15 ವರ್ಷದ ಬಾಲಕಿಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿದ ಘಟನೆ ಒಡಿಶಾದ ಪುರಿ ಜಿಲ್ಲೆಯಲ್ಲಿ ನಡೆದಿದ್ದು, ಬಾಲಕಿ ದೇಹ ಶೇಕಡ 70ರಷ್ಟು ಸುಟ್ಟು ಹೋಗಿದೆ. ಸದ್ಯ ಬಾಲಕಿಯನ್ನು ದೆಹಲಿಯ ಏಮ್ಸ್‌ಗೆ ವಿಮಾನದ ಮೂಲಕ ಕರೆದೊಯ್ಯಲಾಗಿದ್ದು, ಬಾಲಕಿ ಆರೋಗ್ಯ ಸ್ಥಿರವಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಶನಿವಾರ ಬೆಳಿಗ್ಗೆ ಬಾಲಕಿ ತನ್ನ ಸ್ನೇಹಿತರ ಮನೆಯಿಂದ ಹಿಂತಿರುಗುತ್ತಿದ್ದಾಗ ಬಲಂಗಾ ಪೊಲೀಸ್ ಠಾಣೆಯ ಬಯಾಬರ್ ಗ್ರಾಮದ ಬಳಿಯ ಭಾರ್ಗಬಿ ನದಿಯ ದಡದಲ್ಲಿ ಈ ಘಟನೆ ನಡೆದಿದೆ. ಮೋಟಾರ್ ಸೈಕಲ್‌ನಲ್ಲಿ ಬಂದ ಮೂವರು ಯುವಕರು ಬಾಲಕಿಯನ್ನು ಬಲವಂತವಾಗಿ ಭಾರ್ಗವಿ ನದಿಯ ದಡಕ್ಕೆ ಕರೆದೊಯ್ದು ಆಕೆಗೆ ಬೆಂಕಿ ಹಚ್ಚಿ ಪರಾರಿಯಾಗಿದ್ದಾರೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.
ಇದನ್ನು ಓದಿದ್ದೀರಾ? ಬೆಂಕಿ ಹಚ್ಚಿಕೊಂಡು ವಿದ್ಯಾರ್ಥಿನಿ ಆತ್ಮಹತ್ಯೆ: ಭುಗಿಲೆದ್ದ ಆಕ್ರೋಶ, ಏನಿದು ಪ್ರಕರಣ?
ಸ್ಥಳೀಯರು ಬಾಲಕಿಯ ಬೆಂಕಿ ನಂದಿಸಿ ಆಕೆಯನ್ನು ಪಿಪಿಲಿ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಅಲ್ಲಿಂದ ಆಕೆಯನ್ನು ಭುವನೇಶ್ವರದ ಏಮ್ಸ್‌ಗೆ ಸ್ಥಳಾಂತರಿಸಲಾಗಿತ್ತು. ಇದೀಗ ದೆಹಲಿಯ ಏಮ್ಸ್ ಆಸ್ಪತ್ರೆಗೆ ಏರ್‌ಲಿಫ್ಟ್ ಮಾಡಲಾಗುತ್ತದೆ ಎಂದು ವರದಿಯಾಗಿದೆ.
“ಶೇಕಡ 70ರಷ್ಟು ಸುಟ್ಟಗಾಯಗಳಿದ್ದು, ಬಾಲಕಿ ಆರೋಗ್ಯ ಸದ್ಯ ಸ್ಥಿರವಾಗಿದೆ. ಪ್ರಸ್ತುತ ಐಸಿಯುನಲ್ಲಿ ಆಮ್ಲಜನಕದ ಬೆಂಬಲದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. 12 ವೈದ್ಯರು ಮತ್ತು ಇಬ್ಬರು ನರ್ಸಿಂಗ್ ಅಧಿಕಾರಿಗಳ ತಂಡವು ರೋಗಿಯನ್ನು ನೋಡಿಕೊಳ್ಳುತ್ತಿದೆ” ಎಂದು ಭುವನೇಶ್ವರದ ಏಮ್ಸ್‌ನ ಬರ್ನ್ ಸೆಂಟರ್ ವಿಭಾಗದ ಮುಖ್ಯಸ್ಥ ಸಂಜಯ್ ಗಿರಿ ಹೇಳಿದ್ದಾರೆ.
ಈ ಬಗ್ಗೆ ಮಾಧ್ಯಮಕ್ಕೆ ಮಾಹಿತಿ ನೀಡಿರುವ ಭುವನೇಶ್ವರದ ಏಮ್ಸ್ ಕಾರ್ಯನಿರ್ವಾಹಕ ನಿರ್ದೇಶಕ ಅಸುತೋಷ್ ಬಿಸ್ವಾಸ್, “ಬಾಲಕಿ ಆರೋಗ್ಯ ಸ್ಥಿರವಾಗಿದ್ದು, ಆಕೆಯನ್ನು ಏರ್‌ಲಿಫ್ಟಿಂಗ್ ಮೂಲಕ ಸ್ಥಳಾಂತರಿಸಬಹುದಾದ ಸ್ಥಿತಿಯಲ್ಲಿದ್ದಾಳೆ. ದೆಹಲಿಯ ಏಮ್ಸ್‌ಗೆ ಈಗಾಗಲೇ ಮಾಹಿತಿ ನೀಡಲಾಗಿದೆ. ಆಕೆಯನ್ನು ವಿಶೇಷ ವಿಮಾನದಲ್ಲಿ ಕರೆದೊಯ್ಯಲಾಗುತ್ತದೆ” ಎಂದು ಮಾಹಿತಿ ನೀಡಿದ್ದಾರೆ.
#WATCH | #Bhubaneswar | The 15-year-old girl who was set on fire by miscreants at Balanga in Puri is being brought out of AIIMS Bhubaneswar. She is being airlifted to AIIMS Delhi for further treatment.#balanga #BalangaCase #WomenSafety #Puri #Odisha #Crime #aiims #treatment pic.twitter.com/PZ5PQTfuJt
— Odisha News Tune (@OdishaNewsTune) July 20, 2025
ಇನ್ನು ಮುಖ್ಯಮಂತ್ರಿ ಮೋಹನ್ ಚರಣ್ ಮಾಝಿ ರಾಜ್ಯ ಸರ್ಕಾರವು ಬಾಲಕಿಯ ಉತ್ತಮ ಚಿಕಿತ್ಸೆಗಾಗಿ ದೆಹಲಿಗೆ ವಿಮಾನದಲ್ಲಿ ಸಾಗಿಸಲು ಯೋಜಿಸುತ್ತಿದೆ ಎಂದು ಹೇಳಿದ್ದರು. ಆದರೆ ಏಮ್ಸ್ ಭುವನೇಶ್ವರದ ಏಮ್ಸ್ ಅಧಿಕಾರಿಗಳು ಆಕೆಯ ಆರೋಗ್ಯ ಸ್ಥಿತಿಯನ್ನು ಪರಿಗಣಿಸಿ ನಿರ್ಧಾರ ತೆಗೆದುಕೊಳ್ಳುವುದಾಗಿ ಹೇಳಿದ್ದರು.
ಇನ್ನು ಸಂತ್ರಸ್ತೆ ಕೊಂಚ ಮಾತನಾಡಲು ಆರಂಭಿಸಿದ್ದರಿಂದ ಭುವನೇಶ್ವರದ ಏಮ್ಸ್ ಐಸಿಯುನಲ್ಲಿ ಮ್ಯಾಜಿಸ್ಟ್ರೇಟ್ ಸಮ್ಮುಖದಲ್ಲಿ ಪೊಲೀಸರು ಆಕೆಯ ಹೇಳಿಕೆಯನ್ನು ದಾಖಲಿಸಿಕೊಂಡಿದ್ದಾರೆ. ಬಾಲಕಿಯ ತಾಯಿ ಬಲಂಗಾ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ.
