ಶಿಕ್ಷಣ ಸ್ಪೆಷಲ್ | ಸಮಾನ ಶಿಕ್ಷಣ, ಭಾಷಾ ನೀತಿ ಮತ್ತು ಪ್ರಭುತ್ವದ ಮುಸುಕಿನ ಆಟ

Date:

Advertisements
ರಾಜ್ಯ ಸರ್ಕಾರದ ಶಿಕ್ಷಣ ನೀತಿ, ಸರ್ಕಾರಿ ಶಾಲೆಗಳ ಸ್ಥಿತಿಗತಿ, ಶಿಕ್ಷಣದ ಹಕ್ಕು, ದ್ವಿಭಾಷಾ ನೀತಿ, ಸಮಾನ ಶಿಕ್ಷಣ, ಉಳ್ಳವರ ಶಿಕ್ಷಣ- ಹೀಗೆ ಶಿಕ್ಷಣ ಕ್ಷೇತ್ರ ನಾನಾ ಕವಲುಗಳಾಗಿ ಹರಿದುಹಂಚಿಹೋಗಿದೆ. ಈ ಬಗ್ಗೆ ಈದಿನ.ಕಾಮ್ ಮುಕ್ತಸಂವಾದ ಬಯಸಿದೆ. ಶಿಕ್ಷಣ ಕುರಿತು ಕಾಳಜಿ ಇರುವವರು ತಮ್ಮ ಪರ-ವಿರೋಧ ಅನಿಸಿಕೆಗಳನ್ನು ಮುಕ್ತವಾಗಿ ಹಂಚಿಕೊಳ್ಳಬಹುದು. 

ಕೊನೆಯ ಕಂತು

ಕರ್ನಾಟಕ ಶಾಲಾ ಶಿಕ್ಷಣದಲ್ಲಿರುವ ಸೌಲಭ್ಯಗಳು
ಕರ್ನಾಟಕ ಸರ್ಕಾರದ ಸಾರ್ವಜನಿಕ ಶಿಕ್ಷಣ ಇಲಾಖೆಯ ಅಡಿಯಲ್ಲಿ ಬರುವ ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ಮಿಷನ್ 95 ಯೋಜನೆಯನ್ನು ರೂಪಿಸಲಾಗಿದೆ. ಸರ್ಕಾರಿ ಶಾಲೆಗಳ ಮೂಲಭೂತ ಸೌಕರ್ಯಗಳನ್ನು ಉತ್ತಮಪಡಿಸಲು ಎಸ್‌ಡಿಎಂಸಿ (ಶಾಲೆ ಅಭಿವೃದ್ಧಿ ಮೇಲ್ವಿಚಾರಣೆ ಸಮಿತಿ)ಯನ್ನು ರಚಿಸಲಾಗಿದೆ. ಅದಕ್ಕೆ ಆಧ್ಯಕ್ಷರು, ಉಪಾಧ್ಯಕ್ಷರು, ಗ್ರಾಮ ಪಂಚಾಯ್ತಿ ಸದಸ್ಯರು ನೇಮಕವಾಗಿರುತ್ತಾರೆ. ಎಸ್‌ಡಿಎಂಸಿ, ಸಮಾನ ಮನಸ್ಕರು, ಎನ್‌ಜಿಓಗಳನ್ನು ಒಳಗೊಂಡಂತಹ ಶಾಲಾ ಪೋಷಣೆ ಯೋಜನೆ ಇದೆ. ಸರ್ವ ಶಿಕ್ಷಣ ಅಭಿಯಾನ ಇದೆ. ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನ ಇದೆ. ಕರ್ನಾಟಕ ಮುಕ್ತ ಶಿಕ್ಷಣ ಸಂಪನ್ಮೂಲ ಯೋಜನೆ ಇದೆ. ಸಬ್ಜೆಕ್ಟ್ ಶಿಕ್ಷಕರ ಫೋರಂ ಇದೆ. ಮಾದರಿ ಶಾಲೆ ಯೋಜನೆ ಇದೆ. ಆದರ್ಶ ವಿದ್ಯಾಲಯ ಯೋಜನೆ ಇದೆ. ಪೂರ್ವ ಪ್ರಾಥಮಿಕ ಶಿಕ್ಷಣ(ಎಲ್.ಕೆಜಿ, ಯು.ಕೆಜಿ)ವನ್ನು ಪ್ರಾರಂಭಿಸಲು ಅವಕಾಶಗಳಿವೆ. ಸಾರ್ವಜನಿಕ ಶಿಕ್ಷಣ ಇಲಾಖೆಯ ಅಡಿಯಲ್ಲಿ ಡಿಡಿಪಿಐ, ಬಿಇಓಗಳು, ವಲಯ ಸಂಪನ್ಮೂಲ ಸಂಯೋಜಕರು(ಬಿಆರ್‌ಸಿ), ಕಾರ್ಯನಿರ್ವಹಿಸುತ್ತಾರೆ. ಸರ್ಕಾರಿ ಶಾಲೆಗಳಲ್ಲಿ ಕಲಿಕ ಗುಣಮಟ್ಟ, ಬೋಧನೆಯ ಗುಣಮಟ್ಟ, ಮೂಲಭೂತ ಸೌಕರ್ಯಗಳ ಗುಣಮಟ್ಟವನ್ನು ಹೆಚ್ಚಿಸಲಿಕ್ಕಾಗಿ ಮತ್ತು ನಿರಂತರವಾಗಿ ಗುಣಮಟ್ಟವನ್ನು ಕಾಪಾಡಿಕೊಳ್ಳಲಿಕ್ಕಾಗಿಯೇ ಆರಂಭಿಸಿದ ಜಿಲ್ಲಾ ಮಟ್ಟದ ಶಿಕ್ಷಣ ಮತ್ತು ತರಬೇತಿ ಸಂಸ್ಥೆ (ಡಯೆಟ್), ಶೈಕ್ಷಣಿಕ ಸಂಶೋದನೆ ಮತ್ತು ತರಬೇತಿ(ಡೆಸರ್ಟ್)ಯಂತಹ ಪ್ರಮುಖ ಶಿಕ್ಷಣ ತರಬೇತಿ, ಬೋಧನೆ, ಕಲಿಕಾ ಸಂಸ್ಥೆಗಳು ಕಾರ್ಯ ನಿರ್ವಹಿಸುತ್ತಿವೆ.

ಇಷ್ಟೆಲ್ಲಾ ಸೌಲಭ್ಯಗಳನ್ನು ಕಲ್ಪಿಸಿದ ನಂತರವೂ ಶಾಲಾ ಶಿಕ್ಷಣ ಇಲಾಖೆಯು ತನ್ನ ಶಾಲೆಗಳನ್ನು ಬಲಪಡಿಸುವಲ್ಲಿ ಯಾಕೆ ವಿಫಲವಾಗುತ್ತಿದೆ? ಈ ಸಾರ್ವಜನಿಕ ಸಂಸ್ಥೆಗಳ ಜವಾಬ್ದಾರಿ ಏನು? ಅಲ್ಲಿನ ಸರ್ಕಾರಿ ಶಿಕ್ಷಕರು ಬೋಧನೆ ಮಾಡುತ್ತಿಲ್ಲವೆ? ಕಲಿಕೆ, ಬೋಧನೆ, ಗುಣಮಟ್ಟ ಹೆಚ್ಚಿಸುತ್ತಿಲ್ಲವೇ? ಮೇಲಿನ ಸಂಸ್ಥೆಗಳಲ್ಲಿ ಸ್ವತಃ ಶಿಕ್ಷಣ ಇಲಾಖೆಯು ಸೂಕ್ತವಾದ ವ್ಯಾಸಂಗಕ್ರಮ ರೂಪಿಸುತ್ತಿಲ್ಲವೇ? ಇವರ ಬೋಧನೆಯ, ಕಾರ್ಯನಿರ್ವಹಣೆಯ ಮೌಲ್ಯಮಾಪನ ಆಗಿದೆಯೇ? ಅವುಗಳ ಗುಣಮಟ್ಟ ಕಳಪೆಯಾಗಿದೆಯೇ? ಹೌದಾದರೆ ಅದಕ್ಕೆ ಹೊಣೆಗಾರರು ಯಾರು? ಇವುಗಳ ಗುಣಮಟ್ಟವನ್ನು ಹೆಚ್ಚಿಸುವುದಕ್ಕೆ ಗಮನ ಹರಿಸಬೇಕಾದ ಸಾರ್ವಜನಿಕ ಶಿಕ್ಷಣ ಇಲಾಖೆ ಇದನ್ನು ಕೈಬಿಟ್ಟು ಖಾಸಗಿ ಶಾಲೆಗಳೊಂದಿಗೆ ಒಪ್ಪಂದ ಮಾಡಿಕೊಂಡಿರುವುದು ಸಾರ್ವಜನಿಕ ಶಿಕ್ಷಣವನ್ನು ಹಂತಹಂತವಾಗಿ ಖಾಸಗೀಕರಣಗೊಳಿಸಲು ಮುನ್ನುಡಿ ಬರೆದಂತಿದಿಯೇ?

ಇದನ್ನು ಓದಿದ್ದೀರಾ?: ಶಿಕ್ಷಣ ಸ್ಪೆಷಲ್ | ಸಮಾನ ಶಿಕ್ಷಣ, ಭಾಷಾ ನೀತಿ ಮತ್ತು ಪ್ರಭುತ್ವದ ಮುಸುಕಿನ ಆಟ

ಪ್ರಸ್ತುತ ಬಿಕ್ಕಟ್ಟುಗಳು ಮತ್ತು ದ್ವಿಭಾಷಾ ವಿವಾದ
ಸಾರ್ವಜನಿಕ ಶಿಕ್ಷಣ ವ್ಯವಸ್ಥೆ ಹದಗೆಡುತ್ತಿರುವ ಈ ಸಂದರ್ಭದಲ್ಲಿ ಗಾಯದ ಮೇಲೆ ಬರೆ ಇಟ್ಟಂತೆ ಭಾಷಾ ವಿವಾದವನ್ನು ಹುಟ್ಟು ಹಾಕಲಾಗುತ್ತಿದೆ. ಮೂರು ಭಾಷೆ ಕಲಿಕೆಯ ಹೆಸರಿನಲ್ಲಿ ಹಿಂದಿಯನ್ನು ಹೇರುತ್ತಿರುವ ಮೋದಿ ನೇತೃತ್ವದ ಸರ್ಕಾರವು ಆ ಮೂಲಕ ಹಿಂದುತ್ವ ರಾಜಕಾರಣವನ್ನೂ ಜಾರಿಗೊಳಿಸಲು ಯತ್ನಿಸುತ್ತಿದೆ. ಕೇಂದ್ರ ಗೃಹ ಮಂತ್ರಿ ಅಮಿತ್ ಶಾ ಪದೇ ಪದೇ ಹಿಂದಿ ಕಲಿಕೆಯ ಕುರಿತು ಒತ್ತಾಯಿಸುವ ಧೋರಣೆಯಲ್ಲಿ ಮಾತನಾಡುತ್ತಿದ್ದಾರೆ. ಇದರ ಮುಂದುವರಿಕೆಯಾಗಿ ಮಾರ್ಚ್ 6, 2025ರಂದು, ಕೇಂದ್ರ ಸಂಸದೀಯ ವ್ಯವಹಾರಗಳ ಮತ್ತು ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಕಿರೆನ್ ರಿಜಿಜು 2020ರ ಹೊಸ ಶಿಕ್ಷಣ ನೀತಿಯಲ್ಲಿ- ಎನ್‌ಇಪಿ ಪ್ರಸ್ತಾಪಿತ- ‘ಮೂರು ಭಾಷಾ ಸೂತ್ರ’ವು ‘ಇಡೀ ದೇಶಕ್ಕೆ ಒಳ್ಳೆಯದು’ ಎಂದು ಹೇಳಿದರು. ಎನ್‌ಇಪಿ 2020ರ ನೀತಿಯು 1968ರ ನೀತಿಯಲ್ಲಿ ಮೊದಲು ಪರಿಚಯಿಸಲಾದ ‘ಮೂರು ಭಾಷಾ ಸೂತ್ರ’ವನ್ನು ಪುನರುಚ್ಚರಿಸುತ್ತದೆ, ಇದು ದಕ್ಷಿಣ ಭಾರತವನ್ನು ಒಳಗೊಂಡಂತೆ ಹಿಂದಿ ಮಾತನಾಡದ ರಾಜ್ಯಗಳಲ್ಲಿ ಅದನ್ನು ಭಾಷೆಯಾಗಿ ಕಲಿಸುವುದನ್ನು ಕಡ್ಡಾಯಗೊಳಿಸಿತು. ಆದರೆ ಈ ನೀತಿಯು ಮೂರು ಭಾಷೆಗಳಲ್ಲಿ ಎರಡು ಭಾರತದ ಸ್ಥಳೀಯ ಭಾಷೆಗಳಾಗಿರಬೇಕು ಎಂಬ ಷರತ್ತಿನೊಂದಿಗೆ ರಾಜ್ಯ ಸರ್ಕಾರಗಳಿಗೆ ನಿರ್ದಿಷ್ಟ ಭಾಷೆಗಳನ್ನು ಆಯ್ಕೆ ಮಾಡಲು ಅವಕಾಶ ನೀಡುತ್ತದೆ, ತಮಿಳುನಾಡು ಸರ್ಕಾರವು 1968ರ ನೀತಿಯ ಹೊರತಾಗಿಯೂ ಇದುವರೆಗೆ ಎರಡು ಭಾಷಾ ಸೂತ್ರವನ್ನು ಜಾರಿಗೊಳಿಸಿದೆ ಮತ್ತು ಇದೇ ಕಾರಣಕ್ಕೆ ಕೇಂದ್ರ ಸರ್ಕಾರದಿಂದ ಒತ್ತಡಕ್ಕೆ ಒಳಗಾಗಿದೆ. ರಾಜ್ಯ ಸರ್ಕಾರವು ಸಮಗ್ರ ಶಿಕ್ಷಣ ಅಭಿಯಾನದ ಅಡಿಯಲ್ಲಿ ಅನುದಾನ ಪಡೆಯಲು ಈ ನೀತಿಯನ್ನು ಜಾರಿಗೊಳಿಸಬೇಕು ಎಂದು ಸೂಚಿಸಿದೆ. ಇದು ಅದರ ಸರ್ವಾಧಿಕಾರಿ ಧೋರಣೆಯನ್ನು ತೋರಿಸುತ್ತದೆ.

ಮೊದಲಿನಿಂದಲೂ ಮೂರು ಭಾಷಾ ಸೂತ್ರವೆಂದರೆ ಅದು ಇಂಗ್ಲೀಷ್‌, ತಾಯ್ನುಡಿ ಮತ್ತು ಇತರೆ ಭಾರತೀಯ ಭಾಷೆಯ ಕಲಿಕೆಯಾಗಬೇಕಿತ್ತು. ಆದರೆ ಹಾಗಾಗಲಿಲ್ಲ. ದಕ್ಷಿಣ ಭಾರತದ ರಾಜ್ಯಗಳಲ್ಲಿ ಇದು ಕೇವಲ ಇಂಗ್ಲಿಷ್, ತಾಯ್ನುಡಿ ಅಥವಾ ಸಂಸ್ಕೃತ ಮತ್ತು ಹಿಂದಿ ಕಲಿಕೆಯಾಗಿದೆ. ಇಲ್ಲಿ ಹಿಂದಿ ಮತ್ತು ಸಂಸ್ಕೃತ ಭಾಷೆಗಳು ನುಸುಳಿಕೊಂಡು ತಾಯ್ನುಡಿಯನ್ನು ಹಿನ್ನಲೆಗೆ ತಳ್ಳುವುದರ ವಿರುದ್ಧ ಭಾಷಾ ವಿಜ್ಞಾನಿಗಳು ಮಾತನಾಡಿದ್ದಾರೆ. ಇವರ ಪ್ರಕಾರ ಹಿಂದಿ ಮತ್ತು ಒಂದು ಉಪಭಾಷೆಯ ನಡುವೆ ಭಾಷಾಶಾಸ್ತ್ರೀಯ ಇತಿಹಾಸವಿದೆಯೇ, ಹರಿಯಾಣವಿ, ಅವಧಿ, ಕನ್ನೌಜಿ, ಭೋಜಪುರಿ, ಮಗಧ, ಮಾರ್ವಾರಿ, ಗಢವಾಲಿ, ಕಾಂಗ್ರಿ ಮುಂತಾದ ಸ್ಥಳೀಯ ತಾಯುನುಡಿಗಳು ಉತ್ತರ ಭಾರತದ ನುಡಿಗಳು ಉಪಭಾಷೆಗಳೆ ಅಲ್ಲವೇ ಎನ್ನುವುದು ಚರ್ಚೆಯಾಗುತ್ತಿದೆ. ಆದರೆ ಈ ಸ್ಥಳೀಯ ನುಡಿಗಳನ್ನು ಹಿಂದಿ ಆಕ್ರಮಿಸಿಕೊಂಡು ಜೀರ್ಣಗೊಳಿಸಿಕೊಂಡಿದೆ ಎನ್ನುವುದಂತೂ ಸತ್ಯ. ಈ ಕಾರಣಕ್ಕಾಗಿಯೇ ದಕ್ಷಿಣ ರಾಜ್ಯಗಳು ಮೂರು ಭಾಷಾ ಸೂತ್ರವನ್ನು ವಿರೋಧಿಸುತ್ತಿದ್ದಾರೆ.

ತಮಿಳುನಾಡು ಈ ಹಿಂದಿ ಹೇರಿಕೆಯನ್ನು ‘ಮುಸುಕಿನ ಆಟ’ ಎಂದು ಆರೋಪಿಸಿದೆ. ತಮಿಳುನಾಡಿನ ಮೊದಲ ಹಿಂದಿ ವಿರೋಧಿ ಆಂದೋಲನವು ಡಿಸೆಂಬರ್ 1937ರಲ್ಲಿ ಆರಂಭವಾಯಿತು, ಆಗಿನ ಮದ್ರಾಸ್ ಪ್ರೆಸಿಡೆನ್ಸಿಯ ಮುಖ್ಯಮಂತ್ರಿ ಸಿ. ರಾಜಗೋಪಾಲಾಚಾರಿ ಅವರು ಶಾಲೆಗಳಲ್ಲಿ ಹಿಂದಿಯನ್ನು ಕಡ್ಡಾಯಗೊಳಿಸುವ ಆದೇಶವನ್ನು ಹೊರಡಿಸಿದ ನಂತರ ಫೆಬ್ರವರಿ 1940ರವರೆಗೆ ಮುಂದುವರೆಯಿತು. ಹಿಂದಿಯ ಕಡ್ಡಾಯಗೊಳಿಕೆಯ ವಿರುದ್ಧ ಮುಂದಿನ ಸುತ್ತಿನ ಪ್ರತಿಭಟನೆಗಳು 1948ರಲ್ಲಿ ಸ್ವತಂತ್ರ ಭಾರತದಲ್ಲಿ ನಡೆದವು, ಒಮಾಂದೂರ್ ರಾಮಸ್ವಾಮಿ ರೆಡ್ಡಿ ನೇತೃತ್ವದ ಕ್ಯಾಬಿನೆಟ್ ಅದನ್ನು ಕಡ್ಡಾಯ ಭಾಷೆಯನ್ನಾಗಿ ಮಾಡಿದ ನಂತರ ಮೂರನೇ ಇಂತಹ ಆಂದೋಲನವು 1964 ಮತ್ತು 1965ರ ನಡುವೆ ನಡೆಯಿತು.

School Teacher

ಮುಖ್ಯವಾಗಿ ದಕ್ಷಿಣ ರಾಜ್ಯಗಳ ಶಿಕ್ಷಣ ನೀತಿಯಲ್ಲಿ ಅನೇಕ ಮಿತಿಗಳ ನಡುವೆಯೂ ದಾಖಲಾತಿ, ಸಾಕ್ಷರತೆ ಪ್ರಮಾಣ ಹೆಚ್ಚುತ್ತಿದೆ ಮತ್ತು ಉತ್ತರದ ಜೊತೆಗೆ ಹೋಲಿಸಿದರೆ ಶಾಲೆಗಳ ಗುಣಮಟ್ಟ ಪರವಾಗಿಲ್ಲ ಎನ್ನುವ ಸ್ಥಿತಿಯಲ್ಲಿದೆ. ಎಲ್ಲಾ ಶೈಕ್ಷಣಿಕ ಸೂಚ್ಯಂಕಗಳಲ್ಲಿ ಉತ್ತರ ಭಾರತವನ್ನು ಮೀರಿಸಿರುವ ದಕ್ಷಿಣ ರಾಜ್ಯಗಳಲ್ಲಿ ಈ ನೀತಿಯನ್ನು ವಿಶೇಷವಾಗಿ ಜಾರಿಗೊಳಿಸುವ ಅಗತ್ಯವೇನು? ಎನ್ನುವ ಪ್ರಶ್ನೆಗೆ ಉತ್ತರವೂ ಸರಳವಾಗಿದೆ.

ಮೊದಲನೆಯದಾಗಿ ಶಿಕ್ಷಣವನ್ನು ಖಾಸಗೀಕರಣ, ಕೋಮುವಾದೀಕರಣ, ಬ್ರಾಹ್ಮಣೀಕರಣ ಮತ್ತು ವ್ಯಾಪಾರೀಕರಣಕ್ಕೆ ಮುಂದಾಗಿರುವ ಬಿಜೆಪಿ ತನ್ನ ಕಾರ್ಯಸೂಚಿಯನ್ನು ಜಾರಿಗೊಳಿಸಲು ಈ ಹಿಂದಿ ಹೇರಿಕೆಯನ್ನು ಬಳಸಿಕೊಳ್ಳುತ್ತಿದೆ. ಹಿಂದಿನ ಭಾರತೀಯ ಜನಸಂಘವು ‘ಹಿಂದಿ ಎಂದರೆ ಹಿಂದೂ’ ಎಂದು ಪ್ರಚಾರ ಮಾಡುತ್ತಿದ್ದರು. ಈಗಿನ ಬಿಜೆಪಿ ಹಿಂದಿಯನ್ನು ಸಂಸ್ಕೃತೀಕರಣಗೊಳಿಸಿ ತನ್ನ ಬ್ರಾಹ್ಮಣವಾದಿ ಸಿದ್ಧಾಂತವನ್ನು ಬಿತ್ತಲು ಯೋಚಿಸುತ್ತಿದೆ. ಈ ಕಾರಣಕ್ಕಾಗಿ ಈ ಹೇರಿಕೆಯನ್ನು ಕೇವಲ ಭಾಷೆಯ ನೆಲೆಯಲ್ಲಿ ಮಾತ್ರ ವಿರೋಧಿಸದೆ ಸಮಾಜೋ-ಸಾಂಸ್ಕೃತಿಕ ನೆಲೆಗಳನ್ನು ಒಳಗೊಂಡಂತೆ ಸಮಗ್ರವಾಗಿ ಪ್ರತಿರೋಧ ವ್ಯಕ್ತಪಡಿಸಬೇಕು.

ಎರಡನೆಯದಾಗಿ ಈ ಕ್ರಮಕ್ಕೆ ಮೂಲಭೂತ ಸಾಂವಿಧಾನಿಕ ಜಟಿಲ ಸಮಸ್ಯೆಯಿದೆ. ಹಿಂದಿ ಮಾತನಾಡುವ ಉತ್ತರ ಭಾರತದ ರಾಜ್ಯಗಳ ಮಕ್ಕಳು ಇಂಗ್ಲಿಷ್ ಮತ್ತು ಹಿಂದಿ ಕೇವಲ ಎರಡು ಭಾಷೆಗಳನ್ನು ಮಾತ್ರ ಕಲಿಯುತ್ತಾರೆ. ಮತ್ತೊಂದೆಡೆ, ಮಹಾರಾಷ್ಟ್ರ, ಪಶ್ಚಿಮ ಬಂಗಾಳ ಮತ್ತು ಒಡಿಶಾದ ಜೊತೆಗಿರುವ ಐದು ದಕ್ಷಿಣ ರಾಜ್ಯಗಳ ಮಕ್ಕಳು ಮೂರು ಭಾಷೆಗಳನ್ನು ಕಲಿಯಬೇಕಾಗುತ್ತದೆ. ಮುಂದಿನ ವರ್ಷಗಳಲ್ಲಿ ಲೋಕಸಭಾ ಕ್ಷೇತ್ರಗಳನ್ನು ಜನಸಂಖ್ಯೆಯ ಆಧಾರದಲ್ಲಿ ಪುನರಚನೆ ಮಾಡಲು ಉತ್ಸುಕವಾಗಿರುವ ಬಿಜೆಪಿಗೆ ಇದನ್ನು ಬಳಸಿಕೊಂಡು ಉತ್ತರ ಭಾರತದ ರಾಜ್ಯಗಳ ಮತಬ್ಯಾಂಕ್‌ನ್ನು ಗಟ್ಟಿಗೊಳಿಸುವ ತಂತ್ರಗಾರಿಕೆ ಇದೆ.

ಮೂರನೆಯದಾಗಿ ಸಾಧ್ಯವಾದರೆ ಭಾಷೆಯ ಹೆಸರಿನಲ್ಲಿ ಉತ್ತರ ವರ್ಸಸ್ ದಕ್ಷಿಣ ಎನ್ನುವ ಜಗಳ ಸೃಷ್ಟಿಸಿ ಅದರ ಮೂಲಕವೂ ರಾಜಕೀಯ ಲಾಭ ಪಡೆದುಕೊಳ್ಳುವ ಹುನ್ನಾರವೂ ಇದೆ. ಈಗಾಗಲೇ ಧರ್ಮದ ಆಧಾರದಲ್ಲಿ ದ್ವೇಷ ಬಿತ್ತಿರುವ ಬಿಜೆಪಿಗೆ ಭಾಷೆಯ ಆಧಾರದಲ್ಲಿಯೂ ಈ ನೀತಿಯನ್ನು ಮುಂದುವರೆಸುವ ಯೋಜನೆ ಇದೆ. ಧರ್ಮದ ಪ್ರಮಾಣದಲ್ಲಿ ಅಲ್ಲದೇ ಹೋದರೂ ಸಹ ಭಾಷೆಯು ಸಹ ತೀವ್ರವಾದ ಭಾವುಕತೆ ಉಂಟುಮಾಡಲು ಕಾರಣವೆಂದರೆ, ಭಾಷೆಯು ಕೇವಲ ಸಂವಹನ ಮಾಧ್ಯಮವಲ್ಲ. ಇದು ಒಂದು ಜೀವಂತ ಪರಂಪರೆಯಾಗಿದ್ದು, ವಿಭಿನ್ನ ಸಮುದಾಯಗಳ ಭೂತಕಾಲದೊಂದಿಗೆ ಭಾವನಾತ್ಮಕ ಬಂಧವನ್ನು ಹೊಂದಿದೆ ಮತ್ತು ಜನರ ಸಾಮೂಹಿಕ ಸ್ಫೂರ್ತಿಯನ್ನು ರೂಪಿಸುತ್ತದೆ. ಪ್ರತಿಯೊಂದು ಭಾಷೆಯು ಅದನ್ನು ಬಳಸುವ ಚಾರಿತ್ರಿಕ ಮತ್ತು ಸಾಂಸ್ಕೃತಿಕ ಗುರುತಾಗಿದೆ. ಇದು ಅವರ ಇತಿಹಾಸ ಮತ್ತು ಸಂಸ್ಕೃತಿಗಳಿಗೆ ಧ್ವನಿಯನ್ನು ನೀಡುತ್ತದೆ. ಒಂದು ಭಾಷೆಯನ್ನು ನಾಶಪಡಿಸಲು ಪ್ರಯತ್ನಿಸಿದಾಗ, ಆ ಸಮುದಾಯಗಳ ಇತಿಹಾಸ, ಸಾಹಿತ್ಯ, ಕಾವ್ಯ, ಸಂಗೀತ, ನೆಲ ಸಂಸ್ಕೃತಿ ಮತ್ತು ಶತಮಾನಗಳಿಂದ ರೂಪಿಸಲ್ಪಟ್ಟ ಸೂಕ್ಷ್ಮ ಸಂವೇದನೆಗಳು ನಾಶವಾಗುತ್ತದೆ. ಭಾಷೆಯು ತಲೆಮಾರಿನಿಂದ ತಲೆಮಾರಿಗೆ ಸಾಂಸ್ಕೃತಿಕ ಗುರುತನ್ನು, ಮೌಖಿಕ ಮತ್ತು ಲಿಖಿತ ಇತಿಹಾಸದ ಮೂಲಕ ದಾಟಿಸುತ್ತದೆ.

ಮುಖ್ಯ ಟಿಪ್ಪಣಿಗಳು
ಮುಖ್ಯವಾಗಿ ಅಂಚಿನಲ್ಲಿರುವ ಸಮುದಾಯಗಳ ಭಾಷೆ, ಜ್ಞಾನ, ಅವರ ಬದುಕು ಮುಖ್ಯಧಾರೆಯ ಪಠ್ಯವಾಗಬೇಕು, ವ್ಯಾಸಂಗಕ್ರಮವಾಗಬೇಕು ಶಿಕ್ಷಣವಾಗಬೇಕು ಮತ್ತು ಈ ಮೂಲಕವೇ ಅಲೆಮಾರಿ, ಆದಿವಾಸಿ, ಪರಿಶಿಷ್ಟ ಸಮುದಾಯಗಳು ಮುಖ್ಯವಾಹಿನಿಗೆ ಸೇರಿಕೊಳ್ಳಬೇಕು. ಇದನ್ನೇ ಶಿಕ್ಷಣದಲ್ಲಿ ಭಾಷೆಯ ಕಲಿಕೆ ಎಂದು ಕರೆಯುತ್ತಾರೆ. ಭಾಷೆ ಎಂದರೆ ಕೇವಲ ಸಂವಹನ ಮಾತ್ರವಲ್ಲ ಅದು ಜ್ಞಾನ, ಅದು ಬದುಕು, ಅದು ಸಂಸ್ಕೃತಿ, ವ್ಯಕ್ತಿತ್ವ. ಎಲ್ಲಿಯವರೆಗೆ ಅಂಚಿನಲ್ಲಿರುವ ಎಲ್ಲ ತಳಸಮುದಾಯಗಳು ಮತ್ತು ಪರಿಶಿಷ್ಟ ಜಾತಿ, ಪಂಗಡಗಳ ಬಾಷೆ, ಬದುಕು, ಸಂಸ್ಕೃತಿ ನಮ್ಮ ಕನ್ನಡ ಶಿಕ್ಷಣದ ಭಾಗವಾಗುವುದಿಲ್ಲವೋ, ಕನ್ನಡದ ಕಲಿಕೆಯರಿಮೆಯಾಗುವುದಿಲ್ಲವೋ ಅಲ್ಲಿಯವರೆಗೆ ಈ ಮೂರು ಭಾಷಾ ಅಥವಾ ಎರಡು ಭಾಷಾ ಚರ್ಚೆಗೆ ಅರ್ಥವಿರುವುದಿಲ್ಲ.

ಇದನ್ನು ಓದಿದ್ದೀರಾ?: ಶಿಕ್ಷಣ ಸ್ಪೆಷಲ್ | ಸಮಾನ ಶಿಕ್ಷಣ, ಭಾಷಾ ನೀತಿ ಮತ್ತು ಪ್ರಭುತ್ವದ ಮುಸುಕಿನ ಆಟ

ಇಂದು ಬಹುತ್ವ ಸಮಾಜದ ನಿರ್ಮಾಣಕ್ಕೆ ಪೂರಕವಾದ ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯನ್ನು ಆರಂಭದ ಹಂತದಲ್ಲಿಯೇ ಕಟ್ಟಬೇಕಾಗಿದೆ. ಶಾಲೆಯನ್ನು ಸ್ಥಳೀಯ ಸೊಗಸಿಗೆ ತಕ್ಕಂತೆ ಮರು ನಿರ್ಮಿಸಬೇಕಾಗಿದೆ. ಇಲ್ಲಿ ಸಂಸ್ಕೃತಿ, ಸಾಹಿತ್ಯ, ರಂಗಭೂಮಿ, ಊರಿನ ಜನಪದ ಸಂಗ್ರಹಾಲಯ, ಅದೇ ಊರಿನ ಹಿರೀಕರ ಅನುಭವ ಕಥನಗಳು, ಸ್ಮೃತಿಕೋಶದಲ್ಲಿ ಹುದುಗಿರುವ ಸ್ಥಳೀಯ ಜ್ಞಾನಶಿಸ್ತುಗಳು, ನೆಲಗುರುತುಗಳು ಇತ್ಯಾದಿ ಇರುವಂತ ಮಾದರಿಯನ್ನು ಹೊಂದಿರಬೇಕು. ಆ ಬಗ್ಗೆ ಸ್ಥಳೀಯ ಸಮಸ್ತರಿಗೂ ಇರುವ ಕಾಳಜಿಯನ್ನು ಬಳಸಿಕೊಂಡೇ ಈ ಮರುನಿರ್ಮಾಣ ನಡೆಯಬೇಕು. ಅಂಥ ಸಂಸ್ಕೃತಿಯ ತಾಣ ಮಕ್ಕಳಿಗೆ ಮಣ್ಣಿನ ಸ್ಪರ್ಶ ನೀಡಬಲ್ಲದು.

ಮಗುವಿನ ಸಂಸ್ಕೃತಿ ಶಿಕ್ಷಣಕ್ಕೆ ಪೂರಕವಾಗುವಂತಹ ‘ದೇಸೀ’ ಕಲಾ ಪರಿಕರಗಳಿಂದ ಗ್ರಂಥಾಲಯ ರೂಪುಗೊಳ್ಳಬೇಕು.  ಮಕ್ಕಳ ತಂದೆತಾಯಿಗಳೂ ಬಿಡುವಿನ ವೇಳೆಯಲ್ಲಿ ಬಂದು ಮಕ್ಕಳೊಂದಿಗೆ ಕಾಲ ಕಳೆಯಬೇಕು. ತಮ್ಮ ನೆನಪಿನ ಬುತ್ತಿ ಹಂಚಿಕೊಳ್ಳಬೇಕು. ಸ್ಥಳೀಯ ಜನಪದ ಕಲಾವಿದರು ಈ ಮಕ್ಕಳಿಗೆ ಸಂಪನ್ಮೂಲ ವ್ಯಕ್ತಿಗಳಾಗಿ ತರಬೇತಿ ನೀಡಬೇಕು. ‘ಸಮುದಾಯ ಶಿಕ್ಷಣ’ವೆಂಬ ಪರಿಕಲ್ಪನೆ ಯಶಸ್ವಿಯಾಗಲು ಇಂಥ ಸಾಂಸ್ಕೃತಿಕ ವಾತಾವರಣ ಅತ್ಯಗತ್ಯ.

schools 1 1657166391 1

ಇದರ ಮಹತ್ವವನ್ನು ಅರಿತು ನಮ್ಮ ರಾಜಕೀಯ ಪಕ್ಷಗಳು ಬಹುತ್ವ, ಬಹು ಸಂಸ್ಕೃತಿ, ಶ್ರಮಣ ಸಂಸ್ಕೃತಿಯನ್ನು ಒಳಗೊಂಡ ಒಂದು ಮಾದರಿ ವ್ಯಾಸಂಗಕ್ರಮ(ಪೆಡಗಾಜಿ) ರೂಪಿಸಬೇಕಾಗಿದೆ. ರಾಜ್ಯದ ಎಲ್ಲಾ ಜಾತಿಯ, ವರ್ಗಗಳ ಮಕ್ಕಳಿಗೆ ಸಮಾನ ಶಿಕ್ಷಣವನ್ನು ಕೊಡಬೇಕೆನ್ನುವ ರಾಜಕೀಯ ಇಚ್ಛಾಶಕ್ತಿಯನ್ನು ರಾಜಕೀಯ ಪಕ್ಷಗಳು ಪ್ರದರ್ಶಿಸಬೇಕಾಗಿದೆ. ಮತ್ತು ಇದೆಲ್ಲವನ್ನು ಸಾಧಿಸಲು ಜನಾಂದೋಲನದ ಅಗತ್ಯವಿದೆ.

bhut sir
ಬಿ. ಶ್ರೀಪಾದ ಭಟ್
+ posts

ಶಿಕ್ಷಣ ತಜ್ಞರಾದ ಶ್ರೀಪಾದ ಭಟ್ ಅವರು, ಮೂಲತಃ  ವಿಜಯನಗರ ಜಿಲ್ಲೆಯವರು. ದಲಿತ ಮತ್ತು ಪ್ರಗತಿಪರ ಚಳವಳಿಗಳಲ್ಲಿ ಸಕ್ರಿಯರಾಗಿರುವ ಇವರು, 'ಹಿಂದುತ್ವ ರಾಜಕಾರಣ - ಅಂದು ಇಂದು ಮುಂದು', 'ಬಿಸಿಲು, ಬಯಲು, ನೆಳಲು - ಹೊಸ ಅಲೆ ಸಿನಿಮಾ ಕುರಿತಾದ ಕಥನ', 'ಕಣ್ಕಟ್ಟು', 'ಸಾವಿತ್ರಿಬಾಯಿ ಫುಲೆ ಬದುಕು ಬರಹ' ಮೊದಲಾದ ಕೃತಿಗಳನ್ನು ಬರೆದಿದ್ದಾರೆ

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಬಿ. ಶ್ರೀಪಾದ ಭಟ್
ಬಿ. ಶ್ರೀಪಾದ ಭಟ್
ಶಿಕ್ಷಣ ತಜ್ಞರಾದ ಶ್ರೀಪಾದ ಭಟ್ ಅವರು, ಮೂಲತಃ  ವಿಜಯನಗರ ಜಿಲ್ಲೆಯವರು. ದಲಿತ ಮತ್ತು ಪ್ರಗತಿಪರ ಚಳವಳಿಗಳಲ್ಲಿ ಸಕ್ರಿಯರಾಗಿರುವ ಇವರು, 'ಹಿಂದುತ್ವ ರಾಜಕಾರಣ - ಅಂದು ಇಂದು ಮುಂದು', 'ಬಿಸಿಲು, ಬಯಲು, ನೆಳಲು - ಹೊಸ ಅಲೆ ಸಿನಿಮಾ ಕುರಿತಾದ ಕಥನ', 'ಕಣ್ಕಟ್ಟು', 'ಸಾವಿತ್ರಿಬಾಯಿ ಫುಲೆ ಬದುಕು ಬರಹ' ಮೊದಲಾದ ಕೃತಿಗಳನ್ನು ಬರೆದಿದ್ದಾರೆ

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಗುಮಾನಿ ಹುಟ್ಟುಹಾಕಿದ ‘ವಿಲ್’; ‘ಕೊನೆಗಾಲದಲ್ಲಿ ಭೈರಪ್ಪ ಖಾತೆಯಿಂದ ದುಡ್ಡು ದೋಚಿದ್ದು ಯಾರು?’

"ಭೈರಪ್ಪನವರ ಉಯಿಲು (ವಿಲ್) ನೋಡುತ್ತಿದ್ದರೆ ಎಲ್ಲ ಪ್ಲ್ಯಾನ್ ಮಾಡಿ ಬರೆಸಿರುವಂತಿದೆ ಎಂದು...

ಶಾಶ್ವತ ನೀರಾವರಿಗಾಗಿ ʼಜಲಾಗ್ರಹʼ; ʼಮಾಡು ಇಲ್ಲವೇ ಮಡಿʼ ಹೋರಾಟಕ್ಕೆ ಸಜ್ಜಾದ ರೈತರು

ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳ ಶಾಶ್ವತ ನೀರಾವರಿಗಾಗಿ ಸುಮಾರು 30 ವರ್ಷಗಳಿಂದ ಹೋರಾಟ...

ಕಾಶ್ಮೀರದ ಹಳ್ಳಿಗಳಲ್ಲಿ ಮುಟ್ಟು ಈಗಲೂ ಗುಟ್ಟು: ಐದು ದಿನದ ರೋಗ ಅಂತ ಕರೀತಾರೆ!

"ಕಾಲ ಎಷ್ಟು ಬದಲಾದರೂ ಜಮ್ಮು ಮತ್ತು ಕಾಶ್ಮೀರದ ಹಲವು ಹಳ್ಳಿಗಳಲ್ಲಿ ಇಂದಿಗೂ...

NCRB report-2023 | ಹಲವು ಅಪರಾಧ ಕೃತ್ಯಗಳಲ್ಲಿ ಕರ್ನಾಟಕಕ್ಕೆ ಕುಖ್ಯಾತಿ

ಭಾರತದ ವಿವಿಧ ರಾಜ್ಯಗಳಲ್ಲಿ 2023ರಲ್ಲಿ ನಾನಾ ರೀತಿಯಲ್ಲಿ ನಡೆದಿರುವ ದಾಖಲಿತ ಅಪರಾಧ...

Download Eedina App Android / iOS

X