ಬಿಹಾರದಲ್ಲಿ ಒಂದು ವಾರದಲ್ಲಿ ಸಿಡಿಲು ಬಡಿದು ಕನಿಷ್ಠ 33 ಜನರು ಸಾವನ್ನಪ್ಪಿದ್ದಾರೆ ಮತ್ತು 12ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ. ಬಿಹಾರದಲ್ಲಿ ಬುಧವಾರ ಮತ್ತು ಗುರುವಾರ ಭೀಕರ ಬಿರುಗಾಳಿ ಸಂಭವಿಸಿದ್ದು ಈ ವೇಳೆ ಅಧಿಕ ಮಂದಿ ಮೃತಪಟ್ಟಿದ್ದಾರೆ ಎಂದು ವಿಪತ್ತು ನಿರ್ವಹಣಾ ಇಲಾಖೆ ಹೇಳಿದೆ.
ಇನ್ನು ಈ ಮಳೆ ಅಬ್ಬರಕ್ಕೆ ಬಲಿಯಾದವರಲ್ಲಿ ಹೆಚ್ಚಿನವರು ರೈತರು ಮತ್ತು ಕಾರ್ಮಿಕರು ಎಂದು ವರದಿಯಾಗಿದೆ. ಕಾರ್ಮಿಕರು, ರೈತರು ಕೆಲಸ ಮಾಡುತ್ತಿದ್ದಾಗ ಸಿಡಿಲು ಬಡಿದು ಮೃತಪಟ್ಟಿದ್ದಾರೆ. ಇನ್ನು ಬಿಹಾರದಲ್ಲಿ ಕೆಲವು ಭಾಗಗಳಲ್ಲಿ ಅಧಿಕ ಮಳೆ ಮತ್ತು ಮಿಂಚಿನ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.
ಇದನ್ನು ಓದಿದ್ದೀರಾ? ಉತ್ತರ ಪ್ರದೇಶ, ಬಿಹಾರದಲ್ಲಿ ಭಾರೀ ಮಳೆ; ಏ. 10-12ರ ನಡುವೆ ಸಿಡಿಲು ಬಡಿದು 126 ಮಂದಿ ಸಾವು
ಈ ಬಗ್ಗೆ ಮಾಧ್ಯಮಕ್ಕೆ ಮಾಹಿತಿ ನೀಡಿರುವ ಬಿಹಾರ ರಾಜ್ಯದ ವಿಪತ್ತು ನಿರ್ವಹಣಾ ಸಚಿವ ವಿಜಯ್ ಕುಮಾರ್ ಮಂಡಲ್, “ದುರ್ಬಲ ಜಿಲ್ಲೆಗಳಲ್ಲಿನ ಅಧಿಕಾರಿಗಳಿಗೆ ಮಿಂಚು ಹೆಚ್ಚಾಗುವ ಬಗ್ಗೆ ಎಚ್ಚರಿಕೆ ನೀಡಲಾಗಿದೆ. ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುವಂತೆ ಸೂಚಿಸಲಾಗಿದೆ” ಎಂದು ಹೇಳಿದ್ದಾರೆ.
ಇನ್ನು ಸಿಡಿಲಿನಿಂದ ಸಾವನ್ನಪ್ಪಿದವರ ಕುಟುಂಬಗಳಿಗೆ ರಾಜ್ಯ ಸರ್ಕಾರ 40 ಲಕ್ಷ ರೂಪಾಯಿ ಪರಿಹಾರವನ್ನು ಘೋಷಿಸಿತು. 2024ರಲ್ಲಿ ಕನಿಷ್ಠ 243 ಮಂದಿ ಸಿಡಿಲು ಬಡಿದು ಮೃತಪಟ್ಟಿದ್ದಾರೆ. 2023ರಲ್ಲಿ 275 ಮಂದಿ ಸಾವನ್ನಪ್ಪಿದ್ದರು.
