಮಾನಗಳಿಂದ ಜನರ ಗಮನವನ್ನು ಬೇರೆಡೆಗೆ ಸೆಳೆಯುವ ಹುನ್ನಾರವೂ ಇರುವಂತಿದೆ. ಒಂದೆಡೆ ಕೋಮು ದ್ವೇಷದ ಕೊಲೆಗಳು, ಈ ಹತ್ಯೆಗಳಲ್ಲಿ ರಾಜಕಾರಣಿಗಳ ಆಟ. ಇನ್ನೊಂದೆಡೆ ಧರ್ಮಸ್ಥಳ ಸರಣಿ ಅತ್ಯಾಚಾರ ಕೊಲೆ ಮತ್ತು ಸಾಕ್ಷಿ ನಾಶ ಪ್ರಕರಣ. ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದಂತೆಯೇ ಧರ್ಮಸ್ಥಳದಲ್ಲಿ ನಡೆದಿದೆ ಎಂದು ಹೇಳಲಾದ ಹಲವು ಸರಣಿ ಹತ್ಯೆಗಳ ಪ್ರಕರಣ ಹೊರಬೀಳುತ್ತಿದ್ದಂತೆಯೇ ಈ ‘ಮಂಗಳೂರು ಮರುನಾಮಕರಣ’ ಎಂಬ ಕೂಗು ಎಬ್ಬಿಸಿರುವುದರ ಹಿಂದೆ ಹಲವು ಗುಮಾನಿಗಳು ಅಡಗಿವೆ. ಇದು ವಾಸ್ತವದಿಂದ ಜನರನ್ನು ಬೇರೆಡೆ ಕೊಂಡೊಯ್ಯುವ ಯತ್ನವೂ ಆಗಿರಬಹುದಲ್ಲವೇ?
ಇವೆಲ್ಲವನ್ನೂ ಮೀರಿ ಅತ್ತ ಬಿಜೆಪಿಗರ ರಾಜಕೀಯದಾಟವನ್ನು ಖಂಡಿಸಲೂ ಆಗದೆ, ತಮ್ಮ ಮತ ಬ್ಯಾಂಕ್‌ಗೆ ಪೆಟ್ಟು ನೀಡುವ ನಿಲುವನ್ನು ತಾಳಲೂ ಸಾಧ್ಯವಾಗದೆ ರಕ್ಷಿತ್ ಶಿವರಾಂನಂತಹ ಕಾಂಗ್ರೆಸ್ ಮುಖಂಡರು ‘ಗುಂಪಿನಲ್ಲಿ ಗೋವಿಂದ’ ಎಂದಿದ್ದಾರೆ. ಇನ್ನೊಂದೆಡೆ ಸಿಪಿಐಎಂ, ಯುವಜನತೆಯ ಸಂಘಟನೆ ಡಿವೈಎಫ್‌ಐ ಬಲಪಂಥೀಯರ ವಾಸ್ತವ ಮರೆಮಾಚುವ ಆಟವನ್ನು ಬಯಲು ಮಾಡಲು ಹೋಗಿ ನೆಟ್ಟಿಗರ ವಿರೋಧಕ್ಕೆ ಗುರಿಯಾಗಿದ್ದಾರೆ. ಅತ್ತ ಕೋಮುವಾದಿಯೂ ಅಲ್ಲ ಇತ್ತ ಸಮಾಜವಾದಿಯೂ ಅಲ್ಲ ಎಂಬ ಸ್ಥಾನದಲ್ಲಿ ನಿಲ್ಲಿಸಬಹುದಾದ ವ್ಯಕ್ತಿಗಳು ಈ ಮರುನಾಮಕರಣ ಕೂಗಿಗೆ ಧ್ವನಿ ಸೇರಿಸಲು ಮುಂದಾಗಿದ್ದಾರೆ. ಅಷ್ಟಕ್ಕೂ ‘ಕೋಮುದ್ವೇಷ’ವೆಂಬ ನೀಚ ಪಿಡುಗನ್ನು ಇಟ್ಟುಕೊಂಡು ಹೆಸರು ಬದಲಾಯಿಸಿದರೂ ಏನು ಲಾಭವಾದೀತು? ಒಳಗೆ ತುಂಬಿಕೊಂಡಿರುವ ಕಸವನ್ನು ಹೊರಗೆಸೆಯದೆ ಮನೆಗೆ ಬಣ್ಣ ಬಳಿದು, ಒಂದು ಚೆಂದದ ಹೆಸರಿನ ಬೋರ್ಡ್ ಜೋತು ಹಾಕಿದ್ದಂತೆ ಅಲ್ಲವೇ?

ಪತ್ರಕರ್ತೆ, 2019ರಿಂದ ಪತ್ರಿಕೋದ್ಯಮವೇ ಬದುಕು. ರಾಜಕೀಯ, ಬ್ಯುಜಿನೆಸ್ ಸುದ್ದಿಗಳಲ್ಲಿ ಆಸಕ್ತಿ.