ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರು ಚಿಂತಾಮಣಿ ತಾಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಿದರು. ಬಳಿಕ ತಾಲೂಕು ದಂಡಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು.
“ಬೆಂಗಳೂರು ನಗರದ ಫ್ರೀಡಂ ಪಾರ್ಕ್‌ನಲ್ಲಿ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ 40 ಸಾವಿರಕ್ಕೂ ಹೆಚ್ಚು ಕಾರ್ಯಕರ್ತೆಯರು ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಪ್ರತಿಭಟಿಸಿದ್ದೆವು. ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಅವರು ಸಂಘಟನೆ ಜತೆಯಲ್ಲಿ ಸಭೆ ನಡೆಸಿದ್ದರು” ಎಂದು ಆಶಾ ಕಾರ್ಯಕರ್ತೆಯರು ತಿಳಿಸಿದರು.
“ಈ ವೇಳೆ ನಾವು ₹12,000 ಗೌರವಧನ ನೀಡಬೇಕೆಂದು ಒತ್ತಾಯ ಮಾಡಿದ್ದೆವು. ಸರ್ಕಾರ ₹10,000 ಗೌರವಧನ ನೀಡುವ ಭರವಸೆ ನೀಡಿತ್ತು. ಅಲ್ಲದೆ ಕಾಂಪೋನೆಂಟ್‌ಗಳ ಹೆಚ್ಚುವರಿ ಕೆಲಸದ ಆಧಾರದ ಮೇಲೆ ಹೆಚ್ಚುವರಿ ಇನ್ಸೆಂಟೀವ್ ಕೂಡ ನೀಡಲಾಗುವುದೆಂದು ಭರವಸೆ ನೀಡಿತ್ತು. ನಂತರ ಸಿಎಂ ಭರವಸೆ ಮೇರೆಗೆ ಪ್ರತಿಭಟನೆ ಕೈಬಿಡಲಾಗಿತ್ತು. ಆದರೀಗ ನಿಶ್ಚಿತ ಗೌರವಧನ ₹10,000ವನ್ನಾದರೂ ಆಶಾ ಕಾರ್ಯಕರ್ತೆಯರಿಗೆ ನೀಡವ ಆದೇಶ ಹೊರಡಿಸಿಲ್ಲ” ಎಂದು ಆರೋಪಿಸಿದರು.
ಈ ಸುದ್ದಿ ಓದಿದ್ದೀರಾ? ವಿಜಯನಗರ | ಪ್ರತಿರೋಧ ಸಂಘರ್ಷಕ್ಕೆ ಕೊನೆಯಿಲ್ಲ: ಚಿಂತಕ ಡಾ. ಪಾಟೀಲ್
“1 ಸಾವಿರ ಹೆಚ್ಚಿಸುವುದಾಗಿ ಬಜೆಟ್‌ನಲ್ಲಿ ತಿಳಿಸಿದ್ದರು. ಈಗ ಸರ್ಕಾರ ತಾನು ನೀಡಿದ ಭರವಸೆಯನ್ನು ಈಡೇರಿಲ್ಲ. ಆಶಾ ಕಾರ್ಯಕರ್ತೆಯರ ನ್ಯಾಯಯುತವಾದ ಬೇಡಿಕೆ ಈಡೇರಿಸದಿದ್ದರೆ ಮುಂದಿನ ದಿನಗಳಲ್ಲಿ ಹೋರಾಟ ತೀವ್ರಗೊಳಿಸಲಾಗುವುದು” ಎಂದು ಎಚ್ಚರಿಕೆ ನೀಡಿದರು.

ಪ್ರತಿಭಟನೆಯಲ್ಲಿ ಲಕ್ಷ್ಮಿ, ರೇಷ್ಮಾ ಎಂ, ಪಾರ್ವತಿ, ಶಿವಮ್ಮ, ಅಂಜಮ್ಮ, ನಾಗರತ್ನಮ್ಮ, ಸುಶೀಲಮ್ಮ ಸೇರಿದಂತೆ ಇತರರು ಇದ್ದರು.