ಬಿಹಾರದಲ್ಲಿ ಚುನಾವಣೆಯ ಹೊಸ್ತಿಲಲ್ಲಿ ಚುನಾವಣಾ ಆಯೋಗವು ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣಾ ಪ್ರಕ್ರಿಯೆಯನ್ನು ಆರಂಭಿಸಿದೆ. ಈ ಪ್ರಕ್ರಿಯೆಯು ವಲಸೆ ಹೋಗಿರುವ ಲಕ್ಷಾಂತರ ಬಿಹಾರಿ ಮತದಾರರನ್ನು ಮತದಾನ ಪ್ರಕ್ರಿಯೆಯಿಂದ ಹೊರಗಿಡುವ ತಂತ್ರವಾಗಿದೆ ಎಂದು ಜನಸುರಾಜ್ ಪಕ್ಷ ಆರೋಪಿಸಿದೆ. ಚುನಾವಣಾ ಆಯೋಗದ ನಡೆಯನ್ನು ಖಂಡಿಸಿ ಶನಿವಾರ ಬೆಳಗ್ಗೆ 11 ಗಂಟೆಗೆ ಫ್ರೀಡಂ ಪಾರ್ಕ್ನಲ್ಲಿ ಪ್ರತಿಭಟನೆ ಹಮ್ಮಿಕೊಂಡಿದೆ.
ಶುಕ್ರವಾರ, ಬೆಂಗಳೂರಿನ ಪ್ರೆಸ್ಕ್ಲಬ್ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಪಕ್ಷದ ಮುಖಂಡ ರಾಜ್ ಗುರು, “ಲಕ್ಷಾಂತರ ಜನರ ಮತದಾನದ ಹಕ್ಕಿಗೆ ಕೊಡಲಿ ಪೆಟ್ಟು ನೀಡುವ ಈ ಪ್ರಜಾಪ್ರಭುತ್ವ ವಿರೋಧಿ ನಡೆಯ ವಿರುದ್ದ ದನಿ ಎತ್ತುವುದು ಜವಾಬ್ದಾರಿಯುತ ಪ್ರಜೆಗಳ ಕರ್ತವ್ಯವಾಗಿದೆ. ಈ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿರುವ ಅನಿವಾಸಿ ಬಿಹಾರಿಗಳು ಮತ್ತು ಜನ ಸುರಾಜ್ ಪಕ್ಷದ ಹಿತೈಷಿಗಳು ಫ್ರೀಡಂ ಪಾರ್ಕ್ನಲ್ಲಿ ಶನಿವಾರ ಶಾಂತಿಯುತ ಪ್ರತಿಭಟನೆ ನಡೆಸಲಿದ್ದಾರೆ” ಎಂದು ತಿಳಿಸಿದ್ದಾರೆ.
“ಬಿಹಾರದಲ್ಲಿ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ ನಡೆಸುತ್ತಿರುವುದು ಸಂವಿಧಾನ ಬಾಹಿರ. ಈ ಪ್ರಕ್ರಿಯೆಗೆ ಕೇಳುತ್ತಿರುವ ದಾಖಲೆಗಳು ಹಾಗೂ ಈಗಿರುವ ಕಾಲಮಿತಿಯ ಕುರಿತು ನಮಗೆ ತಕರಾರಿದೆ. ಜೊತೆಗೆ ವಲಸಿಗರ ಮತದಾನದ ಹಕ್ಕಿಗೆ ಚ್ಯುತಿ ತರುವ ಈ ಪ್ರಕ್ರಿಯೆಯನ್ನು ಕೂಡಲೇ ನಿಲ್ಲಿಸಬೇಕು” ಎಂದು ಆಗ್ರಹಿಸಿದ್ದಾರೆ.
ಮಾದ್ಯಮ ಗೋಷ್ಠಿಯಲ್ಲಿ ಹೋರಾಟಗಾರ ಕಾವಲ್ ಸಿಂಗ್, ಆಯುಷ್, ಶರತ್, ಡಾ. ನಿಶ್ಚಿತ್ ಕೆ.ಆರ್ ಉಪಸ್ಥಿತರಿದ್ದರು.