“ಇದು ಕೊನೆಯ ಹೋರಾಟವಾಗಿದೆ. ಒಳಮೀಸಲಾತಿ ಜಾರಿಯನ್ನು ಮುಂದೂಡಿದರೆ ಕಾಂಗ್ರೆಸ್ ಸರ್ಕಾರ ತನ್ನ ಅವನತಿಯನ್ನು ಅನುಭವಿಸುತ್ತದೆ” ಎಂದು ಹೋರಾಟಗಾರರು ಎಚ್ಚರಿಸಿದರು
ಜಸ್ಟಿಸ್ ಎಚ್.ಎನ್. ನಾಗಮೋಹನ ದಾಸ್ ಅವರ ನೇತೃತ್ವದ ಏಕ ಸದಸ್ಯ ಆಯೋಗವೂ ಈಗಾಗಲೇ ಒಳಮೀಸಲಾತಿಗಾಗಿ ಸಮೀಕ್ಷೆ ಮುಗಿಸಿದ್ದು, ಆಯೋಗ ತುರ್ತಾಗಿ ಶಿಫಾರಸ್ಸುಗಳನ್ನು ನೀಡಬೇಕು ಮತ್ತು ಸರ್ಕಾರ ಅವುಗಳನ್ನು ತಕ್ಷಣವೇ ಜಾರಿಗೆ ತರಬೇಕು ಎಂದು ಒತ್ತಾಯಿಸಿ ಪ್ರತಿಭಟನೆ ನಡೆಸಲು ಹೋರಾಟಗಾರರು ನಿರ್ಧರಿಸಿದ್ದಾರೆ.
ಬೆಂಗಳೂರಿನ ಗಾಂಧಿ ಭವನದಲ್ಲಿ ನಡೆದ ಸಮಾಲೋಚನಾ ಸಭೆಯಲ್ಲಿ ಪಾಲ್ಗೊಂಡಿದ್ದ ಒಳಮೀಸಲಾತಿ ಚಳವಳಿಗಾರರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು.
ಹಿರಿಯ ಹೋರಾಟಗಾರರಾದ ಅಂಬಣ್ಣ ಅರೋಲಿಕರ್ ಮಾತನಾಡಿ, “ಜಸ್ಟಿಸ್ ದಾಸ್ ಅವರ ಶಿಫಾರಸ್ಸುಗಳು ತುರ್ತಾಗಿ ಸರ್ಕಾರಕ್ಕೆ ಮುಟ್ಟಬೇಕಾಗಿದೆ. ಸರ್ಕಾರ ವಿಳಂಬ ಮಾಡದೆ ಶಿಫಾರಸ್ಸುಗಳ ಅನುಷ್ಠಾನ ಮಾಡಬೇಕು. ಇದಕ್ಕಾಗಿ ಪಕ್ಷಾತೀತವಾಗಿ ಒತ್ತಾಯಿಸುತ್ತಿದ್ದೇವೆ” ಎಂದರು.
“ಪಕ್ಷ ರಾಜಕಾರಣ ನಮ್ಮನಮ್ಮ ವೈಯಕ್ತಿಕ ವಿಚಾರಗಳಾಗಿವೆ. ಆದರೆ ನಮ್ಮ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು, ಪಕ್ಷಭೇದಗಳನ್ನು ಮರೆತು ಬಲಿಷ್ಠ ಹೋರಾಟವನ್ನು ಕಟ್ಟಬೇಕಾಗಿದೆ. ಈ ತಿಂಗಳ 30ರೊಳಗೆ ಆಯೋಗವು ವರದಿಯನ್ನು ಕೊಡಬೇಕಾಗಿದೆ. ತಕ್ಷಣವೇ ಸರ್ಕಾರ ಅದನ್ನು ಜಾರಿಗೆ ತರುತ್ತದೆಯೇ ಎಂಬುದು ನಮ್ಮ ಮುಂದಿನ ಪ್ರಶ್ನೆ. ಸಾಮೂಹಿಕವಾಗಿ ನಾವು ಮುಂದೆ ನಡೆಯೋಣ” ಎಂದು ಆಶಿಸಿದರು.
ಇದನ್ನೂ ಓದಿರಿ: ಸಾರಿಗೆ ನೌಕರರ ವಿರುದ್ಧ ಸರ್ಕಾರ ಎಸ್ಮಾ ಜಾರಿ, ಆರು ತಿಂಗಳವರೆಗೂ ಪ್ರತಿಭಟಿಸುವಂತಿಲ್ಲ
“ಇದು ಕೊನೆಯ ಹೋರಾಟವಾಗಿದೆ. ಒಳಮೀಸಲಾತಿ ಜಾರಿಯನ್ನು ಮುಂದೂಡಿದರೆ ಕಾಂಗ್ರೆಸ್ ಸರ್ಕಾರ ತನ್ನ ಅವನತಿಯನ್ನು ಅನುಭವಿಸುತ್ತದೆ” ಎಂದು ಎಚ್ಚರಿಸಿದರು.
ಸಾಮಾಜಿಕ ನ್ಯಾಯಕ್ಕಾಗಿ ಒಳಮೀಸಲಾತಿ ಜಾರಿ ಹೋರಾಟ ಸಮಿತಿಯ ಮುಖಂಡರಾದ ಬಸವರಾಜ್ ಕೌತಾಳ್ ಅವರು ಮಾತನಾಡಿ, “ಮೂರು ದಶಕ ಚಳವಳಿ ನಡೆಸಿದವರು ಅಂತಿಮ ಹೋರಾಟಕ್ಕೆ ಸಜ್ಜಾಗುತ್ತಿದ್ದಾರೆ. ಆಗಸ್ಟ್ 1ನೇ ತಾರೀಕು ಬಂದರೆ ಸುಪ್ರೀಂಕೋರ್ಟ್ ತೀರ್ಪಿಗೆ ಒಂದು ವರ್ಷ ತುಂಬುತ್ತದೆ. ಇಷ್ಟು ವಿಳಂಬವಾಗಿದ್ದು ನೋಡಿದರೆ ಸರ್ಕಾರ ಪ್ರಾಮಾಣಿಕವಾಗಿ ಕೆಲಸ ಮಾಡಲಿಲ್ಲ ಎಂದೇ ಹೇಳಬೇಕು. ಆದರೆ ನಾಗಮೋಹನ ದಾಸ್ ಆಯೋಗದ ಸಮೀಕ್ಷೆ ಮುಗಿದಿದೆ. ಈ ತಿಂಗಳ 30ರೊಳಗೆ ಸಮಗ್ರವಾದ ಶಿಫಾರಸ್ಸನ್ನು ಸಲ್ಲಿಸಬೇಕು. ಮುಂದಿನ ಅಧಿವೇಶನದಲ್ಲಿಯೇ ಶಿಫಾರಸ್ಸುಗಳನ್ನು ಜಾರಿಗೆ ತರಬೇಕು” ಎಂದು ಒತ್ತಾಯಿಸಿದರು.
ಅಲೆಮಾರಿ ಸಮುದಾಯದ ಪ್ರತಿನಿಧಿ ಲೋಹಿತ್ ಮಾತನಾಡಿ, “ಅಲೆಮಾರಿ ಮತ್ತು ಅತ್ಯಂತ ಸೂಕ್ಷ್ಮಾತಿ ಸೂಕ್ಷ್ಮ ಸಮುದಾಯಗಳನ್ನು ಒಂದು ಗುಂಪಿನಲ್ಲಿ ಸೇರಿಸಿದರೆ ನಮಗೆ ಆತಂಕವಿಲ್ಲ. ಆದರೆ ದೊಡ್ಡ ಸಂಖ್ಯೆಯಲ್ಲಿರುವ ಸಮುದಾಯದ ಗುಂಪಿನಲ್ಲಿ ನಮ್ಮನ್ನು ಸೇರಿಸಿದರೆ ಅನ್ಯಾಯವಾಗುತ್ತದೆ. ಸರ್ಕಾರಕ್ಕೆ ಇದನ್ನು ಮನವರಿಕೆ ಮಾಡಿಕೊಡಬೇಕು” ಎಂದು ಕೋರಿದರು.
ಹಿರಿಯ ಹೋರಾಟಗಾರ ಕರಿಯಪ್ಪ ಗುಡಿಮನಿ ಅವರು ಮಾತನಾಡಿ, “ನಾವು ತಡಮಾಡದೆ ಹೋರಾಟಕ್ಕೆ ಇಳಿಯಬೇಕಾಗಿದೆ. ಮತ್ತೆಮತ್ತೆ ಸರ್ಕಾರವನ್ನು ಕೇಳುವಂತಾಗಬಾರದು. ನಾವು ಈಗ ಬೆಂಗಳೂರಿನಲ್ಲಿ ಕೂತರೇ ಒಳಮೀಸಲಾತಿ ಹೋರಾಟ ಪತ್ರವನ್ನು ತೆಗೆದುಕೊಂಡೇ ಊರಿಗೆ ಹಿಂತಿರುಗಬೇಕು. ಶೀಘ್ರದಲ್ಲೇ ಒಂದು ಪತ್ರಿಕಾಗೋಷ್ಠಿ ನಡೆಸಿ, ಮುಂದಿನ ರೂಪುರೇಷಗಳ ಕುರಿತು ಸಮಾಜಕ್ಕೆ ತಿಳಿಸಬೇಕು. ಬಿಜೆಪಿ ಸಂಘಪರಿವಾರ ಎನ್ನುವವರನ್ನು ಈ ಹೋರಾಟದೊಳಗೆ ಸೇರಿಸಿಕೊಳ್ಳಬಾರದು” ಎಂದು ಸಲಹೆ ನೀಡಿದರು.
ಇದನ್ನೂ ಓದಿರಿ: ಧರ್ಮಸ್ಥಳ ಪ್ರಕರಣ | ಯಾವುದೇ ಒತ್ತಡಕ್ಕೆ ಮಣಿಯಲ್ಲ, ಸದ್ಯ ಎಸ್‌ಐಟಿ ರಚನೆಯಿಲ್ಲ: ಮುಖ್ಯಮಂತ್ರಿ ಸಿದ್ದರಾಮಯ್ಯ
ಕೆವಿಎಸ್ ಸಂಘಟನೆಯ ದುರಗೇಶ್ ಮಾತನಾಡಿ, “ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕಾಗಿದೆ. ಜಿಲ್ಲಾವಾರು ಸಭೆಗಳನ್ನು ನಡೆಸಬೇಕಾಗಿದೆ. ನಮ್ಮೊಳಗಿನ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಮುನ್ನಡೆಯಬೇಕಾಗಿದೆ” ಎಂದು ತಿಳಿಸಿದರು.
ಮುಖಂಡರಾದ ಅಜಿತ್ ಕುಮಾರ್ ಸಿರಿವಾರ, ಅನಿಕುಮಾರ್ ಮಾನ್ವಿ, ವಿಠ್ಠಲ ಮಾದಾರ, ಕೆಎಂಆರ್‌ವಿ ರಾಮಕೃಷ್ಣ, ತಿಪ್ಪೇಸ್ವಾಮಿ, ಎಚ್.ಎಂ.ಶಿವಮೂರ್ತಿ, ಕಸ್ತೂರಿ ಮಂಜುನಾಥ್, ಜೆ.ಸಿ.ರಂಗಧಾಮಯ್ಯ, ಕೆ.ಎನ್.ಹರೀಶ್, ಎನ್.ಬಸವರಾಜ, ನಂಜಪ್ಪ ಜೆ., ನಾಗಭೂಷಣ, ಬಿ.ಎ.ನಾಗರಾಜ್, ರಘು ಕಾಮಾಕ್ಷಿಪಾಳ್ಯ, ಅಭಿಷೇಕ್ ಕೆ., ಎಚ್.ಸಿ.ಸೋಮಶೇಖರ್, ವಿ.ಶ್ರೀನಿವಾಸ್, ವಿ.ಸಾಗರ್, ಗಜೇಂದ್ರಕುಮಾರ್, ಎ.ನರಸಿಂಹಮೂರ್ತಿ, ಜಿ.ಶಿವಕುಮಾರ್, ನಾಗಯ್ಯ, ನರಸಿಂಹಲು ಮೊದಲಾದ ಮುಖಂಡರು ಸಭೆಯಲ್ಲಿ ಹಾಜರಿದ್ದರು.
