ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಪತ್ನಿಯನ್ನು ದುರುಳ ಪತಿಯೊಬ್ಬ ಇರಿದು ಕೊಂದಿರುವ ಅಮಾನುಷ ಘಟನೆ ತಮಿಳುನಾಡಿನಲ್ಲಿ ನಡೆದಿದೆ. ಮೃತ ಮಹಿಳೆಯು ಬೆಂಗಳೂರು ಮೂಲದವರು ಎಂದು ತಿಳಿದುಬಂದಿದೆ.
ತಮಿಳುನಾಡಿನ ಕರೂರ್ ಜಿಲ್ಲೆಯ ಕುಳಿತಲೈನಲ್ಲಿರುವ ಸರ್ಕಾರಿ ಜಿಲ್ಲಾ ಆಸ್ಪತ್ರೆಯಲ್ಲಿ ಘಟನೆ ನಡೆದಿದೆ. ಮೃತರನ್ನು ವಿ ಶೃತಿ (27) ಎಂದು ಗುರುತಿಸಲಾಗಿದೆ. ಆಕೆಯನನ್ನು ಆಕೆಯ ಪತಿ ಆರ್ ವಿಶ್ರುತ್ (28) ಆಸ್ಪತ್ರೆಯಲ್ಲೇ ಇರಿದು ಕೊಂದಿದ್ದಾನೆ ಎಂದು ವರದಿಯಾಗಿದೆ.
ಆರೋಪಿ ವಿಶ್ರುತ್ ಮತ್ತು ಮೃತ ಶೃತಿ – ಇಬ್ಬರೂ 7 ವರ್ಷಗಳ ಹಿಂದೆ ಪ್ರೀತಿಸಿ ವಿವಾಹವಾಗಿದ್ದರು. ಕುಳಿತಲೈ ಬಳಿಯ ಮರುಧೂರ್ ಪಂಚಾಯತಿ ವ್ಯಾಪ್ತಿಯಲ್ಲಿ ವಾಸಿಸುತ್ತಿದ್ದರು. ಆರೋಪಿ ಕಾರು ಚಾಲಕನಾಗಿ ಕೆಲಸ ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಶನಿವಾರ ರಾತ್ರಿ ದಂಪತಿ ನಡುವೆ ಜಗಳ ನಡೆದಿತ್ತು. ಶೃತಿ ಮೇಲೆ ವಿಶ್ರುತ್ ದಾಳಿ ನಡೆಸಿದ್ದು, ಆಕೆಗೆ ಗಂಭೀರ ಗಾಯಗಳಾಗಿದ್ದವು. ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಭಾನುವಾರ ಬೆಳಗ್ಗೆ ಆಸ್ಪತ್ರೆಗೆ ಬಂದ ವಿಶ್ರುತ್ ಆಕೆಯ ಕುತ್ತಿಗೆಗೆ ಚಾಕುವಿನಿಂದ ಇರಿದ್ದಿದ್ದಾನೆ. ಕ್ಷಣಾರ್ಧದಲ್ಲೇ ಶೃತಿ ಸಾವನ್ನಪ್ಪಿದ್ದಾರೆ ಎಂದು ವೈದ್ಯರು ತಿಳಿಸಿದ್ದಾಗಿ ವರದಿಯಾಗಿದೆ.
ಘಟನಾ ಸ್ಥಳಕ್ಕೆ ಕುಳಿತಲೈ ಡಿಎಸ್‌ಪಿ ಸೆಂಥಿಲ್ ಕುಮಾರ್ ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ. ಶೃತಿ ಅವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕರೂರು ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ರವಾನಿಸಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ತನಿಖೆ ನಡೆಸುತ್ತಿದ್ದಾರೆ. ಆರೋಪಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.