ಪಶ್ಚಿಮ ಬಂಗಾಳದ ಪುರುಲಿಯಾ ಜಿಲ್ಲೆಯ ಅಯೋಧ್ಯಾ ಬೆಟ್ಟಗಳ ನಡುವೆ ನೆಲೆಗೊಂಡಿರುವ ಜಿಲಿಂಗ್ಸೆರೆಂಗ್ ಹಳ್ಳಿಯ ಕಥೆ ಇಡೀ ಸಮಾಜಕ್ಕೆ ಮಾದರಿಯಾಗಿದೆ. ಗ್ರಾಮದ ಮಹಿಳೆಯ ಯಶೋಗಾಥೆ ಪ್ರತಿಯೊಬ್ಬರ ಮನಮುಟ್ಟುತ್ತದೆ. ಸಮಾಜಕ್ಕೆ ಹೊಸ ದಾರಿ-ದಿಕ್ಕು ತೋರಿಸುತ್ತದೆ. ಇದು ಜಿಲಿಂಗ್ಸೆರೆಂಗ್ ಹಳ್ಳಿಯ ಮಾಲತಿ ಮುರ್ಮು ಅವರ ನಿಸ್ವಾರ್ಥ ಸೇವೆ ಮತ್ತು ಸಮಾಜಕ್ಕಾಗಿ ಕೊಡುಗೆಯ ಕಥೆ.
ಮಾಲತಿ ಮುರ್ಮು ಅವರು ಶಿಕ್ಷಕಿಯೂ ಅಲ್ಲ, ಹೆಚ್ಚಿನ ವಿದ್ಯಾಭ್ಯಾಸವನ್ನೂ ಪಡೆದಿಲ್ಲ, ಯಾವುದೇ ದೊಡ್ಡ ಸಂಸ್ಥೆಯೊಂದಿಗೆ ಆರ್ಥಿಕ ಸಂಬಂಧವನ್ನೂ ಹೊಂದಿಲ್ಲ. ಸಾಮಾನ್ಯ ಗೃಹಿಣಿಯಾಗಿರುವ ಮಾಲತಿ ಮುರ್ಮು ಅವರು ಸರ್ಕಾರದಿಂದ ಯಾವುದೇ ನೆರವು ದೊರೆಯದೇ ಇದ್ದರೂ, ಸ್ವ-ಉತ್ಸಾಹದಿಂದ ಶಾಲೆಯನ್ನು ಸ್ಥಾಪಿಸಿ, 45 ಮಕ್ಕಳ ಶಿಕ್ಷಣಕ್ಕೆ ದಾರಿದೀಪವಾಗಿದ್ದಾರೆ. ಇದೆಲ್ಲಕ್ಕೂ ಕಾರಣ, ತನ್ನೂರಿನ ಮಕ್ಕಳಿಗೆ ಶಿಕ್ಷಣ ನೀಡಬೇಕೆಂಬ ಆಕೆಯ ಕನಸು. ಆಕೆಯ ಮನಸ್ಸಿನಲ್ಲಿದ್ದ ಉರಿಯುತ್ತಿದ್ದ ಶಿಕ್ಷಣದ ದೀಪವು ಆಕೆಯ ತನ್ನೂರಿನ ಮಕ್ಕಳಿಗೆ ಶಿಕ್ಷಣ ನೀಡುವಂತೆ ಮಾಡಿದೆ.
2020ರಲ್ಲಿ ಮದುವೆಯಾದ ಮಾಲತಿ, ತನ್ನ ಪತಿಯ ಗ್ರಾಮ ಜಿಲಿಂಗ್ಸೆರೆಂಗ್ಗೆ ಬಂದಾಗ, ಆ ಗ್ರಾಮದಲ್ಲಿ ಶಿಕ್ಷಣದ ಸ್ಥಿತಿ ತುಂಬಾ ಶೋಚನೀಯವಾಗಿತ್ತು. ಗ್ರಾಮದಲ್ಲಿ ಶಾಲೆ ಇದ್ದರೂ, ಅದು ಪಾಳು ಬಿದ್ದಿತ್ತು. ಯಾವುದೇ ಮಕ್ಕಳು ಆ ಶಾಲೆಯಲ್ಲಿ ಕಲಿಯುತ್ತಿರಲಿಲ್ಲ. ಮಾತ್ರವಲ್ಲ, ಆ ಗ್ರಾಮದ ಮಕ್ಕಳು ಶಿಕ್ಷಣವನ್ನೇ ಪಡೆಯುತ್ತಿರಲಿಲ್ಲ. ಬಡತನ ಮತ್ತು ಅರಿವಿನ ಕೊರತೆಯಿಂದ ಮಕ್ಕಳು ಶಿಕ್ಷಣದಿಂದ ವಂಚಿತರಾಗಿದ್ದರು. ಇದನ್ನು ನೋಡಿದ ಮಾಲ್ತಿ ಅವರು ಮಕ್ಕಳ ಶಿಕ್ಷಣಕ್ಕಾಗಿ ಏನನ್ನಾದರೂ ಮಾಡಬೇಕು. ಶಿಕ್ಷಣ ವ್ಯವಸ್ಥೆಯನ್ನೇ ಬದಲಿಸಲು ನಿರ್ಧರಿಸಿದ್ದರು.
ಆರಂಭದಲ್ಲಿ, ಅವರು ಏನು ಮಾಡಹೊರಟಿದ್ದಾರೆ ಎಂಬುದು ಆಕೆಯ ಪತಿಗೂ ಅರ್ಥವಾಗಿರಲಿಲ್ಲ. ಮಾಲತಿ ಅವರು ಭಯ, ಸಂಪ್ರದಾಯ ಮತ್ತು ಪ್ರತಿರೋಧವನ್ನು ಮೆಟ್ಟಿ ಗಟ್ಟಿಯಾಗಿ ನಿಂತರು. ತನ್ನ ಕಾರ್ಯದಲ್ಲಿ ನಂಬಿಕೆ ಇಟ್ಟಿದ್ದರು. ಅಂತಿಮವಾಗಿ ಆಕೆಯ ಪತಿಯೂ ಆಕೆಯ ಕೆಲಸಕ್ಕೆ ಸಾಥ್ ನೀಡಿದರು.
ಈ ಲೇಖನ ಓದಿದ್ದೀರಾ?: ದಕ್ಷಿಣ ಕನ್ನಡವೇಕೆ ಮಂಗಳೂರು ಆಗಬೇಕು; ಏನಿದು ಮರುನಾಮಕರಣ ಕೂಗು?
ಮಾಲತಿ ಮುರ್ಮು ಅವರು ತನ್ನ 2 ತಿಂಗಳ ಮಗುವನ್ನು ತನ್ನ ತೋಳುಗಳಲ್ಲಿ ಹಿಡಿದುಕೊಂಡು, ಮರದ ಕೆಳಗೆ ಮಕ್ಕಳಿಗೆ ಶಿಕ್ಷಣ ಕಲಿಸಲು ಆರಂಭಿಸಿದರು. ಕೆಲವು ಪುಸ್ತಕಗಳು, ಕಪ್ಪು ಹಲಗೆ ಮತ್ತು ಮಕ್ಕಳಿಗೆ ಕಲಿಸಬೇಕೆಂಬ ಅವರ ಉತ್ಸಾಹವೇ ಅವರ ಬಂಡವಾಳವಾಗಿತ್ತು. ಇಂದು, ಮಾಲತಿ ಅವರು ತನ್ನದೇ ಆದ ಘರ್ವಾಲಾ ಶಾಲೆಯನ್ನು ನಡೆಸುತ್ತಿದ್ದಾರೆ. 45 ಮಕ್ಕಳಿಗೆ ಸಂತಾಲಿ, ಬಂಗಾಳಿ ಹಾಗೂ ಇಂಗ್ಲಿಷ್ ಎಂಬ ಮೂರು ಭಾಷೆಗಳಲ್ಲಿ ಶಿಕ್ಷಣ ಕಲಿಸುತ್ತಿದ್ದಾರೆ. ಅವರ ಪ್ರಯತ್ನಗಳು ಮಕ್ಕಳ ಜೀವನವನ್ನು ಬದಲಾಯಿಸುವುದಲ್ಲದೆ, ಇಡೀ ಹಳ್ಳಿಗೆ ಸ್ಫೂರ್ತಿಯಾಗಿದೆ. ಬುಡಕಟ್ಟು ಮಕ್ಕಳಿಗೆ ಆಸರೆಯಾಗಿದ್ದಾರೆ.