ಮೃದು ಪೋರ್ನ್ ಹಾಗೂ ಅಶ್ಲೀಲತೆಯಿರುವ ಕಂಟೆಂಟ್ಗಳನ್ನು ಪ್ರಸಾರ ಮಾಡುತ್ತಿರುವ ಆರೋಪದ ಮೇಲೆ ಉಲ್ಲು, ಆಲ್ಟ್ ಬಾಲಾಜಿ, ದೇಸಿಫ್ಲೆಕ್ಸ್ , ಬಿಗ್ ಶಾಟ್ಸ್ ಸೇರಿದಂತೆ ಪ್ರಮುಖ ಒಟಿಟಿ ವೇದಿಕೆಗಳನ್ನು ಕೇಂದ್ರ ಸರ್ಕಾರ ನಿಷೇಧಿಸಿದೆ.
ಅಧಿಕೃತ ಮೂಲಗಳ ಪ್ರಕಾರ ಈ ಕಂಟೆಂಟ್ಗಳು ಮಾಹಿತಿ ಪ್ರಸಾರ ನಿಯಮಗಳು ಹಾಗೂ ಅಸ್ತಿತ್ವದಲ್ಲಿರುವ ಅಶ್ಲೀಲ ಕಾನೂನುಗಳನ್ನು ಉಲ್ಲಂಘಿಸಿರುವುದಾಗಿ ಹಲವು ದೂರುಗಳು ವರದಿಯಾಗಿರುವುದನ್ನು ಪರಿಗಣಿಸಿ ಕೇಂದ್ರ ಮಾಹಿತಿ ಮತ್ತು ಪ್ರಸಾರ ಇಲಾಖೆ ಈ ನಿರ್ಧಾರ ಕೈಗೊಂಡಿದೆ.
ಈ ಒಟಿಟಿ ವೇದಿಕೆಗಳು ಕಾಮ ಪ್ರಚೋದಕ ವಿಡಿಯೋಗಳನ್ನು ಯಾವುದೇ ಸೆನ್ಸರ್ಗೆ ಒಳಪಡಿಸದೆ ನೇರವಾಗಿ ಪ್ರಸಾರ ಮಾಡುತ್ತಿರುವ ಕಾರಣ ಕೇಂದ್ರ ಸರ್ಕಾರ ನಿಷೇಧಕ್ಕೆ ಮುಂದಾಗಿದೆ ಎನ್ನಲಾಗಿದೆ. ಮುಖ್ಯವಾಗಿ ಅಪ್ರಾಪ್ತರಿಗೆ ಪೋರ್ನ್ ಕಂಟೆಂಟ್ಗಳನ್ನು ಸುಲಭವಾಗಿ ಲಭ್ಯವಿಲ್ಲದಂತೆ ತಡೆಯುವ ಸಲುವಾಗಿ ನಿಷೇಧಿಸಲಾಗಿದೆ.
ಇದನ್ನು ಓದಿದ್ದೀರಾ? ದೃಶ್ಯಂ ಸಿನಿಮಾ ಪ್ರೇರಣೆ | ಗಂಡನನ್ನು ಕೊಲೆ ಮಾಡಿ ಶವವನ್ನು ಮನೆಯಲ್ಲೇ ಹೂತಿಟ್ಟ ಪತ್ನಿ
“ಮಾಹಿತಿ ಮತ್ತು ಪ್ರಸಾರ ಇಲಾಖೆಯು ಹಲವು ಮಧ್ಯಸ್ಥಗಾರರ ಸಹಕಾರದೊಂದಿಗೆ ಅಶ್ಲೀಲ,ಅಸಭ್ಯ ಹಾಗೂ ಇನ್ನು ಕೆಲವು ಸಂದರ್ಭದಲ್ಲಿ ಪೋರ್ನ್ ಕಂಟೆಂಟ್ಗಳನ್ನು ಪ್ರಸಾರ ಮಾಡುತ್ತಿದ್ದ 25 ಒಟಿಟಿ ವೇದಿಕೆಗಳನ್ನು ನಿಷೇಧಿಸಿದೆ. ಈ ವೇದಿಕೆಗಳೊಂದಿಗೆ ಸಂಬಂಧ ಹೊಂದಿದ 19 ವೆಬ್ಸೈಟ್ಗಳು, 10 ಆಪ್ಗಳು(7 ಗೂಗಲ್ ಪ್ಲೇಸ್ಟೋರ್ ಹಾಗೂ 3 ಆಪಲ್ ಸ್ಟೋರ್) ಹಾಗೂ 57 ಸಾಮಾಜಿಕ ಮಾಧ್ಯಮ ಖಾತೆಗಳನ್ನು ಭಾರತದಲ್ಲಿ ಸಂಪರ್ಕಕ್ಕೆ ಸಿಗದಂತೆ ಸ್ಥಗಿತಗೊಳಿಸಲಾಗಿದೆ” ಎಂದು ಇಲಾಖೆಯು ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ.