ಹಲವರು ದಾಖಲೆಗಳನ್ನು ಬರೆಯುತ್ತಾರೆ. ಆ ದಾಖಲೆಗಳನ್ನು ಮತ್ತೊಬ್ಬರು ಮುರಿಯುತ್ತಾರೆ. ಕೆಲವು ದಾಖಲೆಗಳು ಐತಿಹಾಸಿಕವಾಗಿ ಉಳಿದುಕೊಂಡೂ ಬಿಡುತ್ತವೆ. ಕ್ರಿಕೆಟ್ ಲೋಕದಲ್ಲಿಯೂ ಅಂತಹ ದಾಖಲೆಗಳನ್ನು ಹಲವರು ಬರೆದಿದ್ದಾರೆ ಮತ್ತು ಮುರಿದಿದ್ದಾರೆ. ಇದೀಗ, ವಿರಾಟ್ ಕೋಹ್ಲಿ ಅವರ ದಾಖಲೆಯೊಂದನ್ನು ಶುಭಮನ್ ಗಿಲ್ ಮುರಿದ್ದು, ದಾಖಲೆಯಲ್ಲಿ ತಮ್ಮ ಹೆಸರು ಬರೆದುಕೊಂಡಿದ್ದಾರೆ.
ಇಂಗ್ಲೆಂಡ್ನ ಲಾರ್ಡ್ಸ್ ಮೈದಾನದಲ್ಲಿ ನಡೆಯುತ್ತಿರುವ ಇಂಗ್ಲೆಂಡ್-ಇಂಡಿಯಾ ಮೂರನೇ ಟೆಸ್ಟ್ ಪಂದ್ಯದಲ್ಲಿ ಗಿಲ್ ಹೊಸ ದಾಖಲೆ ಬರೆದಿದ್ದಾರೆ. ಈ ಟೆಸ್ಟ್ ಸರಣಿಯಲ್ಲಿ ಒಟ್ಟು 601 ರನ್ ಗಳಿಸಿರುವ ಗಿಲ್, ಟೆಸ್ಟ್ ಸರಣಿಯೊಂದರಲ್ಲಿ ಅಧಿಕ ರನ್ ಗಳಿಸಿದ ಕ್ರಿಕೆಟಿಗರ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದಿದ್ದಾರೆ. ಆ ಮೂಲಕ, ವಿರಾಟ್ ಕೊಹ್ಲಿ ಅವರ ದಾಖಲೆಯನ್ನು ಸರಿಗಟ್ಟಿದ್ದಾರೆ.
ಈವರೆಗೆ, ಟೆಸ್ಟ್ ಸರಣಿಯಲ್ಲಿ ಅಧಿಕ ರನ್ ದಾಖಲಿಸಿದವರ ಪಟ್ಟಿಯಲ್ಲಿ ಕೊಹ್ಲಿ ಹೆಸರು ಅಗ್ರಸ್ಥಾನದಲ್ಲಿತ್ತು. 2018ರಲ್ಲಿ ಇದೇ ಇಂಗ್ಲೆಂಡ್ ವಿರುದ್ಧ ನಡೆದಿದ್ದ ಟೆಸ್ಟ್ ಸರಣಿಯಲ್ಲಿ ನಾಯಕನಾಗಿ ಕಣಕ್ಕಿಳಿದಿದ್ದ ಕೊಹ್ಲಿ 5 ಪಂದ್ಯಗಳಲ್ಲಿ 593 ರನ್ ಕಲೆಹಾಕಿದ್ದರು. ದಾಖಲೆ ಬರೆದಿದ್ದರು. ಇದೀಗ, ಗಿಲ್ ಅವರು ಕೇವಲ 3 ಪಂದ್ಯಗಳಲ್ಲಿಯೇ ಕೊಹ್ಲಿ ಅವರ ದಾಖಲೆಯನ್ನು ಮುರಿದಿದ್ದಾರೆ.
ಇದೇ ಮೊದಲ ಬಾರಿಗೆ ಟೀಮ್ ಇಂಡಿಯಾದ ಟೆಸ್ಟ್ ನಾಯಕನಾಗಿ ಕಣಕ್ಕಿಳಿದ ಶುಭ್ಮನ್ ಗಿಲ್ 3 ಪಂದ್ಯಗಳಲ್ಲಿ 5 ಇನಿಂಗ್ಸ್ ಆಡಿದ್ದಾರೆ. 2 ಶತಕ ಹಾಗೂ ಒಂದು ದ್ವಿಶತಕದೊಂದಿಗೆ ಒಟ್ಟು 601 ರನ್ ಕಲೆಹಾಕಿದ್ದಾರೆ.