ಸುಮಾರು 19 ವರ್ಷದ ಎಂಜಿನಿಯರಿಂಗ್ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ಒಡಿಶಾದ ಕಾಂಗ್ರೆಸ್ ವಿದ್ಯಾರ್ಥಿ ಘಟಕವಾದ ನ್ಯಾಷನಲ್ ಸ್ಟೂಡೆಂಟ್ಸ್ ಯೂನಿಯನ್ ಆಫ್ ಇಂಡಿಯಾದ ಅಧ್ಯಕ್ಷ ಉದಿತ್ ಪ್ರಧಾನ್‌ನ ಬಂಧನ ಮಾಡಲಾಗಿದೆ. ಮಾರ್ಚ್‌ನಲ್ಲಿ ಹೋಟೆಲ್ ಕೋಣೆಯಲ್ಲಿ ಪ್ರಧಾನ್ ತನಗೆ ಮಾದಕ ದ್ರವ್ಯ ನೀಡಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂಬುದು ಸಂತ್ರಸ್ತೆ ಆರೋಪ.
ಮಾರ್ಚ್ 18ರಂದು ಭುವನೇಶ್ವರದ ಮಾಸ್ಟರ್ ಕ್ಯಾಂಟೀನ್ ಚೌಕ್‌ನಲ್ಲಿ ಇಬ್ಬರು ಸ್ನೇಹಿತರನ್ನು ಭೇಟಿಯಾಗಿದ್ದೆ. ಕಾರಿನಲ್ಲಿ ಕೂತು ಮತ್ತೊಬ್ಬ ವ್ಯಕ್ತಿ ಬಂದು ನಮ್ಮೊಂದಿಗೆ ಸೇರಿಕೊಂಡ. ಆತ ತನ್ನನ್ನು ಉದಿತ್ ಪ್ರಧಾನ್ ಎಂದು ಪರಿಚಯಿಸಿಕೊಂಡು, ತಾನು ಎನ್‌ಎಸ್‌ಯುಐನ ಒಡಿಶಾ ವಿಭಾಗದ ಅಧ್ಯಕ್ಷನೆಂದು ಹೇಳಿಕೊಂಡ ಎಂದು ಯುವತಿ ದೂರಿನಲ್ಲಿ ತಿಳಿಸಿದ್ದಾರೆ.
ಇದನ್ನು ಓದಿದ್ದೀರಾ? ಬೆಂಕಿ ಹಚ್ಚಿಕೊಂಡು ವಿದ್ಯಾರ್ಥಿನಿ ಆತ್ಮಹತ್ಯೆ: ಭುಗಿಲೆದ್ದ ಆಕ್ರೋಶ, ಏನಿದು ಪ್ರಕರಣ?
“ಉದಿತ್ ನನ್ನ ಪಕ್ಕದಲ್ಲಿ ಕುಳಿತು ಅನುಚಿತವಾಗಿ ನನ್ನನ್ನು ಮುಟ್ಟಲು ಆರಂಭಿಸಿದ. ಅದಾದ ಬಳಿಕ ಅವರು ನನ್ನನ್ನು ಹೋಟೆಲ್‌ಗೆ ಕರೆದೊಯ್ದರು. ಅವರು ಒಂದು ಕೋಣೆಯಲ್ಲಿ ಕೂತು ಮದ್ಯಪಾನ ಮಾಡಲು ಪ್ರಾರಂಭಿಸಿದರು. ನಾನು ಮದ್ಯ ಸೇವಿಸಿದ ಕಾರಣ ನಿರಾಕರಿಸಿದೆ. ಈ ವೇಳೆ ಉದಿತ್ ಒಂದು ಲೋಟ ತಂಪು ಪಾನೀಯ ನೀಡಿದ. ನಾನು ಅದನ್ನು ಕುಡಿದ ಬಳಿಕ ನನಗೆ ತಲೆತಿರುಗಲು ಶುರುವಾಯಿತು” ಎಂದು ಯುವತಿ ದೂರಿನಲ್ಲಿ ವಿವರಿಸಿದ್ದಾರೆ.
“ನಾನು ಕೂಡಲೇ ನನ್ನನ್ನು ಮನೆಗೆ ಬಿಡುವಂತೆ ಹೇಳಿದೆ. ಆದರೆ ನನಗೆ ಪ್ರಜ್ಞೆ ತಪ್ಪಿತು. ನನಗೆ ಪ್ರಜ್ಞೆ ಬಂದಾಗ, ಉದಿತ್ ಪ್ರಧಾನ್ ನನ್ನ ಪಕ್ಕದಲ್ಲಿ ಮಲಗಿದ್ದ. ನನಗೆ ತುಂಬ ತಲೆ ನೋವಾಗುತ್ತಿತ್ತು. ನನ್ನೊಂದಿಗೆ ಏನೋ ತಪ್ಪು ಕಾರ್ಯ ಮಾಡಲಾಗಿದೆ ಎಂಬುದು ನನ್ನ ಅರಿವಿಗೆ ಬಂತು” ಎಂದು ಸಂತ್ರಸ್ತೆ ಹೇಳಿದ್ದಾರೆ.
ಸದ್ಯ ಈ ಪ್ರಕರಣವು ರಾಜಕೀಯವಾಗಿ ತೀವ್ರ ಸಂಚಲನ ಮೂಡಿಸಿದೆ. ಒಡಿಶಾದಲ್ಲಿ ಮಹಿಳೆಯರ ವಿರುದ್ಧದ ಅಪರಾಧಗಳು ಹೆಚ್ಚಾಗುತ್ತಿರುವುದರ ವಿಚಾರದಲ್ಲಿ ಬಿಜೆಪಿ ಸರ್ಕಾರವನ್ನು ಕಾಂಗ್ರೆಸ್ ನಿರಂತರವಾಗಿ ಟೀಕಿಸುತ್ತಿದೆ. ಈ ನಡುವೆಯೇ ಅತ್ಯಾಚಾರ ಆರೋಪದಲ್ಲಿ ಕಾಂಗ್ರೆಸ್ ವಿದ್ಯಾರ್ಥಿ ನಾಯಕನ ಬಂಧನವಾಗಿದೆ.
ಇದನ್ನು ಓದಿದ್ದೀರಾ? ಒಡಿಶಾ | 15ರ ಬಾಲಕಿಗೆ ಬೆಂಕಿ ಹಚ್ಚಿದ ದುಷ್ಕರ್ಮಿಗಳು: ಶೇ. 70ರಷ್ಟು ಸುಟ್ಟ ದೇಹ
ಒಡಿಶಾದಲ್ಲಿ ಇತ್ತೀಚೆಗೆ ಅಧ್ಯಾಪಕನ ಲೈಂಗಿಕ ಕಿರುಕುಳಕ್ಕೆ ಬೇಸತ್ತು ವಿದ್ಯಾರ್ಥಿನಿಯೋರ್ವಳು ಕಾಲೇಜು ಕ್ಯಾಂಪಸ್‌ನಲ್ಲಿ ಬೆಂಕಿ ಹಚ್ಚಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅದಾದ ಬಳಿಕ ಶನಿವಾರ ಅಪರಿಚಿತರು 15 ವರ್ಷದ ಬಾಲಕಿಯ ಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದ್ದಾರೆ. ಈ ವಿಚಾರದಲ್ಲಿ ಬಿಜೆಪಿ ಸರ್ಕಾರವನ್ನು ಕಾಂಗ್ರೆಸ್ ತರಾಟೆಗೆ ತೆಗೆದುಕೊಂಡಿದೆ. ಇದೀಗ ಅತ್ಯಾಚಾರ ಆರೋಪದಲ್ಲಿ ಕಾಂಗ್ರೆಸ್ ನಾಯಕನ ಬಂಧನವನ್ನು ಮುಂದಿಟ್ಟು ತಿರುಗೇಟು ನೀಡುವ ಸಾಧ್ಯತೆಯಿದೆ.
ಇನ್ನು ಬಂಧನದ ಬಳಿಕ ಎನ್‌ಎಸ್‌ಯುಐನಿಂದ ಪ್ರಧಾನ್ ಅಮಾನತುಗೊಳಿಸಲಾಗಿದೆ. ಈ ಬಗ್ಗೆ ಎನ್‌ಎಸ್‌ಯುಐನ ರಾಷ್ಟ್ರೀಯ ಅಧ್ಯಕ್ಷ ವರುಣ್ ಚೌಧರಿ ಹೇಳಿಕೆ ಬಿಡುಗಡೆ ಮಾಡಿದ್ದು, “ಲಿಂಗ ಆಧಾರಿತ ಹಿಂಸೆಯ ವಿಚಾರದಲ್ಲಿ ಎನ್‌ಎಸ್‌ಯುಐ ಯಾವುದೇ ಸಹಿಷ್ಣುತೆ ಹೊಂದಿಲ್ಲ” ಎಂದು ತಿಳಿಸಿದ್ದಾರೆ.
