ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿರುದ್ಧ ಧಿಕ್ಕಾರಗಳನ್ನು ಕೂಗುತ್ತ ರಸ್ತೆಗೆ ಇಳಿದ ಹಾಸ್ಟೆಲ್, ಅಂಗನವಾಡಿ, ಗ್ರಾಮ ಪಂಚಾಯಿತಿ, ಬಿಸಿಯೂಟ ಕಾರ್ಯಕರ್ತೆಯರು ಚಿಂತಾಮಣಿ ನಗರದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಿ ನಗರದ ತಾಲೂಕು ಕಚೇರಿ ಎದುರು ಇರುವ ವೃತ್ತದ ರಸ್ತೆಯಲ್ಲಿಯೇ ಮಲಗುವ ಮೂಲಕ ಬೃಹತ್ ರಸ್ತೆತಡೆ ಪ್ರತಿಭಟನೆ ನಡೆಸಿದರು.
ಕಾರ್ಮಿಕ ವಿರೋಧಿ ನಾಲ್ಕು ಲೇಬರ್ ಕೋಡ್‌ಗಳ ಜಾರಿ ವಿರೋಧಿಸಿ, ರೈತ ವಿರೋಧಿ ನೀತಿಗಳನ್ನು ರದ್ದುಮಾಡಲು ಆಗ್ರಹಿಸಿ ಹಾಗೂ ದುಡಿಯುವ ವರ್ಗದ ಹಕ್ಕೊತ್ತಾಯಗಳನ್ನು ಈಡೇರಿಸುವಂತೆ ಒತ್ತಾಯಿಸಿದರು.
“ಕೇಂದ್ರ ಮತ್ತು ರಾಜ್ಯ ಸರ್ಕಾರಗಳೆರಡು ದುಡಿಯುವ ಜನರ ಬದುಕನ್ನು ಛಿದ್ರಗೊಳಿಸುವ, ಕಾರ್ಪೊರೇಟ್ ಕಂಪನಿಗಳ ಲೂಟಿಗೆ ರತ್ನಗಂಬಳಿ ಹಾಸುವ ಸಾಲು-ಸಾಲು ಕಾಯ್ದೆಗಳನ್ನು ತರಲು ಹೊರಟಿವೆ. ದುಡಿಯುವ ಜನರ ಬದುಕಿನ ಮೇಲೆ ನಡೆಯಲಿರುವ ಈ ಪ್ರಹಾರವನ್ನು ವಿರೋಧಿಸಿ ದೇಶ ವ್ಯಾಪ್ತಿ ಸಾರ್ವತ್ರಿಕ ಮುಷ್ಕರಕ್ಕೆ ಕರೆ ನೀಡಿದ್ದ ಹಿನ್ನೆಲೆಯಲ್ಲಿ ಚಿಂತಾಮಣಿಯಲ್ಲಿಯೂ ಕೂಡ ಪ್ರತಿಭಟನೆ ನಡೆಸುತ್ತಿದ್ದೇವೆ” ಎಂದು ಪ್ರತಿಭಟನಾಕಾರರುನ ಆಕ್ರೋಶ ಹೊರಹಾಕಿದರು.

“ರಾಜ್ಯದಲ್ಲಿ ಎರಡು ವರ್ಷದ ಹಿಂದೆ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಸರ್ಕಾರ ಒಂದಾದ ಮೇಲೊಂದರಂತೆ ಕಾರ್ಮಿಕ ವಿರೋಧಿ ನೀತಿಗಳನ್ನು ಜಾರಿಗೊಳಿಸಲು ಮುಂದಾಗಿದೆ. ಎಂಟು ಗಂಟೆಗಳ ದುಡಿತದ ಅವಧಿಯನ್ನು 12 ಗಂಟೆಗಳಿಗೆ ಹೆಚ್ಚಿಸಲು ತಯಾರಿ ನಡೆಸಿದೆ. ಮೂರನೇ ಅವಧಿಗೆ ಅಧಿಕಾರಕ್ಕೆ ಬಂದಿರುವ ಬಿಜೆಪಿ ನೇತೃತ್ವದ ಎನ್‍ಡಿಎ ಸರ್ಕಾರ ದುಡಿಯುವ ಜನರ ಹಕ್ಕುಗಳನ್ನು ಕಸಿಯುತ್ತಿದೆ. ಈ ಪರಿಸ್ಥಿತಿಗಳನ್ನು ಸುಧಾರಿಸಬೇಕಾದಂತಹ ರಾಜ್ಯ ಸರ್ಕಾರ ತದ್ವಿರುದ್ಧವಾಗಿ 4 ಕಾರ್ಮಿಕ ಸಂಹಿತೆಗಳನ್ನು ಜಾರಿಗೆ ತರುವ ಮೂಲಕ ಇವುಗಳನ್ನು ದುಡಿಯುವ ಜನರ ಮೇಲೆ ಒತ್ತಾಯ ಪೂರ್ವಕವಾಗಿ ಹೇರುತ್ತಿದೆ” ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಈ ಸುದ್ದಿ ಓದಿದ್ದೀರಾ? ಚಿಂತಾಮಣಿ | ವಿವಿಧ ಬೇಡಿಕೆ ಈಡೇರಿಸುವಂತೆ ಆಶಾ ಕಾರ್ಯಕರ್ತೆಯರ ಪ್ರತಿಭಟನೆ
ಪ್ರತಿಭಟನೆಯ ನಂತರ ಸಿಡಿಪಿಒ ಇಲಾಖೆಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ವಿವಿಧ ಬೇಡಿಕೆಗಳ ಮನವಿ ಪತ್ರವನ್ನು ಸಲ್ಲಿಸಿದ ನಂತರ ಪ್ರತಿಭಟನೆಯನ್ನು ಹಿಂಪಡೆದರು.
ಪ್ರತಿಭಟನೆಯಲ್ಲಿ ಕೆಪಿಆರ್‌ಎಸ್ ಆನಂದ್ ಎಂ ಎಸ್, ಹೆಚ್ ಎಸ್ ರಾಜಕುಮಾರ್, ಕೃಷ್ಣಾರೆಡ್ಡಿ, ಟಿ ಎಸ್ ಸೌಭಾಗ್ಯಲಕ್ಷ್ಮಿ, ಹೆಚ್ ಜಿ ಲಕ್ಷ್ಮಿ ನರಸಮ್ಮ, ಆರ್ ಅಮರಾವತಿ, ಸುಜಾತ, ಮಂಜುನಾಥ್, ನರಸಿಂಹಪ್ಪ ಸೇರಿದಂತೆ ಇತರರು ಇದ್ದರು.