"ಪ್ರತಿಯೊಬ್ಬ ಭಾರತೀಯನಿಗೂ ಮತದಾನದ ಹಕ್ಕಿದೆ, ಅದು ಪ್ರಜಾಪ್ರಭುತ್ವದ ಅತ್ಯಗತ್ಯ ಅಂಶ" ಎಂದು ಅಂಬೇಡ್ಕರ್ ಹೇಳಿದ್ದರು. ಸದ್ಯ ಚುನಾವಣಾ ಆಯೋಗ ಮಾಡುತ್ತಿರುವುದು ಇದಕ್ಕೆ ತದ್ವಿರುದ್ಧ ಕಾರ್ಯ.
ಬಿಹಾರದಲ್ಲಿ ಚುನಾವಣಾ ಆಯೋಗ ನಡೆಸುತ್ತಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ(ಎಸ್ಐಆರ್) ಸದ್ಯ ಚರ್ಚೆಗೆ ಗ್ರಾಸವಾಗಿದೆ. ಇತ್ತೀಚೆಗೆ ಮತದಾರರ ಪಟ್ಟಿ ಪರಿಷ್ಕರಣೆಗೆ ವಿರುದ್ಧವಾಗಿ ಸಲ್ಲಿಕೆಯಾದ ಅರ್ಜಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ನಡೆಸಿದ್ದು ಪ್ರಕ್ರಿಯೆಗೆ ತಡೆ ನೀಡಿಲ್ಲ. ಬದಲಾಗಿ ಆಧಾರ್ ಕಾರ್ಡ್, ಎಪಿಕ್ ಕಾರ್ಡ್, ಪಡಿತರ ಚೀಟಿಯನ್ನೂ ಗುರುತು ಪತ್ರವಾಗಿ ಪರಿಗಣಿಸುವಂತೆ ಸೂಚಿಸಿದೆ. ಸದ್ಯ ಎಸ್ಐಆರ್ ಪ್ರಕ್ರಿಯೆಗೆ ತಡೆ ನೀಡದಿರುವುದನ್ನೇ ತನಗೆ ಸಿಕ್ಕ ‘ಒಪ್ಪಿಗೆ’ ಎಂದು ಚುನಾವಣಾ ಆಯೋಗ ಪರಿಗಣಿಸಿದೆ. ಮತದಾರರ ಪಟ್ಟಿ ಪರಿಷ್ಕರಣೆಯನ್ನು ಬಿಹಾರ ಮಾತ್ರವಲ್ಲ, ದೇಶದ ಎಲ್ಲ ರಾಜ್ಯಗಳಲ್ಲೂ ನಡೆಸಲು ಸಿದ್ಧವಾಗುತ್ತಿದೆ. ಈ ಮೂಲಕ ದೇಶದಲ್ಲಿ ಪರೋಕ್ಷವಾಗಿ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಮತ್ತು ರಾಷ್ಟ್ರೀಯ ನಾಗರಿಕರ ನೋಂದಣಿ(ಎನ್ಆರ್ಸಿ) ಕಾರ್ಯವನ್ನು ಜಾರಿಗೆ ತರುತ್ತಿದೆ. ಬಿಜೆಪಿಯ ಮಿತ್ರ ಪಕ್ಷಗಳೂ ಈ ಪ್ರಕ್ರಿಯೆಗೆ ವಿರೋಧ ವ್ಯಕ್ತಪಡಿಸಿದೆ.
ಕೇಂದ್ರದಲ್ಲಿ ಎನ್ಡಿಎ ಸರ್ಕಾರದೊಂದಿಗೆ ಮೈತ್ರಿ ಮಾಡಿಕೊಂಡಿರುವ ಚಂದ್ರಬಾಬು ನಾಯ್ಡು ಅವರ ಟಿಡಿಪಿ ಬಿಹಾರದಲ್ಲಿ ನಡೆಯುತ್ತಿರುವ ಈ ಪರಿಷ್ಕರಣೆಗೆ ಅಸಮಾಧಾನ ವ್ಯಕ್ತಪಡಿಸಿದೆ. “ಯಾವುದೇ ಚುನಾವಣೆ ನಡೆಯುವುದಕ್ಕೂ ಆರು ತಿಂಗಳ ಒಳಗಾಗಿ ತರಾತುರಿಯಲ್ಲಿ ಈ ಪ್ರಕ್ರಿಯೆ ನಡೆಸಬಾರದು. ಹಾಗೆಯೇ ಇದು ಪೌರತ್ವ ಪರಿಶೀಲಿಸುವ ಪ್ರಕ್ರಿಯೆ ಅಲ್ಲ ಎಂಬುದನ್ನು ಚುನಾವಣಾ ಆಯೋಗ ಸ್ಪಷ್ಟಪಡಿಸಬೇಕು” ಎಂದು ಟಿಡಿಪಿ ಹೇಳಿದೆ.
ಇದನ್ನು ಓದಿದ್ದೀರಾ? ಚುನಾವಣಾ ಆಯೋಗ ಯಾವಾಗಲೂ ಮೋದಿ ಸರ್ಕಾರದ ‘ಕೈಗೊಂಬೆ’ಯಾಗಿದೆ: ಕಪಿಲ್ ಸಿಬಲ್
ಟಿಡಿಪಿಗೆ ಇರುವ ಈ ಸ್ಪಷ್ಟತೆ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರಿಗೆ ಯಾಕಿಲ್ಲ? ತಮ್ಮ ರಾಜ್ಯದ ಮತದಾರರ ಹಕ್ಕನ್ನು ಕಸಿಯುತ್ತಿರುವಾಗ ನಿತೀಶ್ ಯಾಕೆ ಮೌನ ತಾಳಿದ್ದಾರೆ? ಈ ಪರಿಷ್ಕರಣೆ ಪ್ರಕ್ರಿಯೆ ನಡೆಸುವುದಾದರೂ ಚುನಾವಣೆಗೆ ಆರು ತಿಂಗಳು ಮುಂಚಿತವಾಗಿ ಸಂಪೂರ್ಣ ಪ್ರಕ್ರಿಯೆ ನಡೆಸಿರಬೇಕಿತ್ತು. ಆದರೆ ಚುನಾವಣೆಗೆ ಬರೀ ಐದು ತಿಂಗಳು ಇರುವಾಗಲೇ ಪ್ರಕ್ರಿಯೆ ಆರಂಭಿಸಲಾಗಿದೆ. ಇದನ್ನು ನಿತೀಶ್ ಅವರ ಪಕ್ಷ ಪ್ರಶ್ನಿಸುತ್ತಿಲ್ಲವೇಕೆ? -ಹೀಗೆ ಹಲವು ಪ್ರಶ್ನೆಗಳನ್ನು ಕೇಳಬೇಕಿದೆ.
ಈ ಮಧ್ಯೆ ಈಗಾಗಲೇ ಬಿಹಾರದಲ್ಲಿ 35.86 ಲಕ್ಷ ಮತದಾರರು ಅಮಾನ್ಯರಾಗಿದ್ದಾರೆ ಎಂದು ಚುನಾವಣಾ ಆಯೋಗ ಹೇಳಿದೆ. ಅಂದರೆ 12.55 ಲಕ್ಷ ಮೃತಪಟ್ಟಿದ್ದರೆ, 17.37 ಲಕ್ಷ ಮತದಾರರು ಶಾಶ್ವತವಾಗಿ ಬಿಹಾರದಿಂದ ಬೇರೆಡೆ ಸ್ಥಳಾಂತರಗೊಂಡಿದ್ದಾರೆ. ಉಳಿದಂತೆ 5.76 ಲಕ್ಷ ಮತದಾರರು ಒಂದಕ್ಕಿಂತ ಹೆಚ್ಚು ಸ್ಥಳಗಳಲ್ಲಿ ಹೆಸರು ದಾಖಲಿಸಿಕೊಂಡಿರುವ ಕಾರಣ ಅವರ ಹೆಸರನ್ನು ಪಟ್ಟಿಯಿಂದ ತೆಗೆಯಲಾಗಿದೆ. ಬಿಹಾರದಲ್ಲಿ ಒಟ್ಟು ಮತದಾರರು 7.89 ಕೋಟಿ. ಈ ಪೈಕಿ ಶೇಕಡ 11.82ರಷ್ಟು ಅಥವಾ 93.34 ಲಕ್ಷ ಜನರು ಇನ್ನೂ ಗಣತಿ ನಮೂನೆಗಳನ್ನು ಸಲ್ಲಿಸಿಲ್ಲ. ಫಾರ್ಮ್ ಭರ್ತಿ ಮಾಡಲು ಸದ್ಯ ಹತ್ತು ದಿನ ಮಾತ್ರ ಅವಕಾಶವಿದೆ. ಅಷ್ಟರಲ್ಲಿ ಫಾರ್ಮ್ ಭರ್ತಿ ಮಾಡದಿದ್ದರೆ ಇನ್ನಷ್ಟು ಮಂದಿ ತಮ್ಮ ಮತದಾನದ ಹಕ್ಕನ್ನು ಕಳೆದುಕೊಳ್ಳಲಿದ್ದಾರೆ.
35 ಲಕ್ಷ ಮತದಾರರು ಅಮಾನ್ಯಗೊಂಡಿದ್ದಾರೆ ಎಂದು ಹೇಳಿರುವ ಚುನಾವಣಾ ಆಯೋಗ, ಈ ಪೈಕಿ ವಿದೇಶಿಗರು ಎಷ್ಟು? ದಾಖಲೆ ನೀಡಲಾಗದೆ ಭಾರತೀಯರೇ ಹಕ್ಕನ್ನು ಕಳೆದುಕೊಂಡರೇ ಎಂಬುದನ್ನು ಮಾತ್ರ ಸ್ಪಷ್ಟವಾಗಿ ತಿಳಿಸಿಲ್ಲ. ಬಿಹಾರದಲ್ಲಿ ಕಳೆದ ವರ್ಷ ಅಕ್ಟೋಬರ್ನಿಂದ ಈ ವರ್ಷದ ಜನವರಿವರೆಗೆ ಸಮೀಕ್ಷೆ ನಡೆದಿದೆ. ಈ ವೇಳೆ ಒಟ್ಟು ನಾಲ್ಕು ಲಕ್ಷ ಮತದಾರರ ಹೆಸರು ಪಟ್ಟಿಯಿಂದ ತೆಗೆದುಹಾಕಲಾಗಿದೆ ಎಂದು ಜನವರಿಯಲ್ಲಿ ಚುನಾವಣಾ ಆಯೋಗ ತಿಳಿಸಿದೆ. ಆದರೆ ಜೂನ್ನಿಂದ ಜುಲೈವರೆಗೆ ಒಂದು ತಿಂಗಳಿಗೂ ಕಡಿಮೆ ಅವಧಿಯಲ್ಲಿ ನಡೆದ ಪರಿಷ್ಕರಣೆಯಲ್ಲಿ 12 ಲಕ್ಷ ಮಂದಿ ಮೃತಪಟ್ಟಿರುವುದಾಗಿ ಆಯೋಗ ತಿಳಿಸಿದೆ. ಅಂದರೆ ಇಷ್ಟು ಕಡಿಮೆ ಅವಧಿಯಲ್ಲಿ 12 ಲಕ್ಷ ಮಂದಿ ಸಾವನ್ನಪ್ಪಿದ್ದಾರೆಯೇ?
ಎಲ್ಲರಿಗೂ ಆನ್ಲೈನ್ ಮೂಲಕ ಫಾರ್ಮ್ಗಳನ್ನು ಭರ್ತಿ ಮಾಡಲು ಸಾಧ್ಯವಾಗದು ಎಂಬ ಕಾರಣಕ್ಕೆ ಈ ಪ್ರಕ್ರಿಯೆಗೆ ಸಹಾಯ ಮಾಡಲು ಬಿಎಲ್ಒಗಳ ವ್ಯವಸ್ಥೆಯನ್ನು ಮಾಡಲಾಗಿದೆ. ಆದರೆ ಚುನಾವಣಾ ಆಯೋಗವೇ ನೀಡಿರುವ ಮಾಹಿತಿ ಪ್ರಕಾರ ಈ ಬಿಎಲ್ಒಗಳು ಕೆಲವು ಪ್ರದೇಶಗಳಿಗೆ ಭೇಟಿಯೇ ನೀಡಿಲ್ಲ. ಇನ್ನು ಕೆಲವೆಡೆ ಈ ಬಿಎಲ್ಒಗಳು ಫಾರ್ಮ್ ಪ್ರಿಂಟ್ ನೀಡಿ ಭರ್ತಿ ಮಾಡಲು ತಿಳಿಸುತ್ತಿದ್ದಾರೆ. ಪತ್ರಕರ್ತ ಅಜಿತ್ ಅಂಜುಮ್ ಪಟನಾ ಸೇರಿದಂತೆ ಬಿಹಾರದ ಹಲವು ಪ್ರದೇಶಗಳಿಗೆ ಭೇಟಿ ನೀಡಿದ್ದು, ವಿಭಿನ್ನ ಫಾರ್ಮ್ಗಳನ್ನು ಹಂಚಲಾಗುತ್ತಿರುವುದು ಗಮನಕ್ಕೆ ಬಂದಿದೆ. ಚುನಾವಣಾ ಆಯೋಗದ ವೆಬ್ಸೈಟ್ನಲ್ಲಿ ಲಭ್ಯವಿರುವ ಫಾರ್ಮ್ಗೂ ಈ ಬಿಎಲ್ಒಗಳಲ್ಲಿ ಇರುವ ಫಾರ್ಮ್ಗೂ ಅಗಾಧ ವ್ಯತ್ಯಾಸ ಕಂಡುಬಂದಿದೆ. ಹಾಗಿದ್ದಾಗ ಫಾರ್ಮ್ ಭರ್ತಿ ಸರಿಯಾಗಿ ಮಾಡಿರಬಹುದೇ? ಫಾರ್ಮ್ ಸರಿಯಾಗಿ ಭರ್ತಿ ಮಾಡದ ಕಾರಣದಿಂದಾಗಿಯೇ ಅದೆಷ್ಟೋ ಲಕ್ಷ ಜನರು ತಮ್ಮ ಮತದಾನದ ಹಕ್ಕು ಕಳೆದುಕೊಂಡಿರಬಹುದಲ್ಲವೇ? -ಹೀಗೆ ಹಲವು ಗೊಂದಲಗಳಿವೆ. ಎಲ್ಲವೂ ಪ್ರಜಾಪ್ರಭುತ್ವಕ್ಕೆ ಸವಾಲಾಗಿದೆ ಮತ್ತು ಪೌರತ್ವ ಪರಿಶೀಲಿಸುವ ಪರೋಕ್ಷ ಪ್ರಕ್ರಿಯೆ ಎಂದರೆ ತಪ್ಪಾಗದು.
ಇದನ್ನು ಓದಿದ್ದೀರಾ? ಪೌರತ್ವ ಪ್ರಮಾಣಪತ್ರ ನೀಡುವುದು ಚುನಾವಣಾ ಆಯೋಗದ ಕೆಲಸವಲ್ಲ; ಮಾಜಿ ಚುನಾವಣಾ ಆಯುಕ್ತ ಅಶೋಕ್ ಲವಾಸಾ ಹೀಗಂದಿದ್ದೇಕೆ?
ಸುಪ್ರೀಂ ತೀರ್ಪನ್ನೇ ಗೆಲುವೆಂದುಕೊಂಡ ಬಿಜೆಪಿ!
ಮತದಾರರ ಪಟ್ಟಿ ಪರಿಷ್ಕರಣೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ನೀಡಿದ ಆದೇಶವನ್ನು ವಿಪಕ್ಷ ಮತ್ತು ಆಡಳಿತ ಪಕ್ಷ ತಮ್ಮ ಗೆಲುವೆಂದು ಪರಿಗಣಿಸಿವೆ. ಚುನಾವಣಾ ಆಯೋಗವನ್ನು ತನ್ನ ತಾಳಕ್ಕೆ ತಕ್ಕಂತೆ ಕುಣಿಸುವ ಬಿಜೆಪಿ ಪರಿಷ್ಕರಣೆಗೆ ತಡೆ ನೀಡದಿರುವುದನ್ನು ತನ್ನ ಗೆಲುವೆಂದು ಭಾವಿಸಿದೆ. ಇನ್ನೊಂದೆಡೆ ಆಧಾರ್ ಕಾರ್ಡ್, ಪಡಿತರ ಚೀಟಿಯಂತಹ ದಾಖಲೆಗಳನ್ನೂ ಗುರುತಿನ ಪುರಾವೆಯಾಗಿ ಪರಿಗಣಿಸುವಂತೆ ಸುಪ್ರೀಂ ಕೋರ್ಟ್ ಹೇಳಿರುವುದನ್ನು ವಿಪಕ್ಷಗಳು ತಮ್ಮ ಗೆಲುವು ಎಂದು ಪರಿಗಣಿಸಿವೆ.
ಈ ಎಲ್ಲ ಬೆಳವಣಿಗೆಗಳ ಬಳಿಕ ಚುನಾವಣಾ ಆಯೋಗವು ಎದ್ದು ನಿಂತಿದೆ. ಆಳುವ ಪಕ್ಷದೊಂದಿಗೆ ಕಂಡೂಕಾಣದಂತೆ ಸಹಕರಿಸುತ್ತಿದ್ದ ಆಯೋಗ, ಈಗ ರಾಜರೋಷವಾಗಿ ಬಿಜೆಪಿಯೊಂದಿಗೆ ಕಾರ್ಯನಿರ್ವಹಿಸಲು ಆರಂಭಿಸಿದೆ. ಆದರೆ ಈವರೆಗೂ ಆಧಾರ್ ಕಾರ್ಡ್, ಪಡಿತರ ಚೀಟಿಯನ್ನು ಗುರುತಿನ ಪುರಾವೆಯಾಗಿ ಸೇರಿಸಿಕೊಳ್ಳಬೇಕೆಂಬ ಸುಪ್ರೀಂ ಕೋರ್ಟ್ನ ಆದೇಶಕ್ಕೆ ಮೌನ ತಳೆದಿದೆ. ತೀವ್ರ ವಿರೋಧಗಳ ನಡುವೆಯೂ ಪರಿಷ್ಕರಣೆ ಮುಂದುವರೆಸಿದೆ.
ಜೊತೆಗೆ ಜೂನ್ 24ರ ನಂತರ ಚುನಾವಣಾ ಆಯೋಗ ಹೊರಡಿಸಿದ ಪತ್ರಿಕಾ ಪ್ರಕಟಣೆಗಳ ಪಟ್ಟಿಯನ್ನು ನೀವು ಗಂಭೀರವಾಗಿ ಪರಿಶೀಲಿಸಿದರೆ, ಕೆಲವು ಬದಲಾವಣೆಯನ್ನು ಗಮನಿಸಬಹುದು. ಅಂದೇ ಎಸ್ಐಆರ್ ಘೋಷಣೆ ಮಾಡಿರುವುದು. ಮತದಾರರ ಪಟ್ಟಿಯಲ್ಲಿ ಪಾರದರ್ಶಕತೆಯನ್ನು ಕಾಪಿಡಲು ಈ ಪ್ರಕ್ರಿಯೆ ನಡೆಸಲಾಗುವುದು ಎಂದು ಆಯೋಗ ಹೇಳಿಕೊಂಡಿದೆ.
ಜೂನ್ 18ರಂದು ಪತ್ರಿಕಾ ಪ್ರಕಟಣೆಯನ್ನು ಹೊರಡಿಸಿದ ಚುನಾವಣಾ ಆಯೋಗ ಅಧಿಕೃತ ಮತದಾರರ ಛಾಯಾಚಿತ್ರ ಗುರುತಿನ ಚೀಟಿ(EPIC) ವಿತರಣೆಯನ್ನು ತ್ವರಿತಗೊಳಿಸಲು ಘೋಷಿಸಿತು. ಮತದಾರರ ಪಟ್ಟಿ ನವೀಕರಿಸಿದ 15 ದಿನಗಳಲ್ಲಿ ಮತದಾರರು EPIC ಪಡೆಯಲಾಗುವುದು ಎಂದು ಹೇಳಿತು. ಇದಾದ ಐದು ದಿನಗಳಲ್ಲೇ ಮತದಾರರ ಪಟ್ಟಿ ಪರಿಷ್ಕರಣೆ ಘೋಷಿಸಲಾಗಿದ್ದು ಅಗತ್ಯ ದಾಖಲೆಗಳ ಪಟ್ಟಿಯಲ್ಲಿ EPIC ಕಾಣಿಸಲಿಲ್ಲ. ಅಂದರೆ ಎಲ್ಲ ದಾಖಲೆ ನೀಡಿ ಪಡೆದ ಮತದಾರರ ಗುರುತಿನ ಚೀಟಿ ಐದು ದಿನಗಳಲ್ಲೇ ಅನಗತ್ಯ ಎನಿಸಿತೇ?
ಹಾಗೆಯೇ ಈ ಪರಿಷ್ಕರಣೆಗೆ “ಕ್ಷಿಪ್ರ ನಗರೀಕರಣ, ಆಗಾಗ್ಗೆ ವಲಸೆ, ಯುವ ನಾಗರಿಕರು ಮತದಾನಕ್ಕೆ ಅರ್ಹರಾಗಿರುವುದು, ಸಾವುಗಳು, ವಿದೇಶಿ ಅಕ್ರಮ ವಲಸಿಗರು” -ಮೊದಲಾದ ಕಾರಣಗಳನ್ನು ಚುಣಾವಣಾ ಆಯೋಗ ನೀಡಿದೆ. ಆದರೆ ಇವೆಲ್ಲ ಸಮಸ್ಯೆಗಳು ಈಗ ಕಾಣಿಸಿಕೊಂಡಿರುವುದೇ? 2024ರ ಲೋಕಸಭೆ ಚುನಾವಣೆ ವೇಳೆ ಅಥವಾ 2020ರ ಬಿಹಾರ ವಿಧಾನಸಭಾ ಚುನಾವಣೆಗೆ ಮೊದಲು ಈ ಸಮಸ್ಯೆಗಳು ಇದ್ದವಲ್ಲವೇ? ಹಾಗಿರುವಾಗ ಈಗ ಆ ಅಂಶಗಳು ಈ ತುರ್ತು ಪರಿಷ್ಕರಣೆಗೆ ಕಾರಣ ಎಂದು ಹೇಳುವುದು ಹೇಗೆ?
ಇದನ್ನು ಓದಿದ್ದೀರಾ? ಬಿಹಾರ ಮತದಾರ ಪಟ್ಟಿ ಪರಿಷ್ಕರಣೆ: ಮೋದಿ ಮಸಲತ್ತು ಬಹಿರಂಗ?
ಪ್ರಜಾಪ್ರಭುತ್ವಕ್ಕೆ ಸವಾಲೊಡ್ಡುವ ಪ್ರಕ್ರಿಯೆ
ಈ ಸಂಪೂರ್ಣ ಪ್ರಕ್ರಿಯೆಯ ಬಗ್ಗೆ ಹಲವು ಪ್ರಶ್ನೆಗಳು ಹುಟ್ಟಲು, ಇವೆಲ್ಲವೂ ಪ್ರಜಾಪ್ರಭುತ್ವಕ್ಕೆ ಸವಾಲು ಎನ್ನಲು ಹಲವು ಕಾರಣಗಳಿವೆ. ಈ ಹಿಂದೆ 2003ರಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆ ಪೂರ್ಣಗೊಳ್ಳಲು ಎರಡು ವರ್ಷಗಳು ತಗುಲಿದೆ. ಇಂದು ಆನ್ಲೈನ್ ಮೂಲಕ ನಡೆಸುವುದಾದರೂ ಒಂದೆರಡು ತಿಂಗಳಲ್ಲಿ ಮುಗಿಸುವ ಪ್ರಕ್ರಿಯೆ ಇದಲ್ಲ. ಜೊತೆಗೆ ಆನ್ಲೈನ್ ಮೂಲಕ ಫಾರ್ಮ್ ಭರ್ತಿ ಮಾಡಲು ತಿಳಿಯದ ಲಕ್ಷಾಂತರ ಮಂದಿ ಇದ್ದಾರೆ. ಹಾಗಿರುವಾಗ ಭಾರೀ ಪ್ರಮಾಣದ ಜನರು ಮತದಾನದ ಹಕ್ಕನ್ನು ಕಳೆದುಕೊಳ್ಳುವ ಸಾಧ್ಯತೆಯಿದೆ. ಅಷ್ಟಕ್ಕೂ ಯಾರು ಈ ಹಕ್ಕನ್ನು ಕಳೆದುಕೊಳ್ಳುವವರು? ಮುಖ್ಯವಾಗಿ ಬಡವರು, ವಲಸಿಗರು, ಗ್ರಾಮೀಣ ಭಾಗದ ಜನರು ಎಂಬುದು ಸ್ಪಷ್ಟ. ಗ್ರಾಮೀಣ ಜನರಲ್ಲಿ ಪಾಸ್ಪೋರ್ಟ್, ಜನನ ಪ್ರಮಾಣ ಪತ್ರ ಇರದು. ಹಾಗಿರುವಾಗ ತಾವು ಬಿಹಾರದವರೇ ಎಂದು ಖಚಿತಪಡಿಸುವುದಾದರೂ ಹೇಗೆ?
ಹೊಸದಾಗಿ ಫಾರ್ಮ್ಗಳನ್ನು ಭರ್ತಿ ಮಾಡುವುದು, ಈ ಫಾರ್ಮ್ ಸಲ್ಲಿಸಲು ಸೀಮಿತ ಅವಕಾಶ ಮೊದಲಾದವು ಲಕ್ಷಾಂತರ ಜನರು, ವಿಶೇಷವಾಗಿ ಬಡವರು, ಗ್ರಾಮೀಣ ಮತ್ತು ವಲಸೆ ಬಂದವರನ್ನು ಮತದಾನ ಪ್ರಕ್ರಿಯೆಯಿಂದ ಹೊರಗಿಡಲಿದೆ ಎಂಬುದು ವಿಪಕ್ಷಗಳ ಆತಂಕ, ಅದು ನಿಜವೂ ಹೌದು. ಬಿಹಾರದಲ್ಲಿ ಹೆಚ್ಚಾಗಿ ವಲಸಿಗರು ನೆಲೆಸಿದ್ದಾರೆ. ದೇಶದ ಯಾವುದೋ ಮೂಲೆಯಿಂದ ಹೋಗಿ ಬಿಹಾರದಲ್ಲಿ ನೆಲೆಸಿರುವ ಅದೆಷ್ಟೋ ಕಾರ್ಮಿಕರು ಇದ್ದಾರೆ. ಅವರೆಲ್ಲರೂ ಈಗ ಸಂಕಷ್ಟದಲ್ಲಿದ್ದಾರೆ.
ಇವೆಲ್ಲವುದರ ನಡುವೆ ಮತದಾರರಲ್ಲಿಯೂ ಸಾಕಷ್ಟು ಗೊಂದಲವಿದೆ. ನಾವು ಈಗಾಗಲೇ ಎಲ್ಲ ದಾಖಲೆಗಳನ್ನು ನೀಡಿ ಮತದಾರ ಗುರುತಿನ ಚೀಟಿ ಮಾಡಿಸಿಕೊಂಡಿದ್ದೇವೆ. ಹಾಗಿರುವಾಗ ಈಗ ಮತ್ತೆ ಅರ್ಜಿ ಸಲ್ಲಿಸುವುದು ಯಾಕೆ? ನಾವು ಈಗಾಗಲೇ ದಾಖಲೆ ಸಲ್ಲಿಸಿಯೇ ಮತದಾರರ ಚೀಟಿ ಪಡೆದಿರುವುದು ಅಲ್ಲವೇ ಎಂಬುದು ಜನ ಸಾಮಾನ್ಯರ ಪ್ರಶ್ನೆ.
ಪರಿಷ್ಕರಣೆ ಮಾಡುವುದು ಮುಖ್ಯ ಮತ್ತು ಇದು ಸಹಜ ಪ್ರಕ್ರಿಯೆ ಎಂದು ಹೇಳುವವರೂ ಇದ್ದಾರೆ. ಆದರೆ ಬಡ, ಇಂಟರ್ನೆಟ್ ಸೌಲಭ್ಯದ ಬಳಕೆ ತಿಳಿಯದ, ಇದಕ್ಕೆ ತಕ್ಕುದಾದ ದಾಖಲೆಗಳು ಇಲ್ಲದ ಕುಟುಂಬಗಳು ಮಾಡುವುದೇನು? ಅಷ್ಟಕ್ಕೂ ಚುನಾವಣೆಗೆ ಇನ್ನು ಕೆಲವೇ ತಿಂಗಳುಗಳು ಇರುವಾಗ ಈ ಪ್ರಕ್ರಿಯೆ ನಡೆಸುವ ತರಾತುರಿ ಏನಿದೆ? ಕೇಂದ್ರದ ಆದೇಶಕ್ಕೆ ಜೋತು ಬಿದ್ದಿರುವ ಚುನಾವಣಾ ಆಯೋಗದ ಈ ಆತುರ ಬಿಜೆಪಿಗೆ ಲಭಿಸಬಹುದಾದ ಮತಗಳನ್ನು ಮಾತ್ರ ‘ಫಿಲ್ಟರ್’ ಮಾಡುವ ಪ್ರಯತ್ನ ಎಂಬ ಅಭಿಪ್ರಾಯಗಳೂ ಇವೆ.
ಇತ್ತೀಚಿನ ಡೆಕ್ಕನ್ ಹೆರಾಲ್ಡ್ ಲೇಖನದಲ್ಲಿ ಉಲ್ಲೇಖಿಸಿರುವಂತೆ ರಾಜಕೀಯ ವಿರ್ಮಶಕ ಭರತ್ ಭೂಷಣ್ ಪ್ರಕಾರ, “ಅನಧಿಕೃತ ಬಾಂಗ್ಲಾದೇಶದ ಮುಸ್ಲಿಮರು ಹೆಚ್ಚಿನ ಸಂಖ್ಯೆಯಲ್ಲಿ ಮತದಾರರ ಪಟ್ಟಿಗೆ ಸೇರಿದ್ದಾರೆ. ಬಿಜೆಪಿ ವಿರೋಧಿ ಪಕ್ಷಗಳಿಗೆ ಸಹಾಯ ಮಾಡುತ್ತಿದ್ದಾರೆ ಎಂಬ ಊಹೆಯಿದೆ” ಬಿಜೆಪಿ ವಿರೋಧಿ ಮತ ಎಂಬುದು ಚುನಾವಣಾ ಆಯೋಗವನ್ನು ನಿದ್ದೆಯಿಂದ ಎಬ್ಬಿಸಿದಂತಿದೆ. ಅದಕ್ಕಾಗಿ 11 ದಾಖಲೆಗಳನ್ನು ನೀಡಿ ಭಾರತೀಯ ಪ್ರಜೆಗಳು ಎಂದು ಸಾಬೀತುಪಡಿಸುವ ಕಾರ್ಯಕ್ಕೆ ಚುನಾವಣಾ ಆಯೋಗ ಇಳಿದಿದೆ. ಅಂದರೆ ಪರೋಕ್ಷವಾಗಿ ‘ಪೌರತ್ವ ಪ್ರಮಾಣಪತ್ರ’ ನೀಡುವ ಕೆಲಸ. ಯಾರು ಈ ದೇಶದ ಜನರು, ಯಾರು ಅಲ್ಲ ಎಂಬುದನ್ನು ಚುನಾವಣಾ ಆಯೋಗ ನಿರ್ಧರಿಸುವುದಾದರೆ ಸರ್ಕಾರ ಇರುವುದಾದರೂ ಯಾಕೆ? ಅಥವಾ ಸರ್ಕಾರ ನೀಡಿದ ಆದೇಶವನ್ನು ಚುನಾವಣಾ ಆಯೋಗ ಪಾಲಿಸುತ್ತಿರುವುದೇ?
ಇದನ್ನು ಓದಿದ್ದೀರಾ? SIR ಪ್ರಕ್ರಿಯೆ | ಬಿಜೆಪಿ-ಚುನಾವಣಾ ಆಯೋಗದ ವಿರುದ್ಧ ಗುಡುಗಿದ ಬಿಹಾರ
ಈ ಸಂದರ್ಭದಲ್ಲಿ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಮಾತು ನೆನೆಪಿಗೆ ಬರುತ್ತದೆ. “ಪ್ರತಿಯೊಬ್ಬ ಭಾರತೀಯನಿಗೂ ಮತದಾನದ ಹಕ್ಕಿದೆ, ಅದು ಪ್ರಜಾಪ್ರಭುತ್ವದ ಅತ್ಯಗತ್ಯ ಅಂಶ” ಎಂದು ಅಂಬೇಡ್ಕರ್ ಹೇಳಿದ್ದರು. ಸದ್ಯ ಚುನಾವಣಾ ಆಯೋಗ ಮಾಡುತ್ತಿರುವುದು ಇದಕ್ಕೆ ತದ್ವಿರುದ್ಧ ಕಾರ್ಯ. ವರ್ಷಗಳ ಪ್ರಕ್ರಿಯೆಯನ್ನು ಒಂದೆರಡು ತಿಂಗಳಲ್ಲಿ ನಡೆಸಿ ಲಕ್ಷಾಂತರ ಜನರ ಮತದಾನದ ಹಕ್ಕನ್ನು ಕಸಿದುಕೊಳ್ಳುವುದು ಮತ್ತು ಇದೇ ಪ್ರಕ್ರಿಯೆಯನ್ನು ಎಲ್ಲ ರಾಜ್ಯಗಳಲ್ಲಿ ನಡೆಸುವುದು ಪ್ರಜಾಪ್ರಭುತ್ವದ ಕಗ್ಗೊಲೆಯಲ್ಲದೆ ಮತ್ತೇನು?
ಸಿಎಎ, ಎನ್ಆರ್ಸಿ ಪರೋಕ್ಷ ಜಾರಿಯಲ್ಲವೇ?
ಇವೆಲ್ಲವುದರ ನಡುವೆ ಕೇಂದ್ರ ಸರ್ಕಾರದ ಕೈಗೊಂಬೆಯಾದ ಚುನಾವಣಾ ಆಯೋಗ ಸಿಎಎ ಮತ್ತು ಎನ್ಆರ್ಸಿಯನ್ನು ಪರೋಕ್ಷವಾಗಿ ಜಾರಿಗೆ ತರುವ ಯತ್ನ ಮಾಡುತ್ತಿದೆ ಎಂಬುದು ಸ್ಪಷ್ಟವಾಗುತ್ತದೆ. ಮುಖ್ಯವಾಗಿ ಧಾರ್ಮಿಕ ಅಲ್ಪಸಂಖ್ಯಾತರ ಪೌರತ್ವವನ್ನು ಕಸಿಯುವ ಹುನ್ನಾರವೇ ಸಿಎಎ ಮತ್ತು ಎನ್ಆರ್ಸಿ. ಈ ಕಾಯ್ದೆಗಳಿಗೆ ತೀವ್ರ ವಿರೋಧ ವ್ಯಕ್ತವಾಗಿರುವ ಹಿನ್ನೆಲೆ ಇದೀಗ ಕೇಂದ್ರ ಸರ್ಕಾರ ಚುನಾವಣಾ ಆಯೋಗವನ್ನು ಬಳಸಿಕೊಂಡು ಅದೇ ಪ್ರಕ್ರಿಯೆಯನ್ನು ಪರೋಕ್ಷವಾಗಿ ನಡೆಸುತ್ತಿರುವಂತಿದೆ. ಸರಿಯಾಗಿ ದಾಖಲೆಗಳನ್ನು ನೀಡಲು ಸಾಧ್ಯವಾಗದ ಕುಟುಂಬವು ಇದೀಗ ಮತದಾನದ ಹಕ್ಕನ್ನು ಕಳೆದುಕೊಂಡು, ಬಳಿಕ ಭಾರತದ ಪೌರತ್ವವನ್ನೇ ಕಳೆದುಕೊಳ್ಳಬಹುದು.
ಅಸ್ಸಾಂನಲ್ಲಿ ಎನ್ಆರ್ಸಿ ಜಾರಿಗೆ ಬಂದಾಗ ಸುಮಾರು 19 ಲಕ್ಷ ಜನರು ಪೌರತ್ವ ಕಳೆದುಕೊಳ್ಳುವಂತಾಯಿತು. ಅದರಲ್ಲೂ ವಿಶೇಷವಾಗಿ ಆದಿವಾಸಿಗಳು, ಬಡವರು ಮತ್ತು ಲಿಂಗತ್ವ ಅಲ್ಪಸಂಖ್ಯಾತರು. ಇದೀಗ ಬಿಹಾರದಲ್ಲಿ ಮತದಾನ ಪಟ್ಟಿ ಪರಿಷ್ಕರಣೆ ವೇಳೆ ತಮ್ಮ ಹಕ್ಕನ್ನು ಕಳೆದುಕೊಳ್ಳುವವರು ಈ ಹಿಂದುಳಿದ ವರ್ಗದ ಜನರೇ ಆಗಿರುತ್ತಾರೆ. ತಾವು ಈ ದೇಶದಲ್ಲಿ ಮತ ಹಾಕುವ ಅರ್ಹತೆ ಹೊಂದಿಲ್ಲ ಎಂದಾದರೆ ಮತ್ತೆ ಪೌರತ್ವವೂ ಪ್ರಶ್ನಾರ್ಹವಾಗುವುದಿಲ್ಲವೇ?
ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ(NFHS) ಪ್ರಕಾರ ದೇಶದ ಬಡವರಲ್ಲಿ ಸರಿಯಾದ ದಾಖಲೆಗಳೂ ಇಲ್ಲ. ದಾಖಲೆಗಳನ್ನು ಕಾಪಿಟ್ಟುಕೊಳ್ಳುವಷ್ಟು ಅಥವಾ ಪಡೆದುಕೊಳ್ಳುವಷ್ಟು ಗೋಜಿಗೆ ದೇಶದ ಬಡ ವರ್ಗ ಹೋಗಲಾರದು. ಬಡವರಿಗೆ ದಿನ ದೂಡುವುದೇ ಸಂಕಷ್ಟ ಇನ್ನು ಇತರೆ ದಾಖಲೆಗಳ ಸಂಗ್ರಹಕ್ಕಾಗಿ ಅಳೆಯುವುದು ಹೇಗೆ? ಸಮೀಕ್ಷೆಯೊಂದರೆ ಪ್ರಕಾರ ದೇಶದಲ್ಲಿ ಶೇಕಡ 42ರಷ್ಟು ಜನರಿಗೆ ಜನನ ಪ್ರಮಾಣ ಪತ್ರವೇ ಇಲ್ಲ. ಇಂತಹ ಸಮಸ್ಯೆಗಳು ಇರುವಾಗ ದೇಶದ ಎಲ್ಲ ರಾಜ್ಯಗಳಲ್ಲಿ ಮತದಾರರ ಪತ್ರ ಪರಿಷ್ಕರಣೆ ಮಾಡಿದರೆ ತಮ್ಮ ಹಕ್ಕು ಕಳೆದುಕೊಳ್ಳುವುದು ಬಡವರಲ್ಲದೆ ಮತ್ಯಾರು? ಮತದಾರರ ಪಟ್ಟಿ ಪರಿಷ್ಕರಣೆಯ ಸಂಪೂರ್ಣ ಪ್ರಕ್ರಿಯೆಯನ್ನು ನೋಡಿದಾಗ ಇದು ಎನ್ಆರ್ಸಿಯನ್ನು ಹಿಂಬಾಗಿಲಿನಿಂದ ಜಾರಿಗೆ ತರುವ ಯತ್ನ ಎಂಬುದು ಸ್ಪಷ್ಟ.

ಪತ್ರಕರ್ತೆ, 2019ರಿಂದ ಪತ್ರಿಕೋದ್ಯಮವೇ ಬದುಕು. ರಾಜಕೀಯ, ಬ್ಯುಜಿನೆಸ್ ಸುದ್ದಿಗಳಲ್ಲಿ ಆಸಕ್ತಿ.