ಮುಂಬರುವ ಬಿಹಾರ ವಿಧಾನಸಭಾ ಚುನಾವಣೆಗೆ ಸೀಟು ಹಂಚಿಕೆ ಮಾಡುವ ವಿಚಾರವನ್ನು ಚರ್ಚಿಸಲು ವಿರೋಧ ಪಕ್ಷದ ಇಂಡಿಯಾ ಒಕ್ಕೂಟವು ಶನಿವಾರ(ಜುಲೈ 12) ಸಮನ್ವಯ ಸಮಿತಿ ಸಭೆಯನ್ನು ನಡೆಸಲಿದೆ.ರಾಜ್ಯದಲ್ಲಿ ವಿಧಾನಸಭಾ ಚುನಾವಣೆಗಳು ಅಕ್ಟೋಬರ್-ನವೆಂಬರ್‌ನಲ್ಲಿ ನಡೆಯಲಿವೆ.
ಆರ್‌ಜೆಡಿ ನಾಯಕ ತೇಜಸ್ವಿ ಪ್ರಸಾದ್ ಯಾದವ್ ನೇತೃತ್ವದಲ್ಲಿ ನಡೆಯುವ ಐದನೇ ಇಂಡಿಯಾ ಒಕ್ಕೂಟದ ಸಮನ್ವಯ ಸಮಿತಿಯ ಸಭೆ ಇದಾಗಿದೆ. ವಿರೋಧ ಪಕ್ಷದ ಮೈತ್ರಿಕೂಟದಲ್ಲಿ ಆರ್‌ಜೆಡಿ, ಕಾಂಗ್ರೆಸ್, ಸಿಪಿಐ (ಎಂಎಲ್), ಸಿಪಿಐ, ಸಿಪಿಐ (ಎಂ) ಮತ್ತು ವಿಐಪಿ ಸೇರಿವೆ. ಮಾಜಿ ಕೇಂದ್ರ ಸಚಿವ ಮತ್ತು ರಾಷ್ಟ್ರೀಯ ಲೋಕ ಜನಶಕ್ತಿ ಪಕ್ಷದ ಮುಖ್ಯಸ್ಥ ಪಶುಪತಿ ಕುಮಾರ್ ಪರಾಸ್ ಶನಿವಾರ ವಿರೋಧ ಪಕ್ಷದ ಒಕ್ಕೂಟಕ್ಕೆ ಸೇರುವ ಸಾಧ್ಯತೆಯಿದೆ.
ಇದನ್ನು ಓದಿದ್ದೀರಾ? ‘ಇಂಡಿಯಾ’ ಒಕ್ಕೂಟ ಬಿರುಕು ಬಿಟ್ಟಿತೆ; ಕಾಂಗ್ರೆಸ್ ಏಕಾಂಗಿ ಹೋರಾಟ ಸಾಧ್ಯವೇ?
ಈ ಹಿಂದೆ ಜೂನ್ 12ರಂದು ಇಂಡಿಯಾ ಒಕ್ಕೂಟದ ಸಭೆ ನಡೆದಿದೆ. ಈ ಸಭೆಯಲ್ಲಿ 2020ರ ವಿಧಾನಸಭಾ ಚುನಾವಣೆಯಲ್ಲಿ ಯಾವುದೇ ನಿರ್ದಿಷ್ಟ ಸ್ಥಾನದಲ್ಲಿ ಸೋಲಿನ ಅಂತರ 15,000ಕ್ಕಿಂತ ಹೆಚ್ಚು ಮತಗಳಾಗಿದ್ದರೆ ಪಕ್ಷ ಮತ್ತು ಅಭ್ಯರ್ಥಿಯನ್ನು ಬದಲಾಯಿಸಲಾಗುವುದು ಎಂದು ನಿರ್ಧರಿಸಲಾಗಿದೆ. ಎಲ್ಲಾ ಮಿತ್ರಪಕ್ಷಗಳು ತಾವು ಸ್ಪರ್ಧಿಸಲು ಬಯಸುವ ಸಂಭಾವ್ಯ ಸ್ಥಾನಗಳ ಪಟ್ಟಿಯನ್ನು ನೀಡಬೇಕೆಂದು ಸಹ ನಿರ್ಧರಿಸಲಾಗಿದೆ.
ಈ ಹಿಂದೆ ನಡೆದ ಸಮನ್ವಯ ಸಮಿತಿಯಲ್ಲಿ ಸೀಟು ಹಂಚಿಕೆ ವಿಷಯದ ಕುರಿತು ಯಾವುದೇ ಔಪಚಾರಿಕ ಮಾತುಕತೆ ನಡೆದಿಲ್ಲ ಎಂದು ಸಿಪಿಐ ರಾಜ್ಯ ಕಾರ್ಯದರ್ಶಿ ರಾಮ್ ನರೇಶ್ ಪಾಂಡೆ ಹೇಳಿದ್ದಾರೆ. ಇನ್ನು ಈಗಾಗಲೇ ವಿಐಪಿ ಮುಖ್ಯಸ್ಥ ಮುಖೇಶ್ ಸಹಾನಿ ಈಗಾಗಲೇ 60 ಸ್ಥಾನಗಳು ಮತ್ತು ಉಪಮುಖ್ಯಮಂತ್ರಿ ಹುದ್ದೆಗೆ ಬೇಡಿಕೆ ಇಡುವ ಮೂಲಕ ವಿರೋಧ ಪಕ್ಷಗಳ ಒಕ್ಕೂಟದಲ್ಲಿ ಕೋಲಾಹಲ ಸೃಷ್ಟಿಸಿದ್ದಾರೆ. ಜತೆಗೆ ಬಿಹಾರದಲ್ಲಿ ನಿಶಾದ್ (ಮೀನುಗಾರ) ಸಮುದಾಯಕ್ಕೆ ಪ್ರಧಾನಿ ನರೇಂದ್ರ ಮೋದಿ ಮೀಸಲಾತಿ ನೀಡಿದರೆ, ಪ್ರಧಾನಿ ನರೇಂದ್ರ ಮೋದಿ ಅವರಿಗೆ ತಮ್ಮ ಪ್ರಾಣವನ್ನೇ ತ್ಯಾಗ ಮಾಡುವುದಾಗಿಯೂ ವಾದಿಸಿದ್ದಾರೆ.
ಸಿಪಿಐ (ಎಂಎಲ್) ಕೂಡ 40-45 ಸ್ಥಾನಗಳಲ್ಲಿ ಸ್ಪರ್ಧಿಸಲು ಇಚ್ಛೆ ವ್ಯಕ್ತಪಡಿಸಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ, ಆರ್‌ಜೆಡಿ ಸ್ಪರ್ಧಿಸಿದ ಒಟ್ಟು 144 ಸ್ಥಾನಗಳಲ್ಲಿ 75 ಸ್ಥಾನಗಳನ್ನು ಗೆದ್ದಿದೆ. ಕಾಂಗ್ರೆಸ್ ಸ್ಪರ್ಧಿಸಿದ 70 ಸ್ಥಾನಗಳಲ್ಲಿ 19 ಸ್ಥಾನಗಳನ್ನು ಮಾತ್ರ ಗೆಲ್ಲಲು ಸಾಧ್ಯವಾಗಿದೆ. ಎಎಪಿ ಮಾತ್ರ ಪ್ರತ್ಯೇಕವಾಗಿ ಸ್ಪರ್ಧಿಸುವುದಾಗಿ ಈಗಾಗಲೇ ಘೋಷಿಸಿದೆ.
ಇನ್ನು ಇವೆಲ್ಲವುದರ ನಡುವೆ ಬಿಹಾರದಲ್ಲಿ ಇತ್ತೀಚೆಗೆ ಚುನಾವಣಾ ಆಯೋಗ ನಡೆಸಲು ಆರಂಭಿಸಿರುವ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ವಿರುದ್ಧ ಇಂಡಿಯಾ ಒಕ್ಕೂಟ ಒಗ್ಗಟ್ಟಿನಿಂದ ಪ್ರತಿಭಟಿಸುತ್ತಿದೆ.
