ಶ್ರಾವಣ ತಿಂಗಳಲ್ಲಿ ಕನ್ವರ್ ಯಾತ್ರೆ ನಡೆಯುವ ಸಂದರ್ಭದಲ್ಲಿ ಯಾರೂ ಮಾಂಸಾಹಾರ ಸೇವಿಸಬಾರದು ಎಂಬ ಆಹಾರ ಹೇರಿಕೆಯನ್ನು ಉತ್ತರ ಪ್ರದೇಶದ ಗಾಜಿಯಾಬಾದ್‌ನಲ್ಲಿ ಹಿಂದೂ ಸಂಘಟನೆಗಳು ಮಾಡುತ್ತಿದೆ. ಹಿಂದೂ ರಕ್ಷಾ ದಳ(ಎಚ್‌ಆರ್‌ಡಿ)ದ ಕಾರ್ಯಕರ್ತರು ಗಾಜಿಯಾಬಾದ್‌ನ ಇಂದಿರಾಪುರಂ ಪ್ರದೇಶದ ಕೆಎಫ್‌ಸಿ ಔಟ್‌ಲೆಟ್‌ಗೆ ನುಗ್ಗಿ ದಾಂಧಲೆ ನಡೆಸಿದ್ದು, ರೆಸ್ಟೋರೆಂಟ್‌ಗಳನ್ನು ಮುಚ್ಚಿಸಿದ್ದಾರೆ. ‘ಜೈ ಶ್ರೀ ರಾಮ್’ ಮತ್ತು ‘ಹರ್ ಹರ್ ಮಹಾದೇವ್’ ಎಂದು ಘೋಷಣೆಗಳನ್ನು ಕೂಗುತ್ತಾ ಪ್ರತಿಭಟನೆ ನಡೆಸಿದ್ದಾರೆ.
ಉತ್ತರ ಪ್ರದೇಶದಲ್ಲಿ ಜುಲೈ 11ರಿಂದ ಶ್ರಾವಣ ಮಾಸ ಆರಂಭವಾಗಿದ್ದು, ಕನ್ವರ್ ಯಾತ್ರೆ ನಡೆಯುತ್ತಿದೆ. ಈ ಸಮಯದಲ್ಲಿ ಮಾಂಸಾಹಾರಿ ಆಹಾರವನ್ನು ರೆಸ್ಟೋರೆಂಟ್‌ಗಳಲ್ಲಿ ನೀಡಬಾರದು ಎಂದು ಹಿಂದೂ ಸಂಘಟನೆಗಳು ಒತ್ತಾಯಿಸಿದೆ. ಹೋಟೆಲ್, ರೆಸ್ಟೋರೆಂಟ್‌ಗಳಿಗೆ ನುಗ್ಗಿ ದಾಂಧಲೆ ನಡೆಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಇದನ್ನು ಓದಿದ್ದೀರಾ? ನವರಾತ್ರಿ | ಮಧ್ಯಪ್ರದೇಶದ ಪಟ್ಟಣದಲ್ಲಿ ಮಾಂಸಾಹಾರ ನಿಷೇಧ; ಆದೇಶ ಉಲ್ಲಂಘಿಸಿದರೆ ಪರವಾನಗಿ ರದ್ದು
ಮತ್ತೊಂದು ವಿಡಿಯೋದಲ್ಲಿ ಪ್ರತಿಭಟನಾಕಾರರು ‘ಜೈ ಶ್ರೀ ರಾಮ್’ ಮತ್ತು ‘ಹರ್ ಹರ್ ಮಹಾದೇವ್’ ಎಂದು ಘೋಷಣೆಗಳನ್ನು ಕೂಗುತ್ತಾ ರೆಸ್ಟೋರೆಂಟ್‌ಗೆ ನುಗ್ಗುತ್ತಿರುವುದು ಕಂಡುಬಂದಿದೆ. ಶ್ರಾವಣ ಮಾಸದಲ್ಲಿ ಕಾರ್ಯಾಚರಣೆ ಸ್ಥಗಿತಗೊಳಿಸಬೇಕು ಅಥವಾ ಸಸ್ಯಾಹಾರಿ ಆಹಾರವನ್ನು ಮಾತ್ರ ನೀಡಬೇಕು ಎಂದು ಸಿಬ್ಬಂದಿಗಳ ಬಳಿ ಹೇಳುತ್ತಿರುವುದು ಕಂಡುಬಂದಿದೆ.
ಈ ಗುಂಪಿನ ಮುಖ್ಯಸ್ಥ ಪಿಂಕಿ ಚೌಧರಿ, “ನಮ್ಮ ಸಂದೇಶ ಸ್ಪಷ್ಟವಾಗಿದೆ. ಕನ್ವರ್ ಯಾತ್ರೆಯ ಸಮಯದಲ್ಲಿ ಎಲ್ಲಾ ಮಾಂಸಾಹಾರಿ ಆಹಾರ ಮಳಿಗೆಗಳು ಮುಚ್ಚಬೇಕು. ರೆಸ್ಟೋರೆಂಟ್ ತೆರೆದಿರಬೇಕು ಎಂದು ಬಯಸುವುದಾದರೆ ಸಸ್ಯಾಹಾರವನ್ನು ಮಾತ್ರ ನೀಡಬೇಕು” ಎಂದು ಹೇಳಿದ್ದಾರೆ.
UTTER IDIOCY: a self styled Hindu vigilante group storms a KFC outlet in Ghaziabad and forces it to shut down, saying can’t sell meat during the month of Sawan. Please don’t eat chicken, but why stop others? And why are cops missing in action yet again ? JIYO AUR JEENE DO for… pic.twitter.com/NYdczVhZpn
— Rajdeep Sardesai (@sardesairajdeep) July 18, 2025
ಇನ್ನು ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದಂತೆ, ಟ್ರಾನ್ಸ್-ಹಿಂಡನ್ ಪ್ರದೇಶದ ಡಿಸಿಪಿ ನಿಮಿಷ್ ಪಾಟೀಲ್, ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (ಬಿಎನ್‌ಎಸ್‌ಎಸ್) ಸೆಕ್ಷನ್ 163 ಅನ್ನು ಜಾರಿ ಮಾಡಿದ್ದಾರೆ. ಪ್ರತಿಭಟನಾಕಾರರು ಸಾರ್ವಜನಿಕ ಸುವ್ಯವಸ್ಥೆಗೆ ಧಕ್ಕೆ ತಂದಿದ್ದಾರೆ ಎಂದೂ ಹೇಳಿದ್ದಾರೆ.
ಸದ್ಯ ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್) ಸೆಕ್ಷನ್ 223 ರ ಅಡಿಯಲ್ಲಿ 10 ಅಪರಿಚಿತ ವ್ಯಕ್ತಿಗಳ ವಿರುದ್ಧ ಸ್ವಯಂಪ್ರೇರಿತ ಎಫ್‌ಐಆರ್ ದಾಖಲಿಸಲಾಗಿದೆ. ಹಾಗೆಯೇ ಘಟನೆಯಲ್ಲಿ ಭಾಗಿಯಾಗಿರುವ ಆರೋಪಿಗಳನ್ನು ಗುರುತಿಸುವ ಪ್ರಕ್ರಿಯೆ ನಡೆಯುತ್ತಿದೆ ಎಂದು ಡಿಸಿಪಿ ಹೇಳಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ
ಕಳೆದ ವರ್ಷವೂ ಶ್ರಾವಣ ಮಾಂಸದಲ್ಲಿ ಮಾಂಸಹಾರ ತಿನ್ನುವವರ ವಿರುದ್ಧ ಆಹಾರ ಹೇರಿಕೆಯ ಪ್ರಯತ್ನ ನಡೆದಿತ್ತು. ಪ್ರಧಾನಿ ನರೇಂದ್ರ ಮೋದಿ ಅವರೇ ಮಾಂಸಹಾರ ಸೇವಿಸಿದ ವಿಪಕ್ಷ ನಾಯಕರುಗಳನ್ನು ಟೀಕಿಸಿ ಕೀಳುಮಟ್ಟದ ರಾಜಕೀಯಕ್ಕೆ ಇಳಿದಿದ್ದರು. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಆಹಾರ ಹೇರಿಕೆ ಮಾಡುವ ಬಿಜೆಪಿ ಮತ್ತು ಹಿಂದೂ ಸಂಘಟನೆಗಳ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.
“ನೀವು ತಿನ್ನದಿದ್ದರೆ ತಿನ್ನಬೇಡಿ, ಇತರರ ಮೇಲೆ ಹೇರಿಕೆ ಮಾಡುವುದೇಕೆ? ಆಹಾರ ಅವರವರ ಆಯ್ಕೆ. ಅಷ್ಟಕ್ಕೂ ಬಿಹಾರದಲ್ಲಿ ನಿಮ್ಮ ಮಿತ್ರ ಪಕ್ಷ ಜೆಡಿಯು ಮೆರವಣಿಗೆ ಬಳಿಕ ಮಟನ್ ಪಾರ್ಟಿ(ಕುರಿ ಮಾಂಸದೂಟ) ನೀಡಲಾಗಿದೆ. ಅದರ ಬಗ್ಗೆ ಏನು ಹೇಳುತ್ತೀರಿ” ಎಂದು ನೆಟ್ಟಿಗರೊಬ್ಬರು ಪ್ರಶ್ನಿಸಿದ್ದಾರೆ. ಬಿಹಾರದಲ್ಲಿ ಕೇಂದ್ರ ಸಚಿವ, ಜೆಡಿಯು ನಾಯಕ ಲಲನ್ ಸಿಂಗ್ ಶ್ರಾವಣ ತಿಂಗಳಲ್ಲೇ ಮಾಂಸದೂಟದ ಔತಣಕೂಟವನ್ನು ನಡೆಸಿದ್ದಾರೆ.
ಇನ್ನು ಕೆಲವರು “ಇದು ಯುವಕರಲ್ಲಿ ನಿರುದ್ಯೋಗ ಹೆಚ್ಚಾಗಿರುವುದಕ್ಕೆ ಒಂದು ಸಾಕ್ಷಿ” ಎಂದು ಹೇಳಿದ್ದಾರೆ. ಇನ್ನೋರ್ವ ನೆಟ್ಟಿಗರು “ದೇಶ ಸಂವಿಧಾನದ ಪ್ರಕಾರವಾಗಿ ನಡೆಯುತ್ತಿದೆಯೇ ಅಥವಾ ಮನುಸ್ಮೃತಿ ಜಾರಿಯಲ್ಲಿದೆಯೇ” ಎಂದು ಕೇಳಿದ್ದಾರೆ. ಇವೆಲ್ಲವುದರ ನಡುವೆ ಬಿಜೆಪಿ ಬೆಂಬಲಿಗರು ಈ ಕ್ರಮವನ್ನು ಸಮರ್ಥಿಸಿಕೊಂಡಿದ್ದಾರೆ.
