ಶಿಕ್ಷಣ ಸ್ಪೆಷಲ್ | ಸಮಾನ ಶಿಕ್ಷಣ, ಭಾಷಾ ನೀತಿ ಮತ್ತು ಪ್ರಭುತ್ವದ ಮುಸುಕಿನ ಆಟ

Date:

Advertisements
ರಾಜ್ಯ ಸರ್ಕಾರದ ಶಿಕ್ಷಣ ನೀತಿ, ಸರ್ಕಾರಿ ಶಾಲೆಗಳ ಸ್ಥಿತಿಗತಿ, ಶಿಕ್ಷಣದ ಹಕ್ಕು, ದ್ವಿಭಾಷಾ ನೀತಿ, ಸಮಾನ ಶಿಕ್ಷಣ, ಉಳ್ಳವರ ಶಿಕ್ಷಣ- ಹೀಗೆ ಶಿಕ್ಷಣ ಕ್ಷೇತ್ರ ನಾನಾ ಕವಲುಗಳಾಗಿ ಹರಿದುಹಂಚಿಹೋಗಿದೆ. ಈ ಬಗ್ಗೆ ಈದಿನ.ಕಾಮ್ ಮುಕ್ತಸಂವಾದ ಬಯಸಿದೆ. ಶಿಕ್ಷಣ ಕುರಿತು ಕಾಳಜಿ ಇರುವವರು ತಮ್ಮ ಪರ-ವಿರೋಧ ಅನಿಸಿಕೆಗಳನ್ನು ಮುಕ್ತವಾಗಿ ಹಂಚಿಕೊಳ್ಳಬಹುದು. ಇಂದು ಬಿ. ಶ್ರೀಪಾದ ಭಟ್ ಅವರ ಲೇಖನ... 

ಭಾಗ-1

ಪೀಠಿಕೆ
ಶಿಕ್ಷಣದಲ್ಲಿ ಸಮಾನತೆ, ವಂಚಿತ ಸಮುದಾಯಗಳಿಗೆ ಮೀಸಲಾತಿ ಮತ್ತು ಶಿಕ್ಷಣದ ಹಕ್ಕು ಕುರಿತು ಭಾರತದಲ್ಲಿ ಮೊಟ್ಟ ಮೊದಲು ಮಾತನಾಡಿದ ಮಹಾತ್ಮ ಜ್ಯೋತಿರಾವ್ ಫುಲೆಯವರು, 143 ವರ್ಷಗಳ ಹಿಂದೆ 1882ರಲ್ಲಿ ಭಾರತೀಯ ಶೈಕ್ಷಣಿಕ ಆಯೋಗದ (ಹಂಟರ್ ಆಯೋಗ) ಶಿಕ್ಷಣಕ್ಕೆ ಸಂಬಂಧಿಸಿದ ಮನವಿಯನ್ನು ಸಲ್ಲಿಸಿದರು.

ಆ ಮನವಿಯಲ್ಲಿ ಬ್ರಿಟೀಷ್ ಸರ್ಕಾರವು ಶಿಕ್ಷಣಕ್ಕೆ ಮಾಡುತ್ತಿರುವ ವೆಚ್ಚವು ‘ಈ ದೇಶದ ಅಭಿವೃದ್ಧಿಗೆ ಯಾವುದೇ ಬಗೆಯಲ್ಲಿ ಕೊಡುಗೆ ನೀಡದ ಬ್ರಾಹ್ಮಣರು ಮತ್ತು ಬ್ರಾಹ್ಮಣೇತರ ಮೇಲ್ಜಾತಿಗಳಿಗೆ ಮಾತ್ರ ದೊರಕುತ್ತಿದೆ. ದುಡಿಯು ವರ್ಗಗಳ, ರೈತರ ಶ್ರಮದಿಂದ ಉತ್ಪತ್ತಿಯಾಗುವ ತೆರಿಗೆ ಹಣವನ್ನು ಅವರ ಮಕ್ಕಳ ಶಿಕ್ಷಣಕ್ಕೆ ವೆಚ್ಚ ಮಾಡದೆ ಈ ಮುಂದುವರಿದ ಜಾತಿಗಳ ಶಿಕ್ಷಣಕ್ಕೆ ಹಂಚುತ್ತಿದ್ದಾರೆ. ಇದರಿಂದಾಗಿ ಶೂದ್ರರು ಮತ್ತು ಅತಿ ಶೂದ್ರರು ಸಂಪೂರ್ಣವಾಗಿ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ’ ಎಂದು ವಿವರಿಸುತ್ತಾರೆ.

ಅನಿಲ್ ಸದ್ಗೋಪಾಲ್ ಅವರು 1911ರಲ್ಲಿ ಗೋಪಾಲಕೃಷ್ಣ ಗೋಖಲೆಯವರು ಆಗಿನ ಇಂಪೀರಿಯಲ್ ಅಸೆಂಬ್ಲಿಯಲ್ಲಿ ತಮ್ಮ ‘ಉಚಿತ ಮತ್ತು ಕಡ್ಡಾಯ ಶಿಕ್ಷಣ ಮಸೂದೆ’ಯನ್ನು ಮಂಡಿಸಿದಾಗ ಅವರಿಗೆ ಪ್ರಬಲವಾದ ವಿರೋಧವನ್ನು ಒಡ್ಡಲಾಯಿತು. ಈ ಮಸೂದೆಯನ್ನು ಬೆಂಬಲಿಸುವ ಬದಲಾಗಿ, ಆ ವಿಧಾನ ಮಂಡಲವನ್ನು ಪ್ರತಿನಿಧಿಸುತ್ತಿದ್ದ ಪ್ರತಿಷ್ಠಿತ ವರ್ಗದವರು (ಮುಂಬೈನವರು, ಮಹಾರಾಜರು, ಭೂಮಾಲೀಕರು ಮತ್ತು ಸಾಂಸ್ಥಿಕ ರಾಜ್ಯಗಳ ರಾಜಕುಮಾರರು) ಈ ದೇಶದಲ್ಲಿ ಸರ್ವರಿಗೂ ಶಿಕ್ಷಣ ನೀಡುವ ಪೂರಕವಾದ ವಾತಾವರಣವಿಲ್ಲವೆಂದು ಆತುರದಲ್ಲಿ ಅಂಗೀಕರಿಸಬಾರದೆಂದು ಒತ್ತಾಯಿಸಿದರು. ಬಿಹಾರ ರಾಜ್ಯದ ದರ್ಭಾಂಗ ಪ್ರಾಂತ್ಯದ ಮಹಾರಾಜನಂತೂ ಈ ಮಸೂದೆಯ ವಿರುದ್ಧ ತನ್ನ ಒಂದು ಮೆಮೊರಂಡಮ್‌ಗೆ 11 ಸಾವಿರ ಸಹಿ ಸಂಗ್ರಹಿಸಿ ‘ಎಲ್ಲಾ ಮಕ್ಕಳು ಶಾಲೆಗೆ ಹೋದರೆ ನಮ್ಮ ಹೊಲ-ಗದ್ದೆಗಳಲ್ಲಿ ಕೆಲಸ ಮಾಡುವವರು ಯಾರು ಎಂದು ಬೊಬ್ಬೆ ಹಾಕಿದ! ಈ ಮಸೂದೆ ಅಲ್ಲಿಗೆ ಬಿದ್ದು ಹೋಯಿತು’ ಎಂದು ಬರೆಯುತ್ತಾರೆ.

ಇದನ್ನು ಓದಿದ್ದೀರಾ?: ಮೋದಿಯ ʼಪರೀಕ್ಷಾ ಪೆ ಚರ್ಚಾʼದ ವೆಚ್ಚ ಶೇ.522ರಷ್ಟು ಏರಿಕೆ: ಮಕ್ಕಳ ವಿದ್ಯಾರ್ಥಿವೇತನ ಸ್ಥಗಿತ

1947-48ರ ಸಂವಿಧಾನ ರಚನಾ ಸಭೆಯಲ್ಲಿ ಬ್ರಾಹ್ಮಣ-ಫ್ಯೂಡಲ್ ಹಿನ್ನಲೆಯಿಂದ ಆಯ್ಕೆಯಾದ ಸದಸ್ಯರು ’14ನೇ ವಯಸ್ಸಿನವರೆಗೆ ಉಚಿತ, ಕಡ್ಡಾಯ ಶಿಕ್ಷಣ ಕೊಡಲು ಬೇಕಾಗಿರುವ ಮೂಲಭೂತ ಸೌಲಭ್ಯಗಳು ಭಾರತದಲ್ಲಿ ಇಲ್ಲ, ಬೇಕಿದ್ದರೆ 11ನೇ ವಯಸ್ಸಿನವರೆಗೆ ಮಾತ್ರ ಕೊಡಬಹುದು’ ಎಂದು ವಾದಿಸಿದರು. ಆದರೆ ಕರಡು ರಚನಾ ಸಮಿತಿಯ ಅಧ್ಯಕ್ಷರಾದ ಬಿ.ಆರ್.ಅಂಬೇಡ್ಕರ್ ಇದನ್ನು ತೀವ್ರವಾಗಿ ವಿರೋಧಿಸುತ್ತಾ ‘ಭಾರತದಲ್ಲಿ ಮಕ್ಕಳು 11ನೇ ವಯಸ್ಸಿನಲ್ಲಿಯೇ ಬಾಲಕಾರ್ಮಿಕರಾಗಿಬಿಡುತ್ತಾರೆ, ಹೀಗಾಗಿ 14ನೇ ವಯಸ್ಸಿನವರೆಗೆ ಉಚಿತ, ಕಡ್ಡಾಯ ಗುಣಮಟ್ಟದ ಶಿಕ್ಷಣ ಕೊಡಬೇಕು’ ಎಂದು ವಾದಿಸಿದರು. ಇದರ ಫಲವಾಗಿ ವಿಧಿ 45ರ ಸೇರ್ಪಡೆಯಾಯಿತು. ಆ ಮೂಲಕ 0-14 ವರ್ಷಗಳವರೆಗೂ ಉಚಿತ ಮತ್ತು ಕಡ್ಡಾಯ ಶಿಕ್ಷಣ ಕೊಡಬೇಕೆಂಬ ನೀತಿಯನ್ನು ಪ್ರಭುತ್ವ ನಿರ್ದೇಶನ ತತ್ವದ ಅಡಿಯಲ್ಲಿ ರಚಿಸಲಾಯಿತು. ಕರ್ತವ್ಯದ ರೂಪದಲ್ಲಿದ್ದ ಈ ಆಶಯವು 52 ವರ್ಷಗಳ ನಂತರ ಹಕ್ಕಾಗಿ ಜಾರಿಗೊಂಡಿತು. ನವೆಂಬರ್ 2002ರಲ್ಲಿ 86ನೇ ಸಂವಿಧಾನದ ತಿದ್ದುಪಡಿಯ ಮೂಲಕ 21ಎ ಕಲಂ ಅಡಿಯಲ್ಲಿ 6-14ನೇ ವಯಸ್ಸಿನವರೆಗೆ (1-8ನೇ ತರಗತಿ) ಶಿಕ್ಷಣ ಮೂಲಭೂತ ಹಕ್ಕು ಎಂದು ಅಂಗೀಕರಿಸಲಾಯಿತು.

school dropout

ಆದರೆ ಇದರಲ್ಲಿಯೂ ಮಿತಿಗಳಿದ್ದವು. ಮೊದಲನೆಯದಾಗಿ ಪ್ರಭುತ್ವ ನಿರ್ದೇಶನ ತತ್ವದಲ್ಲಿರುವಂತೆ 0-14ನೇ ವಯಸ್ಸಿನ ಮಕ್ಕಳನ್ನು ಒಳಗೊಳ್ಳದೆ 6-14ನೇ ವರ್ಷದೊಳಗಿನ ಎಂದು ಬದಲಾಯಿಸಿದರು. ಇದರ ಫಲವಾಗಿ ಗರ್ಭಿಣಿ, ಬಾಣಂತಿಯರು, ಮಕ್ಕಳಿಗೆ 0-4ನೇ ವರ್ಷದವರೆಗೆ ನೀಡುವ ಉಚಿತ ಬಾಲ್ಯಪೋಷಣೆ ಮತ್ತು ಅನೌಪಚಾರಿಕ ಶಿಕ್ಷಣ ನೀಡುವ ಅಂಗನವಾಡಿ ಮತ್ತು 5-6 ವರ್ಷದವರೆಗಿನ ಪೂರ್ವ ಪ್ರಾಥಮಿಕ ಶಿಕ್ಷಣವನ್ನು ಮೂಲಭೂತ ಹಕ್ಕು ಎಂದು ಪರಿಗಣಿಸಲಿಲ್ಲ. ಇದು ಒಂದು ಅನ್ಯಾಯ ಎಂದೇ ಹೇಳಬೇಕಾಗುತ್ತದೆ. ಎರಡನೆಯದಾಗಿ 6 ವರ್ಷದಿಂದ 14 ವರ್ಷದೊಳಗಿನ ಮಕ್ಕಳಿಗೆ ನೀಡುವ ಶಿಕ್ಷಣವನ್ನು ಸಂವಿಧಾನದ ವಿಧಿ 21ಎ ಅಡಿಯಲ್ಲಿ ಆಯಾಯ ರಾಜ್ಯ ಸರ್ಕಾರದ ವಿವೇಚನೆಗೆ ಬಿಡಲಾಯಿತು. ಮುಂದುವರೆದು ಇದು ಪೋಷಕರ ಮೂಲಭೂತ ಜವಾಬ್ದಾರಿಯೆಂದು ಎಂದು ತೀರ್ಮಾನಿಸಲಾಯಿತು.

ಇದಕ್ಕೂ ಮೊದಲು 1992ರಲ್ಲಿ ಉನ್ನತ ನ್ಯಾಯಾಲಯದ ಉನ್ನಿಕೃಷ್ಣನ್ ವರ್ಸಸ್ ಆಂಧ್ರಪ್ರದೇಶ ಸರ್ಕಾರ ಪ್ರಕರಣದ ತೀರ್ಪಿನಲ್ಲಿ ಸುಪ್ರೀಂ ಕೋರ್ಟ್ ”ವಿಧಿ 21ರ ‘ಬದುಕುವ ಹಕ್ಕಿನ’ ಅಡಿಯಲ್ಲಿ ಶಿಕ್ಷಣವೂ ಬರುತ್ತದೆ, ಹೀಗಾಗಿ ಶಿಕ್ಷಣವನ್ನು ಮೂಲಭೂತ ಹಕ್ಕು ಎಂದು ಪರಿಗಣಿಸಬೇಕಾಗುತ್ತದೆ” ಎಂದು ಆದೇಶ ನೀಡಿತು. ಜೊತೆಗೆ ಪ್ರಭುತ್ವ ನಿರ್ದೇಶನ ತತ್ವದ ಅಡಿಯಲ್ಲಿರುವ ವಿಧಿ 45ನ್ನು ಮೂಲಭೂತ ಹಕ್ಕಿನ ವಿಧಿ 21 ಕಲಂನ ಜೊತೆಗೆ ಸಮೀಕರಿಸುತ್ತದೆ. ಆದರೆ 86ನೇ ತಿದ್ದುಪಡಿಯು ಇದನ್ನು ದುರ್ಬಲಗೊಳಿಸಿ ಅಂಗನವಾಡಿ ಮತ್ತು ಪೂರ್ವ ಪ್ರಾಥಮಿಕ ಶಿಕ್ಷಣವನ್ನು ಮೂಲಭೂತ ಹಕ್ಕಿನ ಕಲಂನಿಂದ ಹೊರಗಿಡಲಾಯಿತು.

2009ರಲ್ಲಿ ಶಿಕ್ಷಣ ಹಕ್ಕು ಕಾಯ್ದೆ(ಆರ್‌ಟಿಇ) ಜಾರಿಗೊಂಡಿತು. ಈ ಕಾಯ್ದೆಯ ಸೆಕ್ಷನ್ 3ರ ಅನುಸಾರ 6ರಿಂದ 14 ವಯಸ್ಸಿನ ಪ್ರತಿ ಮಗುವಿಗೆ ಅದರ ನೆರೆಹೊರೆಯ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣವನ್ನು ಪೂರ್ಣಗೊಳಿಸುವವರೆಗೆ ಉಚಿತ ಮತ್ತು ಕಡ್ಡಾಯ ಶಿಕ್ಷಣದ ಹಕ್ಕನ್ನು ಒದಗಿಸುವುದು ಸರ್ಕಾರದ ಕರ್ತವ್ಯವಾಗಿದೆ.

ಇದನ್ನು ಓದಿದ್ದೀರಾ?: ಅನುದಾನದ ನಿರೀಕ್ಷೆಯಲ್ಲಿ ಬಿದರೆ ಸರ್ಕಾರಿ ಶಾಲೆ; ಹಳೆ ವಿದ್ಯಾರ್ಥಿಗಳಿಂದ ಮರುಜೀವ

ಕೊಠಾರಿ ಆಯೋಗದ ವರದಿಯಲ್ಲಿ ಈ ನೆರೆಹೊರೆ ಶಾಲೆಗಳ ಪರಿಕಲ್ಪನೆ ರೂಪುಗೊಂಡಿದೆ. ಇಲ್ಲಿ ನೆರೆಹೊರೆ ಶಾಲೆಯಲ್ಲಿ ಜಾತಿ, ವರ್ಗ, ಲಿಂಗ ರೇಖೆಗಳನ್ನು ದಾಟಿ ಎಲ್ಲಾ ಮಕ್ಕಳಿಗೆ ಒಟ್ಟಿಗೆ ಕಲಿಯಲು ಸಾಮಾನ್ಯ ಸ್ಥಳವಾಗಿರಬೇಕು, ಇದು ಸಮಗ್ರ ರೀತಿಯಲ್ಲಿ ಒಳಗೊಳ್ಳುವಿಕೆಯ ಶಾಲೆಯಾಗಿರಬೇಕು. ಈ ಪರಿಕಲ್ಪನೆಯನ್ನು ಆರ್‌ಟಿಇ ಕಾಯ್ದೆಯಲ್ಲಿ ಸೇರಿಸಲಾಗಿದೆ.

ಸೆಕ್ಷನ್ 9ರ ಪ್ರಕಾರ ಸ್ಥಳೀಯ ಸಂಸ್ಥೆ, ಪ್ರಾಧಿಕಾರಕ್ಕೆ ಪ್ರತಿ ಮಗುವಿಗೆ ನೆರೆಹೊರೆ ಶಾಲೆಯಲ್ಲಿ ಉಚಿತ ಮತ್ತು ಕಡ್ಡಾಯ ಪ್ರಾಥಮಿಕ ಶಿಕ್ಷಣವನ್ನು ಒದಗಿಸುವ ಕರ್ತವ್ಯವನ್ನು ವಹಿಸಲಾಗಿದೆ. ದುರ್ಬಲ ವರ್ಗಗಳಿಗೆ ಮತ್ತು ವಂಚಿತ ಸಮುದಾಯಗಳಿಗೆ ಸೇರಿದ ಮಕ್ಕಳು ತಾರತಮ್ಯಕ್ಕೆ ಒಳಗಾಗದಂತೆ ಮತ್ತು ಪ್ರಾಥಮಿಕ ಶಿಕ್ಷಣವನ್ನು ಮುಂದುವರಿಸಲು ಮತ್ತು ಪೂರ್ಣಗೊಳಿಸಲು ಅಡ್ಡಿಯಾಗದಂತೆ ಖಾತರಿಪಡಿಸುತ್ತದೆ. 

ಸೆಕ್ಷನ್ 10ರ ಅನುಸಾರ ಪ್ರತಿ ಪೋಷಕರ ಮೇಲೆ ತಮ್ಮ ಮಕ್ಕಳನ್ನು ಶಾಲೆಗೆ ಸೇರಿಸುವ ಮತ್ತು ಅವರು ಪ್ರಾಥಮಿಕ ಶಿಕ್ಷಣದ ಹಕ್ಕಿನಿಂದ ವಂಚಿತರಾಗದಂತೆ ಖಾತರಿಪಡಿಸುವ ನೈತಿಕ ಜವಾಬ್ದಾರಿಯನ್ನು ಹೊರಿಸುತ್ತದೆ.

ಸೆಕ್ಷನ್ 12(ಸಿ) ‘ಖಾಸಗಿ ಅನುದಾನರಹಿತ ಶಿಕ್ಷಣ ಸಂಸ್ಥೆಗಳು ಮತ್ತು ವಿಶೇಷ ವರ್ಗದ ಶಾಲೆಗಳು ಕನಿಷ್ಠ ಶೇ.25 ಪ್ರಮಾಣದ ವಂಚಿತ ಸಮುದಾಯಗಳಿಗೆ ಮತ್ತು ದುರ್ಬಲ ವರ್ಗಗಳಿಗೆ ಸೇರಿದ ಮಕ್ಕಳಿಗೆ, 1ನೇ ತರಗತಿ/ ಪ್ರವರ್ಗ-ಪ್ರಾಥಮಿಕ ತರಗತಿಯಿಂದ ಉಚಿತ ಮತ್ತು ಕಡ್ಡಾಯ ಶಿಕ್ಷಣವನ್ನು ಒದಗಿಸಬೇಕು’ ಎಂದು ಹೇಳುತ್ತದೆ.

ಸೆಕ್ಷನ್ 13ರ ಅನುಸಾರ ಯಾವುದೇ ಶಾಲೆ ಅಥವಾ ವ್ಯಕ್ತಿಯು ಕ್ಯಾಪಿಟೇಶನ್ ಶುಲ್ಕವನ್ನು ಸಂಗ್ರಹಿಸಬಾರದು ಅಥವಾ ಮಗುವನ್ನು ಯಾವುದೇ ತಾರತಮ್ಯ ಪ್ರಕ್ರಿಯೆಗೆ ಒಳಪಡಿಸಬಾರದು ಎಂದು ವಿವರಿಸುತ್ತದೆ. ಈ ನಿಬಂಧನೆಗಳ ಉಲ್ಲಂಘನೆಗೆ ದಂಡವನ್ನು ವಿಧಿಸುತ್ತದೆ.

ಸಾರಾಂಶದಲ್ಲಿ ಜೋತಿಬಾ ಫುಲೆಯವರಿಂದ ಅಂಬೇಡ್ಕರ್‌ವರಗೆ ಇಲ್ಲಿನ ವಿಮೋಚಕರು, ಸುಧಾರಕರು ಸಮಾನ ಶಿಕ್ಷಣವನ್ನು ಪ್ರತಿಪಾದಿಸಿದ್ದಾರೆ. ಸ್ವಾತಂತ್ರ್ಯ ನಂತರದ 78 ವರ್ಷಗಳಲ್ಲಿ ಸಮಾನ ಶಿಕ್ಷಣ ಮತ್ತು ನೆರೆಹೊರೆ ಶಾಲಾ ಪದ್ಧತಿಯ ಜಾರಿಗಾಗಿ ಸಂವಿಧಾನದಲ್ಲಿ ಸೀಮಿತವಾದರೂ ಸಹ ಸ್ಪಷ್ಟ ಅವಕಾಶ ಕಲ್ಪಿಸಲಾಗಿದೆ. ಶಿಕ್ಷಣ ಹಕ್ಕಿನ ಆರ್‌ಟಿಇ ಕಾಯ್ದೆ ಸಹ ಜಾರಿಗೊಂಡು 16 ವರ್ಷಗಳಾದವು ಇಂತಹ ಹಿನ್ನಲೆ ಇದ್ದರೂ ಸಹ ಇಂದು ಸಮಾನ ಶಿಕ್ಷಣ ಎನ್ನುವುದು ಮರೀಚಿಕೆಯಾಗಿದೆ.

1964-66ರ ಕೊಥಾರಿ ಶಿಕ್ಷಣ ಆಯೋಗವು ಸಾರ್ವಜನಿಕ ಶಿಕ್ಷಣದಲ್ಲಿ ಸಮಾನ ಶಿಕ್ಷಣವನ್ನು ಶಿಫಾರಸ್ಸು ಮಾಡಿತು. ವಿಭಿನ್ನ ಜಾತಿ, ವರ್ಗಗಳು, ಭಿನ್ನ ಸಾಮಾಜಿಕ ಹಿನ್ನಲೆಯ ಸಮುದಾಯಗಳನ್ನು ಒಟ್ಟಿಗೆ ತಂದು ಸಮಗ್ರ ಹಾಗೂ ಸಮಾನತೆಯ ಸಮಾಜವನ್ನು ಉತ್ತೇಜಿಸುವುದು ಇದರ ಉದ್ದೇಶವಾಗಿತ್ತು.

schools 1 1657166391

ಅನಿಲ್ ಸದ್ಗೋಪಾಲ್ ‘1986ರ ಶಿಕ್ಷಣ ಹೊಸ ನೀತಿ’ಯು 1968ರ ಶಿಕ್ಷಣ ನೀತಿಯಲ್ಲಿ ಮಾಡಲಾದ ಸಮಾನ ಶಾಲಾ ಪದ್ದತಿಯನ್ನು ಶಿಫಾರಸ್ಸು ಮಾಡಲಾಗಿದೆ, ಇದನ್ನು ಜಾರಿಗೊಳಿಸುವ ನಿಟ್ಟಿನಲ್ಲಿ ಪರಿಣಾಮಕಾರಿಯಾದ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂಬ ಹೇಳಲಾಯಿತು. ಅಂದಿನಿಂದ ಸಮಾನ ಶಾಲಾ ಪದ್ದತಿಯ ಪರಿಕಲ್ಪನೆ ವಿಕಸನಗೊಳ್ಳುತ್ತಾ ಬಂದಿದೆ’ ಎಂದು ಹೇಳುತ್ತಾರೆ

ಸಮಾನ ಶಿಕ್ಷಣವೆಂದರೆ ‘ಏಕರೂಪಿ ಪದ್ಧತಿ’ ಅಲ್ಲ. ಮೂಲಭೂತವಾಗಿ ‘ಪ್ರತಿಯೊಂದು ಶಿಕ್ಷಣ ಸಂಸ್ಥೆಯು ಸ್ಥಳೀಯ ಸಮುದಾಯದ ಜೊತೆಗೆ ತೊಡಗಿಸಿಕೊಳ್ಳಬೇಕು. ಈ ವ್ಯವಸ್ಥೆಯಲ್ಲಿ ಬಹುಸಂಸ್ಖೃತಿ, ಬಹುಧರ್ಮಿಯ, ಬಹುಭಾಷೀಯ ಮತ್ತು ಬಹುಜನಾಂಗೀಯ ವೈವಿಧ್ಯತೆಯನ್ನು ಒಳಗೊಳ್ಳಬೇಕು’ ಎನ್ನುವುದು ಇದರ ಮುಖ್ಯ ನೀತಿಯಾಗಿದೆ. ಇದನ್ನು ಜಾರಿಗೊಳಿಸಲು ದೇಶದ ಎಲ್ಲಾ ಸರ್ಕಾರಿ, ಅನುದಾನಿತ, ಅನುದಾನರಹಿತ ಖಾಸಗಿ ಶಾಲೆಗಳು ಸರ್ಕಾರದ ಏಜೆನ್ಸಿಗಳಾಗಿ ಕಾರ್ಯ ನಿರ್ವಹಿಸಬೇಕು. ಅಸಮಾನತೆ, ಭೇದಭಾವವನ್ನು ಬೋಧಿಸಬಾರದು. ‘ಒಳಗೊಳ್ಳುವ’ ಶಿಕ್ಷಣ ವ್ಯವಸ್ಥೆಯನ್ನು ಕಟ್ಟಬೇಕು ಎನ್ನುವುದಾಗಿತ್ತು.

(ಮುಂದುವರೆಯುವುದು)

bhut sir
ಬಿ. ಶ್ರೀಪಾದ ಭಟ್
+ posts

ಶಿಕ್ಷಣ ತಜ್ಞರಾದ ಶ್ರೀಪಾದ ಭಟ್ ಅವರು, ಮೂಲತಃ  ವಿಜಯನಗರ ಜಿಲ್ಲೆಯವರು. ದಲಿತ ಮತ್ತು ಪ್ರಗತಿಪರ ಚಳವಳಿಗಳಲ್ಲಿ ಸಕ್ರಿಯರಾಗಿರುವ ಇವರು, 'ಹಿಂದುತ್ವ ರಾಜಕಾರಣ - ಅಂದು ಇಂದು ಮುಂದು', 'ಬಿಸಿಲು, ಬಯಲು, ನೆಳಲು - ಹೊಸ ಅಲೆ ಸಿನಿಮಾ ಕುರಿತಾದ ಕಥನ', 'ಕಣ್ಕಟ್ಟು', 'ಸಾವಿತ್ರಿಬಾಯಿ ಫುಲೆ ಬದುಕು ಬರಹ' ಮೊದಲಾದ ಕೃತಿಗಳನ್ನು ಬರೆದಿದ್ದಾರೆ

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಬಿ. ಶ್ರೀಪಾದ ಭಟ್
ಬಿ. ಶ್ರೀಪಾದ ಭಟ್
ಶಿಕ್ಷಣ ತಜ್ಞರಾದ ಶ್ರೀಪಾದ ಭಟ್ ಅವರು, ಮೂಲತಃ  ವಿಜಯನಗರ ಜಿಲ್ಲೆಯವರು. ದಲಿತ ಮತ್ತು ಪ್ರಗತಿಪರ ಚಳವಳಿಗಳಲ್ಲಿ ಸಕ್ರಿಯರಾಗಿರುವ ಇವರು, 'ಹಿಂದುತ್ವ ರಾಜಕಾರಣ - ಅಂದು ಇಂದು ಮುಂದು', 'ಬಿಸಿಲು, ಬಯಲು, ನೆಳಲು - ಹೊಸ ಅಲೆ ಸಿನಿಮಾ ಕುರಿತಾದ ಕಥನ', 'ಕಣ್ಕಟ್ಟು', 'ಸಾವಿತ್ರಿಬಾಯಿ ಫುಲೆ ಬದುಕು ಬರಹ' ಮೊದಲಾದ ಕೃತಿಗಳನ್ನು ಬರೆದಿದ್ದಾರೆ

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮುಂದಿನ ವರ್ಷಗಳಲ್ಲಿಯೂ ನಾನೇ ದಸರಾ ಪುಷ್ಪಾರ್ಚನೆ ಮಾಡುವೆ: ಸಿಎಂ ಸಿದ್ದರಾಮಯ್ಯ

ವಿರೋಧಪಕ್ಷಗಳು ಭವಿಷ್ಯಕಾರರಲ್ಲ. ವಸ್ತುಸ್ಥಿತಿಯ ಬಗ್ಗೆ ಅರಿವಿಲ್ಲದೇ ಮಾತನಾಡುವ ವಿಪಕ್ಷಗಳ ಭವಿಷ್ಯ ನಿಜವಾಗುವುದಿಲ್ಲ....

ಗುಮಾನಿ ಹುಟ್ಟುಹಾಕಿದ ‘ವಿಲ್’; ‘ಕೊನೆಗಾಲದಲ್ಲಿ ಭೈರಪ್ಪ ಖಾತೆಯಿಂದ ದುಡ್ಡು ದೋಚಿದ್ದು ಯಾರು?’

"ಭೈರಪ್ಪನವರ ಉಯಿಲು (ವಿಲ್) ನೋಡುತ್ತಿದ್ದರೆ ಎಲ್ಲ ಪ್ಲ್ಯಾನ್ ಮಾಡಿ ಬರೆಸಿರುವಂತಿದೆ ಎಂದು...

ಶಾಶ್ವತ ನೀರಾವರಿಗಾಗಿ ʼಜಲಾಗ್ರಹʼ; ʼಮಾಡು ಇಲ್ಲವೇ ಮಡಿʼ ಹೋರಾಟಕ್ಕೆ ಸಜ್ಜಾದ ರೈತರು

ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳ ಶಾಶ್ವತ ನೀರಾವರಿಗಾಗಿ ಸುಮಾರು 30 ವರ್ಷಗಳಿಂದ ಹೋರಾಟ...

ಕಾಶ್ಮೀರದ ಹಳ್ಳಿಗಳಲ್ಲಿ ಮುಟ್ಟು ಈಗಲೂ ಗುಟ್ಟು: ಐದು ದಿನದ ರೋಗ ಅಂತ ಕರೀತಾರೆ!

"ಕಾಲ ಎಷ್ಟು ಬದಲಾದರೂ ಜಮ್ಮು ಮತ್ತು ಕಾಶ್ಮೀರದ ಹಲವು ಹಳ್ಳಿಗಳಲ್ಲಿ ಇಂದಿಗೂ...

Download Eedina App Android / iOS

X