ಲಂಡನ್ ಸೆಂಟರ್ ಕೋರ್ಟ್ನಲ್ಲಿ ನಡೆದ ವಿಂಬಲ್ಡನ್ ಟೆನಿಸ್ 2025ರ ಪುರುಷರ ಫೈನಲ್ನಲ್ಲಿ ಇಟಲಿಯ 23 ವರ್ಷದ ಯಾನಿಕ್ ಸಿನ್ನರ್ ಭರ್ಜರಿ ಜಯ ಸಾಧಿಸಿದ್ದಾರೆ. ಈ ಗೆಲುವಿನೊಂದಿಗೆ ಚೊಚ್ಚಲ ವಿಂಬಲ್ಡನ್ ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ. ಸ್ಪೇನ್ನ ಯುವ ಟೆನಿಸ್ ಸೆನ್ಸೇಷನ್ ಕಾರ್ಲೋಸ್ ಅಲ್ಕರಾಜ್ ನಡುವಣ ಈ ಮುಖಾಮುಖಿಯ ಮೊದಲ ಸೆಟ್ನಲ್ಲಿ ಸಿನರ್ ಹಿನ್ನಡೆ ಹೊಂದಿದ್ದರು.
ಆರಂಭದಿಂದಲೇ ರಣರೋಚಕ ಪೈಪೋಟಿಗೆ ಸಾಕ್ಷಿಯಾಗಿದ್ದ ಈ ಪಂದ್ಯದಲ್ಲಿ ಮೊದಲ ಸೆಟ್ ಅನ್ನು ಕಾರ್ಲೋಸ್ ಅಲ್ಕರಾಜ್ 6-4 ಅಂತರದಿಂದ ಗೆದ್ದುಕೊಂಡರು. ಆದರೆ ಆ ಬಳಿಕ ವಾಪಸಾತಿ ಮಾಡಿದ ಯಾನಿಕ್ ಸಿನರ್ ಸತತ ಮೂರು ಸೆಟ್ಗಳನ್ನು 6-4, 6-4 6-4 ಅಂತರದಿಂದ ಗೆದ್ದು ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡರು.
ಈ ಮೂಲಕ 23ನೇ ವಯಸ್ಸಿನಲ್ಲಿ 4ನೇ ಗ್ರ್ಯಾಂಡ್ ಸ್ಲಾಮ್ ಕಿರೀಟವನ್ನು ತನ್ನದಾಗಿಸಿಕೊಂಡರು. ಇದಕ್ಕೂ ಮುನ್ನ ಯಾನಿಕ್ ಸಿನರ್ ಆಸ್ಟ್ರೇಲಿಯನ್ ಓಪನ್ 2024, ಯುಎಸ್ ಓಪನ್ 2024, ಆಸ್ಟ್ರೇಲಿಯನ್ ಓಪನ್ 2025 ರಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಿದ್ದರು. ಇದೀಗ ಪ್ರತಿಷ್ಠಿತ ವಿಂಬಲ್ಡನ್ನಲ್ಲೂ ಚಾಂಪಿಯನ್ ಪಟ್ಟ ಅಲಂಕರಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಹ್ಯಾಟ್ರಿಕ್ ಪ್ರಶಸ್ತಿ ಗೆಲುವಿನ ನಿರೀಕ್ಷೆಯಲ್ಲಿದ್ದ ಎರಡನೇ ಶ್ರೇಯಾಂಕದ ಕಾರ್ಲೋಸ್ ಅಲ್ಕರಾಜ್, ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿ ಪಟ್ಟುಕೊಳ್ಳಬೇಕಾಯಿತು. ಅಲ್ಕರಾಜ್ ಈಗಾಗಲೇ ಎರಡು ಬಾರಿ ವಿಂಬಲ್ಡನ್ ಚಾಂಪಿಯನ್ ಆಗಿದ್ದಾರೆ.
ಇದನ್ನು ಓದಿದ್ದೀರಾ? ಇಂಗ್ಲೆಂಡ್ ನೆಲದಲ್ಲಿ ಹೊಸ ದಾಖಲೆ ಬರೆದ ಭಾರತದ ಮಹಿಳಾ ಕ್ರಿಕೆಟ್ ತಂಡ
ಕೇವಲ ಐದು ವಾರಗಳ ಹಿಂದೆ ನಡೆದ ಫ್ರೆಂಚ್ ಓಪನ್ ಪಂದ್ಯಾವಳಿಯ ಫೈನಲ್ ಪಂದ್ಯದಲ್ಲಿ, ಕಾರ್ಲೋಸ್ ಅಲ್ಕರಾಜ್ ಅವರು ಯಾನಿಕ್ ಸಿನರ್ ಅವರನ್ನು ಐದು ಸೆಟ್ಗಳಲ್ಲಿ ಮಣಿಸಿದ್ದರು. ಇದೀಗ ಸಿನ್ನರ್ ವಿಂಬಲ್ಡನ್ ಫೈನಲ್ ಪಂದ್ಯದಲ್ಲಿ ಸೋಲಿಸಿ ಸೇಡು ತೀರಿಸಿಕೊಂಡರು.
ಏಪ್ರಿಲ್ನಿಂದ ಇದುವರೆಗೆ ಸತತ 24 ಪಂದ್ಯಗಳನ್ನು ಗೆದ್ದಿದ್ದ ಕಾರ್ಲೋಸ್ ಅಲ್ಕರಾಜ್, ವಿಂಬಲ್ಡನ್ ಫೈನಲ್ ಪಂದ್ಯವನ್ನು ಸೋಲುವ ಮೂಲಕ ತಮ್ಮ ಗೆಲುವಿನ ನಾಗಾಲೋಟವನ್ನು ಕೊನೆಗೊಳಿಸಿದ್ದಾರೆ. ಯಾನಿಕ್ ಸಿನರ್ ಅವರ ಗೆಲುವು, ಕಾರ್ಲೋಸ್ ಅಲ್ಕರಾಜ್ ಅವರ ಆಲ್ ಇಂಗ್ಲೆಂಡ್ ಕ್ಲಬ್ನಲ್ಲಿನ ಸತತ 20 ಪಂದ್ಯಗಳ ಗೆಲುವಿನ ನಾಗಾಲೋಟಕ್ಕೂ ಪೂರ್ಣ ವಿರಾಮ ನೀಡಿದೆ.
