ಕೇರಳದ ಪಾಲಕ್ಕಾಡ್‌ನಲ್ಲಿ ಶುಕ್ರವಾರ ಸಂಜೆ ಸಂಭವಿಸಿದ್ದ ಕಾರು ಸ್ಪೋಟದಿಂದ ತೀವ್ರ ಸುಟ್ಟ ಗಾಯಗಳಾಗಿದ್ದ ಇಬ್ಬರು ಕಂದಮ್ಮಗಳು ಶನಿವಾರ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಮೃತ ಮಕ್ಕಳನ್ನು ಎಮಿಲಿನಾ ಮರಿಯಮ್ ಮಾರ್ಟಿನ್ (4) ಮತ್ತು ಆಲ್ಫ್ರೆಡ್ ಮಾರ್ಟಿನ್ (6) ಎಂದು ಹೆಸರಿಸಲಾಗಿದೆ.
ಶುಕ್ರವಾರ ಸಂಜೆ, ಮಕ್ಕಳು ಮತ್ತು ಅವರ ತಾಯಿ ಎಲ್ಸಿ ಮಾರ್ಟಿನ್ (40) ಮತ್ತು ಹಿರಿಯ ಮಗಳು ಅಲೀನಾ (10) ಕಾರಿನಲ್ಲಿ ತೆರಳುವಾಗ, ಅತಿಕೋಡ್ ಬಳಿ ಕಾರು ಸ್ಪೋಟಗೊಂಡಿತ್ತು. ನಾಲ್ವರೂ ಗಂಭೀರವಾಗಿ ಗಾಯಗೊಂಡಿದ್ದರು. ಗಾಯಾಳುಗಳನ್ನು ಕೊಚ್ಚಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೆ ಎಮಿಲಿನಾ ಮತ್ತು ಅಲ್ಪ್ರೆಡ್ ಮೃತಪಟ್ಟಿದ್ದಾರೆ.
ತಾಯಿ ಎಲ್ಸಿ ಮತ್ತು ಹಿರಿಯ ಮಗಳು ಅಲೀನಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಬ್ಬರ ಸ್ಥಿತಿಯೂ ಗಂಭೀರವಾಗಿತ್ತು. ಈಗ ಅವರ ಸ್ಥಿತಿ ಸ್ಥಿರವಾಗುತ್ತಿದೆ. ಚಿಕಿತ್ಸೆ ಮುಂದುವರೆದಿದೆ ಎಂದು ವೈದ್ಯರು ತಿಳಿಸಿದ್ದಾರೆ.
“ಗಂಭೀರ ಸುಟ್ಟ ಗಾಯಗಳಿಂದ ಬಳಲುತ್ತಿದ್ದ ಎಮಿಲಿನಾ ಸ್ಥಿತಿ ಚಿಂತಾಜನಕವಾಗಿತ್ತು. ಆಲ್ಫ್ರೆಡ್‌ನನ್ನು ವೆಂಟಿಲೇಟರ್‌ನಲ್ಲಿ ಇರಿಸಿ, ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ, ಇಬ್ಬರೂ ಮೃತಪಟ್ಟಿದ್ದಾರೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ, ಪೊಲೀಸರಿಗೆ ಹಸ್ತಾಂತರಿಸಲಾಗುವುದು” ಎಂದು ಆಸ್ಪತ್ರೆಯ ವಕ್ತಾರರು ತಿಳಿಸಿದ್ದಾರೆ.