ರಾಯಚೂರು | ಕನಿಷ್ಠ ಸೌಕರ್ಯವಿಲ್ಲದ ಮಾರುಕಟ್ಟೆ; ನಡು ರಸ್ತೆಯಲ್ಲೇ ವ್ಯಾಪಾರ

Date:

Advertisements

ಪ್ರಾದೇಶಿಕ ಶಹರೀ ಅಭಿವೃದ್ಧಿಯ ಧ್ಯೇಯವಿರುವ ಸರ್ಕಾರಗಳು ಮಾರುಕಟ್ಟೆ, ರಸ್ತೆ, ಚರಂಡಿ, ಪಾದಚಾರಿ ಮಾರ್ಗ ಮುಂತಾದ ಮೂಲಸೌಕರ್ಯಗಳ ಅಭಿವೃದ್ಧಿಗೆ ಬೃಹತ್ ಯೋಜನೆಗಳನ್ನು ಪ್ರಕಟಿಸುತ್ತವೆ. ಆದರೆ ಇವು ನಿಜವಾಗಿಯೂ ಕಾರ್ಯರೂಪಕ್ಕೆ ಬಂದು ಪ್ರಜೆಗಳಿಗೆ ತಲುಪುವುದು ಕೇವಲ ವರದಿಗಳಲ್ಲಿ. ಕನಿಷ್ಠ ಸೌಕರ್ಯಗಳಿಲ್ಲದೆ ರಾಯಚೂರಿನ ಮಾರುಕಟ್ಟೆಯೊಂದು ಬಣಗುಡುತ್ತಿದ್ದು, ವರ್ತಕರು ರಸ್ತೆಯಲ್ಲೇ ವ್ಯಾಪಾರ ಮಾಡಬೇಕಾಗಿರುವ ಅನಿವಾರ್ಯತೆ ಎದುರಾಗಿದೆ.

ರಾಯಚೂರಿನ ಸಿರವಾರ ಪಟ್ಟಣದಲ್ಲಿ ನಿರ್ಮಿತವಾಗಿರುವ ತರಕಾರಿ ಮಾರುಕಟ್ಟೆಯ ಸ್ಥಿತಿ ಮತ್ತು ವ್ಯಾಪಾರಿಗಳ ದೈನಂದಿನ ಕಷ್ಟಗಳು ಇದಕ್ಕೆ ಜೀವಂತ ಉದಾಹರಣೆಯಾಗಿದೆ. ಮಾರುಕಟ್ಟೆ ಇದ್ದರೂ ಮಳಿಗೆಗಳು ಪಾಳು ಬಿದ್ದಿವೆ. ಮುಖ್ಯ ರಸ್ತೆಯಲ್ಲಿ ಹಾಗೂ ಫುಟ್‌ಪಾತಿನಲ್ಲಿ ಕುಳಿತು ವ್ಯಾಪಾರ ಮಾಡಬೇಕಾಗಿದೆ ಹಾಗೂ ಸುತ್ತಮುತ್ತ ಚರಂಡಿಗಳ ಮೇಲೆ ಕೂತು ವಾಸನೆಯಲ್ಲಿಯೇ ವ್ಯಾಪಾರ ಮಾಡುವಂತಾಗಿದೆ ಎಂದು ವ್ಯಾಪಾರಸ್ಥರು ಆರೋಪಿಸಿದ್ದಾರೆ.

ಪಟ್ಟಣದಲ್ಲಿ ಪ್ರತಿ ಸೋಮವಾರ ವಾರದ ಸಂತೆ ನಡೆಯುತ್ತದೆ. ಸಂತೆಗೆ ತಾಲೂಕಿನ ಸುತ್ತಮುತ್ತ ಹಳ್ಳಿಗಳಿಂದ ಸಾವಿರಾರು ಸಂಖ್ಯೆಯಲ್ಲಿ ಜನರು, ವ್ಯಾಪಾರಸ್ಥರು ಬರುತ್ತಾರೆ. ದುರ್ವಾಸನೆಯ ಸಂಕಟ ಒಂದು ಕಡೆಯಾದರೆ, ಮುಖ್ಯ ರಸ್ತೆಯಲ್ಲೇ ವಾಹನಗಳನ್ನು ನಿಲ್ಲಿಸಿ ಬರುವಂತಾಗಿದೆ. ಅದರಿಂದಾಗಿ ಪದೇ ಪದೇ ಸಂಚಾರ ಅಸ್ತವ್ಯಸ್ತಗೊಳ್ಳುತ್ತಿದೆ.

WhatsApp Image 2025 07 18 at 5.53.22 PM 1

ಆರ್‌ಐಡಿಎಫ್ ಯೋಜನೆಯಡಿ ಅನುದಾನದಲ್ಲಿ ನಿರ್ಮಿಸಲಾದ ತರಕಾರಿ ಮಾರುಕಟ್ಟೆ ಮಳಿಗೆಗಳು ಉದ್ಘಾಟನೆಯಿಲ್ಲದೆ ಪಾಳು ಬಿದ್ದಿವೆ. ತರಕಾರಿ ಮಾರುಕಟ್ಟೆಯಲ್ಲಿ ಸೂಕ್ತ ವ್ಯವಸ್ಥೆಯಿಲ್ಲದೆ ವ್ಯಾಪಾರಸ್ಥರು ಅಂಗಡಿ ಮುಂಗಟ್ಟುಗಳ ಹಾಗೂ ಮುಖ್ಯ ರಸ್ತೆ, ಬಯಲು ಜಾಗದಲ್ಲಿ ಕೂತು ವ್ಯಾಪಾರ ಮಾಡಬೇಕಾಗಿದೆ.

ಸಿರವಾರ ತಾಲೂಕು ಘೋಷಣೆಯಾಗಿ ಸುಮಾರು 8 ವರ್ಷಗಳು ಕಳೆದರೂ ವ್ಯಾಪಾರಸ್ಥರಿಗೆ ಕುಡಿಯುವ ನೀರು, ಮಹಿಳೆಯರಿಗೆ ಶೌಚಾಲಯವೂ ಇಲ್ಲ. ಬಯಲೇ ಶೌಚಾಲಯವಾಗಿದೆ. ಮಳೆ ಬಂದರೆ ದವಸ ಧಾನ್ಯಗಳು, ತರಕಾರಿಗಳು ಕೆಟ್ಟು ನಷ್ಟಕ್ಕೆ ಸಿಲುಕುವಂತಾಗಿದೆ.

ಈ ಭಾಗದಲ್ಲಿ ಹೆಚ್ಚಿನ ಬಿಸಿಲು ಇರುವುದರಿಂದ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಬಿರುತ್ತಿದೆ. ಕೂಡಲೇ ಸಂಬಂಧಿಸಿದ ಅಧಿಕಾರಿಗಳು ತರಕಾರಿ ಮಾರುಕಟ್ಟೆ ಕಡೆ ಗಮನಹರಿಸಿ ಮಳಿಗೆಗಳನ್ನು ಉದ್ಘಾಟಿಸಿ ತರಕಾರಿ ವ್ಯಾಪಾರಸ್ಥರಿಗೆ ಮಾರಾಟ ಮಾಡಲು ಅನುಕೂಲ ಮಾಡಿಕೊಡಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಸ್ವಲ್ಪ ಜೋರಾಗಿ ಮಳೆ ಸುರಿದರೆ ಸಾಕು, ಮಾರುಕಟ್ಟೆಯ ಸಂಪರ್ಕದ ರಸ್ತೆಗಳೆಲ್ಲ ಕಾಲುವೆಗಳಂತಾಗುತ್ತವೆ. ಅವೆನ್ಯೂ ರಸ್ತೆಯಲ್ಲಿ ಮಳೆ ಬಂದಾಗ ಒಳಚರಂಡಿಯ ಚೇಂಬರ್‌ಗಳು ತೆರೆದುಕೊಂಡು ಕೊಳಚೆ ನೀರು ಹೊರಗೆ ಹರಿಯುತ್ತದೆ. ಮಾರುಕಟ್ಟೆಯಲ್ಲಿ ಸರಿಯಾದ ಚರಂಡಿ ವ್ಯವಸ್ಥೆಯೇ ಇಲ್ಲ ಎಂದು ವ್ಯಾಪಾರಿಗಳು ಪರಿಸ್ಥಿತಿ ವಿವರಿಸಿದರು.

WhatsApp Image 2025 07 18 at 5.53.23 PM

ವ್ಯಾಪಾರಸ್ಥೆ ಗಂಗಮ್ಮ ಈದಿನದೊಂದಿಗೆ ಮಾತನಾಡಿ, “ವಾರದ ಸಂತೆಯಲ್ಲಿ ವ್ಯಾಪಾರಿಗಳು ಕೆಸರಿನ ನಡುವೆ ನಿಂತು ವ್ಯಾಪಾರ ನಡೆಸಬೇಕಾದ ಅನಿವಾರ್ಯತೆಗೆ ಇದೆ. ಸುಮಾರು 30 ವರ್ಷಗಳಿಂದ ಈ ಮಾರುಕಟ್ಟೆಯಲ್ಲಿ ವ್ಯಾಪಾರ ಮಾಡುತ್ತಾ ಬಂದಿದ್ದೇನೆ. ಅಲ್ಲಿಂದ ಇಲ್ಲಿಯವೆರಗೂ ರಸ್ತೆಯಲ್ಲಿ, ಚರಂಡಿ ಮೇಲೆ ಕುಳಿತೇ ವ್ಯಾಪಾರ ಮಾಡಬೇಕಾಗಿದೆ” ಎಂದು ಅಸಮಾಧಾನ ವ್ಯಕ್ತಪಡಿಸಿದರು.

“ಪುರಸಭೆಯವರು ಮಾರುಕಟ್ಟೆಯಲ್ಲಿ ಒಬ್ಬರಿಗೆ 80 ರೂಪಾಯಿಯಂತೆ ಟ್ಯಾಕ್ಸ್ ಕಟ್ಟಿಸಿಕೊಳ್ಳುತ್ತಾರೆ. ಸುಮಾರು 250ಕ್ಕಿಂತ ಹೆಚ್ಚು ವ್ಯಾಪಾರಸ್ಥರಿದ್ದಾರೆ. ಆದರೆ, ಇಲ್ಲಿವರೆಗೂ ಮಹಿಳೆಯರಿಗೆ ಶೌಚಾಲಯ,‌ ಕುಡಿಯುವ ನೀರು, ಯಾವುದೇ ಮೂಲಸೌಕರ್ಯದ ಕೊರತೆಯನ್ನು ನೀಗಿಸಿಲ್ಲ. ಪ್ರಶ್ನೆ ಮಾಡಿದರೆ, ದಬಾಯಿಸಿ ಸುಮ್ಮನೆ ಇರಲು ಹೇಳುತ್ತಾರೆ. ಹಾಗೆ ವಾದ ಮಾಡಿದರೆ ಎತ್ತಂಗಡಿ ಮಾಡುತ್ತಾರೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮೌನೇಶ್ ಮಾತನಾಡಿ, “ಮಳೆಗಾಲದಲ್ಲಿ ವಿಪರೀತ ಸಮಸ್ಯೆ ಉಂಟಾಗುತ್ತದೆ. ನೀರು ನುಗ್ಗಿ ದವಸ ಧಾನ್ಯಗಳು, ತರಕಾರಿಗಳು ಹಾಳಾಗುತ್ತವೆ. ಮಳೆಯಲ್ಲಿ ನೆನೆದು ಮತ್ತು ಚರಂಡಿ ಎಲ್ಲಾ ತುಂಬಿ ವಾಸನೆಯಲ್ಲಿ ಕುಳಿತು ಅನಾರೋಗ್ಯಕ್ಕೆ ತುತ್ತಾಗುತ್ತಿದ್ದೇವೆ ಎಂದರು.

ಮಾರುಕಟ್ಟೆಯ ಪ್ರಾಂಗಣದಲ್ಲಿ ಬಿದ್ದಿರುವ ಕಸದ ರಾಶಿ, ಮಳೆ ಬಂದಾಗಲೆಲ್ಲ ಕೆಸರು ಗದ್ದೆಯಾಗುವ ಅಂಗಳ, ಮಾರುಕಟ್ಟೆಯ ಹಿಂಭಾಗದ ರಸ್ತೆಯ ಮೇಲೆ ಹರಿಯುವ ಒಳಚರಂಡಿ ನೀರಿನಿಂದ ಇಡೀ ಪ್ರದೇಶವೇ ಗಬ್ಬೆದ್ದು ನಾರುತ್ತಿದೆ. ನಿತ್ಯ ಈ ದುರ್ವಾಸನೆಯ ನಡುವೆಯೇ ವ್ಯಾಪಾರ ವಹಿವಾಟು ನಡೆಯುತ್ತಿದೆ.

ತರಕಾರಿಯ ಸಾಮಗ್ರಿಗಳನ್ನು ತಿಪ್ಪೆಯಲ್ಲಿಡಬೇಕು. ಗ್ರಾಹಕರು ಹೊಲಸು ಕಂಡರೆ ಖರೀದಿ ಮಾಡಲು ಹಿಂದೇಟು ಹಾಕುತ್ತಾರೆ. ಕೆಲವೊಮ್ಮೆ ವ್ಯಾಪಾರ ಇಲ್ಲದೆ ಹಾಗೆ ಮನೆಗೆ ತೆರಳ ಬೇಕಾಗಿದೆ. ಇಲ್ಲಿಗೆ ಬರುವ ಗ್ರಾಹಕರಿಗೂ ವಾಹನ ನಿಲ್ಲಿಸಲು ತೊಂದರೆ ಉಂಟಾಗಿದೆ ಎಂದು ಅಳಲು ತೋಡಿಕೊಂಡರು.

ಪುರಸಭೆ ಅಧ್ಯಕ್ಷರಿಗೆ ಸಂಪರ್ಕಿಸಲಾಗಿ, ಅವರು ಕರೆ ಸ್ವೀಕರಿಸಿರುವುದಿಲ್ಲ.

WhatsApp Image 2025 07 18 at 5.53.22 PM

ಕೇಂದ್ರ ಸರ್ಕಾರ ದೇಶದ 100 ನಗರಗಳನ್ನು ಸ್ಮಾರ್ಟ್‌ ಸಿಟಿ ಮಾಡಲು ಹೊರಟಿದೆ. ಆದರೆ ರಾಯಚೂರಿನ ಈ ಮಾರುಕಟ್ಟೆ ಈ ಶೋಚನೀಯ ಸ್ಥಿತಿಯಲ್ಲಿರುವುದು ಕಂಡ ಮೇಲೂ “ಸ್ಮಾರ್ಟ್” ಎಂಬ ಶಬ್ದ ಉಪಯೋಗಿಸುವುದು ಸಮಂಜಸವಲ್ಲವೇನೋ. ಪ್ರತಿದಿನವೂ ಸಾಗುತ್ತಿರುವ ದುರ್ವಾಸನೆಯ ವ್ಯಾಪಾರವನ್ನ ಬರೀ ನೋಡಿ ಕೂರುವ ಆಡಳಿತ, ನಿಜಕ್ಕೂ ಪ್ರಜಾಪ್ರಭುತ್ವದ ಸೇವೆಯಲ್ಲ.

ಸಾರ್ವಜನಿಕರು, ವ್ಯಾಪಾರಸ್ಥರು ಹಲವು ಬಾರಿ ಈ ಬಗ್ಗೆ ಪುರಸಭೆಗೆ ದೂರು ನೀಡಿದರೂ ಸ್ಪಂದನೆಯಿಲ್ಲ. ಪರಿಣಾಮವಾಗಿ ಜನರಲ್ಲಿ ಆಡಳಿತದ ಮೇಲೆ ನಂಬಿಕೆ ಕುಂದುತ್ತಿದೆ. ಟ್ಯಾಕ್ಸ್ ಕಟ್ಟುವವರು ಸೇವೆ ನಿರಾಕರಿಸಲ್ಪಡುವ ಸ್ಥಿತಿಗೆ ಬಿದ್ದರೆ, ಅದು ಖಂಡಿತ ಜನಪರ ಆಡಳಿತವಲ್ಲ.

ಇದನ್ನೂ ಓದಿ: ರಾಯಚೂರು | ಟೋಲ್ ಗೇಟ್ ತೆರವಿಗೆ ಶಾಸಕಿ ಕರೆಮ್ಮ ಆಗ್ರಹ

ಹಾಗಾಗಿ ಈಗಾಗಲೇ ವಿಳಂಬವಾದ ಈ ಪರಿಸ್ಥಿತಿಗೆ ತಕ್ಷಣ ಶಾಶ್ವತ ಪರಿಹಾರ ನೀಡಬೇಕಾಗಿದೆಯೇ ಹೊರತು, ಇನ್ನಷ್ಟು ಒತ್ತಡದ ನಂತರ ತಿದ್ದುವುದು ಅರ್ಥವಿಲ್ಲದ ಕಾರ್ಯವಾಗುತ್ತದೆ. ಸರಕಾರ, ಪುರಸಭೆ ಮತ್ತು ಸಂಬಂಧಪಟ್ಟ ಅಧಿಕಾರಿಗಳು ತರಕಾರಿ ಮಾರುಕಟ್ಟೆಯ ಮಳಿಗೆಗಳನ್ನು ಉದ್ಘಾಟಿಸಿ, ಅಗತ್ಯ ಮೂಲಸೌಕರ್ಯಗಳನ್ನು ತಕ್ಷಣ ಒದಗಿಸಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟವನ್ನೇ ಮಾಡಿ ಬೇಕಾದವನ್ನು ಪಡೆಯುತ್ತೇವೆ ಎನ್ನುತ್ತಾರೆ ಮಾರುಕಟ್ಟೆಯ ವರ್ತಕರು.

Rafi
ರಫಿ ಗುರುಗುಂಟ
+ posts

ಗುಲಬರ್ಗಾ ವಿವಿಯಿಂದ ಪತ್ರಿಕೋದ್ಯಮದಲ್ಲಿ ಎಂ ಎ ಪದವಿ, ಕಲ್ಯಾಣ ಕರ್ನಾಟಕ ವಲಯ ಕೋರ್ಡಿನೇಟರ್

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ರಫಿ ಗುರುಗುಂಟ
ರಫಿ ಗುರುಗುಂಟ
ಗುಲಬರ್ಗಾ ವಿವಿಯಿಂದ ಪತ್ರಿಕೋದ್ಯಮದಲ್ಲಿ ಎಂ ಎ ಪದವಿ, ಕಲ್ಯಾಣ ಕರ್ನಾಟಕ ವಲಯ ಕೋರ್ಡಿನೇಟರ್

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಯುವಪರಿವರ್ತನೆ ಯಾತ್ರೆ: ಬಾಗಲಕೋಟೆಯಲ್ಲಿ ಚಾಲನೆ

ಯುವಜನರನ್ನು ರಾಜ್ಯದ ಅಭಿವೃದ್ಧಿಯತ್ತ ಚಿತ್ತಹರಿಸಲು, ಪ್ರಜೆಗಳ ಆರೋಗ್ಯ, ಶಿಕ್ಷಣ, ಸಬಲೀಕರಣ, ಉದ್ಯೋಗದ...

ಕೊಪ್ಪಳ | ಪ್ರವಾದಿ ಮಹಮ್ಮದ್‌ ಸಂದೇಶವನ್ನು ನಾವು ಪಾಲನೆ ಮಾಡಬೇಕು: ಲಾಲ್ ಹುಸೇನ್ ಕಂದ್ಗಲ್

'ಖುರಾನ್' ಬರುವ ಪ್ರವಾದಿ ಮಹಮ್ಮದ್‌ ಅವರು ಹೇಳಿದ ಸತ್ಯವನ್ನೇ ಭಾರತೀಯ ಪುರಾಣಗಳು...

ಶಿವಮೊಗ್ಗದ ಸಂಚಾರ ವ್ಯವಸ್ಥೆಯಲ್ಲಿ ಅರಾಜಕತೆ: ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ನಾಗರಿಕರು ಹೈರಾಣು

ಒಮ್ಮೆ ಶಾಂತ, ಶಿಕ್ಷಣ ಹಾಗೂ ಸಂಸ್ಕೃತಿಯ ತಾಣವಾಗಿದ್ದ ಶಿವಮೊಗ್ಗ ನಗರ ಇತ್ತೀಚಿನ...

ತುಮಕೂರು | ಗಾಂಧೀ ತತ್ವಗಳಿಗೆ ವಿಶ್ವ ಮನ್ನಣೆ : ಡಾ. ಜಿ.ಪರಮೇಶ್ವರ

ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಅಹಿಂಸಾ ತತ್ವಗಳಿಗೆ ಇಡೀ ವಿಶ್ವದಲ್ಲಿಯೇ ಮನ್ನಣೆ ದೊರೆತಿದೆ...

Download Eedina App Android / iOS

X