ವೀರಶೈವ ಜಂಗಮರು ನಕಲಿ ಬೇಡ ಜಂಗಮ ಪ್ರಮಾಣ ಪತ್ರ ಪಡೆದು ವಂಚಿಸುವವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಶುಕ್ರವಾರ ರಾಜ್ಯ ದಲಿತ ಸಂಘರ್ಷ ಸಮಿತಿಯ (ಕ್ರಾಂತಿಕಾರಿ) ನೇತ್ರತ್ವದಲ್ಲಿ ನಗರದಲ್ಲಿ ಜನ ಜಾಗೃತಿ ಹಾಗೂ ಪ್ರತಿಭಟನೆ ನಡೆಯಿತು.
ಕಲಬುರಗಿ ನಗರದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತ (ಜಗತ್) ದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಬೃಹತ್ ಪ್ರತಿಭಟನಾ ಮೆರವಣಿಗೆ ಮೂಲಕ ತೆರಳಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೆಸರಿಗೆ ಬರೆದ ಹಕ್ಕೊತ್ತಾಯ ಪತ್ರವನ್ನು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿದರು.
ಸಮಿತಿಯ ರಾಜ್ಯ ಸಂಚಾಲಕ ಅರ್ಜುನ ಭದ್ರೆ ಮಾತನಾಡಿ, ʼಲಿಂಗಾಯತ ಜಂಗಮರೇ ಬೇರೆ, ಬೇಡ ಜಂಗಮರೇ ಬೇರೆ ಲಿಂಗಾಯತ ಜಂಗಮರು ಬೇಡ ಜಂಗಮರು ಅಲ್ಲ, ಬುಡ್ಗ ಜಂಗಮರು ಅಲ್ಲ ಎಂದು ಹೈಕೋರ್ಟ್ ಐತಿಹಾಸಿಕ ತೀರ್ಪು ನೀಡಿದ್ದು ನಾವು ಸ್ವಾಗತಿಸುತ್ತೇವೆ. ಆದರೆ, ಅಸ್ಪೃಶ್ಯತೆ ಆಚರಿಸುವ ಲಿಂಗಾಯತ ಜಂಗಮರು (ಕೆಲವರು) ಮರ್ಯಾದೆ ಇಲ್ಲದೆ ಬೇಡ ಜಂಗಮರೆಂದು ಪರಶಿಷ್ಟ ಜಾತಿ ಪ್ರಮಾಣ ಪತ್ರ ಪಡೆಯುತ್ತಿರುವುದು ಕಾನೂನಿನ ಬಾಹಿರ ಎಂದು ಹೈಕೋರ್ಟ್ ಆದೇಶದಲ್ಲಿ ಹೇಳಿದೆʼ ಎಂದರು.
ʼಕಲಬುರಗಿಯ ಪೀಠವು ಬೀದರನ ರವೀಂದ್ರ ಸ್ವಾಮಿ ಎಂಬುವವರು ಸಲ್ಲಿಸಿದ್ದ ರೀಟ್ ಮೇಲ್ಮನವಿಯಲ್ಲಿ ಹೈಕೋರ್ಟ್ ಐತಿಹಾಸಿಕ ತೀರ್ಪು ನೀಡಿದೆ. ಜಂಗಮರು ಎಂಬ ಜಾತಿ ಹೆಸರು ಒಂದೇ ತರಹ ಇದ್ದರೆ ಆ ಜಾತಿಗಳಿಗೆ ಪರಶಿಷ್ಟ ಜಾತಿಗೆ ಸಿಗುವ ಅವಕಾಶಗಳು ನೀಡಬಾರದು ಎಂದು ಸುಪ್ರೀಮ್ ಕೋರ್ಟ್ ಪ್ರಭುದೇವ ಮಲ್ಲಿಕಾರ್ಜುನಯ್ಯ ಮತ್ತು ರಾಮಚಂದ್ರ ವಿರಪ್ಪ ಪ್ರಕರಣದಲ್ಲಿ ತೀರ್ಪು ನೀಡಿದೆ’ ಎಂದು ಹೇಳಿದರು
ಮುಖ್ಯಮಂತ್ರಿ ಸಿದ್ರಾಮಯ್ಯ ಅವರು ಡಾ. ರವೀಂದ್ರನಾಥ ಅವರ ಅವಧಿಯ ಆಧಾರದ ಮೇಲೆ 1,097 ನಕಲಿ ಜಾತಿ ಪ್ರಮಾಣ ಪತ್ರ ಪಡೆದವರ ಮೇಲೆ ಮತ್ತು 165 ನಕಲಿ ಜಾತಿ ಪ್ರಮಾಣ ಪತ್ರ ನೀಡಿದ ತಹಸೀಲ್ದಾರರ ಮೇಲೆ ಕ್ರಮ ಜರುಗಿಸಿ ವಿಶ್ವನಾಥ ಪಿಳ್ಳೆ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪಿನ ಪ್ರಕಾರ ಪರಶಿಷ್ಟ ಜಾತಿ ಮತ್ತು ಪರಶಿಷ್ಟ ಪಂಗಡಗಳ ಹೆಸರಿನಲ್ಲಿ ನಕಲಿ ಜಾತಿ ಪ್ರಮಾಣ ಪತ್ರ ನೀಡಿ ನೌಕರಿ ಪಡೆದರೆ ಅವರನ್ನು ವಿಚಾರಣೆ ಇಲ್ಲದೆ ವಜಾ ಮಾಡಬೇಕು. ನಕಲಿ ಜಾತಿ ಪಡೆದವರು ಸೇವೆಯಿಂದ ನಿವೃತ್ತಿ ಹೊಂದಿದರೂ ಅವರ ಮೇಲೆ ಪ್ರಕರಣ ದಾಖಲಾಗುತ್ತದೆ. ಅವರ ಸೇವಾ ಅವಧಿಯ ಸಂಬಳ ಮತ್ತು ನಿವೃತ್ತಿ ಬಳಿಕದ ಪಿಂಚಣಿ ವಸೂಲಿ ಮಾಡಬಹುದು. ಇಂತಹ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಅಸ್ತ್ರವನ್ನು ಪ್ರಯೋಗಿಸಬೇಕುʼ ಎಂದು ಒತ್ತಾಯಿಸಿದರು.
ಒಂಬತ್ತು ಇಲಾಖೆಗಳಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಸರಕಾರಿ ಸಿಬ್ಬಂದಿಗೆ ಮುಂಬಡ್ತಿಯಲ್ಲಿ ವಂಚನೆಯಾಗಿದ್ದು, ಕೆಲವು ಇಲಾಖೆಯ ಜಾತಿವಾದಿ ಹಿರಿಯ ಅಧಿಕಾರಿಗಳು, ಮೀಸಲಾತಿಯ ರೋಸ್ಟರ್ ಉಲ್ಲಂಘಿಸಿದ್ದಾರೆ. ಇದರಿಂದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ನೌಕರರು ಮುಂಬಡ್ತಿಯಿಂದ ವಂಚಿತರಾಗಿದ್ದಾರೆ. ಈ ಅನ್ಯಾಯವನ್ನು ಸರಿಪಡಿಸಲು ಎಐಸಿಸಿ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ನೌಕರರಿಗೆ ಮುಂಬಡ್ತಿಯಲ್ಲಾದ ಅನ್ಯಾಯವನ್ನು ಸರಿಪಡಿಸಲು ತಮಗೆ ಪತ್ರ ಬರೆದಿದ್ದಾರೆ. ಪತ್ರದಲ್ಲಿರುವ ಅಂಶಗಳ ಬಗ್ಗೆ ಕೂಡಲೇ ಕ್ರಮ ತೆಗೆದುಕೊಂಡು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ನೌಕರರಿಗೆ ನ್ಯಾಯ ಒದಗಿಸಿಕೊಡಬೇಕು ಎಂದು ಪತ್ರದಲ್ಲಿ ಉಲ್ಲೇಖಿಸಿ ಆಗ್ರಹಿಸಿದರು.
ಬುಡ್ಗ ಜಂಗಮ ಸಮುದಾಯದವರು ವೇಷ ಭೂಷಣದೊಂದಿಗೆ ಪ್ರತಿಭಟನೆಯಲ್ಲಿ ಭಾಗವಹಿಸಿದ್ದು ಗಮನ ಸೆಳೆಯಿತು.
ಇದನ್ನೂ ಓದಿ : ಬೀದರ್ | ಮದ್ಯಪಾನ ಮಾಡಿ ವಾಹನ ಚಾಲನೆ : ಇಬ್ಬರಿಗೆ ದಂಡ ವಿಧಿಸಿದ ನ್ಯಾಯಾಲಯ
ಪ್ರತಿಭಟನೆಯಲ್ಲಿ ಸಮಿತಿಯ ರಾಜ್ಯ ಸಂಘಟನಾ ಸಂಚಾಲಕ ಮಲ್ಲಿಕಾರ್ಜುನ ಕ್ರಾಂತಿ, ರಾಜ್ಯ ಸಂಘಟನಾ ಸಂಚಾಲಕ ಮರೆಪ್ಪ ಹಳ್ಳಿ, ಬುಡ್ಗ ಜಂಗಮ ಜಿಲ್ಲಾಧ್ಯಕ್ಷ, ಪಂಡಿತ ಸುರಾವತಿ, ಜಿಲ್ಲಾ ಸಂಚಾಲಕ ಮಹಾಂತೇಶ ಬಡದಾಳ, ಯಾದಗಿರ ಜಿಲ್ಲಾ ಸಂಚಾಲಕ ಡಾ.ಮಲ್ಲಿಕಾರ್ಜುನ ಆಶನಾಳ, ಕಲಬುರಗಿ ಜಿಲ್ಲಾ ಸಂಘಟನಾ ಸಂಚಾಲಕ ಮಲ್ಲಿಕಾರ್ಜುನ ಖನ್ನಾ ಸೇರಿದಂತೆ ಪ್ರಮುಖರಾದ ರಾಜಕುಮಾರ ನಿಂಬಾಳ, ಸೂರ್ಯಕಾಂತ ಅಜಾದಪೂರ, ಶಿವಕುಮಾರ ಕೊರಳ್ಳಿ, ಅಜ್ಜಿಸಾಬ ಐಕೂರ, ಮಲ್ಲಿಕಾರ್ಜುನ ಕುರಕುಂದಿ, ಮಲ್ಲಿಕಾರ್ಜುನ ಶಾಖಾನವರ, ಲಿಂಗಣ್ಣಾ ಮಳ್ಳಳ್ಳಿ, ಶೇಖರ ಜೀವಣಗಿ ಮತ್ತಿತರರು ಪಾಲ್ಗೊಂಡಿದ್ದರು.