ರೈಲ್ವೇ ಹಳಿ ದಾಟುವಾಗ ರೈಲೊಂದು ಡಿಕ್ಕಿ ಹೊಡೆದಿದ್ದು, ಮೂರು ಕಾಡಾನೆಗಳು ಸಾವನ್ನಪ್ಪಿರುವ ಘಟನೆ ಪಶ್ಚಿಮ ಬಂಗಾಳದ ಬಸ್ತೋಲಾ ರೈಲು ನಿಲ್ದಾಣದ ಬಳಿ ನಡೆದಿದೆ. ಮೃತಪಟ್ಟ ಆನೆಗಳಲ್ಲಿ ಎರಡು ಮರಿ ಆನೆಗಳು ಎಂದು ತಿಳಿದುಬಂದಿದೆ.
ಖರಗ್ಪುರ-ಟಾಟಾನಗರ ನಡುವಿನ ರೈಲ್ವೇ ಮಾರ್ಗದಲ್ಲಿ ಏಳು ಆನೆಗಳು ಹಳಿ ದಾಟುತ್ತಿದ್ದಾಗ, ಮೂರು ಆನೆಗಳಿಗೆ ರೈಲು ಡಿಕ್ಕಿ ಹೊಡೆದಿದೆ. ಆನೆಗಳು ಪಶ್ಚಿಮ ಬಂಗಾಳದ ಖರಗ್ಪುರದ ಜಾರ್ಗ್ರಾಮ್ ಕಾಡಿನಿಂದ ಬಂದಿರಬಹುದು ಎಂದು ಹೇಳಲಾಗಿದೆ.
ಆನೆಗಳ ಮೃತದೇಹವನ್ನು ಕ್ರೇನ್ಗಳ ಮೂಲಕ ತೆರವುಗೊಳಿಸಲಾಗಿದೆ. ಆದರೆ, ಇಂತಹ ಘಟನೆಗಳು ಇದೇ ಮೊದಲೇನು ಅಲ್ಲ. ರೈಲ್ವೇ ಹಳಿಗಳನ್ನು ದಾಟುವಾಗ ಆನೆಗಳು ಸಾವನ್ನಪ್ಪಿದ ಹಲವಾರು ಪ್ರಕರಣಗಳು ಬಂಗಾಳ ಸೇರಿದಂತೆ ಹಲವು ರಾಜ್ಯಗಳಲ್ಲಿ ವರದಿಯಾಗಿವೆ.
ಬದಲಾಗುತ್ತಿರುವ ಹವಾಮಾನ ಮತ್ತು ಋತುಮಾನಗಳಿಂದಾಗಿ ಆಹಾರ ಮತ್ತು ಸೂಕ್ತ ಆವಾಸಸ್ಥಾನಕ್ಕಾಗಿ ಆನೆಗಳು ಸೇರಿದಂತೆ ಕಾಡುಪ್ರಾಣಿಗಳು ವಲಸೆ ಹೋಗುತ್ತಿವೆ. ಹೀಗಾಗಿ, ಅರಣ್ಯ ಪ್ರದೇಶದಲ್ಲಿ ಹಾದುಹೋಗಿರುವ ರೈಲ್ವೇ ಹಳಿ ದಾಟುವಾಗ ರೈಲುಗಳಿಗೆ ಸಿಲುಕಿ ಕಾಡು ಪ್ರಾಣಿಗಳು ಸಾವಿಗೆ ತುತ್ತಾಗುತ್ತಿವೆ ಎಂದು ಹೇಳಲಾಗಿದೆ.
ಆದಾಗ್ಯೂ, ಪ್ರಾಣಿಗಳು ರೈಲ್ವೇ ಹಳಿಗಳನ್ನು ದಾಟುವಾಗಲೆಲ್ಲ ರೈಲು ಚಾಲಕರಿಗೆ ಎಚ್ಚರಿಕೆ ನೀಡಲು ಅಂತಹ ಹಾಟ್ಸ್ಪಾಟ್ಗಳನ್ನು ಗುರುತಿಸಲು ತಂತ್ರಜ್ಞಾನವನ್ನು ಬಳಸಲು ಕ್ರಮ ತೆಗೆದುಕೊಳ್ಳಲಾಗುತ್ತಿದೆ. ತಮಿಳುನಾಡು, ಒಡಿಶಾ, ಅಸ್ಸಾಂ ಹಾಗೂ ಉತ್ತರಾಖಂಡಗಳಲ್ಲಿ ಆನೆಗಳ ಹಿಂಡು ನಿರ್ದಿಷ್ಟ ದಿಕ್ಕಿನಲ್ಲಿ ಚಲಿಸುವ ಬಗ್ಗೆ ಸ್ಪಷ್ಟ ಸಂದೇಶ ಒದಗಿಸಲು ಕೃತಕ ಬುದ್ಧಿಮತ್ತೆ ಬಳಸಲಾಗುತ್ತಿದೆ.