ಗ್ರಾಮ ದೇವತೆ ಜಾತ್ರೆಯ ಸಮಯದಲ್ಲಿ ಮುದ್ದೇಬಿಹಾಳ ಪಟ್ಟಣದ ಲಕ್ಷ್ಮಿ ಚಿತ್ರಮಂದಿರದ ಎದುರಿಗೆ ಇರುವ ತಾ.ಪಂ ವಸತಿ ಗೃಹಗಳನ್ನು ನೆಲಸಮ ಮಾಡಿದ ಘಟನೆ ಇದೀಗ ಹೊಸ ವಿವಾದ ಹುಟ್ಟು ಹಾಕಿದೆ. ದಲಿತಪರ ಸಂಘಟನೆಯವರು ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾ.ಪಂ ಕಚೇರಿ ಎದುರಿಗೆ ಧರಣಿ ನಡೆಸಿದ್ದು, ವಸತಿಗೃಹಗಳನ್ನು ನೆಲಸಮ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.
ಹೋರಾಟಗಾರರನ್ನು ಭೇಟಿ ಮಾಡಿದ ತಾ.ಪಂ ಇಒ ನಿಂಗಪ್ಪ ಮಸಳಿ, ವಸತಿ ಗೃಹಗಳನ್ನು ನೆಲಸಮಗೊಳಿಸಿದ ಘಟನೆಗೆ ಸಂಬಂಧಿಸಿದಂತೆ ಸ್ಪಷ್ಟಿಕರಣ ನೀಡುವಂತೆ ಪುರಸಭೆ ಮುಖ್ಯಾಧಿಕಾರಿ ಹೆಸರಿನಲ್ಲಿ ಬರೆದಿರುವ ನೊಟೀಸನ್ನು ತಾ.ಪಂ ಇಒ ಹೋರಾಟಗಾರರಿಗೆ ಹಸ್ತಾಂತರ ಮಾಡಿ ತಾತ್ಕಾಲಿಕವಾಗಿ ಪ್ರತಿಭಟನಾಕಾರರನ್ನು ಸಮಾಧಾನಗೊಳಿಸುವ ಪ್ರಯತ್ನ ಮಾಡಿದರು.
ಪ್ರತಿಭಟನಕಾರರಾದ ಹರೀಶ ನಾಟೀಕಾರ, ಪ್ರಕಾಶ ಚಲವಾದಿ, ಆನಂದ ಮುದೂರ,ಬಸವರಾಜ ಚಲವಾದಿ,ಸಿದ್ದು ಚಲವಾದಿ, ಸಿದ್ದಪ್ಪ ನಾಯಕ ಇದ್ದರು.
ಘಟನೆಗೆ ಸಂಬಂಧಿಸಿದಂತೆ ಪುರಸಭೆ ಅಧ್ಯಕ್ಷ ಮಹಬೂಬ ಗೊಳಸಂಗಿ ಪ್ರತಿಕ್ರಿಯಿಸಿ, “ತಾ.ಪಂ ವಸತಿ ಗೃಹಗಳನ್ನು ನೆಲಸಮಗೊಳಿಸಿದ್ದು, ಪುರಸಭೆಯವರಲ್ಲ, ಪುರಸಭೆಗೂ ಇದಕ್ಕೂ ಸಂಬಂಧವಿಲ್ಲ. ಗ್ರಾಮದೇವತೆ ಜಾತ್ರಾ ಕಮಿಟಿಯ ಅಧ್ಯಕ್ಷನೆಂದು ಊರಿನ ಹಿರಿಯರು ಸಮಿತಿಯ ಮುಂದಾಳತ್ವ ವಹಿಸಿರುತ್ತಾರೆ. ಆದರೆ ಪುರಸಭೆ ಅಧ್ಯಕ್ಷರಿಗೆ ಯಾವುದೇ ಹಣಕಾಸಿನ ವ್ಯವಹಾರ, ಆರ್ಥಿಕ ಚಟುವಟಿಕೆ ಕೈಗೊಳ್ಳುವ ಜವಾಬ್ದಾರಿಯನ್ನು ಜಾತ್ರಾ ಕಮಿಟಿಯವರು ಕೊಟ್ಟಿರುವುದಿಲ್ಲ. ವಿಷಯ ಹೀಗಿದ್ದಾಗ್ಯೂ ನನಗೆ ಜಾತ್ರಾ ಕಮಿಟಿಯವರಿಂದ ಐದು ಲಕ್ಷ ರೂಪಾಯಿ ಹಣ ಕೊಡಬೇಕೆಂದು ನಾಟೀಕಾರ ಬೇಡಿಕೆ ಇರಿಸಿದರು” ಎಂದು ಆರೋಪಿಸಿದರು.
ಈ ಸುದ್ದಿ ಓದಿದ್ದೀರಾ? ವಿಜಯಪುರ | ಬಿಎಲ್‌ಒ ಕೆಲಸ ನೀಡದಂತೆ ಅಂಗನವಾಡಿ ಕಾರ್ಯಕರ್ತೆಯರ ಮನವಿ
“ನಾನು ಭ್ರಷ್ಟಾಚಾರಿಯಲ್ಲ. ಜಾತ್ರೆಯ ಸಮಯದಲ್ಲಿ ನಿಸ್ವಾರ್ಥವಾಗಿ ಕೆಲಸ ಮಾಡಿದ್ದೇನೆ. ಆದರೆ ಹರೀಶ ನಾಟೀಕಾರ ದಲಿತ ಸಂಘರ್ಷ ಸಮಿತಿಯ ಹೆಸರಿನಲ್ಲಿ ಡಾ. ಬಿ ಆರ್ ಅಂಬೇಡ್ಕರ್ ಅವರಿಗೆ ಅವಮಾನಿಸುವ ಕೆಲಸ ಮಾಡುತ್ತಿದ್ದಾರೆ. ತಾ.ಪಂ.ನಿಂದ ಕೊಟ್ಟಿರುವ ನೊಟೀಸಿಗೆ ಮುಖ್ಯಾಧಿಕಾರಿ ಉತ್ತರ ಕೊಡುತ್ತಾರೆ” ಎಂದು ತಿಳಿಸಿದರು.