“ಸಾಮಾಜಿಕ ನ್ಯಾಯ ನಿಮ್ಮ ನುಡಿಯಲ್ಲಿದೆ, ಅದು ನಡೆಯಲ್ಲೂ ಇರಲಿ. ನಾಳೆ ರೈತರೊಂದಿಗೆ ನಡೆಸುವ ಸಭೆ ರೈತರ ಜಮೀನು ನೋಟಿಫಿಕೇಷನ್ ರದ್ದು ಪಡಿಸುವ ನಿಟ್ಟಿನಲ್ಲಿ ಮಾತ್ರ ಇರಲಿ. ಕಾನೂನಿನ ತೊಡಕು ನಿವಾರಿಸುವ ಬಗ್ಗೆ ಮಾತ್ರ ಇರಲಿ” ಎಂದು ಪ್ರಕಾಶ್ ರಾಜ್ ಹೇಳಿದರು.
ಸೋಮವಾರ ಎದ್ದೇಳು ಕರ್ನಾಟಕ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, “ಇದೇ ಜುಲೈ ನಾಲ್ಕರಂದು ರೈತ ಮುಖಂಡರೊಂದಿಗೆ ಮುಖ್ಯಮಂತ್ರಿ ಮತ್ತು ಕೆಲವು ಸಚಿವರು ನಡೆಸಿದ ಸಭೆಯಲ್ಲಿ ಕಾನೂನು ತೊಡಕು ನಿವಾರಣೆಗೆ ಯತ್ನಿಸುವ ಭರವಸೆ ನೀಡಿ, ಹತ್ತು ದಿನಗಳ ಸಮಯ ಕೇಳಿದ್ದರು. ಅದಕ್ಕೆ ಒಪ್ಪಿದ್ದೆವು. ಆದರೆ ಇದರ ಮಧ್ಯೆ ಕಾನೂನು ತೊಡಕು ನಿವಾರಿಸುವ ಬಗ್ಗೆ ಸರ್ಕಾರ ಕೆಲಸ ಮಾಡುವ ಬದಲು ರೈತರಲ್ಲಿ ಒಡಕು ಮೂಡಿಸಲು ಯತ್ನಿಸಿದೆ. ನಾಲ್ಕು ದಿನ ಬಾಕಿ ಇರುವಾಗಿ ನಾವು ಜಮೀನು ಕೊಡಲು ರೆಡಿ ಇದ್ದೇವೆ ಎಂದು ಹೇಳುತ್ತ ಬಂದ ಕೆಲವು ರೈತರಿಗೆ ಮುಖ್ಯಮಂತ್ರಿಯವರನ್ನು ಭೇಟಿ ಮಾಡಲು ಅವಕಾಶ ನೀಡಲಾಗಿದೆ. ಇದು ಅನುಮಾನ ಮೂಡಿಸಿದ ಕಾರಣ ಪತ್ರಿಕಾಗೋಷ್ಠಿ ಮಾಡಬೇಕಾಯಿತು” ಎಂದರು.
ಜುಲೈ ನಾಲ್ಕರಂದು ನಡೆದ ಸಭೆಯಲ್ಲಿ ಮುಖ್ಯಮಂತ್ರಿುಗಳು, ನನಗೆ ಅರ್ಥವಾಗಿದೆ. ನಮ್ಮದು ರೈತವಿರೋಧಿ ಸರ್ಕಾರ ಅಲ್ಲ. ರೈತ ಪರವಾದ ನಿರ್ಧಾರ ತೆಗೆದುಕೊಳ್ಳಲು, ಕಾನೂನಿನ ತೊಡಕು ನಿವಾರಣೆಗೆ ಏನು ಮಾಡಬೇಕು ಎಂದು ಯೋಚಿಸಬೇಕಿದೆ. ಹತ್ತು ದಿನಗಳ ಸಮಯಾವಕಾಶ ಬೇಕು ಎಂದು ಕೇಳಿದಾಗ ರೈತರು ಒಪ್ಪಿದ್ದರು. ನಾವೂ ಕಾನೂನು ತೊಡಕಿನ ಬಗ್ಗೆ ಚರ್ಚೆ ಮಾಡುತ್ತೇವೆ ಎಂದಿದ್ದೆವು. ಆದರೆ ಈ ಹತ್ತು ದಿನಗಳಲ್ಲಿ ಸಚಿವ ಎಂ ಬಿ ಪಾಟೀಲರು ದೆಹಲಿಗೆ ಹೋಗಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರನ್ನು ಭೇಟಿ ಮಾಡಿ ರಕ್ಷಣಾ ಕಾರಿಡಾರ್, ಏರೋಸ್ಪೇಸ್‌ಗೆ ಅನುಮತಿ ಕೇಳುತ್ತಾರೆ. ಮೂರು ವರ್ಷಗಳಿಂದ ಇಲ್ಲದ ಭೂಮಿಕೊಡುವ ರೈತರು ಹತ್ತು ದಿನದಲ್ಲಿ ಎಲ್ಲಿಂದ ಬಂದರು? ಮೂರು ವರ್ಷಗಳಿಂದ ರೈತರ ಸಮಸ್ಯೆ ಕೇಳಲು ಸಮಯ ಇರಲಿಲ್ಲ. ದಿಢೀರ್ ಬಂದ ರೈತರಿಗೆ ಕೊಡಲು ಸಮಯ ಇದೆ. ಎಕರೆಗೆ ಮೂರೂವರೆ ಕೋಟಿ ಎಲ್ಲಿಂದ ಕೊಡುತ್ತೀರಿ? ಅದು ನಮ್ಮ ದುಡ್ಡಲ್ಲವೇ? ಅದನ್ನು ಯಾರು ನಿರ್ಧಾರ ಮಾಡೋದು. ಅದರ ಮಧ್ಯೆ ಒಡಕು ಉಂಟು ಮಾಡುವ ಕೆಲಸ ಹೋರಾಟಗಾರರು ಮಾಡುತ್ತಿದ್ದಾರೆ, ಅವರ ಹಿಂದೆ ಯಾರು ಯಾರು ಇದ್ದಾರೆ ಎಂದು ಗೊತ್ತು ಎಂದು ಪಾಟೀಲರು ಹೇಳುತ್ತಾರೆ. ನಮ್ಮ ಹಿಂದೆ ಯಾರಿದ್ದಾರೆ ಎಂದು ನಾವು ಹೇಳುತ್ತೇವೆ. ನಿಮ್ಮ ಹಿಂದೆ ಯಾರಿದ್ದಾರೆ ಎಂದು ನೀವು ಹೇಳಿ ಎಂದು ಸವಾಲು ಹಾಕಿದರು.
ಹಸಿರು ವಲಯವನ್ನು ಕೈಗಾರಿಕಾ ವಲಯ ಮಾಡುವ ಪಾಲಿಸಿ ಎಲ್ಲಿದೆ? ಅಂತಹ ಪಾಲಿಸಿಯೇ ಇಲ್ಲ. ಹಸಿರು ವಲಯ ತೆಗೆದು ಹಾಕುವ ಪವರ್ ನಿಮಗೆ ಇಲ್ಲ. ಬಿಜಾಪುರದಲ್ಲಿ ಏನು ಮಾಡಿದ್ರೋ ಅದಕ್ಕೆ ಈಗ ಹೋರಾಟ ನಡೆಯುತ್ತಿದೆ. ಹೋರಾಟಗಾರರ ದಾರಿ ತಪ್ಪಿಸುವ ಕುತಂತ್ರ ಬಿಟ್ಬಿಡಿ. ನಾಳೆಯ ಸಭೆ ನೋಟಿಫಿಕೇಷನ್ ರದ್ದುಪಡಿಸುವ ಬಗ್ಗೆ ಮಾತ್ರ ಇರಲಿ. ಪರಿಹಾರ ಬೇಡ, ಭೂಮಿ ಕೊಡಲ್ಲ ಅಂದ ಮೇಲೆ ಪರಿಹಾರದ ಚರ್ಚೆ ಯಾಕೆ? ಎಂದರು.
ರೈತ ಮುಖಂಡ ವೀರಸಂಗಯ್ಯ, ʼಎದ್ದೇಳು ಕರ್ನಾಟಕʼದ ಸಂಚಾಲಕ ಕೆ ಎಲ್ ಅಶೋಕ್, ತಾರಾ ರಾವ್ ಇತರರು ಉಪಸ್ಥಿತರಿದ್ದರು.