ಬಿಜೆಪಿ ಅಧಿಕಾರದಲ್ಲಿರುವ ಛತ್ತೀಸ್‌ಗಢದ ಸರ್ಕಾರಿ ಕಚೇರಿಯೊಂದು ಶಾಪಿಂಗ್ ಕಾರಣಕ್ಕಾಗಿ ಸುದ್ದಿಯಲ್ಲಿದೆ. ಸರ್ಕಾರಿ ಕಚೇರಿಗೆ ಅಂದಾಜಿಸಲೂ ಆಗದ ಬೆಲೆಯಲ್ಲಿ ಜಗ್‌ಗಳು, ಐಷಾರಾಮಿ ಟಿವಿಗಳು ಹಾಗೂ ಸೋಫಾಗಳನ್ನು ಖರೀದಿಸಲು ಆನ್‌ಲೈನ್‌ನಲ್ಲಿ ಆರ್ಡರ್ ಮಾಡಲಾಗಿದೆ. ಈ ವಿಚಾರವು ಆಡಳಿತಾರೂಢ ಬಿಜೆಪಿ ಮತ್ತು ವಿಪಕ್ಷ ಕಾಂಗ್ರೆಸ್ ನಡುವೆ ರಾಜಕೀಯ ಕಿಡಿ ಹೊತ್ತಿಸಿದೆ.
ಛತ್ತೀಸ್‌ಗಢದ ಕೊರಿಯಾ ಜಿಲ್ಲೆಯ ಅಂಬಿಕಾಪುರದಲ್ಲಿರುವ ಕಮಿಷನರ್ ಕಚೇರಿಯು ಆದಿವಾಸಿ ಅಭಿವೃದ್ಧಿ ಇಲಾಖೆಯ ಹಣದಲ್ಲಿ ಐದು ಸ್ಮಾರ್ಟ್ ಟಿವಿಗಳನ್ನು ತಲಾ 9,99,500 ರೂ. ಬೆಲೆಯಲ್ಲಿ (ಒಟ್ಟು 49.97 ಲಕ್ಷ ರೂ) ಖರೀದಿಸಲು ‘ಆರ್ಡರ್’ ಮಾಡಿದೆ. ಅಲ್ಲದೆ, ಒಂದು ಲೀಟರ್ ನೀರಿನ 160 ಜಗ್‌ಗಳನ್ನು ತಲಾ 32,999.5 ರೂ. ಬೆಲೆಯಲ್ಲಿ (ಬರೋಬ್ಬರಿ 51.99 ಲಕ್ಷ ರೂ.) ಖರೀದಿಗೆ ಆದೇಶಿಸಿದೆ. ಆದಿವಾಸಿ ಅಭಿವೃದ್ಧಿ ಇಲಾಖೆಯ ಹಣವನ್ನು ದುಂದು ವೆಚ್ಚ ಮತ್ತು ಅವ್ಯವಹಾರ ನಡೆಸಿದೆ ಎಂಬ ಗಂಭೀರ ಆರೋಪಗಳು ಕೇಳಿಬಂದಿವೆ.
ಸರ್ಕಾರಿ ಕಚೇರಿಯು ಬೈಕುಂಠಪುರದ ಕಂಪನಿಯೊಂದರಿಂದ ಈ ವಸ್ತುಗಳನ್ನು ಭಾರೀ ಬೆಲೆಗೆ ಖರೀದಿಸಲು ‘ಆರ್ಡರ್’ ಮಾಡಲಾಗಿತ್ತು ಎಂದು ತಿಳಿದುಬಂದಿದೆ.
ಬೃಹತ್ ದರದಲ್ಲಿ ಖರೀದಿ ವಿಚಾರವಾಗಿ ಬಿಜೆಪಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿರುವ ಕಾಂಗ್ರೆಸ್ ಅಧ್ಯಕ್ಷ ದೀಪಕ್ ಬೈಜ್, “ಜಗ್ ಖರೀದಿಯು ಸರ್ಕಾರದಲ್ಲಿರುವ ಆಳವಾದ ಭ್ರಷ್ಟಾಚಾರವನ್ನು ಪ್ರತಿಬಿಂಬಿಸುತ್ತದೆ” ಎಂದು ಹೇಳಿದ್ದಾರೆ.
ಆದಾಗ್ಯೂ, ವಿವಾದವನ್ನು ತಣ್ಣಗಾಗಿಸಲು ಯತ್ನಿಸಿರುವ ಆದಿವಾಸಿ ಕಲ್ಯಾಣ ಇಲಾಖೆಯು, “ಯಾವುದೇ ಖರೀದಿಗಳೂ ಪೂರ್ಣಗೊಂಡಿಲ್ಲ. ಈ ಖರೀದಿಗೆ ಮಾಜಿ ಅಧಿಕಾರಿಯೊಬ್ಬರು ಪ್ರಸ್ತಾಪಿಸಿದ್ದರು. ಆದರೆ, ಅತಿಯಾದ ಬೆಲೆಯ ಕಾರಣಕ್ಕಾಗಿ 2025ರ ಫೆಬ್ರವರಿಯಲ್ಲಿ, ಈ ಪ್ರಸ್ತಾಪವನ್ನು ರದ್ದುಗೊಳಿಸಲಾಗಿದೆ” ಎಂದು ಸಮಜಾಯಷಿ ನೀಡಿದೆ.
ಆರೋಪದ ಬಗ್ಗೆ ಪ್ರತಿಕ್ರಿಯಿಸಿರುವ ಛತ್ತೀಸ್‌ಗಢದ ಆದಿವಾಸಿ ಕಲ್ಯಾಣ ಇಲಾಖೆ ಸಚಿವರು, “ಯಾಕೆ ಆತಂಕ? ಮೊದಲು ಸತ್ಯವನ್ನು ಪರಿಶೀಲಿಸಿ, ಆನಂತರ ತೀರ್ಮಾನಕ್ಕೆ ಬನ್ನಿ. ಯಾವುದೇ ಖರೀದಿಗಳು ನಡೆದಿಲ್ಲ. ಕಾಂಗ್ರೆಸ್ ಅನಗತ್ಯ ಗಾಬರಿಗೆ ಒಳಗಾಗಿದೆ” ಎಂದಿದ್ದಾರೆ.
ಈ ಲೇಖನ ಓದಿದ್ದೀರಾ?: ಸಮಾನ ಶಿಕ್ಷಣ, ಭಾಷಾ ನೀತಿ ಮತ್ತು ಪ್ರಭುತ್ವದ ಮುಸುಕಿನ ಆಟ
ಜಗ್ ಮತ್ತು ಟಿವಿ ವಿವಾದಗಳು ಇನ್ನೂ ಚರ್ಚೆಯಲ್ಲಿರುವಾಗಲೇ ಮತ್ತೊಂದು ವಿಚಾರ ವಿವಾದದಲ್ಲಿ ಸೇರಿಕೊಂಡಿದೆ. ಅದು, ಸಕ್ತಿ ಜಿಲ್ಲೆಯಲ್ಲಿ, ಸಿಎಂಎಚ್‌ಒ (ಮುಖ್ಯ ವೈದ್ಯಕೀಯ ಮತ್ತು ಆರೋಗ್ಯ ಅಧಿಕಾರಿ) ಅವರು ‘GEM’ ಅಪ್ಲಿಕೇಷನ್‌ನಲ್ಲಿ ಔಷಧಗಳನ್ನು ಆರ್ಡರ್ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಆದರೆ, ಆ ಆರ್ಡರ್‌ನ ವಿವರಣೆಯು ಔಷಧ ಬದಲಾಗಿ ಸೋಫಾ ಡೆಲಿವೆರಿಗೆ ಸೂಚಿಸಲಾಗಿದೆ. ಕ್ಯಾಲ್ಸಿಯಂ D3 ಟ್ಯಾಬ್ಲೆಟ್‌ಗಳ ಬದಲಿಗೆ, 60 ಇಂಚು ಉದ್ದ, 635 ಇಂಚು ಅಗಲ ಹಾಗೂ 55 ಇಂಚು ಎತ್ತರದ ಎರಡು ಸೋಫಾವನ್ನು ಕಳಿಸುವಂತೆ ಆರ್ಡರ್‌ನ ವಿವರಣೆಯಲ್ಲಿ ತಿಳಿಸಲಾಗಿದೆ ಎಂದು ವರದಿಯಾಗಿದೆ.
ಈ ಪ್ರಕರಣ ಸಂಬಂಧ ಪ್ರತಿಕ್ರಿಯಿಸಿರುವ ಐಷಾರಾಮಿ ವಸ್ತುಗಳ ಪೂರೈಕೆದಾರ ಕಂಪನಿ ‘ವಿಜೆ ಎಂಟರ್‌ಪ್ರೈಸ್’ನ ಮ್ಯಾನೇಜರ್ ಸುಕೇಶ್ ಮಾಖಿಜಾ, “ನಾವು ಔಷಧದ ವ್ಯವಹಾರ ಮಾಡುತ್ತೇವೆ. ಸೋಫಾ ಬಗ್ಗೆ ನನಗೆ ಗೊತ್ತಿಲ್ಲ. ಸಿಬ್ಬಂದಿ ಇದನ್ನು ನಿರ್ವಹಿಸುತ್ತಾರೆ – ನಾವು ಪರಿಶೀಲಿಸಬೇಕು” ಎಂದಿರುವುದಾಗಿ ಎನ್‌ಡಿಟಿವಿ ವರದಿ ಮಾಡಿದೆ.
ರಾಜ್ಯ ಆರೋಗ್ಯ ಸಚಿವ ಶ್ಯಾಮ್ ಬಿಹಾರಿ ಜೈಸ್ವಾಲ್ ಅವರು ಸೋಫಾ ವಿವಾದ ಕುರಿತು ತನಿಖೆ ನಡೆಸುವುದಾಗಿ ಭರವಸೆ ನೀಡಿದ್ದಾರೆ. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಎಂದೂ ಹೇಳಿದ್ದಾರೆ.
ಇದೆಲ್ಲದರ ನಡುವೆ, ಸಿಜಿಎಂಎಸ್‌ಸಿ (ಛತ್ತೀಸ್‌ಗಢ ವೈದ್ಯಕೀಯ ಸೇವೆಗಳ ನಿಗಮ) ಮೇಲೆ ಭ್ರಷ್ಟಾಚಾರದ ಗಂಭೀರ ಆರೋಪಗಳೂ ಕೇಳಿಬಂದಿವೆ. ರಿಯಾಜೆಂಟ್ ಮತ್ತು ವೈದ್ಯಕೀಯ ಸಾಧನ ಖರೀದಿಯಲ್ಲಿ 750 ಕೋಟಿ ರೂ.ಗಿಂತ ಹೆಚ್ಚಿನ ಹಗರಣ ನಡೆದಿದೆ ಎಂದು ಆರೋಪಿಸಲಾಗಿದೆ. ಈ ಬಗ್ಗೆ ಎಸಿಬಿ ಮತ್ತು ಇಒಡಬ್ಲ್ಯೂ ತನಿಖೆ ನಡೆಸುತ್ತಿವೆ. ಪ್ರಕರಣದಲ್ಲಿ ಆರು ಮಂದಿಯನ್ನು ಬಂಧಿಸಲಾಗಿದೆ.