ಸಾರ್ವಜನಿಕರ ತೆರಿಗೆ ಹಣದಲ್ಲಿ ರಾಜಕಾರಣಿಗಳ ಪಬ್ಲಿಸಿಟಿ; ಕೋರ್ಟ್‌ ಆದೇಶಕ್ಕೂ ಡೋಂಟ್‌ ಕೇರ್!

Date:

Advertisements

ಪ್ರಜಾಪ್ರಭುತ್ವವನ್ನು ಕಾಪಾಡುವುದು ಕೇವಲ ನ್ಯಾಯಾಲಯಗಳ ಹೊಣೆ ಅಲ್ಲ. ನ್ಯಾಯಾಲಯಗಳ ತೀರ್ಪುಗಳನ್ನು ನಿಷ್ಠೆಯಿಂದ ಜಾರಿಗೆ ತರಬೇಕಾದ ಹೊಣೆಗಾರಿಕೆ ಸರ್ಕಾರದ ವಿವಿಧ ಶ್ರೇಣಿಯ ಅಧಿಕಾರಿಗಳದು, ಸಾರ್ವಜನಿಕರದು. ಆದರೆ ದುರಂತವೆಂದರೆ, ಸರ್ವೋಚ್ಚ ನ್ಯಾಯಾಲಯ ಸುಮಾರು ದಶಕದ ಹಿಂದೆ ನೀಡಿದ ನಿರ್ದಿಷ್ಟ ಆದೇಶವನ್ನೂ ಉಲ್ಲಂಘಿಸುವ ಕೃತ್ಯಗಳು ಇಂದಿಗೂ ನಡೆಯುತ್ತಿವೆ.

“ಸಾರ್ವಜನಿಕ ಹಣವನ್ನು ರಾಜಕೀಯ ಪ್ರಚಾರಕ್ಕಾಗಿ ಬಳಸಬಾರದು” ಎಂಬ ಸುಪ್ರೀಂ ಕೋರ್ಟ್ ಆದೇಶ ಹಾಗೂ ಅದರ ಅನುಸಾರವಾಗಿ 2021ರಲ್ಲಿ ಕರ್ನಾಟಕ ಹೈಕೋರ್ಟ್ ನೀಡಿದ ದೃಢ ಸೂಚನೆಗಳು, ಇಂದಿಗೂ ಹಲವಾರು ಜಿಲ್ಲೆಗಳಲ್ಲಿ ಕೇವಲ ಕಾಗದದ ಮೇಲೆಯೇ ಉಳಿದಿವೆ. ಶಿವಮೊಗ್ಗ ಜಿಲ್ಲೆ ಇದಕ್ಕೆ ಸ್ಪಷ್ಟ ಸಾಕ್ಷಿ. ಇಲ್ಲಿನ ಬಸ್ ನಿಲ್ದಾಣ, ಶುದ್ಧ ಕುಡಿಯುವ ನೀರಿನ ಘಟಕ, ಸಮುದಾಯ ಭವನ, ಆಟೋ ನಿಲ್ದಾಣ ಮುಂತಾದ ಸಾರ್ವಜನಿಕ ಸ್ಥಳಗಳಲ್ಲಿ ಶಾಸಕರ ಹೆಸರುಗಳು ಮತ್ತು ಫೋಟೋಗಳಿರುವ ಫಲಕಗಳು ರಾರಾಜಿಸುತ್ತಿವೆ.

1001915414

ಸರ್ವೋಚ್ಚ ನ್ಯಾಯಾಲಯವು, ಸಾರ್ವಜನಿಕ ಹಣದಿಂದ ನಿರ್ಮಾಣವಾಗುವ ಯೋಜನೆಗಳಲ್ಲಿ ಶಾಸಕರು, ಸಂಸದರು ಅಥವಾ ರಾಜಕಾರಣಿಗಳ ಹೆಸರು ಅಥವಾ ಫೋಟೋ ಬಳಸಬಾರದು ಎಂದು ತೀರ್ಪು ನೀಡಿತ್ತು. ನಂತರ ಕರ್ನಾಟಕ ಹೈಕೋರ್ಟ್ ಕೂಡ ಇದೇ ಆದೇಶವನ್ನು ಜಾರಿಗೆ ತರುವಂತೆ ಸರ್ಕಾರಕ್ಕೆ ಸೂಚನೆ ನೀಡಿತ್ತು. ಇದಕ್ಕೆ ಅನುಸಾರವಾಗಿ, ಬಸ್ ನಿಲ್ದಾಣ, ಕುಡಿಯುವ ನೀರಿನ ಘಟಕ, ಸಮುದಾಯ ಭವನ ಹೀಗೆ ಯಾವುದೇ ಸಾರ್ವಜನಿಕ ಸ್ಥಳಗಳಲ್ಲಿ ರಾಜಕೀಯ ನಾಯಕರ ಹೆಸರು ಬೋರ್ಡ್‌ನಲ್ಲಿ ಇರುವುದು ತಪ್ಪು. ಇದು ಗೊತ್ತಿದ್ದರೂ ಶಿವಮೊಗ್ಗ ಜಿಲ್ಲೆಯ ಬಹುತೇಕ ಸಾರ್ವಜನಿಕ ಸ್ಥಳಗಳಲ್ಲಿ ರಾಜಕಾರಣಿಗಳು ಬಿಟ್ಟಿ ಪ್ರಚಾರ ಗಿಟ್ಟಿಸಿಕೊಳ್ಳುತ್ತಿದ್ದಾರೆ. ಈ ಮೂಲಕ ಸಾರ್ವಜನಿಕರ ತೆರಿಗೆ ಹಣವನ್ನು ತಮ್ಮ ಅನುಕೂಲಕ್ಕೆ ಬಳಸಿಕೊಳ್ಳುತ್ತಿದ್ದಾರೆ ಎಂದು ಸ್ಥಳೀಯರು, ಜನಪರ ಸಂಘಟನೆಗಳು ಆರೋಪಿಸುತ್ತಿವೆ.

1001915434

ಈ ಸಂಬಂಧ ಈದಿನ ಡಾಟ್ ಕಾಮ್ನೊಂದಿಗೆ ಕೆ ಆರ್ ಎಸ್ ಪಕ್ಷದ ಮುಖಂಡ ಮಂಜುನಾಥ್ ಮಾತನಾಡಿ, “ನಾವು ಇದರ ಕುರಿತು ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ್ದೇವೆ ಹಾಗೂ ನಿರ್ಮಿತಿ ಕೇಂದ್ರದ ಗಮನಕ್ಕೂ ತಂದಿದ್ದೇವೆ. ನ್ಯಾಯಾಲಯದ ಆದೇಶದ ಬಳಿಕವೂ ಅದೇ ತಪ್ಪನ್ನು ಮರುಕಳಿಸುತ್ತಿದ್ದೀರಿ ಎಂದು ಪ್ರಶ್ನೆ ಮಾಡಿದ್ದಕ್ಕೆ, ʼಇದೆಲ್ಲ ಸ್ಥಳೀಯ ಆಡಳಿತಕ್ಕೆ ಬಿಟ್ಟ ವಿಚಾರ. ಅವರನ್ನ ಕೇಳಿ ಇವರನ್ನ ಕೇಳಿʼ ಎಂದು ಕುಂಟು ಸಬೂಬು ಹೇಳುತ್ತಾರೆ” ಎಂದರು.

ಈ ಹಿಂದೆ ಶಿವಮೊಗ್ಗ ಜಿಲ್ಲಾಧಿಕಾರಿಕಾರಿಯಾಗಿದ್ದ ಸೆಲ್ವಮಣಿ ಅವರಿಗೂ ಈ ಸಂಬಂಧ ದೂರು ನೀಡಲಾಗಿತ್ತು. ʼನೀವು ಪ್ರಾಧಿಕಾರಕ್ಕೆ ದೂರು ನೀಡಿ, ಅವರು ಬಗೆಹರಿಸಲಿಲ್ಲವಾದಲ್ಲಿ ನಾವು ಅವರ ಮೇಲೆ ಕ್ರಮ ಜರುಗಿಸುತ್ತೇವೆʼ ಎಂದು ತಿಳಿಸಿದ್ದರು. ಪ್ರತಿ ಚುನಾವಣೆಯಲ್ಲಿಯೂ ರಾಜಕಾರಣಿ, ರಾಜಕೀಯ ಪಕ್ಷದ ಮುಖವನ್ನು ಜಿಲ್ಲಾಡಳಿತ ಮರೆಮಾಚುವ ಕೆಲಸ ಮಾಡಬೇಕಾಗಿದೆ. ಇಷ್ಟು ಕಾಲ ಕಳೆದರೂ ಯಾವುದೇ ಕ್ರಮ ಜರುಗಿಸಿಲ್ಲ. ಬೋರ್ಡ್‌ಗಳನ್ನ ತೆರವುಗೊಳಿಸಿಲ್ಲ” ಎಂದು ಆರೋಪಿಸಿದರು.

1001915433

ನಗರದ ಸ್ಮಾರ್ಟ್ ಸಿಟಿ ಕಾಮಗಾರಿಗಳ ನಡುವೆ, ಕೆಲವು ಭಾಗಗಳಲ್ಲಿ ಯಾವುದೇ ರಾಜಕಾರಣಿಗಳ ಹೆಸರೂ, ಫೋಟೋಗಳೂ ಇಲ್ಲದಿರುವುದು ಒಂದು ಮಟ್ಟಿಗೆ ಸಂತೋಷದ ಸಂಗತಿಯಷ್ಟೆ. ಆದರೆ, ಕೆಲ ಪ್ರಮುಖ ಸ್ಥಳಗಳಲ್ಲಿ ನ್ಯಾಯಾಂಗದ ತೀರ್ಪುಗಳನ್ನು ಲೆಕ್ಕಿಸದೆ ರಾಜಕಾರಣಿಗಳ ಚಿತ್ರಗಳು ಮಿಂಚುತ್ತಿರುವುದು ವಿಷಾದ.

2011–2012ರಲ್ಲಿ ದಾವಣಗೆರೆಯ ಆಟದ ಮೈದಾನಕ್ಕೆ ಬದುಕಿರುವ ರಾಜಕಾರಣಿಯ ಹೆಸರು ಇಡಲಾಗಿತ್ತು. ಹೈಕೋರ್ಟ್ ತಕ್ಷಣ ದೂರು ದಾಖಲಿಸಿಕೊಂಡು “ಬದುಕಿರುವ ವ್ಯಕ್ತಿಗೆ ಸಾರ್ವಜನಿಕ ಕಟ್ಟಡದ ಹೆಸರು ಇಡಬಾರದು” ಎಂದು ತೀರ್ಪು ನೀಡಿತ್ತು. ಆದರೂ ಸಹ, 2019ರಲ್ಲಿ ಶಿಕಾರಿಪುರ ಬಸ್ ನಿಲ್ದಾಣಕ್ಕೆ ಯಡಿಯೂರಪ್ಪನವರ ಹೆಸರು ಇಡಲಾಗಿದೆ. ನ್ಯಾಯಾಲಯದ ತೀರ್ಪನ್ನೇ ಪೂರ್ಣವಾಗಿ ನಿರ್ಲಕ್ಷ್ಯ ಮಾಡುವ ರೀತಿಯಲ್ಲಿ.

ನಾವು ಕಾನೂನನ್ನು ಬದಿಗೊತ್ತಿ ವ್ಯಕ್ತಿಪೂಜೆಯನ್ನು, ಪಕ್ಷಪಾತವನ್ನು, ಜನರ ಹಣದ ಮೌಲ್ಯವನ್ನು ಹಾಳು ಮಾಡುತ್ತಿದ್ದೇವೆ. ಪ್ರಜಾಪ್ರಭುತ್ವದಲ್ಲಿ ನೆಲೆಗೊಳ್ಳಬೇಕಾದ ನೈತಿಕ ರಾಜಕೀಯ ನಿರೀಕ್ಷೆಗಳೆಲ್ಲ ರಾಜಕೀಯ ನಾಮಫಲಕಗಳ ಕೆಳಗೆ ಮಲಗುತ್ತಿವೆ ಎಂಬುದು ಇದರ ಮೂಲಕ ಸ್ಪಷ್ಟವಾಗುತ್ತದೆ.

1001915432

ನಿಯಮಗಳು ಇದ್ದರೂ, ನ್ಯಾಯಾಲಯದ ಆದೇಶಗಳಿದ್ದರೂ, ಉಲ್ಲಂಘನೆಗಳು ದಿನದಿಂದ ದಿನಕ್ಕೆ ನೆಲೆಗೊಳ್ಳುತ್ತಲೇ ಇವೆ. ಇಷ್ಟಾದರೂ ಅಧಿಕಾರಿಗಳು ಗಂಭೀರ ಕ್ರಮ ಕೈಗೊಳ್ಳುವುದಿಲ್ಲ. ಜನರ ತೆರಿಗೆ ಹಣವನ್ನು ವ್ಯಕ್ತಿಪೂಜೆಗೆ ಬಳಸುವಂತಿರುವ ಈ ಪರಿಪಾಠವನ್ನು ತಡೆಯುವ ಜವಾಬ್ದಾರಿ ಇವರ ಮೇಲೇ ಇರುವಾಗ, ಅಧಿಕಾರಿಗಳು ರಾಜಕಾರಣಿಗಳ ಭಯದಿಂದ ಬಾಯಿ ತೆಗೆಯದಂತಾಗಿರುವುದು ನಿಜಕ್ಕೂ ಖೇದಕರ.

ಸರ್ಕಾರ ಮತ್ತು ಆಡಳಿತ ಯಂತ್ರಗಳು ರಾಜಕಾರಣಿಗಳ ಆಮಿಷಕ್ಕೆ ಅಥವಾ ಭಯಕ್ಕೆ ಒಳಗಾಗದೆ, ನ್ಯಾಯಮೂರ್ತಿಗಳ ಮಾತಿಗೆ ಕಿವಿಗೊಡಬೇಕಾದ ಸಮಯ ಬಹುಕಾಲದ ಹಿಂದೆಯೇ ಬಂದಿದೆ.

1001915444

ಭಾರತ ಪ್ರಜಾಪ್ರಭುತ್ವದ ರಾಷ್ಟ್ರ. ಇಲ್ಲಿ ಆಡಳಿತವೂ, ಅಭಿವೃದ್ಧಿಯೂ, ಯೋಜನೆಗಳು ಎಲ್ಲವೂ ಜನರ ತೆರಿಗೆ ಹಣದಿಂದ ಸಾಗುತ್ತವೆ. ಈ ದೇಶ ಯಾವುದೇ ಉಗಾಂಡಾ, ನಾರ್ತ್ ಕೊರಿಯಾ ಅಥವಾ ತಾಲಿಬಾನ್ ಅಲ್ಲ. ಇಲ್ಲಿ ಪ್ರಜೆಯ ಹಿತವೇ ಮೊದಲು.

ಇಂದು ಜನರ ಸೇವೆಗೆ ಮೀಸಲಾದ ಯೋಜನೆಗಳಲ್ಲಿ ನಾಯಕರ ಹೆಸರನ್ನು ಹಾಕಿ, ಮುಖವನ್ನು ಮಿಂಚಿಸಿ, ರಾಜಕೀಯ ಪ್ರಚಾರದ ಸಾಧನಗಳಾಗಿ ಸಾರ್ವಜನಿಕ ಸೌಲಭ್ಯಗಳನ್ನು ಬಳಸುತ್ತಿರುವುದು ಶೋಷಣೆಯಂತೆ ಕಾಣುತ್ತದೆ. ಹಾಗೆ ನೋಡಿದರೆ, ಪ್ರಧಾನ ಮಂತ್ರಿಗಳು, ಹಾಲಿ ಮುಖ್ಯಮಂತ್ರಿಗಳು ಹಾಗೂ ಚೀಫ್ ಜಸ್ಟಿಸ್‌ರ ಹೆಸರು ಅಥವಾ ಫೋಟೋಗಳನ್ನು ಬಳಸುವ ಬಗ್ಗೆ ಸರ್ವೋಚ್ಚ ನ್ಯಾಯಾಲಯವು ಒಂದು ಸ್ಪಷ್ಟ ನಿಯಮ ನೀಡಿದೆ. ಅದು ಏನೆಂದರೆ: “ಅವರು ಬದುಕಿರುವವರು ಎಂದೆಂದಿಗೂ ಫಲಕಗಳಲ್ಲಿ ಮಿಂಚಬಾರದು ಎನ್ನುವುದಲ್ಲ. ಅವರು ಸರಕಾರದ ಅಧಿಕೃತ ಕಾರ್ಯಕ್ರಮಗಳಲ್ಲಿ, ಸಾರ್ವಜನಿಕರಿಗೆ ತಲುಪಬೇಕಾದ ನಿರ್ದಿಷ್ಟ ಯೋಜನೆಗಳ ಜಾಹಿರಾತುಗಳಲ್ಲಿ ಮಾತ್ರ ಬಳಸಬಹುದಾಗಿದೆ. – ಅದು ಸಹ ನಿಯಮಬದ್ಧವಾಗಿ, ಮಿತಿಯಲ್ಲಿ.”

ಇದೇ ರೀತಿ ಚುನಾವಣೆ ಸಮಯದಲ್ಲಿ ಆಯೋಗವು ನೀತಿ ಸಂಹಿತೆ ಜಾರಿ ಮಾಡುತ್ತದೆ. ಅದು ಜಾರಿಯಾದ ಬಳಿಕ ನಿಯಮಗಳನ್ವಯ ಒಂದು ಪಕ್ಷವನ್ನು ಪ್ರತಿನಿಧಿಸುವ, ಒಬ್ಬ ರಾಜಕೀಯ ನಾಯಕನನ್ನು ಅಥವಾ ಚುನಾವಣೆಗೆ ಸ್ಪರ್ಧಿಸಿರುವ ವ್ಯಕ್ತಿಯನ್ನು ವಿಜೃಂಭಿಸುವಂತಹ ಪೋಸ್ಟರ್‌ಗಳು, ಬ್ಯಾನರ್‌ಗಳನ್ನು ಸಾರ್ವಜನಿಕರವಾಗಿ ಪ್ರದರ್ಶಿಸುವಂತಿಲ್ಲ. ಆದರೆ, ಶಿವಮೊಗ್ಗದ ಬಹು ಭಾಗಗಳಲ್ಲಿ ಕುಡಿಯುವ ನೀರಿನ ಘಟಕ, ರಸ್ತೆ ವಿಭಜಕ, ಮಾರುಕಟ್ಟೆ, ಬಸ್‌ ನಿಲ್ದಾಣ… ಹೀಗೆ ಎಲ್ಲಾ ಕಡೆಗಳಲ್ಲಿಯೂ ತಮ್ಮ ತಮ್ಮ ಫೋಟೋ ಅಂಟಿಸಿಕೊಂಡಿದ್ದಾರೆ. ಚುನಾವಣೆ ಸಮಯದಲ್ಲಿ ಇವುಗಳನ್ನು ತೆರವುಗೊಳಿಸುವುದೇ ಜಿಲ್ಲಾಡಳಿತದ ದೊಡ್ಡ ಸವಾಲು. ಇಷ್ಟು ಸವಾಲುಗಳಿದ್ದರೂ ನಿಯಮಗಳಿಗೆ ಡೋಂಟ್‌ ಕೇರ್‌ ಎನ್ನುತ್ತಾ ತಮ್ಮ ಬೇಳೆ ಬೇಯಿಸಿಕೊಳ್ಳುವ ರಾಜಕಾರಣಿಗಳಿಗೆ ಕಾನೂನಿನ ಮೇಲೆ ಗೌರವ ಇಲ್ಲ ಎಂಬುದು ಸ್ಪಷ್ಟವಾಗಿ ಗೋಚರಿಸುತ್ತದೆ.

1001915453

ಪ್ರತಿ ಶಾಸಕರಿಗೆ ಸ್ಥಳೀಯ ಅಭಿವೃದ್ಧಿ ಅನುದಾನದಡಿ 2 ಕೋಟಿ ರೂಪಾಯಿ ಹಾಗೂ ಪ್ರತಿ ಜಿಲ್ಲೆಯ ಎಂಪಿಗೆ 5 ಕೋಟಿ ರೂಪಾಯಿ ಅನುದಾನ ಬಿಡುಗಡೆಯಾಗುತ್ತದೆ. ಇದು ಸಾರ್ವಜನಿಕರ ತೆರಿಗೆ ಹಣ. ಏನೇನು ಅಭಿವೃದ್ಧಿ ಕಾರ್ಯಕ್ರಮ ಕೈಗೊಳ್ಳಬೇಕು ಎಂಬುದನ್ನೂ ಸಂಬಂಧಪಟ್ಟ ಜಿಲ್ಲಾಧಿಕಾರಿಗಳ ಗಮನಕ್ಕೂ ತಂದು ಮುಂದುವರೆಯಲಾಗುತ್ತದೆ. ಹಾಗಾಗಿ ʼಸ್ಥಳೀಯ ಶಾಸಕರ ಅನುದಾನದಲ್ಲಿ ನಿರ್ಮಿಸಲಾಗಿದೆʼ ಎಂದು ಬೋರ್ಡ್ ಹಾಕಬಹುದೇ ವಿನಃ ಅವರ ಹೆಸರು, ಫೋಟೋ ಹಾಕಿ ರಾಜಕೀಯ ಪ್ರಚಾರಕ್ಕೆ ಬಳಸಿಕೊಳ್ಳಿವಂತಿಲ್ಲ.

ಈ ಸಂಬಂಧ ಸಾಮಾಜಿಕ ಹೋರಾಟಗಾರ ಎಚ್ ಎಂ ವೆಂಕಟೇಶ್ ಅವರೂ ಸಹ ಬಹಳ ವರ್ಷಗಳ ಹಿಂದೆಯೇ ನ್ಯಾಯಾಲಯದ ಗಮನಕ್ಕೆ ತಂದಿದ್ದಾರೆ. ಆದರೆ ಇಲ್ಲಿವರೆಗೂ ಯಾವುದೇ ಕ್ರಮ ಆಗಿಲ್ಲ.

1001915452

ಈ ಸಂಬಂಧ ಶಿವಮೊಗ್ಗ ಜಿಲ್ಲಾಧಿಕಾರಿ ಗುರುದತ್ ಹೆಗ್ಗಡೆ ಈದಿನ ಡಾಟ್ ಕಾಮ್ ಗೆ ಪ್ರತಿಕ್ರಿಯಿಸಿ ಈ ಸಂಬಂಧ ಪರಿಶೀಲನೆ ಮಾಡಿ ತಿಳಿಸುತ್ತೇನೆ ಎಂದಿದ್ದಾರೆ.

ಒಟ್ಟಾರೆಯಾಗಿ ನ್ಯಾಯಾಲಯ ಆದೇಶ ಪಾಲನೆ ಆಗುತ್ತಿಲ್ಲ.ಕಾನೂನು ಉಲ್ಲಂಘನೆ ನ್ಯಾಯಾಲಯ ಆದೇಶ ಉಲ್ಲಂಘನೆ.ಹಾಗೂ ಅಧಿಕಾರಿಗಳು ರಾಜಕಾರಣಿಗಳ ಭಯ ಒತ್ತಡ ಹಾಗೂ ಸಾರ್ವಜನಿಕರ ತೆರಿಗೆ ದುಡ್ಡಲ್ಲಿ ರಾಜಕಾರಣಿಗಳ ವಿಜೃಂಭಣೆ ಆಗುತ್ತಿದೆಯಷ್ಟೆ.

ಇದನ್ನೂ ಓದಿ: ಶಿವಮೊಗ್ಗ | ಜುಲೈ 19ರಿಂದ ಮೂರು ದಿನ ಸಮನ್ವಯ ಸಂಗಮ

ಇನ್ನೂ ತಡವಾಗುವುದಕ್ಕೂ ಮೊದಲು, ಸರ್ಕಾರ ಹಾಗೂ ಅಧಿಕಾರಿಗಳು ತಮ್ಮ ಕರ್ತವ್ಯದ ಬಗೆಗೆ ಎಚ್ಚೆತ್ತುಕೊಂಡು, ನ್ಯಾಯಾಲಯದ ಆದೇಶಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರಬೇಕು. ಇಲ್ಲದಿದ್ದರೆ, ಕಾನೂನುಗಳು ಕೇವಲ ಪುಸ್ತಕಗಳಲ್ಲಿ ಉಳಿದು, ಬೀದಿಗಳ ಮೇಲೆ ರಾಜಕೀಯ ಮುಖವಾಡಗಳು ಮಾತ್ರ ಮಿಂಚುತ್ತಾ ಹೋಗುತ್ತವೆ. ಮುಂದುವರೆದು, ಈ ರೀತಿ ನ್ಯಾಯಾಲಯದ ಆದೇಶ ಉಲ್ಲಂಘಿಸಿ ಫೋಟೋಗಳಿಗೆ, ಬ್ಯಾನರ್‌ಗಳಿಗೆ ಪೋಸ್‌ ಕೊಡುವವರನ್ನು ಶಿಕ್ಷೆಗೊಳಪಡಿಸಬೇಕು. ಇಂತವನ್ನು ನೋಡಿಯೂ ಕ್ರಮಕೈಗೊಳ್ಳದ ಅಧಿಕಾರಿಗಳ ವಿರುದ್ಧವೂ ಕ್ರಮ ಜರುಗಿಸುವಂತಾಗಬೇಕು ಎನ್ನುವುದು ಸಾರ್ವಜನಿಕರ ಆಗ್ರಹ.

raghavendra 1
+ posts

ರಾಘವೇಂದ್ರ ರವರು ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನ ಉಂಡಿಗನಾಳು ಗ್ರಾಮದವರು. ಕುವೆಂಪು ವಿಶ್ವವಿದ್ಯಾಲಯದಲ್ಲಿ ಬಿಎಸ್ಸಿ ಪದವಿ ಪಡೆದಿರುವ ಇವರು ಈದಿನ ಡಾಟ್ ಕಾಮ್ ಮಾಧ್ಯಮ ಸಂಸ್ಥೆಯಲ್ಲಿ ಕಳೆದ 2023 ರಿಂದ ಶಿವಮೊಗ್ಗ ಜಿಲ್ಲಾ ವರದಿಗಾರರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ವರದಿಗಾರಿಕೆ, ರಾಜಕೀಯ ವಿಶ್ಲೇಷಣೆ,Anchoring, (ನಿರೂಪಣೆ) ವಿಶೇಷ ಸ್ಟೋರಿ ಹಾಗೂ ತನಿಖಾ ವರದಿಗಾರಿಕೆ ಮಾಡುವುದು ಇವರ ಅಚ್ಚು ಮೆಚ್ಚಿನ ಕ್ಷೇತ್ರ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ರಾಘವೇಂದ್ರ
ರಾಘವೇಂದ್ರ
ರಾಘವೇಂದ್ರ ರವರು ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನ ಉಂಡಿಗನಾಳು ಗ್ರಾಮದವರು. ಕುವೆಂಪು ವಿಶ್ವವಿದ್ಯಾಲಯದಲ್ಲಿ ಬಿಎಸ್ಸಿ ಪದವಿ ಪಡೆದಿರುವ ಇವರು ಈದಿನ ಡಾಟ್ ಕಾಮ್ ಮಾಧ್ಯಮ ಸಂಸ್ಥೆಯಲ್ಲಿ ಕಳೆದ 2023 ರಿಂದ ಶಿವಮೊಗ್ಗ ಜಿಲ್ಲಾ ವರದಿಗಾರರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ವರದಿಗಾರಿಕೆ, ರಾಜಕೀಯ ವಿಶ್ಲೇಷಣೆ,Anchoring, (ನಿರೂಪಣೆ) ವಿಶೇಷ ಸ್ಟೋರಿ ಹಾಗೂ ತನಿಖಾ ವರದಿಗಾರಿಕೆ ಮಾಡುವುದು ಇವರ ಅಚ್ಚು ಮೆಚ್ಚಿನ ಕ್ಷೇತ್ರ.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಯುವಪರಿವರ್ತನೆ ಯಾತ್ರೆ: ಬಾಗಲಕೋಟೆಯಲ್ಲಿ ಚಾಲನೆ

ಯುವಜನರನ್ನು ರಾಜ್ಯದ ಅಭಿವೃದ್ಧಿಯತ್ತ ಚಿತ್ತಹರಿಸಲು, ಪ್ರಜೆಗಳ ಆರೋಗ್ಯ, ಶಿಕ್ಷಣ, ಸಬಲೀಕರಣ, ಉದ್ಯೋಗದ...

ಕೊಪ್ಪಳ | ಪ್ರವಾದಿ ಮಹಮ್ಮದ್‌ ಸಂದೇಶವನ್ನು ನಾವು ಪಾಲನೆ ಮಾಡಬೇಕು: ಲಾಲ್ ಹುಸೇನ್ ಕಂದ್ಗಲ್

'ಖುರಾನ್' ಬರುವ ಪ್ರವಾದಿ ಮಹಮ್ಮದ್‌ ಅವರು ಹೇಳಿದ ಸತ್ಯವನ್ನೇ ಭಾರತೀಯ ಪುರಾಣಗಳು...

ಶಿವಮೊಗ್ಗದ ಸಂಚಾರ ವ್ಯವಸ್ಥೆಯಲ್ಲಿ ಅರಾಜಕತೆ: ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ನಾಗರಿಕರು ಹೈರಾಣು

ಒಮ್ಮೆ ಶಾಂತ, ಶಿಕ್ಷಣ ಹಾಗೂ ಸಂಸ್ಕೃತಿಯ ತಾಣವಾಗಿದ್ದ ಶಿವಮೊಗ್ಗ ನಗರ ಇತ್ತೀಚಿನ...

ವಿದ್ಯಾರ್ಥಿ ಕಣ್ಣಲ್ಲಿ ಗಾಂಧೀಜಿ ಬಯಸಿದ ನ್ಯಾಯಸಮ್ಮತ ತತ್ವದ ರಾಜಕೀಯ ವ್ಯವಸ್ಥೆ

ಸ್ವಾತಂತ್ರ್ಯೋತರ ಭಾರತ ಹೇಗಿರಬೇಕು ಎಂಬುದರ ಕುರಿತು ಗಾಂಧೀಜಿಯ ಕನಸು ವಿಭಿನ್ನವಾಗಿದ್ದು, ರಾಜಕೀಯವು...

Download Eedina App Android / iOS

X