ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದಿಂದ ಜಿಲ್ಲಾಮಟ್ಟದಲ್ಲಿ ನೀಡಲಾಗುವ ಉತ್ತಮ ಛಾಯಾಗ್ರಾಹಕ ಪ್ರಶಸ್ತಿಯನ್ನು ವಿಜಯಪುರ ಏಷ್ಯಾನೆಟ್ ಸುವರ್ಣ ನ್ಯೂಸ್ ಕ್ಯಾಮೆರಾಮ್ಯಾನ್ ಅಪ್ಪಾಸಾಹೇಬ್ ಚಿನಗುಂಡಿಗೆ ನೀಡಲಾಗುತ್ತಿದೆ.
ಕಳೆದ 14 ವರ್ಷಗಳಿಂದ ಎಲೆಕ್ಟ್ರಾನಿಕ್ ಮೀಡಿಯಾದಲ್ಲಿ ಛಾಯಾಗ್ರಾಹಕರಾಗಿ ಸೇವೆ ಸಲ್ಲಿಸುತ್ತಿರುವ ಅಪ್ಪಾಸಾಹೇಬ್ ಚಿನಗುಂಡಿಯವರು ಮಾಡಿರುವ ಸ್ಟಿಂಗ್ ಆಫರೇಶನ್‌ಗಳು ರಾಜ್ಯಮಟ್ಟದಲ್ಲಿ ಸದ್ದುಮಾಡಿವೆ. ಅದ್ಭುತ ಛಾಯಾಗ್ರಹಣ, ಸೂಕ್ಷ್ಮ ಸಂವೇದನೆಯ ದೃಶ್ಯಗಳನ್ನು ಸೆರೆಹಿಡಿಯುವುದರಲ್ಲಿ ನಿಪುಣರಾಗಿದ್ದಾರೆ. ಕಸ್ತೂರಿ ನ್ಯೂಸ್ 24, ಪ್ರಜಾ ಟಿವಿ, ಈ ದಿನ.ಕಾಮ್ ವಿಜಯಪುರ ಜಿಲ್ಲಾ ಕೋಆರ್ಡಿನೆಟರ್ ಆಗಿಯೂ ಸೇವೆ ಸಲ್ಲಿಸಿದ್ದರು. ಈ ಸದ್ಯ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಜಿಲ್ಲಾ ಛಾಯಾಗ್ರಾಹಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಕಸ್ತೂರಿ ನ್ಯೂಸ್ 24ರಲ್ಲಿ ಕರ್ತವ್ಯ ನಿರ್ವಹಿಸುವ ವೇಳೆ ಹುಬ್ಬಳ್ಳಿಯಲ್ಲಿ ನಡೆದಿದ್ದ ಕಳಸಾ ಬಂಡೂರಿಗಾಗಿ ಚಿತ್ರರಂಗದಿಂದ ನಡೆದ ಹೋರಾಟದ ವೇಳೆ ಉತ್ತಮ ಕವರೇಜ್‌ಗಾಗಿ ಸಂಸ್ಥೆಯಿಂದ ಪ್ರಶಂಸೆ ಪಡೆದಿದ್ದರು. ಗದಗ ಜಿಲ್ಲೆಯಲ್ಲಿ ವಿಶೇಷ ಸ್ಟೋರಿಗಳಿಗಾಗಿ ಅದ್ಭುತ ದೃಶ್ಯಗಳನ್ನ ಸೆರೆಹಿಡಿದಿದ್ದರು.
ಇನ್ನು ಮಹಾರಾಷ್ಟ್ರದ ರೆಡ್‌ಲೈಟ್ ಏರಿಯಾಗಳಲ್ಲಿ ನಡೆಯುತ್ತಿದ್ದ ಕನ್ನಡದ ಹೆಣ್ಣು ಗೋಳಾಟದ ಕುರಿತು ರಹಸ್ಯ ಕಾರ್ಯಾಚರಣೆಯಲ್ಲಿ ಪಾಲ್ಗೊಂಡು ಮನಕಲಕುವ ಎಕ್ಸ್‌ಕ್ಲೂಸಿವ್ ದೃಶ್ಯಗಳನ್ನು ಸೆರೆಹಿಡಿದು ಭೇಷ್ ಎನಿಸಿಕೊಡಿದ್ದರು. ಕಳೆದ 4 ವರ್ಷಗಳಿಂದ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ವಿಜಯಪುರ ಜಿಲ್ಲಾ ಕ್ಯಾಮೆರಾಮೆನ್ ಆಗಿ ಸೇವೆ ಸಲ್ಲಿಸುತ್ತಿರುವ ಅಪ್ಪಾಸಾಹೇಬ್ ಅವರು ಅನೇಕ ವಿಶೇಷ ತನಿಖಾ ವರದಿಗಳಲ್ಲಿ ತಮ್ಮ ಕ್ಯಾಮೆರಾ ಕೈಚಳಕ ತೋರಿಸಿರೋದು ಗಮನಾರ್ಹವಾಗಿದೆ. ಎಲೆಕ್ಟ್ರಾನಿಕ್ ಮೀಡಿಯಾದಲ್ಲಿ ಇವರ ಈ ಸೇವೆಯನ್ನು ಪರಿಗಣಿಸಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ಉತ್ತಮ ಛಾಯಾಗ್ರಾಹಕ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ.
ಈ ಸುದ್ದಿ ಓದಿದ್ದೀರಾ? ಈಜೀಪುರ ಮೇಲ್ಸೇತುವೆ ಕಾಮಗಾರಿಗೆ ಗಡುವು; ಆಯುಕ್ತ ಮಹೇಶ್ವರ್ ರಾವ್ ಹೇಳಿದ್ದೇನು?
ಜುಲೈ 19ರಂದು ನಗರದ ಕಂದಗಲ್ ಹನುಮಂತರಾಯ ರಂಗಮಂದಿರದಲ್ಲಿ ನಡೆಯುತ್ತಿರುವ ಪತ್ರಿಕಾದಿನಾಚರಣೆಯಲ್ಲಿ ಸಚಿವ ಎಂ ಬಿ ಪಾಟೀಲ್, ಸಚಿವ ಶಿವಾನಂದ ಪಾಟೀಲ್, ಮುಖ್ಯ ಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ. ವಿ ಪ್ರಭಾಕರ್, ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಧ್ಯಕ್ಷ ಶಿವಾನಂದ ತಗಡೂರ್ ಅವರು ಪ್ರಶಸ್ತಿ ನೀಡಿ ಗೌರವಿಸಲಿದ್ದಾರೆ.