ಹಿಂದಿ ಹೇರಿಕೆ ವಿರುದ್ಧವಾಗಿ, ಮರಾಠಿ ಭಾಷೆ ಉಳಿವಿಗಾಗಿ ಜೊತೆಯಾದ ಠಾಕ್ರೆ ಸೋದರಸಂಬಂಧಿಗಳಾದ ಉದ್ಧವ್ ಠಾಕ್ರೆ ಮತ್ತು ರಾಜ್ ಠಾಕ್ರೆ ಇದೀಗ ರಾಜಕೀಯ ಮೈತ್ರಿಗೆ ಮುಂದಾಗಿದ್ದಾರೆ. ಮಹಾರಾಷ್ಟ್ರ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಮುಂಚಿತವಾಗಿ ಶಿವಸೇನೆ (ಯುಬಿಟಿ) ಮತ್ತು ಎಂಎನ್ಎಸ್ ನಡುವೆ ಚುನಾವಣಾ ಮೈತ್ರಿ ಮಾಡಿಕೊಳ್ಳುವ ಮಾತುಕತೆ ನಡೆಸುತ್ತಿದೆ ಎಂದು ವರದಿಯಾಗಿದೆ.
ಸಾಮ್ನಾಗೆ ನೀಡಿದ ಸಂದರ್ಶನದ ವೇಳೆ ರಾಜಕೀಯ ಮೈತ್ರಿ ಕುರಿತು ರಾಜ್ ಜೊತೆ ಸಂಭಾವ್ಯ ಮಾತುಕತೆಗಳ ಬಗ್ಗೆ ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರನ್ನು ಪ್ರಶ್ನಿಸಿದಾಗ, “ಚರ್ಚೆಗಳು ನಡೆಯಲಿವೆ” ಎಂದು ಹೇಳಿದರು. ಠಾಕ್ರೆ ಸಹೋದರರಿಬ್ಬರು ಮರಾಠಿ ವಿಜಯೋತ್ಸವದಲ್ಲಿ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡ ಕೆಲವು ದಿನಗಳ ನಂತರ ಈ ಸಂದರ್ಶನ ನಡೆದಿದೆ.
ಇದನ್ನು ಓದಿದ್ದೀರಾ? ಲೋಕಸಭೆ ಚುನಾವಣೆ | 15 ದಿನದಲ್ಲೇ ಉದ್ಧವ್ ಠಾಕ್ರೆ ಮೋದಿ ಸರ್ಕಾರ ಸೇರ್ಪಡೆ: ಅಮರಾವತಿ ಶಾಸಕ
ಉದ್ಧವ್ ಠಾಕ್ರೆ ದಿವಂಗತ ಶಿವಸೇನೆ ಸಂಸ್ಥಾಪಕ ಬಾಳಾಸಾಹೇಬ್ ಠಾಕ್ರೆ ಅವರ ಮಗನಾಗಿದ್ದು, ರಾಜ್ ಠಾಕ್ರೆ ಸೋದರಳಿಯ. 2005ರಲ್ಲಿ ಮಾಲ್ವನ್ ವಿಧಾನಸಭಾ ಉಪಚುನಾವಣೆ ಪ್ರಚಾರದ ಸಮಯದಲ್ಲಿ ರಾಜ್ ಮತ್ತು ಉದ್ಧವ್ ಕೊನೆಯ ಬಾರಿಗೆ ಸಾರ್ವಜನಿಕವಾಗಿ ಒಟ್ಟಿಗೆ ಕಾಣಿಸಿಕೊಂಡಿದ್ದರು. ಬಳಿಕ ಆಂತರಿಕ ಭಿನ್ನಾಭಿಪ್ರಾಯಗಳ ಕಾರಣ ರಾಜ್ ಠಾಕ್ರೆ ಶಿವಸೇನೆಯನ್ನು ತೊರೆದರು.
2005ರ ನವೆಂಬರ್‌ನ ಶಿವಾಜಿ ಪಾರ್ಕ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ರಾಜ್ ತಮ್ಮ ಚಿಕ್ಕಪ್ಪ ಸ್ಥಾಪಿಸಿದ ಶಿವಸೇನೆಗೆ ರಾಜೀನಾಮೆ ನೀಡುವುದಾಗಿ ಭಾವನಾತ್ಮಕವಾಗಿ ಹೇಳಿದ್ದರು. “ನಾನು ಕೇಳಿದ್ದು ಗೌರವ ಮಾತ್ರ. ನನಗೆ ಸಿಕ್ಕಿದ್ದು ಅವಮಾನ ಮಾತ್ರ” ಎಂದು ಠಾಕ್ರೆ ಹೇಳಿದ್ದರು.
ಆದರೆ 2025ರ ಜುಲೈ 5ರಂದು, ಉದ್ಧವ್ ಮತ್ತು ರಾಜ್ ಸುಮಾರು 20 ವರ್ಷಗಳ ನಂತರ ಒಂದೇ ಸಾರ್ವಜನಿಕ ವೇದಿಕೆಯಲ್ಲಿ ಒಟ್ಟಾಗಿ ಸೇರಿದ್ದರು. ಜೊತೆಯಾಗಿ ಮರಾಠಿ ಮತ್ತು ಇಂಗ್ಲಿಷ್ ಶಾಲೆಗಳಲ್ಲಿ 1-5ನೇ ತರಗತಿಗಳಲ್ಲಿ ಹಿಂದಿಯನ್ನು ಪರಿಚಯಿಸುವ ಹೊಸ ಶಿಕ್ಷಣ ನೀತಿಯಡಿಯಲ್ಲಿ ತ್ರಿಭಾಷಾ ಸೂತ್ರವನ್ನು ಇಬ್ಬರೂ ವಿರೋಧಿಸಿದ್ದಾರೆ.
ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಈ ಆದೇಶವನ್ನು ಹಿಂಪಡೆದ ಬಳಿಕ ಠಾಕ್ರೆ ಸಹೋದರರು ವಿಜಯ ಮೆರವಣಿಗೆ ನಡೆದಿದ್ದಾರೆ. ಎರಡೂ ಕುಟುಂಬಗಳು ಈ ವೇಳೆ ಜೊತೆಯಾಗಿದೆ.
