ಈ ದಿನ ಸಂಪಾದಕೀಯ | ‘ಮನೆ-ಮನೆಗೆ ಪೊಲೀಸ್’ ಕಾರ್ಯಕ್ರಮ: ಪೊಲೀಸ್ ಇಲಾಖೆಯ ಮಾದರಿ ಹೆಜ್ಜೆ

Date:

Advertisements
'ಮನೆ-ಮನೆಗೆ ಪೊಲೀಸ್' ಕಾರ್ಯಕ್ರಮವು ಕರ್ನಾಟಕದಲ್ಲಿ ಕಾನೂನು ಸುವ್ಯವಸ್ಥೆ ಮತ್ತಷ್ಟು ಪರಿಣಾಮಕಾರಿಯಾದರೆ, ದೇಶಕ್ಕೆ ಹೊಸ ಮಾದರಿಯನ್ನು ಸೃಷ್ಟಿಸುತ್ತದೆ. ಆದರೆ, ಪೊಲೀಸರಲ್ಲಿ ಅಧಿಕಾರದ ಧೋರಣೆ ತೊಡೆದು, ಸೇವೆಯ ಮನೋಭಾವವನ್ನು ಬೆಳೆಸುವ ತುರ್ತು ಅಗತ್ಯವಿದೆ.

ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯು ‘ಮನೆ-ಮನೆಗೆ ಪೊಲೀಸ್’ ಎಂಬ ವಿನೂತನ ಕಾರ್ಯಕ್ರಮವನ್ನು ಜಾರಿಗೆ ತಂದಿದೆ. ಸಾರ್ವಜನಿಕರೊಂದಿಗೆ ನಿಕಟ, ಜನಸ್ನೇಹಿ ಸಂಬಂಧ ಬಲಪಡಿಸಲು ಇಲಾಖೆ ಮುಂದಾಗಿದೆ. ಪೊಲೀಸರು ಮನೆ-ಮನೆಗೆ ತೆರಳಿ ನಿವಾಸಿಗಳ ಸಮಸ್ಯೆಗಳನ್ನು ಆಲಿಸುವುದು, ಕಾನೂನು ಸಂಬಂಧಿತ ಜಾಗೃತಿಯನ್ನು ಮೂಡಿಸುವುದು ಹಾಗೂ ಸಮುದಾಯದೊಂದಿಗೆ ಪೊಲೀಸರ ಸಹಕಾರವನ್ನು ಗಟ್ಟಿಗೊಳಿಸುವುದು ಕಾರ್ಯಕ್ರಮದ ಉದ್ದೇಶವೆಂದು ಹೇಳಿಕೊಂಡಿದೆ. ಪ್ರಸ್ತುತ ಸಾಮಾಜಿಕ ಸಂದರ್ಭದಲ್ಲ ಇದೊಂದು ಉತ್ತಮ ಹೆಜ್ಜೆಯಾಗಿದೆ. ಉದ್ದೇಶವು ಯಶಸ್ವಿಗೊಂಡರೆ, ದೇಶಕ್ಕೆ ಮಾದರಿಯೂ ಆಗುತ್ತದೆ.

ದೆಹಲಿಯಲ್ಲಿ ಎಎಪಿ ಸರ್ಕಾರ ಆರಂಭಿಸಿದ ‘ಮನೆ ಬಾಗಿಲಿಗೆ ಸೇವೆ’ ಎಂಬ ಕ್ರಮವು ದೇಶಾದ್ಯಂತ ನಾನಾ ವಲಯವನ್ನು ವಿಸ್ತರಿಸುತ್ತದೆ. ಮನೆ ಬಾಗಿಲಿಗೆ ಸೇವೆಯಿಂದ ‘ಮನೆ-ಮನೆಗೆ ಪೊಲೀಸ್’ ಕಾರ್ಯಕ್ರಮದವರೆಗೆ ಆಡಳಿತವು ಜನರನ್ನು ತಲುಪುವ ಕ್ರಮಗಳನ್ನು ಜಾರಿಗೆ ಬರುತ್ತಿರುವುದು ಉತ್ತಮ ಬೆಳವಣಿಗೆ. ಅದರಲ್ಲೂ, ಕರ್ನಾಟಕದಲ್ಲಿ ಪೊಲೀಸರೇ ಜನರ ಮನೆ ಬಾಗಿಲಿಗೆ ಹೋಗುವುದು, ಸಮಸ್ಯೆಗಳನ್ನು ಆಲಿಸುವುದು ಸ್ವಾಗತಾರ್ಹ. ಕರ್ನಾಟಕ ಸರ್ಕಾರದ ದಿಟ್ಟ ಹೆಜ್ಜೆ.

ಸಾರ್ವಜನಿಕರ ಸಹಕಾರವಿಲ್ಲದೆ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವುದು ಕಷ್ಟಕರ. ಇದನ್ನು ಪೊಲೀಸ್‌ ಇಲಾಖೆಯೂ ಅರಿತುಕೊಂಡಿದೆ. ಸಾರ್ವಜನಿಕರ ಸಹಕಾರವನ್ನು ಪಡೆಯಲು ‘ಮನೆ-ಮನೆಗೆ ಪೊಲೀಸ್‌’ ಕಾರ್ಯಕ್ರಮವನ್ನು ರೂಪಿಸಿದೆ. ಕಾರ್ಯಕ್ರಮವು ಜನರೊಂದಿಗೆ ಪೊಲೀಸ್ ಇಲಾಖೆ ನಿಕಟ ಸಂಬಂಧವನ್ನು ಬೆಳೆಸಲು ಮತ್ತು ಸಮಾಜದಲ್ಲಿ ಸುರಕ್ಷಿತ ವಾತಾವರಣವನ್ನು ನಿರ್ಮಿಸಲು ಸಹಕಾರಿಯಾಗುತ್ತದೆ. ಜೊತೆಗೆ, ಕಾನೂನಿನ ಬಗ್ಗೆ ಸಾರ್ವಜನಿಕರಿಗೆ ಹೆಚ್ಚಿನ ಮಾಹಿತಿ ಮತ್ತು ಜಾಗೃತಿ ಮೂಡಿಸಲೂ ಸಾಧ್ಯವಾಗುತ್ತದೆ.

ಪೊಲೀಸ್‌ ಇಲಾಖೆ ಹೇಳಿಕೊಂಡಿರುವಂತೆ, ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ಮನೆ-ಮನೆಗೆ ಭೇಟಿ ನೀಡಿ, ಸಾರ್ವಜನಿಕರ ದೂರುಗಳನ್ನು ಆಲಿಸಿ, ಕಾನೂನಿನ ಚೌಕಟ್ಟಿನಲ್ಲಿ ಪರಿಹಾರವನ್ನು ಕಲ್ಪಿಸಲು ಪ್ರಯತ್ನಿಸುತ್ತಾರೆ. ಜೊತೆಗೆ, ಪೊಲೀಸ್ ಇಲಾಖೆಗೆ ಸಂಬಂಧಿಸಿದಂತೆ ಸಾರ್ವಜನಿಕರಲ್ಲಿ ಇರುವ ಭಯ ಮತ್ತು ಅಂಜಿಕೆಯನ್ನು ತೊಡೆದು ಹಾಕುವುದು, ಜನರೊಂದಿಗೆ ಮುಕ್ತ ಸಂವಾದವನ್ನು ಸಾಧಿಸುವುದು. ಮಾತ್ರವಲ್ಲ, ಡೇಟಾಬ್ಯಾಂಕ್ ಮೂಲಕ ಬಾಡಿಗೆದಾರರು, ಹೊಸದಾಗಿ ವಾಸಕ್ಕೆ ಬಂದವರ ಮಾಹಿತಿಗಳು ಸೇರಿದಂತೆ ಪ್ರತಿ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿನ ಎಲ್ಲ ಆಗುಹೋಗುಗಳನ್ನು ಸಂಗ್ರಹಿಸುವ ಮೂಲಕ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವುದು ಕಾರ್ಯಕ್ರಮದ ಪ್ರಮುಖ ಗುರಿಯಾಗಿದೆ.

ಕಾರ್ಯಕ್ರಮಕ್ಕೆ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರು ಜುಲೈ 18ರಂದು ಬೆಂಗಳೂರಿನ ಗೋವಿಂದರಾಜನಗರದಲ್ಲಿ ಚಾಲನೆ ನೀಡಿದ್ದಾರೆ. ಜೊತೆಗೆ, ಉತ್ತರ ಕನ್ನಡ, ಕೊಡಗು, ಬಳ್ಳಾರಿ, ತುಮಕೂರು ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳು ಸೇರಿದಂತೆ ಕೆಲವು ಜಿಲ್ಲೆಗಳಲ್ಲಿ ಕಾರ್ಯಕ್ರಮ ಈಗಾಗಲೇ ಚಾಲ್ತಿಯಲ್ಲಿದೆ. ಉತ್ತಮ ಸ್ಪಂದನೆಯೂ ಬರುತ್ತಿದೆ ಎಂದು ಪೊಲೀಸ್‌ ಅಧಿಕಾರಿಗಳು ಹೇಳಿಕೊಂಡಿದ್ದಾರೆ. ಈಗಾಗಲೇ, ಕಲಬುರಗಿ, ದಕ್ಷಿಣ ಕನ್ನಡ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಸಾರ್ವಜನಿಕರಿಂದ ಉತ್ತಮ ಸ್ಪಂದನೆ ದೊರೆಯುತ್ತಿದೆ ಎಂದು ಪೊಲೀಸ್‌ ಅಧಿಕಾರಿಗಳು ಹೇಳಿಕೊಂಡಿದ್ದಾರೆ.

ಇದನ್ನು ಓದಿದ್ದೀರಾ?: ತುಳಿದಷ್ಟು ಪುಟಿದೇಳುವ ರಾಹುಲ್ ಎಂಬ ಜನನಾಯಕ

ಆದಾಗ್ಯೂ, ಇತ್ತೀಚಿನ ವರ್ಷಗಳಲ್ಲಿ ಕೊಲೆ, ಸುಲಿಗೆ, ಅತ್ಯಾಚಾರ, ಗುಂಪು ದಾಳಿ, ಅನೈತಿಕ ಪೊಲೀಸ್‌ಗಿರಿ, ಧಾರ್ಮಿಕ ಗೂಂಡಾಗಿರಿ, ಮಹಿಳೆಯ ಮೇಲಿನ ದೌರ್ಜನ್ಯಗಳಂತಹ ಅಪರಾಧಿ ಕೃತ್ಯಗಳು ಹೆಚ್ಚುತ್ತಲೇ ಇವೆ. ಬೆಂಗಳೂರು ಸೇರಿದಂತೆ ಹಲವು ಪ್ರದೇಶಗಳಲ್ಲಿ ಜನರು ವಿಶೇಷವಾಗಿ ಹೆಣ್ಣುಮಕ್ಕಳು ನಿರ್ಭೀತಿಯಿಂದ ಓಡಾಡಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ಕ್ಷುಲ್ಲಕ ಜಗಳಗಳಿಗೂ ಹತ್ಯೆಯಂತಹ ಗಂಭೀರ ಅಪರಾಧಗಳನ್ನು ಎಸಗುವ ಮನಸ್ಥಿತಿ ರೂಪುಗೊಳ್ಳುತ್ತಿದೆ.

ಇಂತಹ ಗಂಭೀರ ಪರಿಸ್ಥಿತಿಯಲ್ಲಿರುವ ಸಮಾಜದಲ್ಲಿ ಕಾರ್ಯಕ್ರಮದ ಯಶಸ್ಸಿಗೆ ಕೆಲವು ಸವಾಲುಗಳೂ ಇವೆ. ಅಂತಹ ಸವಾಲುಗಳ ಪಟ್ಟಿಯಲ್ಲಿ ಅಗ್ರಸ್ಥಾನ ‘ಸಿಬ್ಬಂದಿ ಕೊರತೆ’ಯದ್ದು. ಪೊಲೀಸ್ ಇಲಾಖೆಯಲ್ಲಿ ಅಗತ್ಯಕ್ಕಿಂತ ತೀರಾ ಕಡಿಮೆ ಸಿಬ್ಬಂದಿಗಳಿದ್ದಾರೆ. ಇದು ಪೊಲೀಸರು ಒತ್ತಡದಲ್ಲಿ ಕೆಲಸ ಮಾಡುವಂತೆ ಮಾಡಿದೆ. ಕಾನೂನು-ಸುವ್ಯವಸ್ಥೆಯನ್ನು ಕಾಪಾಡಲು ತೊಡಕಾಗುತ್ತಿದೆ. ಇಂತಹ ಸಂದರ್ಭದಲ್ಲಿ ಹೊಸ ಕಾರ್ಯಕ್ರಮವು ಮತ್ತಷ್ಟು ಹೊರೆಯಾಗುತ್ತದೆ ಎಂಬ ಅಭಿಪ್ರಾಯಗಳಿವೆ.

ಜೊತೆಗೆ, ಸಾರ್ವಜನಿಕರ ನಂಬಿಕೆಯ ಕೊರತೆ, ಗ್ರಾಮೀಣ ಪ್ರದೇಶಗಳಲ್ಲಿ ಸಂಚಾರ ಮತ್ತು ಸಂವಹನದ ಸಮಸ್ಯೆಗಳು ಹೇರಳವಾಗಿವೆ. ಪೊಲೀಸ್ ಸಿಬ್ಬಂದಿಗೆ ಜನರೊಂದಿಗೆ ಸಂವಾದ ನಡೆಸುವ, ಸಮಸ್ಯೆಗಳನ್ನು ಆಲಿಸುವ ಹಾಗೂ ಪರಿಹಾರ ಕಂಡುಕೊಳ್ಳುವ ಕೌಶಲ್ಯಗಳಿಗೆ ಸೂಕ್ತ ತರಬೇತಿಯ ಅಗತ್ಯಗಳೂ ಇವೆ. ಎಲ್ಲದಕ್ಕಿಂತ ಮುಖ್ಯವಾಗಿ, ಪೊಲೀಸರಲ್ಲಿ ಅಧಿಕಾರದ ಧೋರಣೆ ತೊಡೆದು, ಸೇವೆಯ ಮನೋಭಾವವನ್ನು ಬೆಳೆಸುವ ತುರ್ತು ಅಗತ್ಯವಿದೆ.

ಈ ಸವಾಲುಗಳನ್ನು ಪೊಲೀಸ್‌ ಇಲಾಖೆ ಗಮನಹರಿಸಿದರೆ, ಪರಿಹಾರ ಕಂಡುಕೊಂಡರೆ, ಖಂಡಿತವಾಗಿಯೂ ಕಾರ್ಯಕ್ರಮ ಯಶಸ್ವಿಯಾಗುತ್ತದೆ. ಅದಕ್ಕಾಗಿ, ಸಿಬ್ಬಂದಿಯ ನೇಮಕಾತಿ ಮತ್ತು ತರಬೇತಿ, ಡಿಜಿಟಲ್ ತಂತ್ರಜ್ಞಾನ – ತಾಂತ್ರಿಕ ಸೌಲಭ್ಯಗಳ ಬಳಕೆಯಲ್ಲಿ ಹೆಚ್ಚಳ, ಸಾರ್ವಜನಿಕ ಜಾಗೃತಿ ಕಾರ್ಯಕ್ರಮಗಳನ್ನು ನಡೆಸುವ ಮೂಲಕ ಪೊಲೀಸರ ಮೇಲಿನ ಅಪನಂಬಿಕೆಯನ್ನು ತೊಡೆದುಹಾಕುವುದು, ಪೊಲೀಸರು ದಕ್ಷತೆಯಿಂದ ಕೆಲಸ ಮಾಡುವುದು, ಸ್ಥಳೀಯ ಸಂಘಟನೆಗಳ ನೆರವು ಪಡೆಯುವುದು ಅತ್ಯಗತ್ಯ.

ಇದೆಲ್ಲವೂ ಸಾಧ್ಯವಾದರೆ, ‘ಮನೆ-ಮನೆಗೆ ಪೊಲೀಸ್’ ಕಾರ್ಯಕ್ರಮವು ಯಶಸ್ವಿಯಾಗುತ್ತದೆ. ಕಾರ್ಯಕ್ರಮದ ಯಶಸ್ಸಿನಿಂದ ಕರ್ನಾಟಕದಲ್ಲಿ ಕಾನೂನು ಸುವ್ಯವಸ್ಥೆ ಮತ್ತಷ್ಟು ಪರಿಣಾಮಕಾರಿಯಾದರೆ, ದೇಶಕ್ಕೆ ಹೊಸ ಮಾದರಿಯನ್ನು ಸೃಷ್ಟಿಸುತ್ತದೆ. ಸಾರ್ವಜನಿಕರ ಮತ್ತು ಪೊಲೀಸರ ನಡುವಿನ ಅಂತರವನ್ನು ಕಡಿಮೆ ಮಾಡುತ್ತದೆ. ಸಮಾಜದಲ್ಲಿ ಸುರಕ್ಷಿತ ಮತ್ತು ನಿರ್ಭಯ ವಾತಾವರಣವನ್ನು ನಿರ್ಮಿಸಲು ಸಾಧ್ಯವಾಗುತ್ತದೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ | ಸಿನೆಮಾ ಟಿಕೆಟ್ ದರಗಳಿಗೆ ಸರ್ಕಾರಿ ಕಡಿವಾಣದ ಸಂಗತಿಯೇನು?

ನೆರೆಯ ರಾಜ್ಯಗಳಾದ ತಮಿಳುನಾಡು, ಆಂಧ್ರಪ್ರದೇಶ ಹಾಗೂ ತೆಲಂಗಾಣದಲ್ಲಿ ಮಲ್ಟಿಪ್ಲೆಕ್ಸ್ ಟಿಕೆಟ್ ದರಗಳನ್ನು...

ಈ ದಿನ ಸಂಪಾದಕೀಯ | ದೇವರು-ಧರ್ಮದ ದುರುಪಯೋಗ ಸಮಾಜಕ್ಕೆ ಒಳಿತು ಮಾಡುವುದಿಲ್ಲ

ಬಿಜೆಪಿ ಮತ್ತು ಸಂಘಪರಿವಾರದವರು ದೇವರು-ಧರ್ಮದಲ್ಲಿ ಸಂಘರ್ಷ ಹುಡುಕಿದ, ಕೆದಕಿದ, ಗುಲ್ಲೆಬ್ಬಿಸಿದ ಧರ್ಮಸ್ಥಳ-ದಸರಾದಲ್ಲಿ...

ಈ ದಿನ ಸಂಪಾದಕೀಯ | ‘ಆಳಂದ’ ಕ್ಷೇತ್ರದ ಆಕ್ಷೇಪಕ್ಕೆ ಅರೆಬರೆ ಉತ್ತರಕೊಟ್ಟ ಚುನಾವಣಾ ಆಯೋಗ

ಆಳಂದ ಕ್ಷೇತ್ರದ ಹಲವು ಮತದಾರರ ಹೆಸರನ್ನು ಅಳಿಸಿಹಾಕಲು ಯಾರು ಯತ್ನಿಸಿದ್ದರೋ ಅವರ...

ಈ ದಿನ ಸಂಪಾದಕೀಯ | ಜಿಎಸ್‌ಟಿ ದರ ಇಳಿಕೆ ಲಾಭ ಗ್ರಾಹಕರಿಗೆ ದೊರೆಯಲಿ!

ಬಹುತೇಕ ಕಂಪನಿಗಳು ತಮ್ಮ ಉತ್ಪನ್ನಗಳ ಬೆಲೆಯನ್ನು ತೋರಿಕೆಗಾಗಿ ಕೊಂಚ ಕಡಿಮೆ ಮಾಡಿದರೂ,...

Download Eedina App Android / iOS

X