ಗುಜರಾತ್ ಮಾಡೆಲ್ ಅನ್ನು ಬಿಜೆಪಿ ಮರೆತಿದೆ. ನರೇಂದ್ರ ಮೋದಿಯವರೂ ಮರೆತಿದ್ದಾರೆ. ಮಾಧ್ಯಮಗಳೂ ಮರೆತಿವೆ. ಸೋಶಿಯಲ್ ಮೀಡಿಯಾಕ್ಕೆ ನೆನಪೇ ಇಲ್ಲ. ಆದರೆ ಸುಳ್ಳಿನ ಮೇಲೆ ಕಟ್ಟಲಾದ ಗೋಪುರಕ್ಕೆ ದೀರ್ಘಾಯುಷ್ಯ ಇರಲು ಸಾಧ್ಯವೇ?
2014ರಂದು ಅಧಿಕಾರಕ್ಕೆ ಬಂದ ಬಿಜೆಪಿ ದೇಶಾದ್ಯಂತ ʼಗುಜರಾತ್ ಮಾಡೆಲ್ʼ ಎಂಬುದನ್ನು ಮಾರಾಟ ಮಾಡಿತ್ತು. ಜನರು ಮುಗಿಬಿದ್ದು ಖರೀದಿಸಿದ್ದರು. ಗುಜರಾತ್ ಎಂಬುದು ಅದ್ಭುತ ಅಭಿವೃದ್ಧಿಯನ್ನು ಹೊಂದಿದ ರಾಜ್ಯ, ಅಲ್ಲಿಯ ಜನರು ಸುಖ ಸಂಪತ್ತಿನಿಂದ ಬದುಕುತ್ತಿದ್ದಾರೆ, ಅಲ್ಲಿ ಏನುಂಟು ಏನಿಲ್ಲ ಎಂಬಂತೆ ಬಿಜೆಪಿ ಪ್ರಚಾರದಲ್ಲಿ ತೊಡಗಿತ್ತು. ಮಾಧ್ಯಮಗಳೂ ಇದಕ್ಕೆ ಮಸಾಲೆ ಹಾಕಿ ಮತ್ತಷ್ಟು ಹುಬ್ಬೇರಿಸುವಂತೆ ತೋರಿಸಿದವು. ಸೋಶಿಯಲ್ ಮೀಡಿಯಾವಂತು ಬಿಡಿ ಎಕ್ಸ್ಟ್ರೀಮ್ ಲೆವೆಲ್. ಈ ದೇಶದ ಜನರೆಲ್ಲ ನಮಗೂ ಗುಜರಾತ್ ಮಾಡೆಲ್ ಬೇಕು ಎಂದು ಬಯಸುವಂಥ ವಾತಾವರಣವನ್ನು ಸೃಷ್ಟಿಸಲಾಗಿತ್ತು.
ಗುಜರಾತನ್ನು ಎತ್ತರಕ್ಕೆ ಕೊಂಡೊಯ್ದ ಮುಖ್ಯಮಂತ್ರಿ ನರೇಂದ್ರ ಮೋದಿ ಈ ದೇಶದ ಪ್ರಧಾನಿಯಾಗಬೇಕು ಮತ್ತು ಆ ಮೂಲಕ ಇಡೀ ದೇಶವನ್ನು ಗುಜರಾತ್ನಂತೆ ಮಾರ್ಪಡಿಸಬೇಕು ಎಂಬ ಆಸೆ ದೇಶದ ಜನರಲ್ಲೂ ಹುಟ್ಟಿಕೊಂಡಿತ್ತು. ಆ ಬಳಿಕ ಏನೆಲ್ಲಾ ಬೆಳವಣಿಗೆಗಳು, ಯಾವೆಲ್ಲಾ ಅಭಿವೃದ್ಧಿಗಳಾಗಿವೆ ಎಂಬುದು ಗಮನಾರ್ಹ.
ಇರಲಿ, ಇದೀಗ ಕಳೆದ ಒಂದು ವಾರದಿಂದ ಗುಜರಾತಿನದ್ದೇ ಸುದ್ದಿ, ಗುಜರಾತೇ ಮಾತನಾಡುತ್ತಿದ್ದು, ದೇಶಕ್ಕೆ ತನ್ನ ಮಾಡೆಲ್ನ ಬಗ್ಗೆ ಪರಿಚಯ ಮಾಡುತ್ತಿದೆ. ಆದರೆ 2014ರಲ್ಲಿ ಚುನಾವಣೆಯನ್ನು ಗೆದ್ದು ಪ್ರಧಾನಿಯಾದ ನರೇಂದ್ರ ಮೋದಿಯವರು ನಂತರದ ದಿನಗಳಲ್ಲಿ ಯಾಕೆ ಗುಜರಾತ್ ಮಾಡೆಲ್ ಬಗ್ಗೆ ಮಾತೇ ಆಡಿಲ್ಲ ಎಂಬುದು ಈಗ ಅರಿವಿಗೆ ಬರುತ್ತಿದೆ.
ನಿಜವಾಗಿಯೂ ʼಗುಜರಾತ್ ಮಾಡೆಲ್ʼ ಎಂಬುದು ಗುಜರಾತ್ನ ಆರ್ಥಿಕ ಮತ್ತು ಆಡಳಿತದ ರೀತಿ, ಮುಖ್ಯವಾಗಿ 2001-2014 ರವರೆಗೆ ಗುಜರಾತ್ನ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿಯವರ ಆಡಳಿತ ಮತ್ತು ಆರ್ಥಿಕ ಉದಾರೀಕರಣ, ಖಾಸಗೀಕರಣ, ಮೂಲಸೌಕರ್ಯ ಅಭಿವೃದ್ಧಿ ಹಾಗೂ ಉದ್ಯಮ-ಸ್ನೇಹಿ ನೀತಿಗಳ ಮೇಲೆ ಕೇಂದ್ರೀಕರಿಸಿತ್ತು. ಇದರಿಂದ ಗುಜರಾತ್ ಭಾರತದ ತ್ವರಿತವಾಗಿ ಬೆಳೆಯುತ್ತಿರುವ ರಾಜ್ಯಗಳಲ್ಲಿ ಒಂದು ಎನ್ನುವಂತಹ ಚರ್ಚೆಗಳು ಭುಗಿಲೆದಿದ್ದವು.
ಹಾಗಿದ್ದರೆ 2014ರಲ್ಲಿ ದೇಶಕ್ಕೆ ಮಾಡೆಲ್ ಎಂದು ಬಿಂಬಿಸಲಾದ ಗುಜರಾತ್ ಯಾಕೆ ಹೀಗಾಯಿತು? ವಿಷಯ ಏನೆಂದರೆ, ಗುಜರಾತ್ ಮಾಡೆಲ್ ಎಂಬುದು ಒಂದು ಪ್ರೊಪಗಾಂಡ ಆಗಿತ್ತು. ಬಿಡಿಸಿ ಹೇಳುವುದಾದರೆ ಗಾಳಿ ತುಂಬಿಸಿದ ಬಲೂನಾಗಿತ್ತು. ಒಳಗಡೆ ಬರೇ ಟೊಳ್ಳು ಮಾತ್ರವೇ ಇತ್ತು. ಆದ್ದರಿಂದಲೇ 2014ರಲ್ಲಿ ಚುನಾವಣೆಯನ್ನು ಗೆದ್ದ ಬಳಿಕ ನರೇಂದ್ರ ಮೋದಿ ʼಗುಜರಾತ್ ಮಾಡೆಲ್ʼ ಎಂಬ ಸ್ಲೋಗನ್ ಹೇಳಲೂ ಇಲ್ಲ, ಬಿಜೆಪಿ ಆ ಬಗ್ಗೆ ಮಾತೂ ಆಡಲಿಲ್ಲ. ಯಾಕೆಂದರೆ ಗುಜರಾತ್ ಮಾಡೆಲ್ ಎಂದು ತೋರಿಸುವುದಕ್ಕೆ 2002ರ ಗುಜರಾತ್ ಹತ್ಯಾಕಾಂಡವನ್ನು ಬಿಟ್ಟರೆ ಅದರ ಬಳಿ ಬೇರೇನೂ ಇರಲಿಲ್ಲ.
ʼಗುಜರಾತ್ ಮಾಡೆಲ್: ಗ್ಲಾಸ್ ಹೌಸ್ ಮಾಡೆಲ್ʼ ಎಂಬ ಶೀರ್ಷಿಕೆಯಡಿ 2023ರಂದು NDTVಯಲ್ಲಿ ಪ್ರಕಟವಾದ ಲೇಖನವು ಗುಜರಾತ್ನಲ್ಲಿ ಪ್ರಚಾರವಾಗಿದ್ದ ʼಗುಜರಾತ್ ಮಾಡೆಲ್ʼ ಎಂಬ ಅಭಿವೃದ್ಧಿ ತತ್ವವನ್ನು ವಿಮರ್ಶಾತ್ಮಕವಾಗಿ ವಿಶ್ಲೇಷಿಸುತ್ತದೆ. ಜತೆಗೆ ಇದನ್ನು ʼಗ್ಲಾಸ್ಹೌಸ್ ಮಾಡೆಲ್ʼ ಎಂದು ಕರೆದಿದ್ದು, ಬಾಹ್ಯವಾಗಿ ಆಕರ್ಷಕವಾಗಿ ಕಾಣುತ್ತದೆಯಾದರೂ, ಆಂತರಿಕವಾಗಿ ದುರ್ಬಲವಾಗಿರುವ ಒಂದು ಚಿತ್ರಣವನ್ನು ವಿವರಿಸುತ್ತದೆ.

ʼಗುಜರಾತ್ ಮಾಡೆಲ್ʼ ಎಂಬುದನ್ನು ಒಂದು ಆಕರ್ಷಕವಾಗಿ ಬಿಂಬಿಸಿದ್ದರೂ ದುರ್ಬಲ ರಾಜಕೀಯ ಮಾರ್ಕೆಟಿಂಗ್ ತಂತ್ರವೆಂಬುದು ಸ್ಪಷ್ಟ. ಇದು ಬಾಹ್ಯವಾಗಿ ಅಭಿವೃದ್ಧಿಯ ಚಿತ್ರಣವನ್ನು ನೀಡಿದರೂ, ಆಂತರಿಕವಾಗಿ ಬಡತನ, ಆರೋಗ್ಯ, ಶಿಕ್ಷಣ ಮತ್ತು ಮೂಲಸೌಕರ್ಯ ಕ್ಷೇತ್ರಗಳಲ್ಲಿ ಕೊರತೆಗಳನ್ನು ಹೊಂದಿದೆ.
ಗುಜರಾತ್ನ ಜನಸಂಖ್ಯೆಯ ಮೂರರಲ್ಲಿ ಒಂದು ಭಾಗ, ಅಂದರೆ 31 ಲಕ್ಷ ಕುಟುಂಬಗಳು ಬಡತನ ರೇಖೆಗಿಂತ ಕೆಳಗಿವೆ, ಇವುಗಳಲ್ಲಿ 16 ಲಕ್ಷ ಕುಟುಂಬಗಳು ಅತಿ ತೀವ್ರ ಬಡತನದಲ್ಲಿವೆ. 2019ರಲ್ಲಿ 5 ವರ್ಷದ ಮಕ್ಕಳಲ್ಲಿ ಕೇವಲ ಶೇ.7ರಷ್ಟು ಮಕ್ಕಳು ಗುಜರಾತ್ನಲ್ಲಿ ಪೂರ್ವ-ಪ್ರಾಥಮಿಕ ಶಿಕ್ಷಣವನ್ನು ಪಡೆದಿದ್ದಾರೆ. ಇದು ರಾಷ್ಟ್ರೀಯ ಸರಾಸರಿ ಶೇ.14ಕ್ಕಿಂತ ಕಡಿಮೆ. 10 ಅಥವಾ ಹೆಚ್ಚು ವರ್ಷಗಳ ಶಿಕ್ಷಣ ಪಡೆದ ಮಹಿಳೆಯರ ಸಂಖ್ಯೆ ರಾಷ್ಟ್ರೀಯವಾಗಿ ಶೇ.41ರಷ್ಟು ಇದ್ದರೆ, ಗುಜರಾತ್ನಲ್ಲಿ ಮಾತ್ರ ಶೇ.34ರಷ್ಟಿತ್ತು.
2020ರಲ್ಲಿ ಅಮೆರಿಕದ ಅಧ್ಯಕ್ಷ ಟ್ರಂಪ್ ಗುಜರಾತ್ ಗೆ ಬಂದಾಗ ಅಹಮದಾಬಾದ್ ಬಸ್ತಿಗೆ ಗೋಡೆಯನ್ನು ಎಬ್ಬಿಸಿದ್ದು ಗೊತ್ತಿರಬಹುದು. ಇದರ ಆಚೆ 700 ಕುಟುಂಬಗಳು ವಾಸಿಸುತ್ತಿದ್ದು, ಈ ಬಡ ಕುಟುಂಬಗಳು ಟ್ರಂಪ್ ಕಣ್ಣಿಗೆ ಬೀಳದಿರಲಿ ಎಂದು ಈ ಗೋಡೆಯನ್ನು ಎಬ್ಬಿಸಲಾಗಿತ್ತು.
ಮೊರ್ಬಿಯಲ್ಲಿ ಮಚ್ಚು ನದಿಗೆ ಅಡ್ಡಲಾಗಿ ನಿರ್ಮಿಸಿದ್ದ ಸೇತುವೆ ಕುಸಿತದಿಂದ 2022ರಲ್ಲಿ 135 ಜನರು ಸಾವನ್ನಪ್ಪಿದ್ದರು. 2021ರಲ್ಲಿ ಅಹಮದಾಬಾದ್ನ ದಕ್ಷಿಣ ಭೋಪಾಲ್ನಲ್ಲಿ ಎಸ್ಪಿ ರಿಂಗ್ ರೋಡ್ನಲ್ಲಿರುವ ಮುಮತ್ಪುರ ಸೇತುವೆ ಕುಸಿದಿತ್ತು. 2022ರಲ್ಲಿ ವಡೋದರಾದ ಅಟಲ್ ಸೇತುವೆಯ ರಾಂಪ್ನಲ್ಲಿ ಬಿರುಕುಗಳು ಕಂಡುಬಂದಿದ್ದವು. ತಾಪಿ ನದಿಯ ಮೇಲಿನ 100 ಮೀಟರ್ ಸೇತುವೆ 2023ರ ಜೂನ್ 14ರಂದು ಕುಸಿದಿತ್ತು ಮತ್ತು 42 ದಿನಗಳ ನಂತರ ಬಿರುಕುಗಳು ಕಾಣಿಸಿಕೊಂಡವು.

ತನಿಖಾ ವರದಿಯ ಪ್ರಕಾರ, ಕಳಪೆ ಗುಣಮಟ್ಟದ ಕಾಂಕ್ರೀಟ್, ಗುಣಮಟ್ಟದಲ್ಲಿ ಲೋಪ ಮತ್ತು ಕಾಮಗಾರಿ ವೇಳೆ ತೋರಿರುವ ನಿರ್ಲಕ್ಷ್ಯವೇ ಸೇತುವೆ ಕುಸಿತಕ್ಕೆ ಕಾರಣವಾಗಿದೆ. ಅಲ್ಲದೆ ರೆಡಿ ಮಿಕ್ಸ್ ಕಾಂಕ್ರೀಟ್ ಘಟಕದಿಂದ ಸಂಗ್ರಹಿಸಿದ ಮರಳಿನ ಮಾದರಿಗಳ ಗುಣಮಟ್ಟವು ನಿಗದಿತ ಮಾನದಂಡಕ್ಕಿಂತ ಕಡಿಮೆ ಇರುವುದಾಗಿ ಬಹಿರಂಗವಾಗಿದೆ.
ಕಳೆದ ಮೂರು ದಶಕಗಳಿಂದ ಗುಜರಾತಿನಲ್ಲಿ ಪಾಟಿದಾರ್ ಸಮುದಾಯ ಬಿಜೆಪಿಯನ್ನು ಬೆಂಬಲಿಸುತ್ತ ಬಂದಿದೆ. ಆದರೆ ಈ ಸಮುದಾಯದ ಬಹುತೇಕರು ಇಲ್ಲಿ ವಾಸಿಸುವುದಿಲ್ಲ. ಅವರು ಕೆನಡಾ ಅಮೆರಿಕ ಯುಕೆಯಲ್ಲಿ ಉದ್ಯೋಗ ಮಾಡುತ್ತಿದ್ದಾರೆ. ಗುಜರಾತಿನಲ್ಲಿ ದೊಡ್ಡ ಮಟ್ಟದಲ್ಲಿ ಜಾತಿ ತಾರತಮ್ಯವಿದೆ. ಜಾತಿ ದೌರ್ಜನ್ಯ ಇದೆ. ಶಿಕ್ಷಣ ಉದ್ಯೋಗ ಕೃಷಿ ಸಹಿತ ಪ್ರಮುಖ ಕ್ಷೇತ್ರಗಳಲ್ಲಿ ತೀರದ ಸಮಸ್ಯೆಗಳಿವೆ. ದಲಿತ ವರ ಕುದುರೆಯ ಮೇಲೇರಿ ಹೋಗುವುದಕ್ಕೂ ಅವಕಾಶ ಇಲ್ಲವೆಂಬುದು ಗಮನಾರ್ಹ.
ಪ್ರಸ್ತುತದಲ್ಲಿ ನೋಡುವುದಾದರೆ, ಮೊದಲ ಒಂದೇ ಒಂದು ಮಳೆ ಗುಜರಾತನ್ನು ನರಕ ಸದೃಶ ಮಾಡಿತ್ತು. ಸಾವಿರಕ್ಕಿಂತಲೂ ಅಧಿಕ ಮನೆಗಳು, ಅಂಗಡಿಗಳು ನೀರಿನಿಂದ ಮುಳುಗಿಹೋಗಿದ್ದವು. 20ಕ್ಕಿಂತಲೂ ಅಧಿಕ ಜನರು ಸಾವಿಗೀಡಾದರು. ತ್ಯಾಜ್ಯವನ್ನು ಕೊಂಡೊಯ್ಯುವ ಲಾರಿಗಳಲ್ಲಿ ಜನರನ್ನು ತುಂಬಿಸಿ ಅತ್ತಿತ್ತ ಕೊಂಡೊಯ್ದಿರುವ ಘಟನೆಗಳೂ ಸಂಭವಿಸಿದವು. ಇದೇ ನಗರಗಳಲ್ಲಿ ಮೂಲಸೌಕರ್ಯಗಳು ಒಂದಿನಿತೂ ಇಲ್ಲ. ಮಳೆ ನೀರೆಲ್ಲ ಮನೆ, ಅಂಗಡಿ, ರಸ್ತೆಗಳಲ್ಲಿ ನಿಂತು ಕೊಳವಾಗಿ ಮಾರ್ಪಟ್ಟಿತ್ತು.
2025ರ ಜುಲೈ 9ರಂದು ಮತ್ತೊಂದು ಗಂಭೀರ ಘಟನೆ ಸಂಭವಿಸಿದ್ದು, ವಡೋದರಾದ ಮುಜ್ಪುರ್ ಬಳಿಯ ಮಹಿಸಾಗರ್ ನದಿಯ ಮೇಲಿನ ಸೇತುವೆ ಕುಸಿದಿದೆ. ಜುಲೈ 10ರ ವೇಳೆಗೆ ಮೃತಪಟ್ಟವರ ಸಂಖ್ಯೆ 15ಕ್ಕೆ ಏರಿಕೆಯಾಗಿದ್ದು, ಮೂವರು ನಾಪತ್ತೆಯಾಗಿದ್ದಾರೆ. ವಿಪತ್ತು ನಿರ್ವಹಣಾ ತಂಡಗಳು ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದ್ದು, ಇನ್ನೂ ಎರಡು ವಾಹನಗಳು ನದಿಯಲ್ಲಿ ಸಿಲುಕಿರುವ ಸಾಧ್ಯತೆ ಇದೆ.
ಇದನ್ನೂ ಓದಿದ್ದೀರಾ? ವಿಶ್ವ ಜನಸಂಖ್ಯಾ ದಿನ 2025 | ಸಮತೋಲಿತ ಭವಿಷ್ಯಕ್ಕಾಗಿ ಬದಲಾವಣೆಯ ತುರ್ತು
1985ರಲ್ಲಿ ನಿರ್ಮಿತವಾದ, ವಡೋದರಾ ಮತ್ತು ಆನಂದ್ ಜಿಲ್ಲೆಗಳನ್ನು ಸಂಪರ್ಕಿಸುವ 40 ವರ್ಷ ಹಳೆಯ ಸೇತುವೆ 900 ಮೀಟರ್ ಉದ್ದದವಾಗಿದ್ದು, 23 ಕಂಬಗಳ ಮೇಲೆ ನಿರ್ಮಾಣವಾಗಿದೆ. ಈ ಪೈಕಿ 10-15 ಮೀಟರ್ ಉದ್ದದ ಒಂದು ಸ್ಲಾಬ್ ಕುಸಿದಿದೆ. ಈ ವೇಳೆ ಸೇತುವೆ ಮೂಲಕ ಹಾದುಹೋಗುತ್ತಿದ್ದ ಎರಡು ಟ್ರಕ್ಗಳು, ಎರಡು ವ್ಯಾನ್ಗಳು, ಒಂದು ಆಟೋರಿಕ್ಷಾ ಮತ್ತು ಕೆಲವು ದ್ವಿಚಕ್ರ ವಾಹನಗಳು ಮಹಿಸಾಗರ್ ನದಿಗೆ ಬಿದ್ದಿವೆ. ಇದಕ್ಕೆ ಕಳಪೆ ನಿರ್ವಹಣೆ ಮತ್ತು ಭಾರೀ ವಾಹನಗಳ ಸಂಚಾರವೇ ಕುಸಿತಕ್ಕೆ ಕಾರಣವೆಂಬ ಆರೋಪಗಳು ವ್ಯಕ್ತವಾಗುತ್ತಿವೆ.
ಸ್ಥಳೀಯರು ಈ ಹಿಂದೆಯೇ ವಡೋದರಾ ಸೇತುವೆಯ ದುಃಸ್ಥಿತಿಯ ಬಗ್ಗೆ ಎಚ್ಚರಿಕೆ ನೀಡಿದ್ದರೂ ಯಾವುದೇ ಗಮನಾರ್ಹ ಕ್ರಮ ಕೈಗೊಳ್ಳದ ಆಡಳಿತ ಸರ್ಕಾರ ಮತ್ತು ಪ್ರಧಾನಿ ಮೋದಿಯವರು ಮೃತರು ಹಾಗೂ ಗಾಯಾಳುಗಳ ಕುಟುಂಬಕ್ಕೆ ಪರಿಹಾರ ಘೋಷಿಸಿದ್ದಾರೆ.
ಅಂತೂ ಈಗ ಗುಜರಾತ್ ಮಾಡೆಲ್ ಅನ್ನು ಬಿಜೆಪಿ ಮರೆತಿದೆ. ನರೇಂದ್ರ ಮೋದಿಯವರೂ ಮರೆತಿದ್ದಾರೆ. ಮಾಧ್ಯಮಗಳೂ ಮರೆತಿವೆ. ಸೋಶಿಯಲ್ ಮೀಡಿಯಾಕ್ಕೆ ನೆನಪೇ ಇಲ್ಲ. ಆದರೆ ಸುಳ್ಳಿನ ಮೇಲೆ ಕಟ್ಟಲಾದ ಗೋಪುರಕ್ಕೆ ದೀರ್ಘಾಯುಷ್ಯ ಇರಲು ಸಾಧ್ಯವಿಲ್ಲ, ಅಂತೆಯೇ ಪ್ರಕೃತಿ ಮಾತ್ರ ಮರೆಯದೇ ಆಗಾಗ ಇದನ್ನು ದೇಶಕ್ಕೆ ನೆನಪಿಸುತ್ತಿದೆ.