ಕೈಗಾರಿಕೆಗಳನ್ನು ತಮ್ಮತ್ತ ಸೆಳೆಯುವ ಕಸರತ್ತನ್ನು ನೆರೆಯ ರಾಜ್ಯಗಳು ಮಾಡುತ್ತವೆ, ಕರ್ನಾಟಕವೂ ಮಾಡುತ್ತದೆ. ಆದರೆ ಅಂತಿಮವಾಗಿ ಉದ್ಯಮಿಗಳು ನೋಡುವುದು ತಮ್ಮ ಹಿತಾಸಕ್ತಿಗಳನ್ನಷ್ಟೇ.
ದೇವನಹಳ್ಳಿ ತಾಲ್ಲೂಕಿನ ಚನ್ನರಾಯಪಟ್ಟಣ ಹೋಬಳಿ ವ್ಯಾಪ್ತಿಯ 13 ಗ್ರಾಮಗಳ ಕೃಷಿ ಭೂಮಿಯನ್ನು ಕೈಗಾರಿಕಾ ಉದ್ದೇಶಗಳಿಗೆ ಸ್ವಾಧೀನ ಮಾಡಿಕೊಳ್ಳುವುದಿಲ್ಲ ಎಂದು ರಾಜ್ಯ ಸರ್ಕಾರ ಡಿನೋಟಿಫೈ ಮಾಡಿದೆ. ರೈತರ ಸುದೀರ್ಘ ಹೋರಾಟ ಅಂತಿಮವಾಗಿ ಗೆದ್ದಿದೆ. ಹೀಗಾಗಿ 1777 ಎಕರೆ ಭೂಮಿ ರೈತರ ಬಳಿಯೇ ಉಳಿದಿದೆ. ಆದರೆ ಸರ್ಕಾರ ತನ್ನ ಅಂತಿಮ ಆದೇಶವನ್ನು ರದ್ದುಗೊಳಿಸಿದ ಬಳಿಕ ಕೈಗಾರಿಕಾ ವಿಚಾರವು ಅಂತರರಾಜ್ಯಗಳ ನಡುವಿನ ಸ್ಫರ್ಧೆಯ ಸಂಗತಿಯಾಗಿ ಹೊಮ್ಮಿದೆ.
ದೇವನಹಳ್ಳಿ ತಾಲ್ಲೂಕಿನಲ್ಲಿ ಏರೋಸ್ಪೇಸ್ ಪಾರ್ಕ್ ನಿರ್ಮಾಣಕ್ಕೆ ಭೂಮಿ ದಕ್ಕದೇ ಹೋಯಿತು. ಸರ್ಕಾರದ ನಿರ್ಧಾರ ಜನಪರವಾಗಿತ್ತು. ಅತ್ತ ಡಿನೋಟಿಫಿಕೇಷ್ ಹೊರಬಿದ್ದ ಬೆನ್ನಲ್ಲೇ ಆಂಧ್ರಪ್ರದೇಶದ ಕೈಗಾರಿಕಾ ಸಚಿವ ನಾರಾ ಲೋಕೇಶ್ ಪ್ರತಿಕ್ರಿಯಿಸಿ, “ಆಂಧ್ರಪ್ರದೇಶದಲ್ಲಿ ಮುಖ್ಯವಾಗಿ ಕರ್ನಾಟಕ ಗಡಿ ಸಮೀಪದಲ್ಲಿ 8,000 ಎಕರೆ ಭೂಮಿಯನ್ನು ಏರೋಸ್ಪೇಸ್ ಕಂಪನಿಗಳಿಗೆ ನೀಡುತ್ತೇವೆ. ಕಂಪನಿಗಳು ಇಲ್ಲಿಗೆ ಬರಬಹುದು” ಎಂದು ಆಹ್ವಾನಿಸಿದ್ದಾರೆ.
ಟ್ವೀಟ್ ಮಾಡಿರುವ ಅವರು, “ಪ್ರಿಯ ಏರೋಸ್ಪೇಸ್ ಕಂಪನಿಗಳೇ, ಇದನ್ನು ಕೇಳಲು ವಿಷಾದವಾಗುತ್ತಿದೆ” ಎಂದು ಕರ್ನಾಟಕದ ನಿರ್ಧಾರಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಮುಂದುವರಿದು, “ನಿಮಗಾಗಿ ನನ್ನ ಬಳಿ ಉತ್ತಮ ಐಡಿಯಾ ಇದೆ. ಪರ್ಯಾಯವಾಗಿ ನೀವೇಕೆ ಆಂಧ್ರಪ್ರದೇಶದತ್ತ ನೋಡಬಾರದು? ಅತ್ಯುತ್ತಮ ಇನ್ಸೆಂಟಿವ್‌ಗಳೊಂದಿಗೆ 8,000 ಎಕರೆಗಿಂತ ಹೆಚ್ಚು ಅಭಿವೃದ್ಧಿಪಡಿಸಿದ ಭೂಮಿಯನ್ನು (ಬೆಂಗಳೂರಿನ ಹೊರಗೆ) ನಿಮಗೆ ನೀಡುವಂತಹ ಉತ್ತಮವಾದ ಏರೋಸ್ಪೇಸ್ ನೀತಿಯನ್ನು ನಾವು ಹೊಂದಿದ್ದೇವೆ. ನಿಮ್ಮನ್ನು ಶೀಘ್ರದಲ್ಲೇ ನೇರವಾಗಿ ಸಂಪರ್ಕಿಸಲು ಯತ್ನಿಸುತ್ತೇನೆ” ಎಂದು ತಿಳಿಸಿದ್ದಾರೆ.
ಫಲವತ್ತಾದ ಕೃಷಿ ಭೂಮಿಯನ್ನು ಬಿಟ್ಟುಕೊಡಲು ರೈತರು ಒಪ್ಪದಿದ್ದಾಗ, ಸರ್ಕಾರ ಹಿಂದೆ ಸರಿಯಬೇಕಾಗಿತ್ತು. ಬೆಂಗಳೂರು ಕೇಂದ್ರಿತ ಕೈಗಾರಿಕಾ ಅಭಿವೃದ್ಧಿ ಮಾದರಿಯ ಸುತ್ತ ಪ್ರಶ್ನೆಗಳು ಮುನ್ನೆಲೆಗೆ ಬಂದಿವೆ. ಆಂಧ್ರ ಪ್ರದೇಶ ಮತ್ತು ತಮಿಳುನಾಡು ಸರ್ಕಾರಗಳು ಕೂಡ ಬೆಂಗಳೂರು ಸಮೀಪದ ಜಾಗಗಳನ್ನೇ ಕೈಗಾರಿಕಾ ಉದ್ದೇಶಗಳಿಗೆ ಬಳಸುತ್ತಿದೆ. ಯಾಕೆಂದರೆ ಬೆಂಗಳೂರು ಎಂದಿಗೂ ಚಿನ್ನದ ಮೊಟ್ಟೆ ಇಡುವ ಕೋಳಿಯಾಗಿದೆ. ಗಡಿಯಲ್ಲಿ ಕೈಗಾರಿಕೆಗಳನ್ನು ಅಭಿವೃದ್ಧಿಪಡಿಸಿದರೆ ಬೆಂಗಳೂರಿನ ಅನುಕೂಲ ಆ ರಾಜ್ಯಗಳಿಗೆ ಆಗುತ್ತದೆ. ಅದರ ಭಾಗವಾಗಿಯೇ ಲೋಕೇಶ್ ಹೇಳಿಕೆಯೂ ಹೊರಬಿದ್ದಿದೆ.
ಲೋಕೇಶ್ ಅವರ ತಂದೆ, ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಅವರು ಈ ಹಿಂದೆ, “ಅನಂತಪುರ ಜಿಲ್ಲೆಯ ಲೇಪಾಕ್ಷಿ-ಮಡಕಸಿರಾ ಪ್ರದೇಶದಲ್ಲಿ 10,000 ಎಕರೆ ಭೂಮಿಯನ್ನು ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್‌ಎಎಲ್)ಗೆ ನೀಡುತ್ತೇವೆ” ಎಂದು ಹೇಳಿ ಸುದ್ದಿಯಾಗಿದ್ದರು. ಈ ಪ್ರದೇಶವು, ಬೆಂಗಳೂರು ವಿಮಾನ ನಿಲ್ದಾಣಕ್ಕೆ ಹತ್ತಿರದಲ್ಲಿದ್ದು, ಕೇವಲ ಒಂದು ಗಂಟೆ ಪ್ರಯಾಣವಷ್ಟೇ ಸಾಕಾಗುತ್ತದೆ.
ನಾಯ್ಡು ಅವರ ಹೇಳಿಕೆ ಹೊರಬಿದ್ದ ಬಳಿಕ ಕರ್ನಾಟಕದ ರಾಜಕಾರಣಿಗಳು ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದರು. ಎಚ್‌ಎಎಲ್ ಯೋಜನೆಗಳನ್ನು ರಾಜ್ಯದಿಂದ ಹೊರಗೆ ಸ್ಥಳಾಂತರಿಸುವ ಯಾವುದೇ ಸಲಹೆಯನ್ನು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಬಲವಾಗಿ ವಿರೋಧಿಸಿದರು.
“ಎಚ್‌ಎಎಲ್ ಕರ್ನಾಟಕದ ಹೆಮ್ಮೆ. ಅದನ್ನು ಬೇರೆಡೆಗೆ ಸ್ಥಳಾಂತರಿಸಲು ನಾವು ಅನುಮತಿಸುವುದಿಲ್ಲ” ಎಂದು ಶಿವಕುಮಾರ್ ಎಚ್ಚರಿಸಿದ್ದರು. “ತುಮಕೂರು ಮತ್ತು ಬೆಂಗಳೂರಿನಲ್ಲಿ ಎಚ್‌ಎಎಲ್‌ನ ಬೆಳವಣಿಗೆಗೆ ರಾಜ್ಯವು ಈಗಾಗಲೇ ಭೂಮಿಯನ್ನು ಮೀಸಲಿಟ್ಟಿದೆ” ಎಂದಿದ್ದರು. “ಎಚ್‌ಎಎಲ್‌ಗೆ ಹೆಚ್ಚಿನ ಸ್ಥಳಾವಕಾಶ ಬೇಕಾದರೆ, ನಾವು ಅದನ್ನು ಒದಗಿಸಲು ಸಿದ್ಧರಿದ್ದೇವೆ” ಎಂದು ಭರವಸೆ ನೀಡಿದ್ದರು.
ನಾರಾ ಹೇಳಿಕೆ ಹೊರಬಿದ್ದ ಬಳಿಕ ರಾಜ್ಯ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಪ್ರತಿಕ್ರಿಯಿಸಿದ್ದಾರೆ. “ಈ ಉದ್ಯಮಿಗಳಿಗೆ ಅವರು ಕೇಳಿದ ಕಡೆ ಜಮೀನು ಕೊಡಲಾಗುವುದು. ಆಂಧ್ರಪ್ರದೇಶದ ಸಚಿವ ನಾರಾ ಲೋಕೇಶ್ ಕರೆದಾಕ್ಷಣ ಯಾವ ಉದ್ಯಮಿಯೂ ಇಲ್ಲಿಂದ ಅಲ್ಲಿಗೆ ಹೋಗಿಬಿಡುವುದಿಲ್ಲ. ರಾಜ್ಯವು ವೈಮಾಂತರಿಕ್ಷ ವಲಯದಲ್ಲಿ ದೇಶದ ಶೇ.65ರಷ್ಟು ಪಾಲು ಹೊಂದಿದೆ. ಜಾಗತಿಕ ಮಟ್ಟದಲ್ಲಿ ನಮ್ಮದು ಮೂರನೇ ಅತ್ಯುತ್ತಮ ಕಾರ್ಯ ಪರಿಸರವಾಗಿದೆ. ಉದ್ಯಮಗಳಿಗೆ ಭೂಮಿ ಕೊಟ್ಟಮಾತ್ರಕ್ಕೆ ಅವು ಅಲ್ಲಿಗೆ ಹೋಗುವುದಿಲ್ಲ” ಎಂದು ಹೇಳಿದ್ದಾರೆ.
“ರಾಜ್ಯದ ಅನೇಕ ಕಡೆಗಳಲ್ಲಿ ಏರೋಸ್ಪೇಸ್ ಮಾತ್ರವಲ್ಲ, ಎಐ, ಡೀಪ್-ಟೆಕ್, ಐಟಿ ಹೀಗೆ ಎಲ್ಲಾ ತರಹದ ಉದ್ಯಮಗಳಿಗೂ ಭೂಮಿ ಇದೆ. ಒಬ್ಬೇ ಒಬ್ಬ ಉದ್ಯಮಿಯೂ ಕರ್ನಾಟಕದಿಂದ ಹೊರಹೋಗಲು ನಾನು ಬಿಡುವುದಿಲ್ಲ” ಎಂದು ಸವಾಲು ಸ್ವೀಕರಿಸಿದ್ದಾರೆ.
“ಏರೋಸ್ಪೇಸ್ ಉದ್ಯಮಿಗಳಿಗೆ ಬರೀ ಭೂಮಿಯಲ್ಲ, ಅದರ ಜತೆಗೆ ನೀರು, ವಿದ್ಯುತ್ ಎಲ್ಲವನ್ನೂ ಕೊಡುತ್ತೇವೆ. ರಾಜ್ಯದಲ್ಲಿ ಕೈಗಾರಿಕಾ ಪ್ರದೇಶಗಳಿಗೆ ನಮ್ಮ ಪಾಲಿನ ನೀರು ಬಳಸಿಕೊಳ್ಳಲು 3,600 ಕೋಟಿ ರೂಪಾಯಿ ವೆಚ್ಚದಲ್ಲಿ ಸಮಗ್ರ ಯೋಜನೆಯನ್ನೇ ರೂಪಿಸಲಾಗಿದೆ” ಎಂದು ಪ್ರತಿಕ್ರಿಯಿಸಿದ್ದಾರೆ.
ಕೈಗಾರಿಕೆಗಳನ್ನು ನೆರೆಯ ರಾಜ್ಯಗಳು ಸೆಳೆಯಲು ಯತ್ನಿಸುತ್ತಿರುವುದು ಇದೇ ಮೊದಲೇನೂ ಅಲ್ಲ. ಕೇರಳ, ಮಹಾರಾಷ್ಟ್ರಕ್ಕಿಂತ ಹೆಚ್ಚಿನ ಸವಾಲನ್ನು ನೆರೆಯ ತೆಲಂಗಾಣ, ಆಂಧ್ರಪ್ರದೇಶ ಮತ್ತು ತಮಿಳುನಾಡು ರಾಜ್ಯಗಳು ನೀಡುತ್ತಿರುವುದು ನಿಜ. ಅದರಲ್ಲೂ ಆಂಧ್ರಪ್ರದೇಶದಲ್ಲಿ ಮುಖ್ಯಮಂತ್ರಿಯಾಗಿರುವ ಚಂದ್ರಬಾಬು ನಾಯ್ಡು ಅವರು ಒಂದು ಕಾಲದಲ್ಲಿ ತನ್ನನ್ನು ‘ನಾನು ಆಂಧ್ರಪ್ರದೇಶದ ಸಿಇಒ’ ಎಂದು ಕರೆದುಕೊಂಡವರು. ಹೂಡಿಕೆಗಳನ್ನು ತನ್ನತ್ತ ಎಳೆದುಕೊಳ್ಳುವಲ್ಲಿ ನಾಯ್ಡು ನಿಸ್ಸೀಮರು. ಗಡಿಯ ಭಾಗದಲ್ಲಿ ಬರುವ ಮಡಕಶಿರಾದಿಂದ ಹಿಡಿದು, ಪೆನಗೊಂಡವರೆಗೂ ಕೈಗಾರಿಕಾ ಪ್ರದೇಶ ವೃದ್ಧಿಗೆ ಆಂಧ್ರ ಸರ್ಕಾರ ಹೊರಟಿದ್ದೇ ಈ ಕಾರಣಕ್ಕೆ. ಇವೆಲ್ಲವೂ ಬೆಂಗಳೂರನ್ನು ದೃಷ್ಟಿಯಲ್ಲಿಟ್ಟುಕೊಂಡೇ ಮಾಡಿರುವ ಕೈಗಾರಿಕಾ ಯೋಜನೆಗಳಾಗಿವೆ. ಯಾಕೆಂದರೆ ತೆಲಂಗಾಣ ರಚನೆಯಾದ ಮೇಲೆ ಹೈದ್ರಾಬಾದ್ ಆಂಧ್ರದಿಂದ ಕೈತಪ್ಪಿತು. ಹೊಸ ರಾಜಧಾನಿ ಅಮರಾವತಿ ಈಗಷ್ಟೇ ಬೆಳೆಯುತ್ತಿರುವ ಶಿಶು. ಹೀಗಾಗಿ ಬೆಂಗಳೂರು ಗಡಿಗೆ ಹೊಂದಿಕೊಂಡ ಆಂಧ್ರ ಭಾಗಗಳಲ್ಲಿ ಕೈಗಾರಿಕೆಗಳು ತಲೆ ಎತ್ತಿದರೆ ಆ ರಾಜ್ಯಗಳಿಗೆ ಹೆಚ್ಚಿನ ಅನುಕೂಲವಾಗುತ್ತದೆ ಎಂಬುದು ಅವರ ಆಲೋಚನೆ. ಇತ್ತ ಬೆಂಗಳೂರು ಗಡಿಗೆ ಹೊಂದಿಕೊಂಡಂತೆ ತಮಿಳಿನಾಡಿನ ಹೊಸೂರು ಕೈಗಾರಿಕಾ ಪ್ರದೇಶವಿದೆ. ಈ ಭಾಗವು ತೀವ್ರಗತಿಯಲ್ಲಿ ಪ್ರಗತಿ ಸಾಧಿಸುತ್ತಿದ್ದು ವಿಮಾನ ನಿಲ್ದಾಣ ಅಭಿವೃದ್ಧಿಗೂ ಸ್ಟಾಲಿನ್ ನೇತೃತ್ವದ ಸರ್ಕಾರ ಯೋಜನೆಗಳನ್ನು ಹಾಕಿಕೊಂಡಿದೆ.
ನೆರೆಯ ರಾಜ್ಯದ ಸ್ಪರ್ಧೆಗಳನ್ನು ನೋಡಿಯೇ ರಾಜ್ಯ ಸರ್ಕಾರವು ದೇವನಹಳ್ಳಿಯ ರೈತರ ಭೂಮಿಯ ಮೇಲೆ ಕಣ್ಣು ಹಾಯಿಸಿತ್ತು. ಆದರೆ ಭೂಮಿಯನ್ನು ಕೊಡದಿರಲು ರೈತರು ನಿರ್ಧರಿಸಿರುವಾಗ ಸರ್ಕಾರ ಒತ್ತಾಯ ಮಾಡುವುದು ಪ್ರಜಾತಂತ್ರಕ್ಕೆ ವಿರೋಧಿ ನಡೆಯಾಗುತ್ತಿತ್ತು. ಇಂತಹ ಸನ್ನಿವೇಶದಲ್ಲಿ ಕೈಗಾರಿಕಾ ಅಭಿವೃದ್ಧಿಯ ಹೊಸ ಸಾಧ್ಯತೆಗಳನ್ನು ಸರ್ಕಾರ ಚಿಂತಿಸಬೇಕೆಂಬುದು ಅನೇಕ ತಜ್ಞರ ಅಭಿಪ್ರಾಯ.
ಇದನ್ನೂ ಓದಿರಿ: ಅಡಕತ್ತರಿಯಲ್ಲಿದ್ದ ಸಿದ್ದರಾಮಯ್ಯ ಕೊಟ್ಟ ಮಾತು ಉಳಿಸಿಕೊಂಡಿದ್ದು ಹೇಗೆ?
ಬೆಂಗಳೂರು ಮಾತ್ರವಷ್ಟೇ ಅಲ್ಲ, ರಾಜ್ಯದ ವಿವಿಧೆಡೆಯೂ ಕೈಗಾರಿಕೆಗಳನ್ನು ಅಭಿವೃದ್ಧಿಪಡಿಸಬಹುದು. ತಮಿಳುನಾಡು ರಾಜ್ಯವು ಎಂದಿಗೂ ಕೇವಲ ಚನ್ನೈ ಕೇಂದ್ರಿತವಾಗಿ ಕೈಗಾರಿಕೆಗಳನ್ನು ತೆರೆಯಲಿಲ್ಲ. ಆ ಮಾದರಿಯನ್ನು ಕರ್ನಾಟಕವೂ ಅನುಸರಿಸಬಹುದು. ಇಚ್ಛಾಶಕ್ತಿ ಇದ್ದರೆ ರಾಜ್ಯದ ಹುಬ್ಬಳ್ಳಿ- ಧಾರವಾಡ, ಕಲಬುರುಗಿ ಸೇರಿದಂತೆ ವಿವಿಧ ಜಿಲ್ಲೆಗಳಲ್ಲೂ ಕೈಗಾರಿಕಾ ಪ್ರದೇಶಗಳನ್ನು ಅಭಿವೃದ್ಧಿಪಡಿಸಬಹುದೆಂಬ ಅಭಿಪ್ರಾಯಗಳನ್ನು ವಿಷಯ ತಜ್ಞರು ವ್ಯಕ್ತಪಡಿಸುತ್ತಾರೆ. ಆಂಧ್ರಪ್ರದೇಶ ತನ್ನತ್ತ ಕೈಗಾರಿಕೆಗಳನ್ನು ಸೆಳೆಯುವ ತಂತ್ರ ಮಾಡಿದರೂ, ಅದು ಕೂಡ ಬೆಂಗಳೂರಿನ ಸಮೀಪದ ಪ್ರದೇಶಗಳನ್ನೇ ಆದ್ಯತೆಯಾಗಿ ನೋಡುತ್ತಿರುವ ಉದ್ದೇಶ ಸ್ಪಷ್ಟವಾಗಿದೆ.
‘ಈದಿನ’ಕ್ಕೆ ಪ್ರತಿಕ್ರಿಯಿಸಿದ ಮೈಸೂರು ಜಿಲ್ಲಾ ಸಣ್ಣ ಕೈಗಾರಿಕೆಗಳ ಸಂಘದ ಕಾರ್ಯದರ್ಶಿ ಸುರೇಶ್ ಜೈನ್, “ಕರ್ನಾಟಕದಲ್ಲಿ ಕೈಗಾರಿಕಾ ಪ್ರದೇಶ ಅಭಿವೃದ್ಧಿಗೆ ಬೆಂಗಳೂರು ಹೊರತುಪಡಿಸಿಯೂ ಹಲವು ಜಿಲ್ಲೆಗಳಲ್ಲಿ ಉತ್ತಮ ಭೂಮಿ ಇದೆ. ಉದ್ಯಮಿಗಳನ್ನು ಯಾವ ರಾಜ್ಯಗಳು ಬೇಕಾದರೂ ಆಹ್ವಾನಿಸುತ್ತವೆ. ಇತ್ತೀಚೆಗೆ ಉತ್ತರ ಪ್ರದೇಶದವರು ಬೆಂಗಳೂರಿಗೆ ಬಂದು ಉದ್ಯಮಿಗಳ ಸಭೆಯೊಂದನ್ನು ಮಾಡಿದ್ದರು. ಉತ್ತರ ಪ್ರದೇಶಕ್ಕೆ ಬರಬೇಕೆಂದು ಆಹ್ವಾನಿಸಿದರು. ನಾನು ಕೂಡ ಸಭೆಗೆ ಹೋಗಿದ್ದೆ. ಕರೆಯುವವರು ಕರೆಯುತ್ತಾರೆ. ಆದರೆ ಅಂತಿಮವಾಗಿ ಮೂಲಸೌಕರ್ಯಗಳನ್ನಷ್ಟೇ ಉದ್ಯಮಿಗಳು ನೋಡುತ್ತಾರೆ. ಆಂಧ್ರದವರು ಹೇಳಿದ ತಕ್ಷಣ ಕರ್ನಾಟಕದಿಂದ ಕೈಗಾರಿಕೆಗಳು ಹರಿದು ಹೋಗುವುದಿಲ್ಲ” ಎಂದರು.
ಕೈಗಾರಿಕೆಗಳನ್ನು ತಮ್ಮತ್ತ ಸೆಳೆಯುವ ಕೆಲಸವನ್ನು ನೆರೆಯ ರಾಜ್ಯಗಳು ಮಾಡುತ್ತವೆ, ಕರ್ನಾಟಕವೂ ಮಾಡುತ್ತದೆ. ಆದರೆ ಅಂತಿಮವಾಗಿ ಉದ್ಯಮಿಗಳು ನೋಡುವುದು ತಮ್ಮ ಹಿತಾಸಕ್ತಿಗಳನ್ನಷ್ಟೇ.
