ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಇಸ್ಲಾಂಪುರವನ್ನು ಈಶ್ವರಪುರ ಎಂದು ಮರುನಾಮಕರಣ ಮಾಡಲಾಗುತ್ತಿದೆ ಎಂದು ಮಹಾರಾಷ್ಟ್ರ ಸರ್ಕಾರ ಶುಕ್ರವಾರ ಘೋಷಿಸಿದೆ. ಮಳೆಗಾಳದ ಅಧಿವೇಶನದ ಕೊನೆಯ ದಿನವಾದ ಇಂದು ವಿಧಾನಸಭೆಯಲ್ಲಿ ಸರ್ಕಾರ ಈ ಘೋಷಣೆ ಮಾಡಿದೆ.
ಗುರುವಾರ ನಡೆದ ಸಂಪುಟ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಛಗನ್ ಭುಜಬಲ್ ಹೇಳಿದ್ದಾರೆ. ಇನ್ನು ರಾಜ್ಯ ಸರ್ಕಾರವು ಸಂಪುಟದ ನಿರ್ಧಾರವನ್ನು ಕೇಂದ್ರದ ಅನುಮೋದನೆಗೆ ಕಳುಹಿಸುತ್ತದೆ ಎಂದೂ ಸಚಿವರು ತಿಳಿಸಿದ್ದಾರೆ.
ಇದನ್ನು ಓದಿದ್ದೀರಾ? ದಕ್ಷಿಣ ಕನ್ನಡವೇಕೆ ಮಂಗಳೂರು ಆಗಬೇಕು; ಏನಿದು ಮರುನಾಮಕರಣ ಕೂಗು?
ಹಿಂದುತ್ವ ಸಂಘಟನೆಯಾದ ಶಿವ ಪ್ರತಿಷ್ಠಾನವು ಇಸ್ಲಾಂಪುರ ಹೆಸರನ್ನು ಈಶ್ವರಪುರ ಎಂದು ಬದಲಾಯಿಸಬೇಕೆಂದು ಒತ್ತಾಯಿಸಿತ್ತು. ಸಂಭಾಜಿ ಭಿಡೆ ನೇತೃತ್ವದ ಶಿವ ಪ್ರತಿಷ್ಠಾನವು ಬೇಡಿಕೆ ಈಡೇರುವವೆಗೂ ಪ್ರತಿಭಟನೆ ನಡೆಸುವುದಾಗಿ ಹೇಳಿದ್ದರು. ಹಾಗೆಯೇ ಈ ಬೇಡಿಕೆ 1986ರಿಂದ ಇದೆ ಎಂದೂ ಹೇಳಲಾಗಿದೆ.
ಹಲವು ರಾಜ್ಯಗಳಲ್ಲಿ ಬಿಜೆಪಿ ಸರ್ಕಾರವು ಸ್ಥಳದ ಚಿರಪರಿಚಿತ ಹೆಸರನ್ನು ಬದಲಾಯಿಸುತ್ತಿದ್ದು ಇದು ಕೇಸರಿಕರಣ ಮತ್ತು ಇತಿಹಾಸವನ್ನು ತಿರುಚು ಪ್ರಯತ್ನ ಎಂದು ವಿಪಕ್ಷಗಳು ಆರೋಪಿಸಿದೆ. ಈಗಾಗಲೇ ವಿಶ್ವವಿಖ್ಯಾತ ತಾಜ್ಮಹಲ್ ಹೆಸರೂ ಬದಲಾಯಿಸುವ ಪ್ರಸ್ತಾಪವನ್ನು ಬಿಜೆಪಿ ಮಾಡಿದೆ.
