ಜಗದೀಪ್ ಧನಕರ್ ಸ್ವಯಂಪ್ರೇರಿತವಾಗಿ ರಾಜೀನಾಮೆ ನೀಡಿದರಾ? ಅಥವಾ ಪ್ರಧಾನಿ ನರೇಂದ್ರ ಮೋದಿ ಸರ್ಕಾರವೇ ಅವರನ್ನು ಹೊರಗಿಟ್ಟಿತಾ? ಉಪರಾಷ್ಟ್ರಪತಿ ಮತ್ತು ಹಿರಿಯ ಕೇಂದ್ರ ಸಚಿವರ ನಡುವಿನ ಖಾಸಗಿ ಜಗಳವೂ ಅವರ ರಾಜೀನಾಮೆಗೆ ಕಾರಣವಾ?
ಜಗದೀಪ್ ಧನಕರ್ ಅವರು ಆರೋಗ್ಯ ಕಾರಣಗಳನ್ನು ಉಲ್ಲೇಖಿಸಿ ಉಪರಾಷ್ಟ್ರಪತಿ ಹುದ್ದೆಗೆ ಸ್ವಯಂಪ್ರೇರಿತವಾಗಿ ರಾಜೀನಾಮೆ ನೀಡಿದ್ದಾರೆ. ಆದರೆ, ಅವರು ತಾವೇಗಿಯೇ ರಾಜೀನಾಮೆ ನೀಡಿದರಾ ಅಥವಾ ನರೇಂದ್ರ ಮೋದಿ ಸರ್ಕಾರವೇ ಅವರನ್ನು ಹೊರಗಿಟ್ಟಿತಾ ಎಂಬ ಪ್ರಶ್ನೆ ರಾಜಕೀಯ ವಲಯದಲ್ಲಿ ಕೇಳಿಬರುತ್ತಿದೆ. ಈ ಪ್ರಶ್ನೆಗೆ ಉತ್ತರ ಮೋದಿ-ಶಾ ಜೋಡಿಯ ರಾಜಕೀಯವನ್ನು ಅರ್ಥಮಾಡಿಕೊಳ್ಳುವುದರಲ್ಲಿದೆ. ಮೋದಿ-ಶಾ ರಾಜಕೀಯದಲ್ಲಿನ ಮೊದಲ ನಿಯಮವೆಂದರೆ, ತಮ್ಮ ಆಡಳಿತದಲ್ಲಿ ಯಾರೂ ಕೂಡ ತಮ್ಮ ಸರದಿಯನ್ನು ಮೀರಿ ಮಾತನಾಡಬಾರದು. ಅವರು ಎನ್ಡಿಎ ಸರ್ಕಾರದ ಸಚಿವರು, ಸಂಸದರು ಅಥವಾ ಸಾಂವಿಧಾನಿಕ ವ್ಯಕ್ತಿಗಳು ಯಾರಾದರೂ ಸರಿ, ಈ ಜೋಡಿಯ ಅನುಮತಿಯಿಲ್ಲದೆ ಮಾತನಾಡುವಂತಿಲ್ಲ. ಇದನ್ನು ಭಯ ಆಧಾರಿತ ಸರ್ವಾಧಿಕಾರದ ನಿಯಮ ಎಂದು ಕರೆಯಬಹುದು ಅಥವಾ ಕಟ್ಟುನಿಟ್ಟಾದ ಶಿಸ್ತಿನ ಆಡಳಿತದ ನಿಯಮವೆಂದೂ ಹೇಳಬಹುದು.
ಇಲ್ಲಿ ಜಗದೀಪ್ ಧನಕರ್ ಅವರು ಅನುಭವಿ ರಾಜಕಾರಣಿ. ಜನತಾದಳದಲ್ಲಿ ಮಾಜಿ ಪ್ರಧಾನಿ ಚಂದ್ರಶೇಖರ್ ಅವರ ಗರಡಿಯಲ್ಲಿ ಪಳಗಿದ್ದ ಧನಕರ್, ಸ್ವಾಭಾವತಃ ತಮ್ಮ ಆಕ್ರಮಣಕಾರಿ ಹೇಳಿಕೆಗಳನ್ನು ಹಿಂಪಡೆದುಕೊಳ್ಳಲು ಇಚ್ಚಿಸದವರು. ಯಾವುದೇ ಸಂದರ್ಭದಲ್ಲಿ ತಮ್ಮ ಅಭಿಪ್ರಾಯವನ್ನು ಯಾವುದೇ ಹಿಂಜರಿಕೆಯಿಲ್ಲದೆ, ವ್ಯಕ್ತಪಡಿಸುವವರು. ಆದರೂ, 2003ರಲ್ಲಿ ಜಾತ್ಯತೀತತೆಗೆ ತಿಲಾಂಜಲಿ ಇಟ್ಟು, ಕೋಮುವಾದಿ ಬಿಜೆಪಿ ಸೇರಿದರು. ಆರ್ಎಸ್ಎಸ್-ಬಿಜೆಪಿಯ ಕೋಮು ವ್ಯವಸ್ಥೆಯ ಭಾಗವೂ ಆದರು. ಇತ್ತೀಚೆಗೆ, ಅವರು ಮತ್ತು ಬಿಜೆಪಿ ನಡುವೆ ಆತಂರಿತ ಭಿನ್ನಾಭಿಪ್ರಾಯ ಭುಗಿಲೆದ್ದಿತ್ತು.
2019 ಮತ್ತು 2022ರ ನಡುವೆ ಪಶ್ಚಿಮ ಬಂಗಾಳದ ಗವರ್ನರ್ ಆಗಿದ್ದ ಧನಕರ್, ಟಿವಿ ಕಾರ್ಯಕ್ರಮಗಳಲ್ಲಿ ಭಾಗವಹಿಸಿ, ಮಮತಾ ಬ್ಯಾನರ್ಜಿ ಸರ್ಕಾರವನ್ನು ನಿರಂತರವಾಗಿ ಟೀಕಿಸುತ್ತಿದ್ದರು. ಇದು ಸಾಂವಿಧಾನಿಕ ಹುದ್ದೆಯಲ್ಲಿರುವ ರಾಜ್ಯಪಾಲರ ಅನಿರೀಕ್ಷಿತ ನಡೆಯಾಗಿತ್ತು. ಆದರೆ, ಆ ಸಮಯದಲ್ಲಿ ಮಮತಾ ಸರ್ಕಾರದ ಮೇಲಿನ ಧನಕರ್ ದಾಳಿಯು ಕೇಂದ್ರಕ್ಕೆ ಖುಷಿ ನೀಡುತ್ತಿತ್ತು. ಬಿಜೆಪಿಯ ರಾಜಕೀಯಕ್ಕೆ ಸಹಾಯವೂ ಆಗಿತ್ತು.
ರಾಜ್ಯಪಾಲರಾಗಿದ್ದ ಧನಕರ್, ‘ತಮಗೆ ಕರೆ ಮಾಡಿ, ಮಮತಾ ಸರ್ಕಾರದ ವಿರುದ್ಧ ಮಾತನಾಡಲು ಚಾನೆಲ್ಗೆ ಬರಬಹುದೇ ಎಂಬುದಾಗಿ ಕೇಳಿದ್ದರು. ಈ ರೀತಿ ಎಷ್ಟು ಮಂದಿ ರಾಜ್ಯಪಾಲರು ಮಾಡಿದ್ದಾರೋ ಗೊತ್ತಿಲ್ಲ’ ಎಂದು ರಾಜ್ದೀಪ್ ಸರ್ದೇಸಾಯಿ ತಮ್ಮ ಹೊಸ ಯೂಟ್ಯೂಬ್ ಚಾನೆಲ್ನ ವಿಡಿಯೋದಲ್ಲಿ ವಿವರಿಸಿದ್ದಾರೆ.
ಎನ್ಡಿಎ ಸರ್ಕಾರದ ವಿರೋಧಿ ಪಕ್ಷದ ಮುಖ್ಯಮಂತ್ರಿ ಮಮತಾ ವಿರುದ್ಧ ಮಾತನಾಡುವಲ್ಲಿ ಧನಕರ್ಗೆ ಇದ್ದ ಆಸಕ್ತಿಯು ಬಿಜೆಪಿ ನಾಯಕತ್ವ ಮತ್ತು ಮೋದಿ-ಶಾ ಜೋಡಿಗೆ ಇಷ್ಟವಾಗುತ್ತಿತ್ತು. ಇದು ಮೋದಿ ಸರ್ಕಾರವು ಧನಕರ್ರನ್ನು ಉಪರಾಷ್ಟ್ರಪತಿ ಹುದ್ದೆಗೆ ಏರಿಸಲು ಒಂದು ಕಾರಣವೂ ಆಯಿತು.
ಜೊತೆಗೆ, ರೈತರ ಆಂದೋಲನದ ನಂತರ, ಬಿಜೆಪಿಗೆ ಆಕರ್ಷಕ ಜಾಟ್ ಸಮುದಾಯದ ಮುಖದ ಅಗತ್ಯವೂ ಇತ್ತು. ಮೋದಿ-ಶಾ-ಆರ್ಎಸ್ಎಸ್ನ ತ್ರಿಕೋನದ ಆದೇಶಗಳನ್ನು ಚಾಚೂತಪ್ಪದೆ ಪಾಲಿಸುತ್ತಿದ್ದವರು ಮತ್ತು ನಿಭಾಯಿಸುತ್ತಿದ್ದವರು ಧನಕರ್. ಹೀಗಾಗಿ, ಉಪರಾಷ್ಟ್ರಪತಿ ಹುದ್ದೆಗೆ ಅವರನ್ನು ಆಯ್ಕೆ ಮಾಡಲಾಯಿತು.
ಆರಂಭದಲ್ಲಿ ಮೋದಿ-ಶಾ ಮತ್ತು ಆರ್ಎಸ್ಎಸ್ ಜೊತೆಗಿನ ಧನಕರ್ ಒಡನಾಟ ಚೆನ್ನಾಗಿಯೇ ಇತ್ತು. ಮೋದಿ-ಶಾ ಜೋಡಿ ಮತ್ತು ಆರ್ಎಸ್ಎಸ್ಅನ್ನು ಧನಕರ್ ಚಾಕಚಕ್ಯತೆಯಿಂದ ನಿಭಾಯಿಸುತ್ತಿದ್ದರು. ಜೊತೆಗೆ, ಸಂಸತ್ತಿನಲ್ಲಿ ರಾಜ್ಯಸಭೆಯ ಅಧ್ಯಕ್ಷರಾಗಿ ಧನಕರ್ ವಿರೋಧ ಪಕ್ಷಗಳ ಧನಿಯನ್ನು ಹತ್ತಿಕ್ಕುವಲ್ಲಿ ಯಶಸ್ವಿಯೂ ಆಗಿದ್ದರು. ವಿಪಕ್ಷಗಳ ನಾಯಕರು ಮತ್ತು ಸದಸ್ಯರಿಗೆ ಸಂಸತ್ತಿನೊಳಗೆ ಮಾತನಾಡಲು ಕಡಿಮೆ ಸಮಯ, ಕಡಿಮೆ ಅವಕಾಶ ನೀಡುತ್ತಿದ್ದರು. ಮೋದಿ-ಶಾ ಜೋಡಿಯ ನಿಷ್ಠಾವಂತ ಕಾರ್ಯಕರ್ತನಂತೆ ಕೆಲಸ ಮಾಡುತ್ತಿದ್ದರು.
ಹೀಗಾಗಿಯೇ, ಧನಕರ್ ಪಕ್ಷಪಾತ ಮಾಡುತ್ತಿದ್ದಾರೆ. ವಿರೋಧ ಪಕ್ಷದ ಸದಸ್ಯರು ಗಂಭೀರ ವಿಚಾರಗಳನ್ನು ಚರ್ಚೆಗೆ ತರದಂತೆ ತಡೆಯುತ್ತಿದ್ದಾರೆ. ಆದರೆ, ಬಿಜೆಪಿ ಸದಸ್ಯರಿಗೆ ಅವರಿಗೆ ಬೇಕಾದ ವಿಷಯಗಳನ್ನು ಮಂಡಿಸಲು ಮತ್ತು ಚರ್ಚಿಸಲು ಅವಕಾಶ ನೀಡುತ್ತಿದ್ದಾರೆ ಎಂದು ವಿಪಕ್ಷಗಳು ಆರೋಪಿಸಿದ್ದವು. 2024ರ ಡಿಸೆಂಬರ್ 10ರಂದು ವಿರೋಧ ಪಕ್ಷಗಳು ‘ಇಂಡಿಯಾ ಮೈತ್ರಿಕೂಟ’ವು ಧನಕರ್ ವಿರುದ್ಧ ಅವಿಶ್ವಾಸ ನಿರ್ಣಯ ಸಲ್ಲಿಸಿತ್ತು. ಸಂಸತ್ತಿನ ಇತಿಹಾಸದಲ್ಲಿ ಉಪರಾಷ್ಟ್ರಪತಿ ವಿರುದ್ಧ ಅವಿಶ್ವಾಸ ಮಂಡನೆಯಾದದ್ದು ಇದೇ ಮೊದಲು.
ಈ ಅವಿಶ್ವಾಸ ನಿರ್ಣಯವು ಒಂದು ತಿರುವಿನ ಬಿಂದುವಾಗಿತ್ತು. ಇದು ಧನಕರ್ರ ಆತ್ಮಾಭಿಮಾನಕ್ಕೆ ಪೆಟ್ಟುಕೊಟ್ಟಿತು. ಆದರೆ, ಅವರು ತಮಗೆ ಲಭ್ಯವಿರುವ ಎಲ್ಲ ವೇದಿಕೆಗಳಲ್ಲಿ ತಮ್ಮ ಅಭಿಪ್ರಾಯಗಳನ್ನು ಮತ್ತಷ್ಟು ಗಟ್ಟಿಯಾಗಿ ಮಾತನಾಡಲು ಆರಂಭಿಸಿದರು. ದೇಶಾದ್ಯಂತ ಪ್ರವಾಸ ಮಾಡಲಾರಂಭಿಸಿದರು. ಹೇಳಿಕೆಗಳನ್ನು ನೀಡುತ್ತಲೇ, ತಮ್ಮ ಆದ್ಯತೆಯ ವಿಷಯವಾದ ನ್ಯಾಯಾಂಗ ಮೇಲೆ ವಾಗ್ದಾಳಿ ನಡೆಸಲು ಆಂರಭಿಸಿದರು. “ರಾಷ್ಟ್ರಪತಿ ಮತ್ತು ರಾಜ್ಯಪಾಲರಿಗೆ ಮಸೂದೆ ವಿಲೇವಾರಿಗೆ ಸಮಯ ನಿಗದಿ ಮಾಡಲು ಸುಪ್ರೀಂ ಕೋರ್ಟ್ ಅಥವಾ ನ್ಯಾಯಾಧೀಶರು ಯಾರು? ಅವರಿಗೆ ತಮ್ಮ ಅಧಿಕಾರ ಮಿತಿಗಳ ಅರಿವಿರಬೇಕು. ಪ್ರಜಾಪ್ರಭುತ್ವದಲ್ಲಿ ಸಂಸತ್ತೇ ಸಾರ್ವಭೌಮ” ಎಂದು ನಿರಂತರವಾಗಿ ಪ್ರತಿಪಾದಿಸುತ್ತಿದ್ದರು.
ಈ ಲೇಖನ ಓದಿದ್ದೀರಾ?: ಉಪ ರಾಷ್ಟ್ರಪತಿ ಜಗದೀಪ್ ಧನಕರ್ ದಿಢೀರ್ ರಾಜೀನಾಮೆ: ಅನುಮಾನ – ವಿವಾದಗಳದೇ ಮೇಲುಗೈ!
ಆರಂಭದಲ್ಲಿ, ನ್ಯಾಯಾಂಗದ ಮೇಲಿನ ಧನಕರ್ ಹೇಳಿಕೆಗಳು ಮೋದಿ ಸರ್ಕಾರಕ್ಕೆ ಇಷ್ಟವಾದರೂ, ಕಾಲಾನಂತರ, ಧನಕರ್ರ ಹೇಳಿಕೆಗಳು ಇಡೀ ನ್ಯಾಯಾಂಗವನ್ನು ಸರ್ಕಾರದಿಂದ ದೂರಮಾಡುತ್ತಿವೆ ಎಂಬ ಭಯ ಹುಟ್ಟುಹಾಕಿತು. ‘ಧನಕರ್ ನಮ್ಮ ಬಗ್ಗೆ ಅವಮಾನಕರವಾಗಿ ಮಾತನಾಡುತ್ತಿದ್ದಾರೆ’ ಎಂದು ಹಿರಿಯ ನ್ಯಾಯಾಧೀಶರೊಬ್ಬರು ಖಾಸಗಿ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವರಿಗೆ ಹೇಳಿದ್ದರೆಂದು ವರದಿಯಾಗಿದೆ. ನ್ಯಾಯಾಧೀಶರ ಈ ಮಾತು ಮೋದಿ-ಶಾ ಜೋಡಿಯನ್ನು ಮುಟ್ಟಿತ್ತು. ಪರಿಣಾಮ, ಧನಕರ್ಗೆ ಎಚ್ಚರಿಕೆಯಿಂದಿರಲು ಸಲಹೆಯನ್ನೂ ನೀಡಲಾಗಿತ್ತು ಎಂದು ತಿಳಿದುಬಂದಿದೆ.
ತಮ್ಮ ರಾಜಕೀಯ ವೃತ್ತಿಜೀವನದಲ್ಲಿ ಮೂರು ಬಾರಿ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಧನಕರ್, 1991 ಮತ್ತು 1998ರ ಲೋಕಸಭೆ ಚುನಾವಣೆಗಳಲ್ಲಿ ಸೋಲುಂಡು ರಾಜಕೀಯ ಜೀವನ ಕಳೆದುಕೊಳ್ಳುವ ಅಂಚಿನಲ್ಲಿದ್ದರು. ಆದರೂ, ಬಿಜೆಪಿ ಸೇರುವ ಮೂಲಕ ಉಪರಾಷ್ಟ್ರಪತಿ ಕುರ್ಚಿಯಲ್ಲಿ ಕುಳಿತು, ರಾಜ್ಯಸಭೆಯನ್ನು ಮುನ್ನಡೆಸುವ ಕೇಂದ್ರ ಸ್ಥಾನಕ್ಕೇರಿದ್ದರು. ಗಮನಾರ್ಹವೆಂದರೆ, ರಾಜ್ಯಸಭೆ ಟಿವಿಗೆ ಧನಕರ್ ಸಂಸತ್ತಿನ ಒಳಗೆ ಅಥವಾ ಹೊರಗೆ ಮಾತನಾಡುವುದನ್ನು ಮಾತ್ರವೇ ಹೆಚ್ಚಾಗಿ ಫೋಕಸ್ ಮಾಡುವಂತೆ ಸೂಚಿಸಲಾಗಿತ್ತು ಎನ್ನಲಾಗಿದೆ. ಇದು ಮೋದಿ-ಶಾ ಜೋಡಿಯ ನಿಯಮಕ್ಕೆ ವಿರುದ್ಧವಾಗಿತ್ತು. ಈ ಜೋಡಿಗೆ ಮೋದಿ ಮಾತ್ರವೇ ಎಲ್ಲೆಡೆ ಕಾಣಿಸಿಕೊಳ್ಳಬೇಕೆಂಬ ಹಂಬಲ, ಹವಣಿಕೆ ಇರುವಾಗ, ಅವರನ್ನೇ ಓವರ್ಟೇಕ್ ಮಾಡಲು ಧನಕರ್ ಮುಂದಾಗಿದ್ದರು. ಇದು, ಮೋದಿ-ಶಾ ಜೋಡಿಗೆ ಇಷ್ಟವಾಗಲಿಲ್ಲ.
ಈ ವರ್ಷದ ಏಪ್ರಿಲ್ ಹೊತ್ತಿಗೆ, ಸರ್ಕಾರದ ತಾಳ್ಮೆ ಕ್ಷೀಣಿಸಿತು. ಪ್ರಧಾನಮಂತ್ರಿ ಮತ್ತು ಹಿರಿಯ ಸಚಿವರು ಕೂಡ ಉಪರಾಷ್ಟ್ರಪತಿ ಕಚೇರಿಯೊಂದಿಗೆ ಸಂವಹನ ನಿಲ್ಲಿಸಿದರು. ಕೋಪಗೊಂಡ ಧನಕರ್ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಲಾರಂಭಿಸಿದರು. ಅವರು ರೈತರ ವಿಷಯದ ಬಗ್ಗೆ ಸಾರ್ವಜನಿಕವಾಗಿ ಮಾತನಾಡಲಾರಂಭಿಸಿದರು. ಅವರು ತಮ್ಮನ್ನು ತಾವು ರೈತರ ನಾಯಕನೆಂದು ಭಾವಿಸಿದ್ದರು. ರೈತರ ವಿಚಾರವಾಗಿ ಸರ್ಕಾರದ ನೀತಿಗಳನ್ನು ಪ್ರಶ್ನಿಸಲಾರಂಭಿಸಿದರು. ಅವರು ವಿರೋಧ ಪಕ್ಷಗಳ ನಾಯಕರನ್ನು ಭೇಟಿ ಮಾಡಿ ಮಾತನಾಡಿದರು. ‘ಪ್ರಜಾಪ್ರಭುತ್ವವನ್ನು ಸರ್ವಾಧಿಕಾರದಂತೆ ನಡೆಸಲಾಗದು’ ಎಂದು ವಿಪಕ್ಷದ ನಾಯಕರೊಂದಿಗೆ ಧನಕರ್ ಹೇಳಿದ್ದರೆಂದು ತಿಳಿದುಬಂದಿದೆ. ಈ ಹೇಳಿಕೆಯು ದಿಲ್ಲಿ ದರ್ಬಾರ್ ನಡೆಸುತ್ತಿರುವ ಮೋದಿ-ಶಾ ಜೋಡಿಯನ್ನು ತಲುಪಿತ್ತು. ಇದೆಲ್ಲದರ ಪರಿಣಾಮ, ಮೋದಿ-ಶಾ ಜೋಡಿಯ ವಿಶ್ವಾಸಾರ್ಹ ಧನಕರ್, ಸಂಪೂರ್ಣವಾಗಿ ನಂಬಲಾಗದ ವ್ಯಕ್ತಿಯಾಗಿ ಕಾಣಿಸಿಕೊಂಡರು.
ಈ ಲೇಖನ ಓದಿದ್ದೀರಾ?: ಜಿಎಸ್ಟಿ – ಜನರ ರಕ್ತ ಹೀರುವ ಕ್ರೂರ ತೆರಿಗೆ
ಸೋಮವಾರದಂದು ಮಾನ್ಸೂನ್ ಅಧಿವೇಶನ ಆರಂಭವಾದಾಗ ವಿರೋಧ ಪಕ್ಷವು, ನ್ಯಾಯಮೂರ್ತಿ ಯಶವಂತ್ ಅವರ ಮನೆಯಲ್ಲಿ ಬೃಹತ್ ನಗದು ಪತ್ತೆಯಾದ ಕಾರಣಕ್ಕಾಗಿ, ಅವರ ಮಹಾಭಿಯೋಗಕ್ಕಾಗಿ ನಿರ್ಣಯ ಮಂಡಿಸಿತು. ನಿರ್ಣಯವನ್ನು ಧನಕರ್ ಸ್ಪೀಕರಿಸಿದರು. ಅಲ್ಲದೆ, ಅಲಹಾಬಾದ್ ಹೈಕೋರ್ಟ್ನ ನ್ಯಾಯಮೂರ್ತಿ ಶೇಖರ್ ಯಾದವ್ರನ್ನೂ ಕೂಡ ಮಹಾಭಿಯೋಗ ಮಾಡಲು ವಿರೋಧ ಪಕ್ಷದ ಬೇಡಿಕೆಯನ್ನು ಸ್ವೀಕರಿಸಲು ಧನಕರ್ ಸಿದ್ಧರಿದ್ದರು. ಆದರೆ, ನ್ಯಾಯಮೂರ್ತಿ ಯಾದವ್ ಅವರ ವಿಚಾರವನ್ನು ದೊಡ್ಡದಾಗಿಸಬಾರದೆಂದು ಬಯಸಿದ್ದ ಮೋದಿ ಸರ್ಕಾರದ ಕೆಂಗಣ್ಣಿಗೆ ಧನಕರ್ ಗುರಿಯಾದರು.
ಮಾನ್ಸೂನ್ ಅಧಿವೇಶನದ ಮೊದಲ ದಿನವಾದ ಸೋಮವಾರ, ಸಂಜೆ 4:00 ಗಂಟೆಗೆ ನಡೆದ ಧನಕರ್ ಒಳಗೊಂಡ ಸರ್ಕಾರದ ಸಭೆ ನಡೆಯಿತು. ಸಭೆಯಲ್ಲಿ ಬಿಜೆಪಿ ಅಧ್ಯಕ್ಷ, ರಾಜ್ಯಸಭೆಯಲ್ಲಿ ಬಿಜೆಪಿ ನಾಯಕ ಜೆ.ಪಿ.ನಡ್ಡಾ ಮತ್ತು ಸಂಸದೀಯ ಸಚಿವ ಕಿರಣ್ ರಿಜಿಜುನ ಸಿಟ್ಟಿನಿಂದ ಭಾಗಿಯಾಗಲಿಲ್ಲ. ಆದಾಗ್ಯೂ, ಸಭೆಯಲ್ಲಿ ಸ್ಪಷ್ಟವಾಗಿ ಏನಾಯಿತು ಎಂಬುದು ಸ್ಪಷ್ಟವಾಗಿಲ್ಲದಿದ್ದರೂ, ಸರ್ಕಾರವು ಧನಕರ್ ಮೇಲೆ ಹರಿಹಾಯ್ದಿದೆ ಎಂದು ಹೇಳಲಾಗಿದೆ.
ಇದರಿಂದ ಕೋಪಗೊಂಡ ಧನಕರ್, ಬಿಜೆಪಿ ನಾಯಕರು ತಮ್ಮ ಸ್ಥಾನವನ್ನು ಕಡಿಮೆ ಮಾಡುತ್ತಿದ್ದಾರೆ ಎಂದು ಭಾವಿಸಿದರು. ಮತ್ತೊಂದೆಡೆ, ಸರ್ಕಾರವು ಧನಕರ್ ಸಂಸತ್ತಿನ ನಿಯಮಗಳ ಪ್ರಕಾರ ಕಾರ್ಯನಿರ್ವಹಿಸುತ್ತಿಲ್ಲ. ಬದಲಾಗಿ, ಸ್ವ-ಕೀರ್ತಿ ಪಡೆಯಲು ಬಯಸುತ್ತಿದ್ದಾರೆ ಎಂದು ಭಾವಿಸಿತು. ಹೀಗಾಗಿ, ಸೋಮವಾರದ ಸಭೆಯಲ್ಲಿ ಧನಕರ್ರನ್ನು ರಾಜೀನಾಮೆ ನೀಡುವಂತೆ ಒತ್ತಾಯಿಸಲಾಗಿತೋ ಅಥವಾ ಸರ್ಕಾರದ ಕ್ರಮವನ್ನು ತಡೆಯಲು ಅವರೇ ತ್ವರಿತ ನಿರ್ಧಾರವನ್ನು ತೆಗೆದುಕೊಂಡರೋ ಗೊತ್ತಿಲ್ಲ. ಆದರೆ, ಧಿಡೀರ್ ರಾಜೀನಾಮೆ ನೀಡಿದ್ದಾರೆ.
ತಮ್ಮ ರಾಜೀನಾಮೆಗೆ ಆರೋಗ್ಯ ಸಮಸ್ಯೆಯನ್ನು ಕಾರಣವಾಗಿ ಉಲ್ಲೇಖಿಸಿದ್ದಾರೆ. ಆದರೆ, ಮುಂದೊಂದು ದಿನ ದೇಶದ ಮುಂದಿನ ರಾಷ್ಟ್ರಪತಿಯಾಗುವ ಆಕಾಂಕ್ಷೆ ಹೊಂದಿದ್ದ ಧನಕರ್ ಥರದವರಿಗೆ ಆರೋಗ್ಯವು ರಾಜೀನಾಮೆಗೆ ಪ್ರಮುಖ ಕಾರಣವಾಗಲು ಸಾಧ್ಯವಿಲ್ಲ. ಹೀಗಾಗಿ, ಇತ್ತೀಚಿನ ಕೆಲವು ವರ್ಷಗಳಿಂದ ಮೋದಿ ಸರ್ಕಾರದ ನಿಷ್ಠಾವಂತರಾಗಿದ್ದ ಧನಕರ್, ಈಗ ಕುಳಿತಿದ್ದ ಖುರ್ಚಿಯಿಂದ ಇಳಿಯುವಂತೆ ಒತ್ತಾಯಿಸಲ್ಪಡುವ ಸ್ಥಿತಿಗೆ ಬಂದಿದ್ದಾರೆ ಎನ್ನುತ್ತಿದ್ದಾರೆ ಟೀಕಾಕಾರರು.
ಧನಕರ್ ರಾಜೀನಾಮೆ ಹಿಂದಿನ ನಿಜವಾದ ಕಥೆ ಏನು? ಮಾಜಿ ಗವರ್ನರ್ ಸತ್ಯಪಾಲ್ ಮಲಿಕ್ ಹಲವು ಸತ್ಯಗಳನ್ನು ಬಹಿರಂಗ ಪಡಿಸಿದಂತೆ, ಬಹುಶಃ ಒಂದು ದಿನ ಧನಕರ್ ಅವರೇ ತಮ್ಮ ರಾಜೀನಾಮೆಯ ಹಿಂದಿನ ಕಾರಣಗಳನ್ನು ಹೇಳಿಕೊಳ್ಳಬಹುದು. ಆವರೆಗೆ, ರಾಜೀನಾಮೆ ಪ್ರಹಸನದ ಕಥೆಯು ದೆಹಲಿ ದರ್ಬಾರ್ನ ಪಡಸಾಲೆಯಲ್ಲಿ ಗೌಪ್ಯವಾಗಿಯೇ ಉಳಿದಿರುತ್ತದೆ.
ಅದೇನೆ ಇರಲಿ, ಬಿಜೆಪಿಯಲ್ಲಿ ನೀವು ನಿಷ್ಠಾವಂತ ಕಾರ್ಯಕರ್ತರಾಗಿರಬಹುದು. ಆದರೆ, ಮುಂದೊಂದು ದಿನ ನೀವು ಷಡ್ಯಂತ್ರಕಾರ ಎಂಬ ಹಣೆಪಟ್ಟಿಗೆ ಗುರಿಯಾಗಹುದು ಮತ್ತು ಹೊರಹಾಕಲ್ಪಡಬಹುದು. ಇದೇ ರಾಜಕೀಯ. ಧನಕರ್ ತಮ್ಮ ಮೌನವನ್ನು ಮುರಿಯುವವರೆಗೆ, ಈ ದಿಲ್ಲಿ ದರ್ಬಾರ್ ವಿಚಾರವು ಪ್ರಶ್ನೆಗಳಾಗಿಯೇ ಉಳಿದಿರುತ್ತದೆ.