50ರ ದಶಕದಲ್ಲಿ, ಹಳೆಯ ರಂಗಭೂಮಿ ನಟಿಯರು ನೇಪಥ್ಯಕ್ಕೆ ಸರಿದು, ‘ಹರಿಣಿ’ ಪ್ರಯೋಗದಿಂದಾಗಿ ಎಳೆಯ ನವ ನಟಿಯರಿಗಾಗಿ ಹುಡುಕಾಟ ಆರಂಭವಾಯಿತು. ಅನ್ಯಭಾಷೆಯಲ್ಲಿ ಯಶಸ್ಸು ಪಡೆದ ನಟಿಯರನ್ನು ಕರೆತರುವ ಪರಿಪಾಟ ಮೊದಲಾಯಿತು. ಇಂಥ ಪ್ರಯೋಗಗಳ ಫಲವಾಗಿ ಅನ್ಯಭಾಷೆಯ ಪಿ. ಭಾನುಮತಿ (ಏಕೈಕ ಚಿತ್ರ, ನಳದಮಯಂತಿ-1957) ಕೃಷ್ಣಕುಮಾರಿ, ಸಾಹುಕಾರ್ ಜಾನಕಿ, ಜಮುನಾರಂಥವರನ್ನು ಕನ್ನಡಕ್ಕೆ ಕರೆತಂದರೆ, ನಮ್ಮವರೇ ಆದ ಬಿ. ಸರೋಜಾದೇವಿಯವರೂ ಅದೇ ಕಾಲಕ್ಕೆ ಈ ಹುಡುಕಾಟದಲ್ಲಿ ಬೆಳಕಿಗೆ ಬಂದರು.
ಹೊನ್ನಪ್ಪ ಭಾಗವತರ್ ಜೊತೆಯಲ್ಲಿ ಬಿ. ಸರೋಜಾದೇವಿಯವರು ನಟಿಸಿದ ಮೊದಲ ಚಿತ್ರ ‘ಮಹಾಕವಿ ಕಾಳಿದಾಸ’ (1955) ಆದರೂ ಅದಕ್ಕೂ ಮುನ್ನ ಅದೇ ವರ್ಷ ‘ಆಷಾಢಭೂತಿ’ ಬಿಡುಗಡೆಯಾಗಿತ್ತು. ಅವರು ನಿರ್ಮಾಪಕರಿಗೆ ಎಷ್ಟು ಪ್ರಿಯರಾದರೆಂದರೆ 1956ರಲ್ಲಿ ಬಿಡುಗಡೆಯಾದ ‘ಕಚದೇವಯಾನಿ’, ‘ಕೋಕಿಲವಾಣಿ’, ‘ಪಂಚರತ್ನ’ ಚಿತ್ರಗಳಲ್ಲಿ ಬಿ. ಸರೋಜಾದೇವಿ ನಾಯಕಿಯರಾಗಿದ್ದರು. ವರ್ಷಕ್ಕೆ ಎರಡು-ಮೂರು ಚಿತ್ರಗಳಲ್ಲಿ ನಟಿಸತೊಡಗಿದರು. ಆ ಬಳಿಕ ಎನ್‌ಟಿಆರ್‌ರವರ ಜೊತೆಯಲ್ಲಿ ‘ಪಾಂಡುರಂಗ ಮಹಾತ್ಮಂ’ (1957) ಚಿತ್ರದಲ್ಲಿ ನಾಯಕಿಯಾಗಿ ಅನ್ಯಭಾಷಾ ಚಿತ್ರಗಳಿಗೆ ಹೆಜ್ಜೆಯಿಟ್ಟರು.
ಇದನ್ನು ಓದಿದ್ದೀರಾ?: ಖ್ಯಾತ ನಟಿ ಬಿ ಸರೋಜಾ ದೇವಿ ನಿಧನ
ತರುವಾಯ ಜೆಮಿನಿ ಗಣೇಶನ್ ನಾಯಕರಾಗಿದ್ದ ‘ತೇಡಿವಂದ ಸೆಲ್ವಂ’ (1958) ಮೂಲಕ ತಮಿಳು ಚಿತ್ರರಂಗಕ್ಕೆ ಬಂದರು. ಅನಂತರ ಎಂಜಿಆರ್‌ರವರ ‘ನಾಡೋಡಿ ಮನ್ನನ್’ (ನಿರ್ಮಾಣ, ನಿರ್ದೇಶನ- ಸ್ವತಃ ಎಂಜಿಆರ್) ಚಿತ್ರದಲ್ಲಿ ನಾಯಕಿಯರಲ್ಲಿ (ಮತ್ತೊಬ್ಬರು ಪಿ.ಭಾನುಮತಿ) ಒಬ್ಬರಾಗಿ ನಟಿಸಿದ ಅವರು ಹಿಂದೆ ತಿರುಗಿ ನೋಡಲಿಲ್ಲ. ಅವರ ವೃತ್ತಿ ಬದುಕಿನ ರೇಖೆ ಲಂಬವಾಗಿ ಮೇಲೇರಿತೇ ಹೊರತು ಕೆಳಗಿಳಿಯಲಿಲ್ಲ. ಎಂಜಿಆರ್, ಶಿವಾಜಿಗಣೇಶನ್, ಜೆಮಿನಿ ಗಣೇಶನ್, ಎನ್‌ಟಿಆರ್, ಎ.ನಾಗೇಶ್ವರರಾವ್ ಮುಂತಾದ ಹಿರಿಯ ನಟರಿಂದ ಹಿಡಿದು ಹಿಂದೀ ಚಿತ್ರಗಳಲ್ಲಿಯೂ ನಟಿಸಿದ ಬಿ.ಸರೋಜಾದೇವಿ ಕನ್ನಡದಿಂದ ವಲಸೆಹೋದ ನಾಯಕಿಯರಲ್ಲಿ ದಕ್ಷಿಣಭಾರತದ ಸಾಮ್ರಾಜ್ಞೆಯಾಗಿ ಆಳಿದವರು. ಚತುರ್ಭಾಷಾ ತಾರೆಯಾಗಿ ಮೆರೆದರು. ತಮಿಳು ಚಿತ್ರರಸಿಕರಿಗೆ ಅವರು ‘ಕನ್ನಡತ್ತು ಪೈಂಕಿಳಿ’ (ಕನ್ನಡದ ಅರಗಿಣಿ) ಎಂದೇ ಪರಿಚಿತರಾಗಿರುವವರು.

ಬಿ. ಸರೋಜಾದೇವಿಯವರು 1959ರಲ್ಲಿ ಎಂಜಿಆರ್ ಜೊತೆ ನಟಿಸಿದ ‘ನಾಡೋಡಿ ಮನ್ನನ್’ ಬಿಡುಗಡೆಯಾದ ನಂತರ ಅವರ ವೃತ್ತಿ ರೇಖೆ ಉಜ್ವಲವಾಗಿ ಮೇಲೇರಿತು. ಕನ್ನಡಕ್ಕೆ ದುರ್ಲಭರಾದರೂ ಅವರ ವೃತ್ತಿ ಬದುಕಿನ ಅತ್ಯುತ್ತಮ ಚಿತ್ರಗಳೆನಿಸಿದ ‘ಅಣ್ಣತಂಗಿ’, ‘ಕಿತ್ತೂರು ಚೆನ್ನಮ್ಮ’ ಮತ್ತು ‘ಅಮರಶಿಲ್ಪಿ ಜಕಣಾಚಾರಿ’ (1964) ಚಿತ್ರಗಳಲ್ಲಿ ನಟಿಸಿದರು. ಎಪ್ಪತ್ತರ ಮಧ್ಯದಲ್ಲಿ ಮತ್ತೆ ಕನ್ನಡಕ್ಕೆ ಹಿಂದಿರುಗಿದ ಅವರು ‘ಚಿರಂಜೀವಿ’, ‘ನ್ಯಾಯವೇ ದೇವರು’, ‘ಬಬ್ರುವಾಹನ’, ‘ಭಾಗ್ಯವಂತರು’ ಮೊದಲಾದ ಚಿತ್ರಗಳಲ್ಲಿ ಪ್ರಬುದ್ಧ ಅಭಿನಯ ನೀಡಿದರು.
(ಕೃಪೆ: ಸಿನಿಮಾಯಾನ, ಲೇ: ಡಾ.ಕೆ. ಪುಟ್ಟಸ್ವಾಮಿ, ಪ್ರ: ಅಭಿನವ, ಸಂ: 94488 04905)