ಜಿಎಸ್‌ಟಿ ಬಗ್ಗೆ ವರ್ತಕರಲ್ಲಿ ಜಾಗೃತಿ ಮೂಡಿಸಲು 'NO GST' ಎನ್ನುತ್ತಿದ್ದಾರೆ. ಈ ನಡುವೆ ರಾಜ್ಯ ಸರ್ಕಾರ 'Know GST' (ಜಿಎಸ್‌ಟಿ ಬಗ್ಗೆ ತಿಳಿಯಿರಿ) ಎಂಬ ಅಭಿಯಾನವನ್ನು ಆರಂಭಿಸಿದೆ. ವರ್ತಕರು ಮತ್ತು ಅಧಿಕಾರಿಗಳು- ಇಬ್ಬರಿಗೂ ಅರಿವಿನ ಕೊರತೆ ಇದೆ.
ತಾವು ಮಾಡಿದ ಸಣ್ಣ ಪುಟ್ಟ ವಹಿವಾಟಿಗೂ ಜಿಎಸ್‌ಟಿ ನೋಟಿಸ್ ಬಂದಿರುವುದು ಸಣ್ಣ ವ್ಯಾಪಾರಿಗಳಿಗೆ ಆತಂಕ ಉಂಟು ಮಾಡಿದೆ. ಇವೆಲ್ಲವುದಕ್ಕೂ ಕಾರಣ ಫೋನ್‌ಪೇ, ಗೂಗಲ್‌ಪೇನಂತಹ ಯುಪಿಐ ವಹಿವಾಟು ಎಂದು ಹೇಳಲಾಗುತ್ತಿರುವಂತೆಯೇ ನಿಧಾನವಾಗಿ ಒಂದೊಂದೇ ವ್ಯಾಪಾರಿಗಳು ಯುಪಿಐ ವಹಿವಾಟಿನಿಂದ ದೂರ ಸರಿಯಲು ಆರಂಭಿಸಿದ್ದಾರೆ, ಮತ್ತೆ ನಗದು ವಹಿವಾಟಿಗೆ ಜಿಗಿಯುತ್ತಿದ್ದಾರೆ. ಈ ಬದಲಾವಣೆ ನಡೆಯುತ್ತಿರುವಾಗಲೇ “ನಗದು ವಹಿವಾಟು ಸೇರಿದಂತೆ ಯಾವುದೇ ಮಾದರಿಯ ವಹಿವಾಟಿಗೂ ಜಿಎಸ್‌ಟಿ ವಿಧಿಸಲಾಗುತ್ತದೆ. ಯುಪಿಐನಂತಹ ಡಿಜಿಟಲ್ ಪಾವತಿ ನಿಲ್ಲಿಸಿ ನಗದು ವಹಿವಾಟು ನಡೆಸುತ್ತಿರುವ ವರ್ತಕರ ಮೇಲೂ ಇಲಾಖೆ ಕಣ್ಣಿಟ್ಟಿದೆ” ಎಂದು ವಾಣಿಜ್ಯ ತೆರಿಗೆ ಇಲಾಖೆ ಎಚ್ಚರಿಕೆ ನೀಡಿದೆ.
ಸದ್ಯ ಈ ಜಿಎಸ್‌ಟಿ ಎಂಬುದು ಸಣ್ಣ ವ್ಯಾಪಾರಿಗಳು ಮತ್ತು ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳ ನಡುವಿನ ಹೋರಾಟಕ್ಕೆ ದಾರಿ ಮಾಡಿಕೊಟ್ಟಿದೆ. ಬೆಂಗಳೂರಿನ ಸಣ್ಣ ವ್ಯಾಪಾರಿಗಳು ಜುಲೈ 23ರಿಂದ 25ರವರೆಗೆ ಮೂರು ದಿನಗಳ ಕಾಲ ಫ್ರೀಡಂ ಪಾರ್ಕ್‌ನಲ್ಲಿ ಮುಷ್ಕರಕ್ಕೆ ಕರೆ ನೀಡಿದ್ದಾರೆ. ಜಿಎಸ್‌ಟಿ ಬಗ್ಗೆ ವರ್ತಕರಲ್ಲಿ ಜಾಗೃತಿ ಮೂಡಿಸಲು ಮುಂದಾಗಿದ್ದಾರೆ, ‘NO GST’ ಎನ್ನುತ್ತಿದ್ದಾರೆ. ಇವೆಲ್ಲವುದ ನಡುವೆ ರಾಜ್ಯ ಸರ್ಕಾರ ‘Know GST’ (ಜಿಎಸ್‌ಟಿ ಬಗ್ಗೆ ತಿಳಿಯಿರಿ) ಎಂಬ ಅಭಿಯಾನವನ್ನು ಆರಂಭಿಸಿದೆ, ಕೋರಮಂಗಲದಲ್ಲಿ ಮೊದಲ ಕಾರ್ಯಾಗಾರ ನಡೆದಿದೆ. ಇನ್ನೊಂದೆಡೆ ಹಾಲು ವ್ಯಾಪಾರಿಗಳು ಜುಲೈ 23-24ರಂದು ಹಾಲು, ಹಾಲಿನ ಉತ್ಪನ್ನಗಳನ್ನು ಮಾರಾಟ ಮಾಡಲ್ಲ. ಕಪ್ಪು ಪಟ್ಟಿ ಧರಿಸಿ ವ್ಯಾಪಾರ ನಡೆಸುತ್ತೇವೆ ಎಂದು ಹೇಳಿಕೊಂಡಿದ್ದಾರೆ. ಸದ್ಯ ವಾಣಿಜ್ಯ ತೆರಿಗೆ ಅಧಿಕಾರಿಗಳು ಮಾಡಿರುವ ಈ ಯುಪಿಐ ಎಡವಟ್ಟು ವ್ಯಾಪಾರಿಗಳನ್ನು ಕೆರಳಿಸಿದೆ, ಆತಂಕಕ್ಕೆ ದೂಡಿದೆ.
ಇದನ್ನು ಓದಿದ್ದೀರಾ? ಯುಪಿಐ ತೊರೆದು ನಗದು ವ್ಯವಹಾರ ಆರಂಭಿಸಿದ ವರ್ತಕರಿಗೆ ಎಚ್ಚರಿಕೆ ನೀಡಿದ ವಾಣಿಜ್ಯ ತೆರಿಗೆ ಇಲಾಖೆ
ಸದ್ಯ ಈ ಸ್ಲ್ಯಾಬ್‌ಗಳ ಬಗ್ಗೆಯೂ ಚರ್ಚೆ ನಡೆಯುತ್ತಿದೆ. ಆದಾಯ ತೆರಿಗೆಗೆ ವಿವಿಧ ಸ್ಲ್ಯಾಬ್‌ಗಳಿವೆ. ಅದರಂತೆ ಸಾಫ್ಟ್‌ವೇರ್ ಎಂಜಿನಿಯರ್‌ನಂತಹ ಅಧಿಕ ವೇತನ ಪಡೆಯುವವರು 12 ಲಕ್ಷ ರೂಪಾಯಿವರೆಗಿನ ಆದಾಯಕ್ಕೆ ತೆರಿಗೆ ವಿನಾಯಿತಿ ಪಡೆಯುತ್ತಾರೆ. ಸದ್ಯ ವಹಿವಾಟು 40 ಲಕ್ಷ ರೂಪಾಯಿ ಮೀರಿದರೆ ಬಹುತೇಕ ಸರಕುಗಳಿಗೆ ಶೇಕಡ 18ರಷ್ಟು ತೆರಿಗೆ ವಿಧಿಸಲಾಗುತ್ತದೆ. ರಾಜ್ಯ ಮತ್ತು ಕೇಂದ್ರಕ್ಕೆ ಸಮವಾಗಿ ಶೇಕಡ 8ರಷ್ಟು ಪಾಲಿದೆ. ಆದರೆ ವಾಣಿಜ್ಯ ತೆರಿಗೆಗೆ ಆದಾಯ ತೆರಿಗೆಯಂತಹ ಸ್ಲ್ಯಾಬ್ ಇಲ್ಲ. 40ರಿಂದ 60 ಲಕ್ಷ ರೂಪಾಯಿ, 60ರಿಂದ 80 ಲಕ್ಷ ರೂಪಾಯಿ, 80ರಿಂದ ಒಂದು ಕೋಟಿ ರೂಪಾಯಿ – ಇಂತಹ ಸ್ಲ್ಯಾಬ್‌ಗಳನ್ನು ಮಾಡಿ ತೆರಿಗೆ ವಿಧಿಸಿದರೆ, ವಿನಾಯಿತಿ ನೀಡಿದರೆ ಸಣ್ಣ ವ್ಯಾಪಾರಿಗಳಿಗೂ ಸಹಾಯವಾಗುತ್ತದೆ. ಸರ್ಕಾರಕ್ಕೆ ಆದಾಯವೂ ಸಿಗುತ್ತದೆ ಎಂಬ ಅಭಿಪ್ರಾಯಗಳಿವೆ. ಏನೇ ನಿರ್ಧಾರವಾದರೂ ಇಲ್ಲಿ ಮಾನವೀಯ ನೆಲೆಗಟ್ಟು ಮತ್ತು ಸರ್ಕಾರದ ಖಜಾನೆ ತುಂಬಿಸುವ ಹೊಣೆಗಾರಿಕೆಯೂ ಇರಬೇಕು.
ತರಕಾರಿ, ಹಾಲು, ಸೊಪ್ಪು ಮಾರಾಟಗಾರರು ಜಿಎಸ್‌ಟಿ ಪಾವತಿಸಬೇಕೇ?
ಈ ಬಗ್ಗೆ ಈದಿನ ಡಾಟ್ ಕಾಮ್‌ಗೆ ಪ್ರತಿಕ್ರಿಯೆ ನೀಡಿದ ವಾಣಿಜ್ಯ ತೆರಿಗೆ ಇಲಾಖೆಯ ಮಾಜಿ ಆಯುಕ್ತರು ಕೇಶವರೆಡ್ಡಿ ಹಂದ್ರಾಳ, “20 ಲಕ್ಷ ರೂಪಾಯಿಗಿಂತ ಅಧಿಕ ಸೇವಾ ಪೂರೈಕೆ ಮಾಡಿದವರಿಗೆ ಮತ್ತು ಸರಕು ವ್ಯಾಪಾರಿಗಳು 40 ಲಕ್ಷ ರೂಪಾಯಿಗಿಂತ ಅಧಿಕ ವಹಿವಾಟು ಮಾಡಿದ್ದರೆ ಅವರು ಜಿಎಸ್‌ಟಿ ನೋಂದಣಿ ಮಾಡಿಸಿಕೊಳ್ಳಬೇಕು. ತರಕಾರಿ, ಹಾಲು, ಸೊಪ್ಪುಗಳೆಲ್ಲವೂ(ಕೃಷಿ ಉತ್ಪನ್ನಗಳು) ತೆರಿಗೆರಹಿತ ಸರಕುಗಳು. ಅವರಿಗೆ ಎಷ್ಟು ವಹಿವಾಟು ಇದ್ದರೂ ತೆರಿಗೆ ಕಟ್ಟಬೇಕಾಗಿಲ್ಲ. ನೋಟಿಸ್ ಬಂದಿದ್ದರೆ ಇಲಾಖೆಗೆ ಹೋಗಿ ನೀವು ಕೃಷಿ ಉತ್ಪನ್ನಗಳ ಮಾರಾಟಗಾರರು ಎಂದು ಸಾಬೀತುಪಡಿಸಿದರೆ ಜಿಎಸ್‌ಟಿ ಕಟ್ಟಬೇಕಾಗಿಲ್ಲ” ಎಂದು ತಿಳಿಸಿದರು.
“ತರಕಾರಿ ವ್ಯಾಪಾರಿಗಳಿಗೆ ನೋಟಿಸ್ ಬಂದಿದ್ದರೆ ಭಯಪಡಬೇಕಾಗಿಲ್ಲ, ಏನೂ ತೊಂದರೆಯಾಗಲ್ಲ. ಹಾಲು ಮಾರುವವರಿಗೂ ಜಿಎಸ್‌ಟಿ ಹಾಕಲಾಗಿದೆ ಎಂದು ಹೇಳಲಾಗುತ್ತಿದೆ. ಅವರೂ ಜಿಎಸ್‌ಟಿ ಕಟ್ಟಬೇಕಾಗಿಲ್ಲ. ತಾನು ಹಾಲು ವ್ಯಾಪಾರಿಯೆಂದು ರಶೀದಿ, ದಾಖಲೆಗಳನ್ನು ತೋರಿಸಿ ಸಾಬೀತುಪಡಿಸಬೇಕು. ತುಪ್ಪ, ಬೆಣ್ಣೆಯಂತಹ ಪ್ಯಾಕ್ ಮಾಡಿದ ಆಹಾರ ಪದಾರ್ಥಗಳಿಗೆ ಜಿಎಸ್‌ಟಿಯಿದೆ” ಎಂದು ಸ್ಪಷ್ಟಪಡಿಸಿದರು.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಕಾನೂನು ಅಸ್ತ್ರವಾಗದಿರಲಿ, ಬಡವರ ಬಗ್ಗೆ ವಿವೇಚನೆಯಿಂದ ಬಳಸಲಿ
“ಹೂವು, ಸೊಪ್ಪು ಮಾರುವ ಅದೆಷ್ಟೋ ವ್ಯಾಪಾರಿಗಳಿಗೆ ಕೋಟ್ಯಂತರ ರೂಪಾಯಿ ವ್ಯಾಪಾರವಿದೆ. ಆದರೂ ಅವರು ತೆರಿಗೆ ಪಾವತಿಯಡಿಯಲ್ಲಿ ಬರುವ ವ್ಯಾಪಾರಿಗಳಲ್ಲ. ಆದರೆ ಆದಾಯ ತೆರಿಗೆ ಪಾವತಿಸದ ಕಾರಣ ಈಗ ಭಯಪಡುತ್ತಿದ್ದಾರೆ. ಜಿಎಸ್‌ಟಿಗೆ ಅವರು ಅನ್ವಯವಾಗಲ್ಲ” ಎನ್ನುತ್ತಾರೆ ವಾಣಿಜ್ಯ ತೆರಿಗೆ ಇಲಾಖೆಯ ಮಾಜಿ ಆಯುಕ್ತರು.
“ಕೆಲವು ಸಣ್ಣ ಪುಟ್ಟ ಅಧಿಕಾರಿಗಳು ಭಯ ಹುಟ್ಟಿಸುತ್ತಿದ್ದಾರೆ, ಕೆಲವರು ಕಿರುಕುಳ ನೀಡುತ್ತಿದ್ದಾರೆ. ಅದಕ್ಕಾಗಿ ನೀವು ನೇರವಾಗಿ ಉನ್ನತ ಅಧಿಕಾರಿಗಳನ್ನು ಸಂಪರ್ಕಿಸಿ. ಗಾಂಧಿ ನಗರದಲ್ಲಿ ನಮ್ಮ ಮುಖ್ಯ ಕಚೇರಿಯಿದೆ. ಅಲ್ಲಿ ಸಾರ್ವಜನಿಕ ಮಾಹಿತಿ ಅಧಿಕಾರಿ, ಜಂಟಿ ಆಯುಕ್ತರು ಇರುತ್ತಾರೆ. ಅವರ ಹತ್ತಿರ ಹೋದರೆ ಜನರಿಗೆ ಸಂಪೂರ್ಣವಾದ ಮಾಹಿತಿ ನೀಡುತ್ತಾರೆ. ನೀವು ಅಕೌಟೆಂಟ್ ನೇಮಿಸಿಕೊಂಡಿದ್ದರೆ ಅವರೊಂದಿಗೆ ಹೋಗಿ. ಇಲ್ಲದಿದ್ದರೆ ನೀವೇ ಹೋಗಬಹುದು. ಏನೂ ಸಮಸ್ಯೆಯಿಲ್ಲ. ಸುಮ್ಮನೆ ಸಿಎಗಾಗಿ ಖರ್ಚು ಮಾಡಬೇಡಿ” ಎಂದು ತಿಳಿಸಿದ್ದಾರೆ.
“ಅಂಗಡಿಗಳಲ್ಲಿ 40 ಲಕ್ಷ ರೂಪಾಯಿಗಿಂತ ಅಧಿಕ ಮೌಲ್ಯದ ಸರಕುಗಳು ಇದ್ದಾಗ ಜಿಎಸ್‌ಟಿ ನೋಂದಣಿ ವ್ಯಾಪ್ತಿಗೆ ಸೇರುವುದಾಗಿ ಪರಿಗಣಿಸಿ ನೋಟಿಸ್ ನೀಡಲಾಗುತ್ತದೆ. ಸೊಪ್ಪು, ತರಕಾರಿ ಮಾರುವವರು ಯಾವತ್ತೂ ತೆರಿಗೆ ಇಲಾಖೆಯನ್ನು ನೋಡಿರುವುದಿಲ್ಲ. ಹಾಗಾಗಿ ತಕ್ಷಣ ಭಯ ಬೀಳುತ್ತಾರೆ, ಇದರಿಂದಾಗಿ ಕೆಲವರು ಒಟ್ಟು ವಹಿವಾಟನ್ನೇ ತೆರಿಗೆ ಎಂದು ತಿಳಿದುಕೊಂಡುಬಿಡುತ್ತಾರೆ. ಐವತ್ತು ಲಕ್ಷ ರೂಪಾಯಿ ವಹಿವಾಟಿದೆ ಎಂದು ನೋಟಿಸ್ ಕಳುಹಿಸಿದರೆ, ಐವತ್ತು ಲಕ್ಷ ತೆರಿಗೆ ಎಂದುಕೊಂಡವರೂ ಇದ್ದಾರೆ. ಮುಖ್ಯ ಕಚೇರಿಗೆ ಹೋಗಿ ಸ್ಪಷ್ಟೀಕರಣ ಪಡೆಯಿರಿ” ಎಂದು ವಿವರಿಸಿದ್ದಾರೆ.
“ನೀವು ಸೊಪ್ಪು ಮಾರುವವರು ಎಂದು ಹೇಳಿದರೆ ಖಂಡಿತವಾಗಿಯೂ ನಮ್ಮ ಅಧಿಕಾರಿಗಳು ನಂಬುತ್ತಾರೆ. ಯಾಕೆಂದರೆ ಅವರಲ್ಲಿ ತೋರಿಸಲು ಯಾವುದೇ ಬಿಲ್ ಇರುವುದಿಲ್ಲ. ಆದರೆ ಸೊಪ್ಪು ಮಾರುವವರಿಗೆಲ್ಲ ನೋಟಿಸ್ ಬರಲ್ಲ. ಅಧಿಕಾರಿಗಳು ಯುಪಿಐ ವಹಿವಾಟು ನೋಡಿ ನೋಟಿಸ್ ನೀಡಿರಬಹುದು. ಆದರೆ ಬೇಕರಿ ಮೊದಲಾದ ವ್ಯಾಪಾರಿಗಳು ಜಿಎಸ್‌ಟಿ ರಿಟರ್ನ್ ಫೈಲ್ ಮಾಡದಿದ್ದರೆ ತೆರಿಗೆ ಕಟ್ಟಬೇಕಾಗುತ್ತದೆ ” ಎಂದು ಅಭಿಪ್ರಾಯಿಸಿದರು.
“ಈ ಟಿವಿಗಳಿಂದ, ಟಿವಿಯಲ್ಲಿ ಬರುವ ತಪ್ಪು ಮಾಹಿತಿಯಿಂದ ದಯವಿಟ್ಟು ಭಯಪಡಬೇಡಿ. ಸದ್ಯ ಕೆಲವು ಮಾಧ್ಯಮಗಳು ಸುಮ್ಮನೆ ಆತಂಕ ಸೃಷ್ಟಿಸುತ್ತಿವೆ. ಅರ್ಥಶಾಸ್ತ್ರದ ಮಾಹಿತಿಯೇ ಇಲ್ಲದೆ ಸುದ್ದಿ ಬರೆಯುತ್ತಾರೆ” ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಚಾರ್ಟೆಡ್ ಅಕೌಂಟೆಂಟ್‌ಗಳು ಏನು ಹೇಳುತ್ತಾರೆ?
ಇನ್ನು ಈ ಬಗ್ಗೆ ಈದಿನ ಡಾಟ್ ಕಾಮ್‌ಗೆ ಮಾಹಿತಿ ನೀಡಿರುವ ಚಾರ್ಟರ್ಡ್ ಅಕೌಂಟೆಂಟ್(ಸಿಎ) ಸುಂದರ್ ಜಿ.ವಿ, “ಸಣ್ಣ ವ್ಯಾಪಾರಿಗಳಿಗೆ ಅನುಕೂಲವಾಗಲಿ ಎಂಬ ದೃಷ್ಟಿಯಿಂದ ವಾರ್ಷಿಕ 40 ಲಕ್ಷ ರೂಪಾಯಿ ತನಕ ವಹಿವಾಟು ನಡೆಸುವವರಿಗೆ ಯಾವುದೇ ಜಿಎಸ್‌ಟಿ ಇರುವುದಿಲ್ಲ. ಜಿಎಸ್‌ಟಿಯಿಂದ ಸಂಪೂರ್ಣ ವಿನಾಯಿತಿ ನೀಡಲಾಗಿದೆ. 40 ಲಕ್ಷ ರೂಪಾಯಿ ದಾಟಿದ ಬಳಿಕ ಮಾತ್ರ ಜಿಎಸ್‌ಟಿ ಅನ್ವಯವಾಗುತ್ತದೆ. ಈಗಂತೂ ಜನ ಯುಪಿಐಗಳನ್ನು ಧಾರಾಳವಾಗಿ ಬಳಸುವುದರಿಂದ ಹಣಕಾಸು ವರ್ಗಾವಣೆಗಳ ವಿವರಗಳು ಸಿಗುತ್ತವೆ. ಇದನ್ನು ಆಧರಿಸಿ ವಾಣಿಜ್ಯ ತೆರಿಗೆ ಇಲಾಖೆಯು ವಹಿವಾಟನ್ನು ಅಂದಾಜಿಸುತ್ತದೆ ಹಾಗೂ 40 ಲಕ್ಷ ರೂಪಾಯಿಗೂ ಹೆಚ್ಚು ಹಣಕಾಸು ವರ್ಗಾವಣೆಗಳಾಗಿದ್ದರೆ ನೋಟಿಸ್ ಕಳಿಸುವುದು ಸ್ವಾಭಾವಿಕ. ಅದೇ ರೀತಿ ನೋಟಿಸ್ ಬಂದ ತಕ್ಷಣ ಗಾಬರಿ ಬೀಳುವ ಅವಶ್ಯಕತೆ ಇಲ್ಲ. ಹಣಕಾಸು ವಹಿವಾಟುಗಳ ಬಗ್ಗೆ ವಿವರಗಳನ್ನು, ನಿಮ್ಮ ಸಮರ್ಥನೆಗಳನ್ನು ನೀಡಿದರಾಯಿತು” ಎಂದು ತಿಳಿಸಿದ್ದಾರೆ.
“ತರಕಾರಿ, ಹಾಲು, ಹೂವು, ಹಣ್ಣು, ಮೊಸರಿಗೆ ಯಾವುದೇ ಜಿಎಸ್‌ಟಿಯಿಲ್ಲ. ಆದರೆ ನಂದಿನಿ ಬೂತ್‌ನ ಹಾಲು ಮಾರಾಟಗಾರ ಮೈಸೂರು ಪಾಕ್, ಇತರೆ ಬಿಸ್ಕತ್ತುಗಳುಗಳನ್ನೂ ಮಾರಾಟ ಮಾಡುತ್ತಿದ್ದರೆ ಆತನಿಗೆ ಜಿಎಸ್‌ಟಿ ಬರುತ್ತದೆ. ಇಂತಹ ಸಂದರ್ಭದಲ್ಲಿ ತನ್ನ ತೆರಿಗೆ ಅನ್ವಯವಾಗುವ ಸರಕುಗಳಿಗೆ ಮಾತ್ರ ತೆರಿಗೆ ಅನ್ವಯಿಸಿ ವ್ಯಾಪಾರಿ 40 ಲಕ್ಷ ರೂಪಾಯಿವರೆಗೆ ತೆರಿಗೆ ವಿನಾಯಿತಿ ಪಡೆಯಬಹುದು. ಹಾಗೆಯೇ ಪಾನಿಪುರಿ ಮಾರಾಟಗಾರನಿಗೆ ಯುಪಿಐ ವಹಿವಾಟಿನ ಆಧಾರದಲ್ಲಿ ಜಿಎಸ್‌ಟಿ ಬಂದರೆ ಆತ ತನ್ನ ಪಾನಿಪುರಿ ವ್ಯಾಪಾರ ಮತ್ತು ಇತರೆ ಹಣದ ವಹಿವಾಟಿನ ಬಗ್ಗೆ ಸ್ಪಷ್ಟೀಕರಣ ನೀಡಬೇಕು” ಎಂದು ತಿಳಿಸಿದ್ದಾರೆ.
ಸಣ್ಣ ವ್ಯಾಪಾರಿಗಳು ತಿಳಿದಿರಬೇಕಾದ ಜಿಎಸ್‌ಟಿ ಕಂಪೊಸಿಶನ್ ಸ್ಕೀಮ್!
“ಸಣ್ಣ ವ್ಯಾಪಾರಿಗಳು ತಮ್ಮ ಅನುಕೂಲಕ್ಕಾಗಿರುವ ಜಿಎಸ್‌ಟಿ ಕಂಪೊಸಿಶನ್ ಸ್ಕೀಮ್ ಎಂಬ ಯೋಜನೆ ಬಗ್ಗೆ ತಿಳಿದಿರಬೇಕು” ಎನ್ನುತ್ತಾರೆ ಸಿಎ ಸುಂದರ್. “ಈ ಜಿಎಸ್‌ಟಿ ಕಂಪೊಸಿಶನ್ ಸ್ಕೀಮ್ ಅಡಿಯಲ್ಲಿ ವಾರ್ಷಿಕ 1.50 ಕೋಟಿ ರೂಪಾಯಿ ತನಕ ವಹಿವಾಟು ನಡೆಸುವ ವ್ಯಾಪಾರಿಗಳು ಒಟ್ಟು 1% ರಿಂದ 6% ಜಿಎಸ್‌ಟಿ ಪಾವತಿಸಿದರೆ ಸಾಕಾಗುತ್ತದೆ. ಉದಾಹರಣೆಗೆ ಸಣ್ಣ ವ್ಯಾಪಾರಿಯೊಬ್ಬ ವರ್ಷಕ್ಕೆ ಒಂದೂವರೆ ಕೋಟಿ ರೂಪಾಯಿಗಳಷ್ಟು ವ್ಯಾಪಾರ ಮಾಡಿದರೂ, ಒಂದೂವರೆ ಲಕ್ಷ ರೂಪಾಯಿ ಜಿಎಸ್‌ಟಿ ಕಟ್ಟಿದರೆ ಸಾಕಾಗುತ್ತದೆ. ಹೀಗಾಗಿ ಬಹುಪಾಲು ಸಣ್ಣ ಮತ್ತು ಮಧ್ಯಮ ವ್ಯಾಪಾರಿಗಳಿಗೆ ಇದು ಭಾರಿ ಅನುಕೂಲಕರ ಮತ್ತು ಜಿಎಸ್‌ಟಿಯೂ ಹಗುರವಾಗಲಿದೆ. ಆದರೆ ಅನೇಕ ಮಂದಿಗೆ ಜಿಎಸ್‌ಟಿ ಅಡಿಯಲ್ಲಿ ಇಂಥದ್ದೊಂದು ಅನುಕೂಲಕರ ಯೋಜನೆ ಇದೆ ಎಂಬುದರ ಅರಿವೇ ಇರುವುದಿಲ್ಲ. ಹೀಗಾಗಿ 30-40 ಲಕ್ಷ ರೂಪಾಯಿಯ ತೆರಿಗೆ ಬೇಡಿಕೆಯ ನೋಟಿಸ್‌ಗೆ ಆತಂಕಿತರಾಗಿದ್ದಾರೆ” ಎಂದು ತಿಳಿಸಿದ್ದಾರೆ.
ಆದರೆ ದಿನದ ವಹಿವಾಟಿನ ಲಾಭ ದಿನದ ಖರ್ಚಿಗೆ ಎಂದು ಬದುಕುತ್ತಿರುವ ಸಣ್ಣ ವ್ಯಾಪಾರಿಗಳು ಅಧಿಕಾರಿಗಳ ಹಿಂದೆ ಅಲೆಯುವುದೇ ಅಥವಾ ನಿತ್ಯದ ವ್ಯಾಪಾರ ಮುಂದುವರೆಸುವುದೇ? ಎಂಬ ಆತಂಕದಲ್ಲಿದ್ದಾರೆ. ಇಲ್ಲಿ ಸ್ಪಷ್ಟವಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಮಪಾಲಿದೆ. ಕೇಂದ್ರ ಜಾರಿಗೆ ತಂದಿದ್ದನ್ನು ರಾಜ್ಯ ಸರ್ಕಾರ ಚಾಚು ತಪ್ಪದೆ ಪಾಲಿಸುತ್ತಿದೆ. ಅದಕ್ಕಿಂತಲೂ ಮುಖ್ಯವಾಗಿ ಕೆಲ ವಾಣಿಜ್ಯ ತೆರಿಗೆ ಅಧಿಕಾರಿಗಳ ಎಡವಟ್ಟು ಎದ್ದು ಕಾಣುತ್ತದೆ. ಸುಖಾಸುಮ್ಮನೆ ‘ಅಂದಾಜು ಲೆಕ್ಕಾಚಾರ’ದ ಆಟವಿದೆಯೇ ಎಂಬ ಪಶ್ನೆಯೂ ಇದೆ. ಏನೇ ಆದರೂ ಸದ್ಯ ಕೇಂದ್ರ, ರಾಜ್ಯ-ಅಧಿಕಾರಿಗಳ ನಡುವೆ ಸಿಲುಕಿರುವುದು ಸಣ್ಣ ವ್ಯಾಪಾರಿಗಳು.
ಸರ್ಕಾರಕ್ಕೆ ತೆರಿಗೆಯೇ ಮೂಲ ಎಂಬುದು ನಿಜ. ತೆರಿಗೆ ಸಂಗ್ರಹದಿಂದಲೇ ಸರ್ಕಾರ ನಡೆಯುತ್ತದೆ. ಆದರೆ ಯಾರಿಂದ ಹೆಚ್ಚು ತೆರಿಗೆ ಪಡೆಯಬೇಕು, ಯಾರಿಂದ ಕಡಿಮೆ ತೆರಿಗೆ ಪಡೆಯಬೇಕು ಎಂಬ ವಿವೇಚನೆಯ ಲೆಕ್ಕಾಚಾರ ಮಾಡುವುದು ಅಗತ್ಯ. ಸಣ್ಣ ವ್ಯಾಪಾರಿಗಳಿಗೆ ಅಧಿಕ ಹೊರೆ, ಕೋಟ್ಯಂತರ ಆದಾಯ ಹೊಂದಿರುವ ದೊಡ್ಡ ವ್ಯಾಪಾರಿಗೆ ಕಡಿಮೆ ಜಿಎಸ್‌ಟಿ ಹೊರೆ ಎಂದಾಗಬಾರದು. ಇಲ್ಲಿ ಬಡ-ಶ್ರೀಮಂತ ವ್ಯಾಪಾರಿ, ಸಣ್ಣ-ದೊಡ್ಡ ವ್ಯಾಪಾರಿ ಎಂಬ ಮಾನವೀಯತೆಯೂ ಇರಬೇಕು. ಜಾಗರೂಕರಾಗಿ ಪರಿಶೀಲಿಸುವುದೂ ಅನಿವಾರ್ಯ.

ಪತ್ರಕರ್ತೆ, 2019ರಿಂದ ಪತ್ರಿಕೋದ್ಯಮವೇ ಬದುಕು. ರಾಜಕೀಯ, ಬ್ಯುಜಿನೆಸ್ ಸುದ್ದಿಗಳಲ್ಲಿ ಆಸಕ್ತಿ.