ಶಿವಮೊಗ್ಗ ಜಿಲ್ಲಾಧಿಕಾರಿಗಳಿಗೆ ಈ ಮೂಲಕ ಮನವಿ ಸಲ್ಲಿಕೆ ಶಿವಮೊಗ್ಗ ನಗರದಲ್ಲಿ ಲ್ಯಾಂಡ್ ಲಿಟಿಗೇಶನ್ (ಭೂ ಮಾಫಿಯಾ) ನಾಗರೀಕ ಆತಂಕವನ್ನು ಹುಟ್ಟು ಹಾಕುತ್ತಿದೆ,
ದುರ್ಬಲ ವರ್ಗದವರ ಸ್ವಾಧೀನಾನುಭವದ ಸ್ವತ್ತುಗಳು ಹಾಗೂ ಶಿವಮೊಗ್ಗ ಮಹಾನಗರ ಪಾಲಿಕೆಯ ಸ್ವತ್ತುಗಳು, ತಾಲ್ಲೂಕಿನ ಮೀಸಲು ಭೂಮಿಗಳಾದ ದನಕ್ಕೆ ಮುಪತ್ತು, ಗ್ರಾಮ ಠಾಣಾ, ಕೆರೆ ಜಾಗಗಳು, ಸ್ಮಶಾನಗಳು, ವಾರಸುದಾರರಿಲ್ಲದ ವ್ಯತ್ಯಾಸದ ವಿಸ್ತೀರ್ಣದ ಭೂಮಿ, ಸರಕಾರಿ ಪಡೆ ಭೂ ಪ್ರದೇಶಗಳು ಇದೀಗ ಅನಾಹುತಕಾರಿ ಜಾಲಗಳ ಭೂ ಕಬಳಿಕೆಗೆ ಒಳಗಾಗುತ್ತಿರುವುದು ಹಾಡು ಹಗಲೇ ದರೋಡೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣವು ಶಿವಮೊಗ್ಗ ಜಿಲ್ಲಾಧಿಕಾರಿಗಳ ಗಮನಕ್ಕೆ ತರಬಯಸುತ್ತದೆ.
ಟಾಸ್ಕ್ ಪೋರ್ಸ್ ಸಮಿತಿ ರಚಿಸಲು ಒತ್ತಾಯ :
ಶಿವಮೊಗ್ಗದಲ್ಲಿ ಬೇಲಿಯೇ ಎದ್ದು ಹೊಲ ಮೇಯ್ದಂತೆ ನಗರ ಹಾಗೂ ತಾಲ್ಲೂಕಿನ ನಾಡ ಕಛೇರಿ, ತಾಲ್ಲೂಕು ಕಛೇರಿಯ ಅಧಿಕಾರಿಗಳು, ಸರ್ವೇ ಇಲಾಖೆಯ ಇಲಾಖಾಧಿಕಾರಿಗಳಲ್ಲಿ ಒಂದಷ್ಟು ಜವಾಬ್ದಾರಿಯುತ ಕೆಲ ರಜಸ್ವ, ಗ್ರಾಮ ಲೆಕ್ಕಿಗ ಅಧಿಕಾರಿಗಳೇ ಶಾಮೀಲು ಆಗಿರುವುದರಿಂದಲೇ ಇಂತಹದೊಂದು ಬಹುದೊಡ್ಡ ಭೂ ಕಬಳಿಕೆ ಆಗುತ್ತಿದೆ ಎಲ್ಲಿ ನೋಡಿದರು ಬೇಲಿ ಸುತ್ತಿ, ಇದು ತಮ್ಮ ಆಸ್ತಿ ಎಂದು ನೇರವಾಗಿಯೇ ನಾಮಫಲಕಗಳನ್ನು ಹಾಕಿಕೊಂಡಿರುವುದು ಅಚ್ಚರಿಯಾಗಿದೆ, ಇದರಿಂದ ಶಿವಮೊಗ್ಗ ತಾಲ್ಲೂಕು ಕೆರೆಗಳ ವಿಸ್ತೀರ್ಣ ಕಡಿತವಾಗಿದೆ,
ಹಲವೆಡೆ ಕೆರೆಕಟ್ಟೆ, ಗೋಮಾಳ, ಜಮೀನು ಕರಾಬು, ಸರಕಾರಿ ಪಡೆ ಜಮೀನುಗಳೇ ಮಂಗ ಮಾಯವಾಗಿ ಲೇ-ಔಟ್‌ಗಳಾಗಿ ಪರಿವರ್ತಿತಗೊಂಡಿದೆ, ಇದಕ್ಕೆ ನೀಡಲಾಗಿರುವ ಪಥ ಬದಲಾವಣೆ, ನಕ್ಷೆ ತಿದ್ದುಪಡಿ, ನಕಾಶೆ ತೋರಿಸಿದ ಹಾದಿ ತಿರುಚುವಿಕೆಗಳಿಂದ ಪಕ್ಕಾಪೋಡಿಗಳು ರಾತ್ರೋರಾತ್ರಿ ಸಿದ್ದಗೊಂಡು ಇದೇ ರೆಕಾರ್ಡ್‌ಗಳನ್ನು ಘನ ನ್ಯಾಯಾಲಯಕ್ಕೂ ಸಲ್ಲಿಸಿರುವ ಪ್ರಕರಣಗಳಲ್ಲಿ ಸತ್ಯಾಸತ್ಯತೆ ಪರೀಶೀಲಿಸಬಹುದಾಗಿದೆ ಎಂದರು.
ಎಲ್ಲಿಲ್ಲಿ ಈ ಪ್ರಕರಣಗಳು :
ಇಂತಹ ಪ್ರಕರಣಗಳು ನಗರದ ಆಲ್ಕೊಳ ಗ್ರಾಮ, ಇಂದಿನ ನಗರ ವ್ಯಾಪ್ತಿ, ಗಾಡಿಕೊಪ್ಪ, ಮಲ್ಲಿಗೆನಹಳ್ಳಿ, ಕೋಟೆಗಂಗೂರು, ಗೆಜ್ಜೆನಹಳ್ಳಿ, ನವುಲೆ, ರಾಗಿಗುಡ್ಡ, ಅಬ್ಬಲಗೆರೆ, ತೇವರ ಹಾಗೂ ಗೋಂದಿ ಚಟ್ನಳ್ಳಿ, ಹಸೂಡಿ, ಬೊಮ್ಮನಕಟ್ಟೆ, ಅನುಪಿನಕಟ್ಟೆ, ರಾಮೀನಕೊಪ್ಪ, ಹಾಯ್‌ಹೊಳೆ, ಸೋಗಾನೆ, ಕೊರ್ಲಳ್ಳಿ, ಅಗಸವಳ್ಳಿ ಇನ್ನೂ ಮುಂತಾದೆಡೆ ಇಂತಹದೊಂದು ಪ್ರಕರಣಗಳು ಹೆಚ್ಚುತ್ತಿದೆ, ಇದಕ್ಕೆ ಸವಳಂಗ ರಸ್ತೆಯ ಅಬ್ಬಲಗೆರೆ ಗ್ರಾಮ ಪಂಚಾಯಿತಿಯ ದೇವರ ಗುಡಿ ಹೊಡೆದು ಹಾಕಿ ಜಮೀನು, ಕೆರೆ ಜಾಗವನ್ನು ಹದ್ದುಬಸ್ತು ಮಾಡಿಕೊಳ್ಳಲು ಮುಂದಾದವರ ವಿರುದ್ದ ಸಾರ್ವಜನಿಕರೇ ರಸ್ತೆತಡೆ ನಡೆಸಿದ ಪ್ರಕರಣ, ಹಾಗೂ ಮೂಲ ನಕ್ಷೆಯ ಆಧಾರಿತವಲ್ಲದ ಸರ್ವೇ ಅಧಿಕಾರಿಗಳು ತಮ್ಮ ಅಧಿಕಾರ ದುರುಪಯೋಗದಡಿ ಸ್ವಯಂ ಸಿದ್ದಪಡಿಸಿ ಸರಕಾರಿ ದಾಖಲೆಯನ್ನಾಗಿಸಿದ ನಕ್ಷೆಯನ್ನು ನ್ಯಾಯಾಲಯ ಹಾಗೂ ಸಕ್ಷಮ ಪ್ರಾಧಿಕಾರಗಳಿಗೆ ನೀಡಿ ವಂಚಿಸುತ್ತಿರುವುದು ಕಂಡು ಬಂದಿದೆ ಎಂದರು.
ಇನ್ನೂ ಪಾಲಿಕೆ ವ್ಯಾಪ್ತಿಯ ಆಸ್ತಿಗಳ ಮೇಲೆ ಕಬ್ಜಾ :
ವಿನೋಬಾನಗರದ ೨ನೇ ಮುಖ್ಯರಸ್ತೆಯ ಆಜು-ಬಾಜಿನಲ್ಲಿ ಒಟ್ಟು ಈಗಾಗಲೇ ಗೊತ್ತು ಪಡಿಸಿದಂತೆ ಒಟ್ಟು ಹದಿನೆಂಟು ನಿವೇಶನಗಳನ್ನು ಮೂಲ ಪಾರ್ಟಿಯಿಂದ ಉಪನೊಂದಣಾಧಿಕಾರಿಗಳವರ ಕಛೇರಿನಲ್ಲಿ ನೊಂದಣಿ ಮಾಡಿಸಿಕೊಂಡಿದ್ದೇವೆ ಎನ್ನುವ ಭೂ ಮಾಫಿಯಾದ ಮಂದಿಗಳಿಗೆ ಯಾರು ಮೂಲ ವಾರಸುದಾರರು ಎನ್ನುವುದು ಇಂದಿಗೂ ಸ್ಪಷ್ಟ ಪಡಿಸುವ ದಾಖಲೆಗಳು ಇಂತಿವರ ಬಳಿ ಇಲ್ಲವಾಗಿದೆ, ಜಿಪಿಎ ( ಜನರಲ್ ಪೋರಾಪಟ್ ಅಥಾರಿಟಿ) ಎನ್ನುವ ದಾಖಲೆಗಳ ಮೂಲಕ ನೊಂದಣಿ ಮಾಡಿಸಿದ್ದೇವೆ ಎಂದು ಪಾಲಿಕೆಯಲ್ಲಿ ಇ-ಸ್ವತ್ತು ಮಾಡಿಸಿಕೊಳ್ಳಲಾಗಿದೆ, ಅಲ್ಲದೆ ಇದೇ ದಾಖಲೆಗಳನ್ವಯ ಎಲ್‌ಐಸಿ ಹಾಗೂ ಕೆನರಾ ಬ್ಯಾಂಕುಗಳಲ್ಲಿ ಕೋಟ್ಯಾಂತರ ರೂಪಾಯಿ ಸಾಲಮೇಳ ಮಾಡಿಕೊಳ್ಳಲಾಗಿದೆ, ಈ ಸಂಗತಿ ವಿನೋಬಾನಗರ ಪೊಲೀಸ್ ಠಾಣೆಯವರಿಗೆ ಗೊತ್ತಿದ್ದರು ಸಹ ಯಾವುದೇ ಕ್ರಮ ಜರುಗಿಸದೆ ಇರುವುದು ತಮ್ಮ ಗಮನಕ್ಕೆ ತರ ಬಯಸುತ್ತೇವೆ ಎಂದರು.
ಮಾನ್ಯ ಉಚ್ಚ ನ್ಯಾಯಾಲಯ ಹಾಗೂ ಸುಪ್ರೀಂ ಕೋರ್ಟಿನ ನಿರ್ದೇಶನದಂತೆ ಜಿಪಿಎ ಆಧಾರದ ಮೇಲೆ ಈ ಸದರಿ ಪತ್ರದಲ್ಲಿ ನಮೂದಿಸಲಾಗಿದೆ ಎನ್ನುವ ಕಾರಣಕ್ಕೆ ಜಿಪಿಎ ಹೋಲ್ಡರ್ ವ್ಯಕ್ತಿ ಎಂದಿಗೂ ಇನ್ನೋರ್ವರಿಗೆ ಮಾರಾಟ (ಪರಭಾರೆ) ಮಾಡುವ ಹಕ್ಕು ಹೊಂದಲು ಸಾಧ್ಯವಿಲ್ಲ, ಒಂದು ವೇಳೆ ಮಾರಾಟ ಮಾಡಲು ಮುಂದಾಗಿ ನೊಂದಾಯಿಸಿದ್ದರೆ ಅಂತಹ ಪತ್ರಗಳು ಸಿಂಧುತ್ವ ಕಳೆದುಕೊಳ್ಳುತ್ತದೆ, ಹಾಗೂ ನೊಂದಾಯಿಸಿದ ಉಪನೊಂದಣಾಧಿಕಾರಿಗಳನ್ನು ಅಮಾನತ್ತು ಪಡಿಸಿ ಸುಳ್ಳು ದಾಖಲೆ ಸೃಷ್ಟಿಸಿದ ಆದಾರದ ಆಸಾಮಿಗಳ ಮೇಲೆ ಸ್ಥಳೀಯ ಪೊಲೀಸರು ಕ್ರಿಮಿನಲ್ ಮೊಕದ್ದಮೆ ದಾಖಲಿಸಿಕೊಂಡು ತನಿಖೆ ಮಾಡಬಹುದಾಗಿದ ಎಂದಿದ್ದರು ಯಾತಕ್ಕಾಗಿ ಇಂದಿಗೂ ಈ ಪೋರ್ಜರಿಸ್ಟ್‌ಗಳ ಮೇಲೆ ಕ್ರಮ ತೆಗೆದುಕೊಳ್ಳಲು ಸಾಧ್ಯವಾಗುತ್ತಿಲ್ಲ, ಇಂತಹ ಅಸಲಿ ಕಾರಣಕ್ಕಾಗಿ ತಾಲ್ಲೂಕು ಕಛೇರಿ, ಸರ್ವೇ ಇಲಾಖೆ, ಉಪನೊಂದಾವಣಾಧಿಕಾರಿಗಳ ಕಛೇರಿ, ಶಿವಮೊಗ್ಗ ಮಹಾನಗರ ಪಾಲಿಕೆ ಕೆಲ ಅಧಿಕಾರಿಗಳು ಶಾಮೀಲು ಆಗಿರುವುದರಿಂದ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣವು ಜಿಲ್ಲಾಧಿಕಾರಿಗಳಿಗೆ ಸಮಗ್ರ ತನಿಖೆಗೆ ಟಾಸ್ಕ್ ಪೋರ್ಸ್ ಸಮಿತಿ ರಚಿಸಲು ಒತ್ತಾಯಿಸುತ್ತದೆ ಎಂದರು.
ಬೊಮ್ಮನಕಟ್ಟೆಯಲ್ಲಿ ೧೦ ಗುಂಟೆ ಜಾಗ, ಅಗಸವಳ್ಳಿಯ ೪ ಎಕರೆ ಜಾಗ, ವಿನೋಭಾನಗರದ ೨ನೇ ಮುಖ್ಯರಸ್ತೆಯ ೧೮ ನಿವೇಶನಗಳು, ಆಟೋ ಕಾಂಪ್ಲೆಕ್ಸ್ ನಲ್ಲಿ ಖಾಸಗಿ ವ್ಯಕ್ತಿಗೆ ಒಂದೂವರೆ ಕೋಟಿಗೆ ಮಾರಾಟವಾದ ಸರ್ಕಾರಿ ಆಸ್ತಿ, ಭಾರ್ಗವಿ ಪೆಟ್ರೋಲ್ ಬಂಕ್ ಹಿಂಬದಿ ಇರುವ ಇಪ್ಪತ್ತಕ್ಕೂ ಹೆಚ್ಚು ಪಾಲಿಕೆ ಜಾಗಗಳಿಗೆ ಖಾಸಗಿ ವ್ಯಕ್ತಿಗಳು ಹಾಕಿರುವ ನಾಮಫಲಕಗಳು, ಗಾಡಿಕೊಪ್ಪ ಹಾಗೂ ಆಲ್ಕೋಳದಲ್ಲಿ ನಡೆಯುತ್ತಿರುವ ಭೂ ಕಬ್ಜಾಗಳು, ಶಂಕರಚಾರ್ಯರ ಲೇ ಔಟ್‌ನಲ್ಲಿ ಕನಿಷ್ಟ ೧೫ಕ್ಕೂ ಹೆಚ್ಚು ನಿವೇಶನಗಳಿಗೆ ಸುತ್ತಿರುವ ಬೇಲಿಗಳು, ಸರ್ಕಾರಿ ಕರಾಬು ಒಂದು ಎಕರೆ ಜಾಗಕ್ಕೆ ನಿರ್ಮಿಸಲಾದ ಸಿಮೆಂಟ್ ಕಾಂಪೊಂಡ್‌ಗಳು, ಅನುಪಿನ ಕಟ್ಟೆನಲ್ಲಿರುವ ಗ್ರಾಮ ಠಾಣ ಭೂಮಿಗಳು, ಪುರದಾಳಿನ ಗ್ರಾಮ ಠಾಣ ಭೂಮಿಗಳು, ಗೋಪಾಳದ ಡಿವಿಜಿ ವೃತ್ತದಲ್ಲಿರುವ ನಾಲ್ಕು ಎಕರೆಗೂ ಅಧಿಕ ಸೆಟ್ಲಮೆಂಟ್ ಭೂಮಿ, ಸರ್ವೇ ನಂಬರ್ ೧ರಲ್ಲಿನ ೩೮ ಗುಂಟೆ ಭೂ ವಿಸ್ತೀರ್ಣ, ಅಗಸವಳ್ಳಿ ಗ್ರಾಪಂ ನಲ್ಲಿರುವ ಹಾಯ್‌ಹೊಳೆಯ ೧೬೭ ಸರ್ವೇ ನಂಬರ್ ಭೂಮಿ ಚಕ್ರಾ ಸಾವೆ ಹಕ್ಲು ಭೂಮಿನಲ್ಲಿ ಮಣ್ಣು ಮಾರಾಟ, ಇಟ್ಟಿಗೆ ಗುಮ್ಮಿ ಸ್ಥಾಪನೆ, ಲೇ ಔಟ್ ನಿರ್ಮಾಣ, ಮಂಡ್ಲಿ ಗ್ರಾಮದ ಸರ್ವೇ ನಂಬರ್ ೧೩೫ ಹಿಸ್ಸಾ ೨ರಲ್ಲಿನ ೨ ಎಕರೆ ಭೂ ಪ್ರದೇಶ ಒತ್ತುವರಿ, ತುಂಗಾನಗರದ ಕೆರೆ ಭೂ ಪ್ರದೇಶದ ಕರಾಬು ಜಾಗಕ್ಕೂ ಬೇಲಿಸುತ್ತಿರುವ ಪ್ರಕರಣಗಳಿವೆ ಎಂದರು.
ಹಾಗೂ ಆಯನೂರಿನ ಡಗಳಿ ಮನೆ ಸರ್ವೇ ನಂಬರ್ ೧೦ ರಲ್ಲಿ ೨೭.೧೩ ಎಕರೆ ಮೀಸಲು ಭೂಮಿ ಒತ್ತುವರಿ, ನಕಲಿ ದಾಖಲೆಗಳ ಸೃಷ್ಠಿ ಹಾಗೂ ದಾಸ್ ವೆಂಚರ್‍ಸ್ ಎನ್ನುವ ರೆಸಾರ್ಟ್ ನಿರ್ಮಾಣ, ಇನ್ನುಳಿದಿದ್ದು ಖಾಸಗಿ ವ್ಯಕ್ತಿಗಳು ಭೂ ಕಬ್ಜಾ ಮಾಡಿಕೊಂಡಿರುವ ಅಸಲಿ ಪ್ರಕರಣಗಳ ಜೊತೆಗೆ ಇದಕ್ಕೆ ಹೊಂದಿಕೊಂಡಂತೆ ಇರುವ ಹನ್ನೊಂದು ಎಕರೆ ಕರೆ ಜಾಗ ಭೂ ವಿಸ್ತೀರ್ಣ ಕಬಳಿಕೆಗಳು ಕೊಹಳ್ಳಿ ಗ್ರಾಪಂ ಗೆ ಗೊತ್ತಿದ್ದರು ಶಾಮೀಲು ಆಗಿರುವುದು ಬೆಳಕಿಗೆ ಬಂದಿರುವುದರಿಂದ ಜಿಲ್ಲಾಧಿಕಾರಿಗಳಾದ ತಾವುಗಳು ತನಿಖಗೆ ರೆವಿನ್ಯೂ ಇಲಾಖೆ ಹಾಗೂ ಡಿಸಿ ಕಛೇರಿ ಅಧಿಕಾರಿಗಳು ಹಾಗೂ ಪೊಲೀಸ್ ಇಲಾಖೆ ಸೇರಿದಂತೆ ಟಾಸ್ಕ್ ಪೋರ್ಸ್ ಕಮಿಟಿ ರಚಿಸುವಂತೆ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣವು ಶಿವಮೊಗ್ಗ ಜಿಲ್ಲಾಧಿಕಾರಿಗಳಾದ ಗುರುದತ್ ಹೆಗಡೆ ಅವರಿಗೆ ಈ ಮೂಲಕ ಒತ್ತಾಯಿಸುತ್ತದೆ ಎಂದರು.
ಈ ಮೇಲಿನ ಕೋಟ್ಯಾಂತರ ರೂ ಮೌಲ್ಯದ ಭೂ ಪ್ರದೇಶಗಳ ಕಬಳಿಕೆಗಾಗಿ ಅಧಿಕಾರಿಗಳನ್ನು ಶಾಮೀಲು ಮಾಡಿಕೊಂಡು, ರೌಡಿ ಎಲಿಮೆಂಟ್‌ಗಳಿಗೆ ಕೋಟಿ ಕಂತೆಗಳು ಕೊಟ್ಟು ಭದ್ರತೆಗಾಗಿ ದುರ್ಬಲ ವರ್ಗದವರಿಗೆ ಬೆದರಿಸುವುದಕ್ಕಾಗಿ, ಬೇಲಿ ಸುತ್ತಿಕೊಡುವುದಕ್ಕಾಗಿ ನೇಮಿಸಿಕೊಂಡಿರುವುದು ಶಿವಮೊಗ್ಗ ನಗರದಲ್ಲಿ ಕಂಡು ಬಂದಿದೆ.
ಶಿವಮೊಗ್ಗದಲ್ಲಿ ಲ್ಯಾಂಡ್ ಡೆವಲಪರ್ ಎನ್ನುವ ನಕಲಿಗಳಿಗೆ ಇಂತಹ ಮೀಸಲು ಭೂಮಿಗಳನ್ನು ಸರ್ವೇ ಇಲಾಖೆ, ಕಂದಾಯ ಇಲಾಖೆ, ಎಸಿ ಕಛೇರಿ ಅಧಿಕಾರಿಗಳಿಗೆ ಪುಸಲಾಯಿಸಿ, ಲಂಚದ ಆಮಿಷಗಳೊಡ್ಡಿ ದಿನವಹಿ ಇಲ್ಲಿಯೇ ಮೊಕ್ಕಾಂ ಹೂಡಿ ಸರ್ಕಾರಿ ಅಧಿಕಾರಿಯಂತೆ ಅಂಡರ್ಲೆವ ಬ್ರೋಕರ್‌ಗೆ ಲಕ್ಷಾಂತರ ರೂ ಹಣ ಕೊಟ್ಟು ಡಿ-ನೋಟಿ ಪೈ ಮಾಡಿಸುವ ಅಸಲು ಸಂಗತಿಗಳಿರುವುದನ್ನು ತಾವು ಈ ಇಲಾಖಾಧಿಕಾರಿಗಳಿಗೆ ವಿಚಾರಣೆ ನಡೆಸಿ ಅಂತಹ ಬ್ರೋಕರ್‌ಗಳ ಮೇಲೆ ಗುಂಡಾಕಾಯ್ದೆಯಡಿ ದೂರು ದಾಖಲಿಸಿ ಗಡಿಪಾಡು ಮಾಡುವ ಸಲುವಾಗಿ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣವು ಶಿವಮೊಗ್ಗ ಜಿಲ್ಲಾಧಿಕಾರಿಗಳಿಗೆ ಈ ಮೂಲಕ ಒತ್ತಾಯಿಸುತ್ತದೆ ಎಂದರು ರಾಜ್ಯಾಧ್ಯಕ್ಷರಾದ ಪಿ ಕೃಷ್ಣೆಗೌಡ್ರು.
ಈ ಪ್ರತಿಭಟನೆಯಲ್ಲಿ ರಾಜ್ಯಾಧ್ಯಕ್ಷರಾದ ಪಿ ಕೃಷ್ಣೆಗೌಡ್ರು ಹಾಗೂ ಬೇರೆ ರಾಜ್ಯ ಪ್ರಧಾನ ಕಾರ್ಯದರ್ಶಿಯಾದ ಶಿವುಗೌಡ ಜಿಲ್ಲಾಧ್ಯಕ್ಷರಾದ ಕಿರಣ್ ಕುಮಾರ್ ಎಚ್ಎಸ್ ಮಹಿಳಾ ಘಟಕದ ಅಧ್ಯಕ್ಷರಾದ ಕವಿತಾ ಸಿ ನಗರಾಧ್ಯಕ್ಷರಾದ ಜೀವನ ಡಿ ಪ್ರಚಾರ ಸಮಿತಿಯ ಅಧ್ಯಕ್ಷರಾದ ಮಾಲತೇಶ್ ಫ್ರಾಂಕ್ಲಿನ್ ಉಮೇಶ್ ಗದ್ದೆಮನೆ ಜಿಲ್ಲಾ ಉಪಾಧ್ಯಕ್ಷರಾದ ವಿಜಯಕುಮಾರ್ ಹಾಗೂ ಜೈ ಕೃಷ್ಣ ಮುಂತಾದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
