ಕರ್ನಾಟಕ ಸರ್ಕಾರದ ಶಕ್ತಿ ಯೋಜನೆ ರಾಜ್ಯಾದ್ಯಂತ ಸಕಾರಾತ್ಮಕ ಬದಲಾವಣೆಗೆ ನಾಂದಿ ಹಾಡುತ್ತಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈ ಯೋಜನೆಯ ಪರಿಣಾಮ ಸ್ಪಷ್ಟವಾಗಿ ಗೋಚರಿಸುತ್ತಿದೆ. ಬಸ್ ಟಿಕೆಟ್‌ಗಾಗಿ ಹಣ ಕೂಡಿಹಾಕಬೇಕು ಎನ್ನುವ ಕಳವಳ ಈಗ ಇಲ್ಲ. ಶಾಲಾ-ಕಾಲೇಜು ಓದುವ ವಿದ್ಯಾರ್ಥಿನಿಯರಿಂದ ಹಿಡಿದು, ಮಾರುಕಟ್ಟೆಗೆ ಹೋಗುವ ತಾಯಂದಿರು, ಉದ್ಯೋಗಕ್ಕೆ ತೆರಳುವ ಮಹಿಳೆಯರ ತನಕ ಎಲ್ಲರೂ ಸ್ವತಂತ್ರವಾಗಿ, ಆತ್ಮವಿಶ್ವಾಸದಿಂದ ಸಾರ್ವಜನಿಕ ಸಾರಿಗೆಯಲ್ಲಿ ಪ್ರಯಾಣಿಸುತ್ತಿರುವುದು ಇದೀಗ ಸಾಮಾನ್ಯ ದೃಶ್ಯವಾಗಿದೆ.
2023ರ ಜೂನ್ 11ರಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಈ ಯೋಜನೆಗೆ ಚಾಲನೆ ನೀಡಿದ್ದು, ರಾಜ್ಯದ 5 ಗ್ಯಾರಂಟಿ ಯೋಜನೆಗಳಲ್ಲಿ ಮೊದಲನೆಯದಾಗಿ ಈ ಯೋಜನೆ ಜಾರಿಗೆ ಬಂತು. ಎಲ್ಲಾ ಸರ್ಕಾರಿ ಬಸ್ ನಿಗಮಗಳ ನಿಯಮಿತ ಸೇವೆಗಳಲ್ಲಿ ರಾಜ್ಯದ ಮಹಿಳೆಯರು ಹಾಗೂ ತೃತೀಯ ಲಿಂಗಿಗಳಿಗೂ ಸಹ ಉಚಿತವಾಗಿ ಪ್ರಯಾಣಿಸಬಹುದಾದ ಈ ಯೋಜನೆ, ಇದೀಗ ಸಾವಿರಾರು ಕುಟುಂಬಗಳಿಗೆ ಆರ್ಥಿಕವಾಗಿ ನೆರವಾಗುತ್ತಿರುವುದು ಮಾತ್ರವಲ್ಲ, ಸಮಾಜದಲ್ಲಿ ಮಹಿಳೆಯರ ಚಲನೆಗೆ ಹೊಸ ಅರ್ಥ ನೀಡುತ್ತಿದೆ.
ಮಂಗಳೂರು, ಪುತ್ತೂರು, ಸುಳ್ಯ, ಬಂಟ್ವಾಳ, ಬೆಳ್ತಂಗಡಿ, ಧರ್ಮಸ್ಥಳ ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಈ ಯೋಜನೆ ಬಹುಮಾನ್ಯವಾಗಿ ಅಂಗೀಕೃತವಾಗಿದೆ. ಪ್ರತಿದಿನ ಸುಮಾರು 35,000 ರಿಂದ 40,000 ಮಹಿಳೆಯರು ಉಚಿತವಾಗಿ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದಾರೆ. ಈ ಯೋಜನೆಯ ಸದುಪಯೋಗವನ್ನು ಮಹಿಳೆಯರು ಶೈಕ್ಷಣಿಕ, ಉದ್ಯೋಗ, ವ್ಯಾಪಾರ, ಆರೋಗ್ಯ ಸೇವೆ ಸೇರಿದಂತೆ ಎಲ್ಲ ಕ್ಷೇತ್ರದಲ್ಲಿ ಇರುವವರು ಇದರ ಲಾಭ ಪಡೆಯುತ್ತಿದ್ದಾರೆ.

ಮಂಗಳೂರಿನ ಪಂಪ್‌ವೆಲ್‌ನಿಂದ ನಿಟ್ಟೆ ವಿಶ್ವವಿದ್ಯಾಲಯಕ್ಕೆ ಪ್ರತಿದಿನ 25 ಕಿ.ಮೀ ಪ್ರಯಾಣ ಮಾಡುವ ಪದವಿ ವಿದ್ಯಾರ್ಥಿನಿ ಪ್ರಣಿತಾ ಈ ದಿನ.ಕಾಮ್ ಜತೆ ಮಾತನಾಡಿ, “ಪತ್ರಿದಿನ ಬಸ್ ಟಿಕೆಟ್‌ಗಾಗಿ ಹಣ ಹೊಂದಿಸುವುದು ಬೇಸರವಾಗುತ್ತಿತ್ತು. ಶಕ್ತಿ ಯೋಜನೆಯು ನನಗೆ ಆರ್ಥಿಕವಾಗಿ ಸಹಾಯ ನೀಡುತ್ತಿದೆ ಮಾತ್ರವಲ್ಲ, ನಾನು ಶಿಕ್ಷಣದಲ್ಲಿ ಏನು ಬೇಕಾದರೂ ಸಾಧಿಸಬಹುದು ಎಂಬ ಧೈರ್ಯವನ್ನೂ ತುಂಬಿದೆ. ನನ್ನಂತಹ ಅನೇಕ ವಿದ್ಯಾರ್ಥಿನಿಯರು ಈಗ ತಾವು ಬಯಸಿದ ಕೋರ್ಸ್ ಅಥವಾ ಕಾಲೇಜು ಆಯ್ಕೆ ಮಾಡಿಕೊಳ್ಳಲು ಮುಕ್ತರಾಗಿದ್ದಾರೆ. ಅವರು ಈಗ ಹೆತ್ತವರ ಬಳಿ ಹಣ ಪಡೆಯುವ ಚಿಂತೆಯಿಲ್ಲ” ಎಂದರು.
ಕೆಲಸಕ್ಕಾಗೋ ಅಥವಾ ವೈದ್ಯಕೀಯ ಅವಶ್ಯಕತೆಗಾಗೋ ಪ್ರತಿದಿನ ನಗರಕ್ಕೆ ಪ್ರಯಾಣಿಸುವ ಮಹಿಳೆಯರಿಗೆ ಶಕ್ತಿ ಯೋಜನೆಯು ನಿಜವಾದ ವರದಾನವಾಗಿದೆ. ಮಂಗಳೂರಿನ ಸುರತ್ಕಲ್ ನಿವಾಸಿಯಾದ ವಿಜಯಲಕ್ಷ್ಮಿ ಈ ದಿನ.ಕಾಮ್ ಜತೆ ಮಾತನಾಡಿ, “ಪ್ರತಿದಿನ ಬಜ್ಪೆ ವೈದ್ಯಕೀಯ ಕಾಲೇಜಿಗೆ ಕೆಲಸಕ್ಕೆ ಹೋಗುತ್ತೇನೆ. ಈ ಯೋಜನೆಯಿಂದ ನಾನು ತಿಂಗಳಿಗೆ ರೂ.1,200 ಉಳಿಸುತ್ತೇನೆ. ಈ ಹಣ ನನ್ನ ಮಗಳ ಶಾಲಾ ಶುಲ್ಕ ಭರಿಸಲು ಅನುಕೂಲವಾಗಿದೆ. ನಾನು ಹಣದ ಬಗ್ಗೆ ಯೋಚಿಸದೆ ಸಮಯಕ್ಕೆ ಸರಿಯಾಗಿ ಕೆಲಸಕ್ಕೆ ಹೋಗಬಹುದಾಗಿದೆ” ಎಂದರು.
ಪುತ್ತೂರಿನ ಅಂಗನವಾಡಿ ಕಾರ್ಯಕರ್ತೆ ಲಕ್ಷ್ಮಿ ಮಾತನಾಡಿ, “ಇದೇ ಮೊದಲ ಬಾರಿಗೆ ನಾವು ಸರ್ಕಾರಿ ಯೋಜನೆಯ ಲಾಭವನ್ನು ನೇರವಾಗಿ ಪಡೆಯುತ್ತಿದ್ದೇವೆ. ನಾನು ತರಬೇತಿಗೆ ಹೋಗುವಾಗ ಮೊದಲೇ ಎರಡೆರಡು ಬಾರಿ ಯೋಚಿಸುತ್ತಿದ್ದೆ. ಈಗ ಯಾವುದೇ ತೊಂದರೆ ಇಲ್ಲದೆ ಹೋಗಿ ಬರುತ್ತೇನೆ” ಎಂದರು.
ಇದನ್ನೂ ಓದಿ: ನೆನಪು | ಅನನ್ಯ ಪ್ರತಿಭೆಯ ಅಪ್ಪಟ ಕಲಾವಿದ ಬಾಲಕೃಷ್ಣ
ಈ ಯೋಜನೆಯು ರಾಜ್ಯದಲ್ಲಿ ಇರುವ ಅದೆಷ್ಟೋ ಬಡ, ಮಧ್ಯಮ ವರ್ಗದ ಕುಟುಂಬಗಳ ಆರ್ಥಿಕ ಸ್ಥಿತಿಗತಿಗಳಲ್ಲಿಯೂ ಒಂದು ರೀತಿಯ ಸಮತೋಲನ ತಂದಿದೆ. ಗ್ರಾಮೀಣ ಪ್ರದೇಶಗಳಲ್ಲಿನ ಮಹಿಳೆಯರು ಈಗ ತಮ್ಮ ಸ್ವಂತ ವ್ಯಾಪಾರ, ಸ್ವಯಂ ಸಹಾಯ ಗುಂಪುಗಳ ಚಟುವಟಿಕೆಗಳಲ್ಲಿ ಹೆಚ್ಚು ಸಕ್ರಿಯರಾಗುತ್ತಿದ್ದಾರೆ. ಶಕ್ತಿ ಯೋಜನೆಯಿಂದ ಬಸ್ಸಿನಲ್ಲಿ ಮಾರುಕಟ್ಟೆಗೆ ತೆರಳಿ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡುವ ಮಹಿಳೆಯರ ಸಂಖ್ಯೆಯೂ ಏರಿಕೆಯಾಗುತ್ತಿದೆ.
ಈ ಯೋಜನೆಯಡಿಯಲ್ಲಿ, ಮಹಿಳೆಯರು ಸೇವಾ ಸಿಂಧು ಪೋರ್ಟಲ್‌ನಲ್ಲಿ ನೋಂದಾಯಿಸಿಕೊಂಡು ಶಕ್ತಿ ಸ್ಮಾರ್ಟ್ ಕಾರ್ಡ್ ಪಡೆದುಕೊಳ್ಳಬಹುದು. ಈ ಕಾರ್ಡ್‌ನಿಂದ ರಾಜ್ಯಾದ್ಯಂತ ಯಾವುದೇ KSRTC, NWKRTC, KKRTC ಅಥವಾ BMTC ಬಸ್‌ನಲ್ಲಿ ಉಚಿತವಾಗಿ ಪ್ರಯಾಣ ಮಾಡಬಹುದಾಗಿದೆ.
ಪ್ರಾರಂಭದ ದಿನಗಳಲ್ಲಿ ಸೌಲಭ್ಯಗಳ ಅಭಾವ, ಬಸ್‌ಗಳ ಕೊರತೆ ಇತ್ಯಾದಿ ಸವಾಲುಗಳು ಎದುರಾದರೂ, ಸರ್ಕಾರ ಕ್ರಮೇಣ ಈ ಸಮಸ್ಯೆಗಳಿಗೆ ಸ್ಪಂದಿಸಿದೆ. ಹೆಚ್ಚಿನ ಬಸ್‌ಗಳ ನಿಯೋಜನೆ, ಸಿಬ್ಬಂದಿಗೆ ತರಬೇತಿ, ಗ್ರಾಮೀಣ ಮಾರ್ಗಗಳಲ್ಲಿ ಹೆಚ್ಚುವರಿ ಸೇವೆಗಳ ಪ್ರವೇಶ, ಸ್ಮಾರ್ಟ್ ಕಾರ್ಡ್ ನೀಡಿ ಸಾರ್ವಜನಿಕರ ಮೆಚ್ಚುಗೆ ಪಡೆದುಕೊಂಡಿದೆ. ರಾಜ್ಯದಲ್ಲಿ ಹೆಚ್ಚಿನ ಜನರು ಸಾರ್ವಜನಿಕ ಸಾರಿಗೆಯನ್ನು ಆಯ್ಕೆ ಮಾಡುತ್ತಿರುವುದರಿಂದ ಖಾಸಗಿ ವಾಹನಗಳ ಬಳಕೆ ಕಡಿಮೆಯಾಗಿ, ವಾಯುಮಾಲಿನ್ಯ ನಿಯಂತ್ರಣಕ್ಕೂ ಸಹಕಾರವಾಗಿದೆ.
ಮಂಗಳೂರಿನ ಪರಿಸರ ಕಾರ್ಯಕರ್ತರ ಪ್ರಕಾರ, ಬಸ್ ಪ್ರಯಾಣದ ಪ್ರಮಾಣದಲ್ಲಿ 15% ವೃದ್ಧಿ ಕಂಡುಬಂದಿದ್ದು, ಇಂಧನದ ಬಳಕೆ ಮತ್ತು ವಾಹನ ಜಾಮ್ ಕಡಿಮೆಯಾಗಿರುವುದು ಮಹತ್ವದ ಬೆಳವಣಿಗೆ. ಶಕ್ತಿ ಯೋಜನೆಯ ಯಶಸ್ಸನ್ನು ಗಮನಿಸಿ, ಸರ್ಕಾರ ಈಗ ಈ ಯೋಜನೆಯನ್ನು ಇನ್ನಷ್ಟು ಗ್ರಾಮೀಣ ಹಾಗೂ ಗಟ್ಟಿದೂರ ಪ್ರದೇಶಗಳಲ್ಲೂ ವಿಸ್ತರಿಸುವ ಕಾರ್ಯದಲ್ಲಿ ತೊಡಗಿದೆ. ಅಲ್ಲದೆ, ಇತ್ತೀಚೆಗಿನ ಬಜೆಟ್‌ನಲ್ಲಿ ಶಕ್ತಿ ಯೋಜನೆಗೆ ಹೆಚ್ಚಿನ ಅನುದಾನವನ್ನು ಹಂಚಿಕೆ ಮಾಡಲಾಗಿದ್ದು, ಇದು ಯೋಜನೆಯ ಉದ್ದೇಶಗಳನ್ನು ಇನ್ನಷ್ಟು ಗಟ್ಟಿಯಾಗಿಸಲು ನೆರವಾಗಲಿದೆ.

ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಈ ಯೋಜನೆಯ ಕುರಿತು ಹೇಳಿರುವಂತೆ, “ಶಕ್ತಿ ಯೋಜನೆ ಕೇವಲ ಉಚಿತ ಪ್ರಯಾಣವಲ್ಲ. ಇದು ಹೆಣ್ಣುಮಕ್ಕಳಿಗೆ ಸಮಾಜದಲ್ಲಿ ಗೌರವ, ಧೈರ್ಯ ಮತ್ತು ಮುಕ್ತ ಚಲನೆಯ ಹಕ್ಕನ್ನು ನೀಡುತ್ತಿರುವ ಸಾಂವಿಧಾನಿಕ ಸಂಕೇತವಾಗಿದೆ. ಈ ಹೇಳಿಕೆಗೆ ಪ್ರತಿ ದಿನದ ಬಸ್‌ಗಳಲ್ಲಿ ಕಂಡುಬರುವ ದೃಶ್ಯಗಳು ಸಾಕ್ಷಿ. ಎಲ್ಲೆಡೆ ವಿದ್ಯಾ, ವ್ಯಾಪಾರ, ಸೇವಾ ಹಾಗೂ ಆರೋಗ್ಯ ಕ್ಷೇತ್ರದ ಕಡೆಗೆ ಹೆಜ್ಜೆ ಇಡುತ್ತಿರುವ ಮಹಿಳೆಯರ ಮುಗ್ಧ ಮುಖಗಳಲ್ಲಿ ಶಕ್ತಿ ಯೋಜನೆಯಿಂದ ಹೊಸ ಹುಮ್ಮಸ್ಸು ಕಾಣಿಸುತ್ತಿದೆ.
ಇಂದಿನ ದಿನಗಳಲ್ಲಿ, ಶಕ್ತಿ ಯೋಜನೆಯು ಕೇವಲ ಸರ್ಕಾರಿ ಘೋಷಣೆಯಾಗಿ ಉಳಿಯದೆ, ನಿತ್ಯ ಜೀವನದ ಅಂಗವಾಗಿ ಪರಿವರ್ತನೆಗೊಂಡಿದೆ. ವಿದ್ಯಾರ್ಥಿನಿಯರು ತಮ್ಮ ಶಿಕ್ಷಣವನ್ನು ಸ್ಥಗಿತಗೊಳಿಸದೆ ಮುಂದುವರೆಸುತ್ತಿದ್ದಾರೆ. ಕೆಲಸಕ್ಕೆ ಹೋಗುವ ಮಹಿಳೆಯರು ಸಮಯಕ್ಕೆ ತಮ್ಮ ಜವಾಬ್ದಾರಿಗಳನ್ನು ನಿಭಾಯಿಸುತ್ತಿದ್ದಾರೆ, ಅನಾರೋಗ್ಯದಿಂದ ಬಳಲುತ್ತಿರುವ ಮಹಿಳೆಯರು ಆಸ್ಪತ್ರೆಗಳಿಗೆ ತೆರಳಿ ಆರೋಗ್ಯ ಕಾಪಾಡಿಕೊಳ್ಳಲು ಸಹಾಯಕವಾಗಿದೆ. ಇವೆಲ್ಲವೂ ಈ ಯೋಜನೆಯ ಸುಧಾರಿತ ಫಲಿತಾಂಶಗಳಾಗಿವೆ.
ಇದನ್ನೂ ಓದಿ: ನಾಸೀರುದ್ದೀನ್ ಷಾ @ 75 | ಅನಿಸಿದ್ದನ್ನು ಆಡುವ ಘಾಟಿ ಮುದುಕ
ಶಕ್ತಿ ಯೋಜನೆ ದಕ್ಷಿಣ ಕನ್ನಡ ಜಿಲ್ಲೆಯ ಮಹಿಳೆಯರ ಬದುಕಿನಲ್ಲಿ ಹೊಸ ಶಕ್ತಿಯೆಂಬ ಬೆಳಕು ಮೂಡಿಸಿರುವುದರಲ್ಲಿ ಸಂದೇಹವಿಲ್ಲ. ಇದು ಕೇವಲ ಪ್ರಯಾಣವಲ್ಲ, ಇದು ಬದಲಾಗುತ್ತಿರುವ ಸಮಾಜದ, ಮುನ್ನಡೆಯುತ್ತಿರುವ ರಾಜ್ಯದ, ಮತ್ತು ಸ್ಪಷ್ಟ ದೃಷ್ಟಿಯಿರುವ ಸರ್ಕಾರದ ಚಿಹ್ನೆಯಾಗಿದೆ.