ಕೊಡಗು ಜಿಲ್ಲೆ, ಮಡಿಕೇರಿ ನಗರದ ಜಿಲ್ಲಾಡಳಿತ ಭವನದಲ್ಲಿರುವ ಶಾಸಕರ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಶಾಸಕ ಎ. ಎಸ್. ಪೊನ್ನಣ್ಣ ಎರಡು ಸಾವಿರ ಆದಿವಾಸಿ ಬುಡಕಟ್ಟು ಕುಟುಂಬಕ್ಕೆ ಶೀಘ್ರವೇ ಹಕ್ಕುಪತ್ರ ವಿತರಣೆ ಮಾಡಲಾಗುವುದು ಎಂದರು.
ನಿವೇಶನ ಹಕ್ಕು ಪತ್ರ ನೀಡುವ ಸಂಬಂಧ ಆಯಾಯ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಈಗಾಗಲೇ ಜಾಗ ಗುರುತಿಸಲಾಗಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಅವರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಿ ನಿವೇಶನ ಹಕ್ಕುಪತ್ರ ವಿತರಿಸಲಾಗುವುದು ಎಂದು ಮಾಹಿತಿ ನೀಡಿದರು.
ಕೊಡಗು ಜಿಲ್ಲೆಯ ಲೈನ್‍ಮನೆಗಳಲ್ಲಿ ವಾಸಿಸುವ ಬುಡಕಟ್ಟು ಆದಿವಾಸಿ 2000 ಕ್ಕೂ ಹೆಚ್ಚು ಕುಟುಂಬಗಳಿಗೆ ನಿವೇಶನ ಹಕ್ಕು ಪತ್ರವನ್ನು ಎರಡು ಮೂರು ತಿಂಗಳಲ್ಲಿ ವಿತರಿಸಲಾಗುವುದು. ವಿರಾಜಪೇಟೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಅನೇಕ ಬುಡಕಟ್ಟು ಸಮುದಾಯದವರು ಬಡವರಿದ್ದು, ನಿವೇಶನ ರಹಿತರಿಗೆ ಹಕ್ಕು ಪತ್ರ ನೀಡಲು ಅಭಿಯಾನ ಮಾದರಿಯಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಸುಮಾರು 1590 ಕ್ಕೂ ಹೆಚ್ಚು ನಿವೇಶನ ರಹಿತರಿದ್ದು, ನಿವೇಶನ ಹಕ್ಕುಪತ್ರ ನೀಡಲು ಸಿದ್ಧತೆಯಾಗುತ್ತಿದೆ. ಈಗಾಗಲೇ, ಸರ್ಕಾರಿ ಜಾಗ ಗುರುತಿಸಲಾಗಿದೆ.
ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ವಿರಾಜಪೇಟೆ, ಪೊನ್ನಂಪೇಟೆ, ಮಡಿಕೇರಿ ವ್ಯಾಪ್ತಿಯಲ್ಲಿ ಸರ್ಕಾರಿ ಜಾಗ ಗುರುತಿಸಲಾಗಿದೆ. ಎರಡು ಮೂರು ತಿಂಗಳಲ್ಲಿ ಹಕ್ಕುಪತ್ರ ವಿತರಣೆಗೆ ಕ್ರಮವಹಿಸಲಾಗುವುದು. ನಿವೇಶನ ರಹಿತರು ಆಯಾಯ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಹೆಸರು ನೋಂದಾಯಿಸಿಕೊಳ್ಳಬೇಕು ಎಂದು ಕೋರಿದರು.
ಲೈನ್‍ಮನೆಗಳಲ್ಲಿ ವಾಸಿಸುವ ಬುಡಕಟ್ಟು ಸಮುದಾಯದವರಿಗೆ ವೈಜ್ಞಾನಿಕವಾಗಿ ಪಟ್ಟಿ ತಯಾರಿಸಲಾಗಿದೆ. 61 ಎಕರೆ ಜಾಗವಿದ್ದು, ಗ್ರಾಮ ಸಭೆಯಲ್ಲಿ ಸಹ ಪರಿಶೀಲಿಸಿ ಪಟ್ಟಿ ಆಯ್ಕೆ ಮಾಡಲಾಗುತ್ತದೆ. ಆಯಾಯ ಗ್ರಾಮ ಪಂಚಾಯಿತಿಯಲ್ಲಿ ಕುಟುಂಬಗಳು ನೋಂದಣಿ ಮಾಡಿಕೊಳ್ಳಬೇಕು. ಇದೊಂದು ಅಭಿಯಾನ ಮಾದರಿಯಲ್ಲಿ ನಿವೇಶನ ಹಂಚಿಕೆ ಮಾಡಲಾಗುತ್ತದೆ ಎಂದರು.
ಆರ್ಥಿಕವಾಗಿ ಬಡ ಕುಟುಂಬದವರಿಗೆ ನಿವೇಶನ ಒದಗಿಸಬೇಕು ಎಂಬುದು ಆದ್ಯತೆಯಾಗಿದೆ. ಈ ನಿಟ್ಟಿನಲ್ಲಿ ಬುಡಕಟ್ಟು ಪರಿಶಿಷ್ಟರಿಗೆ ನಿವೇಶನ ನೀಡಲು ಮುಂದಾಗಲಾಗಿದೆ. ಜಿಲ್ಲಾಧಿಕಾರಿಯವರು, ಜಿಲ್ಲಾ ಪಂಚಾಯತ್ ಸಿಇಓ, ತಹಶೀಲ್ದಾರ್, ತಾಲ್ಲೂಕು ಪಂಚಾಯತಿ ಇಓ ಒಳಗೊಂಡ ಸಭೆಯನ್ನು ಈಗಾಗಲೇ ನಡೆಸಲಾಗಿದೆ ಎಂದು ಹೇಳಿದರು.
ಜಿಲ್ಲೆಯ ಬಡವರು ತಾವುಗಳೇ ಹೋಗಿ ಎಲ್ಲಿಯೂ ಸಹ ಶೆಡ್ ನಿರ್ಮಾಣ ಮಾಡಬಾರದು. ಜಾಗ ಗುರುತಿಸಿ ನಿವೇಶನ ಹಂಚಿಕೆ ಮಾಡಲಾಗುವುದು. ಆದ್ದರಿಂದ, ತಾಳ್ಮೆಯಿಂದ ಇರಬೇಕು ಎಂದರು. ಜಿಲ್ಲೆಯಲ್ಲಿ ವನ್ಯಪ್ರಾಣಿಗಳ ಹಾವಳಿ ತಡೆಯುವ ನಿಟ್ಟಿನಲ್ಲಿ ಉಪ ಅರಣ್ಯ ಸಂರಕ್ಷಣಾಧಿಕಾರಿ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ, ವಲಯ ಅರಣ್ಯಾಧಿಕಾರಿಗಳೊಂದಿಗೆ ಸಭೆ ನಡೆಸಲಾಗಿದ್ದು, ಹುಲಿ, ಕರಡಿ, ಕಾಡಾನೆ ವನ್ಯಪ್ರಾಣಿಗಳ ಹಾವಳಿ ತಡೆಯಲು ವಿಶೇಷ ಕ್ಷಿಪ್ತಪಡೆ ರಚಿಸಲಾಗಿದ್ದು, ಈ ತಂಡವು ಕಾಡಾನೆಗಳನ್ನು ಓಡಿಸುವ ಕೆಲಸ ಮಾಡಲಿದ್ದಾರೆ ಎಂದರು.
ಕಾಡಾನೆಗಳನ್ನು ಕಾಡಿಗೆ ಓಡಿಸುವ ಕಾರ್ಯಾಚರಣೆ ಗುರುವಾರದಿಂದ ಆರಂಭವಾಗಿದೆ. ಸಾರ್ವಜನಿಕರ ಓಡಾಟಕ್ಕೆ ತೊಂದರೆಯಾಗುತ್ತಿರುವ ನಾಲ್ಕು ಹುಲಿಗಳನ್ನು ಹಿಡಿಯಲು ಅರಣ್ಯ ಇಲಾಖೆ ಅನುಮತಿ ನೀಡಿದೆ ಎಂದು ಮಾಹಿತಿ ನೀಡಿದರು.
ಈ ಸುದ್ದಿ ಓದಿದ್ದೀರಾ? ಮೈಸೂರು | ಜನ ಚಳುವಳಿಯಲ್ಲಿ ಭಾಗಿಯಾದ ಸಿದ್ದರಾಮಯ್ಯ ಇವರೇನಾ? : ಬಹುಭಾಷಾ ನಟ ಪ್ರಕಾಶ್ ರಾಜ್
ಸುದ್ದಿಗೋಷ್ಠಿಯಲ್ಲಿ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ಧರ್ಮಜ ಉತ್ತಪ್ಪ, ಪಿ.ಕೆ. ಪೊನ್ನಪ್ಪ ಇದ್ದರು.