ಕರ್ನಾಟಕ ದಲಿತ ಸಂಘರ್ಷ ಸಮಿತಿ (ರಿ) ಅಂಬೇಡ್ಕರ್ ವಾದ ಇದರ ವತಿಯಿಂದ ರಾಜ್ಯಾದ್ಯಂತ ಇಂದು ರಾಜ್ಯದ ಎಲ್ಲಾ ತಾಲೂಕು ಕೇಂದ್ರಗಳಲ್ಲಿ ದಲಿತರ ಭೂಮಿ ಮತ್ತು ವಸತಿ ಹಕ್ಕಿಗಾಗಿ ಹಾಗೂ ಇತರೆ ಹಕ್ಕೋತ್ತಾಯಗಳಿಗೆ ಆಗ್ರಹಿಸಿ ಪ್ರತಿಭಟನೆ ನಡೆಸಲಾಯಿತು.
ಅದರಂತೆ ಬ್ರಹ್ಮಾವರ ತಾಲೂಕು ಕಛೇರಿ ಎದುರು ಪ್ರತಿಭಟನೆ ನಡೆಸಲಾಯಿತು. ಪ್ರತಿಭಟನೆಯನ್ನು ಹಿರಿಯ ಮುಖಂಡರಾದ ಅಣ್ಣಪ್ಪ ಕುಕ್ಕುಡೆ ಮತ್ತು ವಾರಂಬಳ್ಳಿ ಪಂಚಾಯತ್ ನ ಮಾಜಿ ಅಧ್ಯಕ್ಷರಾದ ಎಸ್.ನಾರಾಯಣ ಅವರು ಅಂಬೇಡ್ಕರ್ ಭಾವಚಿತ್ರಕ್ಕೆ ಹೂ ಹಾರ ಹಾಕುವ ಮೂಲಕ ಉದ್ಘಾಟಿಸಿದರು.
ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ದ.ಸಂ.ಸ. ಮೈಸೂರು ವಿಭಾಗೀಯ ಸಂಘಟನಾ ಸಂಚಾಲಕರಾದ ಶ್ಯಾಮರಾಜ್ ಬಿರ್ತಿ, ಈ ದೇಶದಲ್ಲಿ ಭೂಮಿಯಿಂದ ವಂಚಿತರಾದ ಸಮುದಾಯ ಒಂದಿದ್ದರೆ ಅದು ದಲಿತ ಸಮುದಾಯ. ಬಾಬಾಸಾಹೇಬರು ನಮಗೆ ಶಿಕ್ಷಣ ಸಂಘಟನೆ ಹೋರಾಟ ಎಂಬ ಮೂರು ಧ್ಯೇಯ ವಾಕ್ಯವನ್ನು ಕೊಟ್ಟರು. ಶಿಕ್ಷಣ ನಮಗೆ ಜ್ಞಾನದ ಸಂಪತ್ತನ್ನು ಕೊಟ್ಟರೇ ಭೂಮಿಯು ನಮಗೆ ಆರ್ಥಿಕ ಸಂಪತ್ತನ್ನು ಕೊಡುತ್ತದೆ. ಎಷ್ಟೇ ಶಿಕ್ಷಣ ಪಡೆದರೂ ಉದ್ಯೋಗ ಸಿಗದ ಈ ಕಾಲಘಟ್ಟದಲ್ಲಿ ಜೀವನೋಪಾಯಕ್ಕಾಗಿ ಭೂಮಿಯನ್ನು ಕೇಳುದು ಅನಿವಾರ್ಯವಾಗಿದೆ. ಭೂಮಿ ಇದ್ದರೆ ಮಾತ್ರ ನಾವು ಅಭಿವೃದ್ಧಿ ಹೊಂದಲು ಸಾಧ್ಯ.
ಉಡುಪಿ ಜಿಲ್ಲೆಯಲ್ಲಿ ಸಾಕಷ್ಟು ಡಿಸಿ ಮನ್ನಾ ಭೂಮಿ ಇದ್ದರೂ ಜಿಲ್ಲಾಡಳಿತ ಅದನ್ನು ಭೂರಹಿತರಿಗೆ ಹಂಚುತ್ತಿಲ್ಲಾ, ಹೆಚ್ಚಿನ ಡಿಸಿ ಮನ್ನಾ ಭೂಮಿಯನ್ನು ಮೇಲ್ವರ್ಗದವರು ಅತಿಕ್ರಮಣ ಮಾಡಿಕೊಂಡಿದ್ದಾರೆ. ಅತಿಕ್ರಮಣವಾದ ಡಿಸಿ ಮನ್ನಾ ಭೂಮಿಯನ್ನು ತೆರವುಗೊಳಿಸಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಭೂರಹಿತರಿಗೆ ಹಂಚಬೇಕು.
ಹಾಗೆಯೇ ಅಕ್ರಮ ಸಕ್ರಮದಲ್ಲೂ ಸಹ ಪರಿಶಿಷ್ಟ ಜಾತಿ ಮತ್ತು ಪಂಗಡದವರ ಅರ್ಜಿಗಳನ್ನು ವಿಲೇವಾರಿ ಮಾಡದೇ ಬರಿ ಶ್ರೀಮಂತರ ಮತ್ತು ಮೇಲ್ವರ್ಗದವರಿಗೆ ಜಮೀನು ಮಂಜೂರು ಮಾಡಿದ್ದಾರೆ. ಸರಕಾರಿ ಭೂ ಹಂಚಿಕೆ ಸಮಯದಲ್ಲಿ ಶೇಖಡಾ 50 ರಷ್ಟು ಭೂಮಿಯನ್ನು ನಿಮ್ಮ ವರ್ಗದವರಿಗೆ ಕಾದಿರಿಸಬೇಕೆಂಬ ಕಾನೂನು ಇದ್ದರೂ ಆ ಕಾನೂನನ್ನು ಗಾಳಿಗೆ ತೂರಿ ರಾಜಕಾರಣಿಗಳು ತಮ್ಮ ತಮ್ಮ ಜನಾಂಗದವರಿಗೇ ಮಂಜೂರು ಮಾಡಿದ್ದು ಮಾಹಿತಿ ಹಕ್ಕಿನಲ್ಲಿ ಸಿಕ್ಕಿದೆ.
ಕೇವಲ ಎರಡು ಎಕರೆ ಪಟ್ಟಾ ಭೂಮಿ ಹೊಂದಿರುವ ಮೇಲ್ವರ್ಗದ ಜನಗಳು ತಮ್ಮ ಜಮೀನಿನ ಸುತ್ತ 5 ಎಕರೆ 10 ಎಕರೆ ಸರಕಾರಿ ಭೂಮಿಗೆ ಬೇಲಿಹಾಕಿಕೊಂಡು ಅದು ನಮ್ಮ ಖುಮ್ಕಿ ಭೂಮಿ ಎಂದು ವಾದಿಸುತ್ತಿದ್ದಾರೆ. ಸರಕಾರದ ಮೊತ್ತ ಮೊದಲಿಗೆ ಖುಮ್ಕಿ ಹಕ್ಕುಗಳನ್ನು ರದ್ದು ಪಡಿಸಿ ಆ ಖುಮ್ಕಿ ಭೂಮಿಯನ್ನು ಸ್ವಾದಿನಪಡಿಸಿಕೊಂಡು ಭೂ ರಹಿತ ದಲಿತರಿಗೆ ಮಂಜೂರು ಮಾಡಬೇಕು.
ಅಕ್ರಮ ಸಕ್ರಮ ಸಮತಿಯೇ ಅಕ್ರಮವೆಸಗಿ ಸರಕಾರಿ ಉದ್ಯೋಗದಲ್ಲಿ ಇರುವವರಿಗೂ ಅಕ್ರಮ ಸಕ್ರಮದಲ್ಲಿ ಐದಾರು ಎಕರೆ ಭೂಮಿ ಮಂಜೂರು ಮಾಡಿದೆ. ಹೆಬ್ರಿಯ ಚಾರ ಗ್ರಾಮದಲ್ಲಿ ಸರಕಾರಿ ಶಾಲಾ ಶಿಕ್ಷಕಿಗೆ ನಾಲ್ಕೈದು ಎಕರೆ ಭೂಮಿ ಅಕ್ರಮ ಸಕ್ರಮದಲ್ಲಿ ಮಂಜೂರಾಗಿದೆ. ಆದಷ್ಟು ಬೇಗನೇ ದಲಿತರ ಬೇಡಿಕೆ ಇಡೇರಿಸದೇ ಇದ್ದರೇ ಉಡುಪಿ ಜಿಲ್ಲಾಧಿಕಾರಿ ಕಛೇರಿ ಮುಂದೆ ಹಗಲು ರಾತ್ರಿ ಅನಿಷ್ಟಾವಧಿ ಸತ್ಯಾಗ್ರಹ ನಡೆಸಲಾಗುವುದು ಎಂದರು.
ಬೆಳಿಗ್ಗೆಯಿಂದ ಪ್ರತಿಭಟನೆ ನಡೆಸುತ್ತಿರುವಾಗ ಖುದ್ದು ತಹಸೀಲ್ದಾರ್ ಶ್ರೀಕಾಂತ್ ಹೆಗ್ಡೆಯವರೇ ಪ್ರತಿಭಟನಾ ಸ್ಥಳಕ್ಕೆ ಬಂದು ಮನವಿ ಸ್ವೀಕರಿಸಿದರು. ಬ್ರಹ್ಮಾವರ ತಾಲೂಕು ಕಛೇರಿ ಎದುರು ನಡೆದ ಪ್ರತಿಭಟನೆಯಲ್ಲಿ ಜಿಲ್ಲಾ ಸಂಘಟನಾ ಸಂಚಾಲಕಾದ ಶ್ಯಾಮಸುಂದರ್ ತೆಕ್ಕಟ್ಟೆ, ಕುಮಾರ್ ಕೋಟ, ಮಂಜುನಾಥ ಬಾಳ್ಕುದ್ರು, ತಾಲೂಕು ಸಂಚಾಲಕರಾದ ಹರೀಶ್ಚಂದ್ರ ಬಿರ್ತಿ, ಸಂಘಟನಾ ಸಂಚಾಲಕರಾದ ಶ್ರೀನಿವಾಸ ವಡ್ಡರ್ಸೆ, ಪ್ರಕಾಶ್ ಹೇರೂರು, ಸುಧಾಕರ ಮಾಸ್ತರ್ ಗುಜ್ಜರ್ ಬೆಟ್ಟು, ಬಿರ್ತಿ ಸುರೇಶ, ಪ್ರಶಾಂತ್ ಬಿರ್ತಿ, ಚೈತನ್ಯ ಬಿರ್ತಿ, ಕುಸುಮಾ ಹಂಗಾರಕಟ್ಟೆ, ಆರೂರು ಸಂಚಾಲಕರಾದ ನರಸಿಂಹ ಆರೂರು, ಶರತ್ ಆರೂರು, ಬೋಜರಾಜ್ ತಲ್ಲೂರು ಮೊದಲಾದವರು ಉಪಸ್ಥಿತರಿದ್ದರು.