ಭೂಮಿ ನೆಲ, ನೀರು ಜಲ ಎನ್ನುವ ರೀತಿ ವೀರಶೈವ ಲಿಂಗಾಯತ ಎಂಬ ಪದ ಬಳಕೆಯಾಗುತ್ತಿದೆ. ಎರಡೂ ಪದ ಒಂದೇ ಆದರೂ ಕೆಲವರು ಅದರಲ್ಲಿ ಬೇಧಭಾವ ಹುಡುಕುವುದು ತರವಲ್ಲ ಎಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ರಾಜ್ಯಾಧ್ಯಕ್ಷ ಶಂಕರ ಮಹದೇವ ಬಿದರಿ ತಿಳಿಸಿದರು.
ಗುಬ್ಬಿ ಪಟ್ಟಣದ ಹೊರವಲಯದ ಹೇರೂರು ಶ್ರೀ ಗುರು ಸಿದ್ಧರಾಮೇಶ್ವರ ಸಮುದಾಯ ಭವನದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ತಾಲ್ಲೂಕು ಘಟಕ ಆಯೋಜಿಸಿದ್ದ ಸೇವಾ ದೀಕ್ಷಾ ಸಮಾರಂಭ, ಸದಸ್ಯತ್ವ ನೋಂದಣಿ ಅಭಿಯಾನ ಹಾಗೂ ಬೆಟ್ಟದಹಳ್ಳಿ ಶ್ರೀಗಳ ಪೀಠಾರೋಹಣ ಸುವರ್ಣ ಮಹೋತ್ಸವ ಮತ್ತು ಅಭಿನಂದನಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಒಂದೇ ಸಂಸ್ಕೃತಿ ಪರಂಪರೆ ಅಳವಡಿಸಿಕೊಂಡು ನಮ್ಮಲ್ಲೇ ಲಿಂಗಾಯತ ಬೇರೆ ವೀರಶೈವ ಬೇರೆ ಎನ್ನುವುದು ಯಾರೂ ಸಹಿಸಲ್ಲ. ಇದರಿಂದ ಯಾರಿಗೂ ಲಾಭವಿಲ್ಲ. ನಮ್ಮ ಒಗ್ಗಟ್ಟು ಒಡೆಯುವ ಕೆಲಸಕ್ಕೆ ಯಾರೂ ಕೈಜೋಡಿಸದೆ ನಮ್ಮ ಸಮಾಜ ಕಟ್ಟಿ ಧರ್ಮ ಉಳಿಸೋಣ ಎಂದು ಕರೆ ನೀಡಿದರು.
ಸಾವಿರ ವರ್ಷಗಳ ಇತಿಹಾಸ ಇರುವ ನಮ್ಮ ಧರ್ಮದಲ್ಲಿ ಬಸವಾದಿ ಶರಣರ ತತ್ವ ಒಂದೇ ಆಗಿದೆ. ಜಾತಿ ಗಣತಿ ಸಮಯದಲ್ಲಿ ವೀರಶೈವ ಲಿಂಗಾಯತ ಎರಡೂ ಪದಗಳ ಬಳಸಬಹುದಾಗಿದೆ. ತಮ್ಮ ಉಪ ಜಾತಿಗಳನ್ನು ಮಾತ್ರ ತಪ್ಪದೇ ನಮೂದಿಸಬೇಕು ಎಂದು ಸಲಹೆ ನೀಡಿದ ಅವರು 10 ಸಾವಿರ ಸದಸ್ಯತ್ವ ನೋಂದಣಿ ಮಾಡಿಸಿ ಅವರ ಶಕ್ತಿ ಅನುಸಾರ 250 ರಿಂದ 5 ಸಾವಿರ ರೂವರೆಗೆ ಸೇವಾ ಶುಲ್ಕ ನೀಡಬಹುದು. ಆದರೆ ಎಲ್ಲಾ ಸದಸ್ಯರು ಒಂದೇ ಎಂಬ ಅಂಶ ಮನದಲ್ಲಿರಲಿ. ಮಹಾಸಭಾ ಲೆಕ್ಕದಲ್ಲಿ ಎಲ್ಲರೂ ಸದಸ್ಯರೇ ಆಗಿರುತ್ತಾರೆ. ಈ ಜೊತೆಗೆ ನಮ್ಮ ಆದಾಯದ ಕೊಂಚ ಅಂಶ ಶೇಕಡಾ 2 ರಷ್ಟು ಮಾತ್ರ ಸಮಾಜಕ್ಕೆ ವಿನಿಯೋಗ ಮಾಡಬೇಕು. ಕ್ರೈಸ್ತ, ಜೈನ, ಮುಸಲ್ಮಾನ, ಬ್ರಾಹ್ಮಣ ಎಲ್ಲರೂ ಅವರ ಶಕ್ತಿ ಅನುಸಾರ ಶೇಕಡಾವಾರು ದೇಣಿಗೆ ತಮ್ಮ ಸಮಾಜಕ್ಕೆ ನೀಡುತ್ತಾರೆ. ಆದರೆ ನಮ್ಮಲ್ಲೇ ಇನ್ನೂ ಎಚ್ಚರಗೊಂಡಿಲ್ಲ. ಈ ವರ್ಷದಲ್ಲೇ ಸಮಾಜಕ್ಕೆ ದೇಣಿಗೆ ನೀಡಿದರೆ ಅದನ್ನು ಆಯಾ ತಾಲ್ಲೂಕಿನ ಸಮಾಜದ ಬಡ ಮಕ್ಕಳ ಶಿಕ್ಷಣಕ್ಕೆ ಹಾಗೂ ಬಡ ಕುಟುಂಬಕ್ಕೆ ಅನುಕೂಲಕ್ಕೆ ಬಳಸಲಾಗುವುದು. ಹೀಗೆ ಪ್ರಗತಿ ಸಾಧಿಸಬೇಕಿದೆ. ಈ ಜೊತೆಗೆ ಕೌಟುಂಬಿಕ ಕಲಹಕ್ಕೆ ಗ್ರಾಮದಲ್ಲೇ ಹಿರಿಯರು ರಾಜಿ ಪಂಚಾಯಿತಿ ಮಾಡುವ ಹಳೇ ಸಂಪ್ರದಾಯ ಮತ್ತೊಮ್ಮೆ ಆರಂಭಿಸಿ. ಇದೇ ನಮ್ಮ ಸಮಾಜಕ್ಕೆ ನೆಮ್ಮದಿ ತರುತ್ತದೆ. ದುಡಿದು ಪೊಲೀಸ್, ಕೋರ್ಟ್ ಎಂದು ಹಾಳು ಮಾಡಬೇಡಿ ಎಂದು ಸಲಹೆ ನೀಡಿದರು.
ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ.ಸಿ.ಸೋಮಶೇಖರ್ ಮಾತನಾಡಿ ಗ್ರಾಮೀಣ ಪ್ರದೇಶದಲ್ಲಿ ವೀರಶೈವ ಲಿಂಗಾಯತ ಧರ್ಮ ಉಳಿಯಲು ಸಾಧ್ಯ. ನಮ್ಮಲ್ಲೇ ಬೇದಭಾವ ಹುಟ್ಟಿದರೆ ನಮ್ಮ ಮುಂದಿನ ಯುವಕರು ಬೌದ್ಧ ಜೈನ ಧರ್ಮಕ್ಕೆ ವಲಸೆ ಹೋಗುತ್ತಾರೆ. ಇದು ಎಚ್ಚರಿಕೆಯ ಗಂಟೆ. ಈ ನಿಟ್ಟಿನಲ್ಲಿ ನಮ್ಮಲ್ಲಿ ಒಡಕು ಮೂಡಬಾರದು. ಒಗ್ಗಟ್ಟು ಇದ್ದರೆ ದಿಲೀಪ್ ಇಲ್ಲಿ ಗೆಲ್ಲಬಹುದಿತ್ತು. ಒಡಕು ಮನಸ್ಥಿತಿ ನಮ್ಮನ್ನು ಅಧೋಗತಿಗೆ ತಳ್ಳುತ್ತದೆ. ಸಂಘರ್ಷ ಮರೆತು ನಮ್ಮಲ್ಲಿ ಸಂಘಟನೆ ಒಗ್ಗಟ್ಟು ಪ್ರದರ್ಶನ ಆಗಬೇಕು. ಸಾಮಾಜಿಕ ರಾಜಕೀಯವಾಗಿ ಗಟ್ಟಿತನ ಬೆಳೆಸಿಕೊಂಡರೆ ನಮ್ಮ ಧರ್ಮ ಉಳಿಯುತ್ತದೆ. ಈ ನಿಟ್ಟಿನಲ್ಲಿ ಸದಸ್ಯತ್ವ ನೋಂದಣಿ ಮಾಡಿಸಿ ಸಂಘಟನೆಗೆ ಒಗ್ಗೂಡಿ ಬರಬೇಕು ಎಂದು ಕರೆ ನೀಡಿದರು.
ಪೀಠಾರೋಹಣ ಸುವರ್ಣ ಮಹೋತ್ಸವ ಭಕ್ತಿ ಸಮರ್ಪಣೆ ಪಡೆದ ಬೆಟ್ಟದಹಳ್ಳಿ ಶ್ರೀ ಚಂದ್ರಶೇಖರ ಸ್ವಾಮೀಜಿ ಮಾತನಾಡಿ ಪದಗಳು ಬೇರೆಯಾದರೂ ಅರ್ಥ ಒಂದೇ. ತತ್ವ ಒಂದೇ. ಲಿಂಗ ಅಂಗ ಯಾರು ಮೈಗೂಡಿಸಿಕೊಂಡು ಧರ್ಮ ಪಾಲನೆ ಮಾಡುತ್ತರೂ ಅವರೇ ವೀರಶೈವರು. ಭಿನ್ನಭಾವ ಬಿಟ್ಟು ಅಂಗದ ಮೇಲೆ ಲಿಂಗ ಧರಿಸಿ ಸಮಾಜ ಉಳಿಸಿ ಬೆಳೆಸಿ ಮುಂದಿನ ಪೀಳಿಗೆಗೆ ಕಲಿಸಿ ಎಂದು ಹೇಳಿ ಮುಂದಿನ ದಿನಗಳಲ್ಲಿ ವೇದಿಕೆ ಹಂಚಿಕೊಳ್ಳುವುದಿಲ್ಲ. ಧರ್ಮ ಪಾಲನೆಯನ್ನು ಗುರುಪೀಠದಲ್ಲಿ ನಡೆಸುತ್ತೇನೆ ಎಂದು ಹೇಳಿದರು.
ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಮಹಿಳಾ ಘಟಕದ ರಾಷ್ಟ್ರೀಯ ಅಧ್ಯಕ್ಷೆ ವೀಣಾ ಕಾಶಪ್ಪನವರ್ ಮಾತನಾಡಿ ಸಮಾಜವನ್ನು ಸದೃಢವಾಗಿ ಬೆಳೆಸುವ ಅವಕಾಶ ಸಿಕ್ಕಾಗ ಶ್ರದ್ದೆಯಿಂದ ಕೆಲಸ ಮಾಡಬೇಕು. ಉತ್ತರ ಕರ್ನಾಟಕ ಭಾಗಕ್ಕೆ ಅವಕಾಶ ನೀಡಿದ ಹಿನ್ನಲೆ ಪ್ರಾಮಾಣಿಕ ಪ್ರಯತ್ನ ಮಾಡುತ್ತಾ ಮಹಾಸಭಾ ಸಂಘಟನೆ ನಡೆಸಿದ್ದೇನೆ. ಸಂದಿಗ್ಧ ಪರಿಸ್ಥಿತಿ ಬಂದಿರುವ ಈ ಸಮಯ ಮಹಿಳಾ ಶಕ್ತಿ ಹಾಗೂ ಯುವಶಕ್ತಿ ಒಗ್ಗೂಡಿ ಮಹಾಸಭಾ ಕಟ್ಟಬೇಕು. ತಾಲ್ಲೂಕಿನಲ್ಲಿ 5 ಸಾವಿರ ಮಹಿಳೆಯರ ಸದಸ್ಯತ್ವ ನೋಂದಣಿ ಆಗಬೇಕು ಎಂದರು.
ಬಿಜೆಪಿ ಮುಖಂಡ ಎಸ್.ಡಿ.ದಿಲೀಪ್ ಕುಮಾರ್ ಮಾತನಾಡಿ ಮಕ್ಕಳಿಗೆ ಸಂಸ್ಕಾರ ಆಚಾರ ವಿಚಾರ ಕಲಿಸಬೇಕಿದೆ. ನಮ್ಮಲ್ಲೇ ಕಿತ್ತಾಟ ನಿಲ್ಲಿಸಿ ಒಗ್ಗೂಡಿ ಸಾಗಬೇಕಿದೆ. ಸರ್ಕಾರಿ ನೌಕರರು ನಾವು ವೀರಶೈವ ಲಿಂಗಾಯತ ಎಂದು ಹೇಳಿಕೊಳ್ಳಲು ಹೆದರುವ ಕಾಲ ಈಗಿದೆ. ವಿವಿಧ ಸಂಘ ಬೇರೆ ಕಾರ್ಯಕ್ರಮ ಮಾಡುವ ಬದಲು ಎಲ್ಲರೂ ಒಗ್ಗೂಡಿ ಒಂದೇ ವೇದಿಕೆಯಲ್ಲಿ ಶಕ್ತಿ ಪ್ರದರ್ಶನ ಮಾಡಬೇಕು. ನಮ್ಮನ್ನು ಬೆದರಿಸಲು ಒಡೆಯುವ ಕೆಲಸ ಮಾಡುತ್ತಾರೆ. ಹೇಮಾವತಿ ಹೋರಾಟದಲ್ಲಿ 11 ಕೇಸ್ ಹಾಕಿದ್ದರು. ನಮ್ಮ ಬೆಳವಣಿಗೆ ಸಹಿಸದ ಜನರು 101 ಕೇಸ್ ಹಾಕಿಸಲಿ ನಮ್ಮ ಹಿಂದೆ ನಮ್ಮ ಸಮಾಜ ಇದೆ ಎಂದು ಹೆಮ್ಮೆ ವ್ಯಕ್ತಪಡಿಸಿದರು.
ಇದೇ ಸಂದರ್ಭದಲ್ಲಿ ಮಹಾಸಭಾ ವಿವಿಧ ಘಟಕದ ಪದಾಧಿಕಾರಿಗಳಿಗೆ ಸೇವಾದೀಕ್ಷೆ ಬೋಧಿಸಲಾಯಿತು. ಒಂದು ಲಕ್ಷ ಸದಸ್ಯತ್ವ ಪಡೆದ ಸದಸ್ಯರಿಗೆ ಅಭಿನಂದನೆ ಸಲ್ಲಿಸಲಾಯಿತು.
ವೇದಿಕೆಯಲ್ಲಿ ದೊಡ್ಡಗುಣಿ ಮಠದ ಶ್ರೀ ರೇವಣಸಿದ್ದೇಶ್ವರ ಸ್ವಾಮೀಜಿ, ತೆವಡೇಹಳ್ಳಿ ಮಠದ ಶ್ರೀ ಗೋಸಲ ಚನ್ನಬಸವೇಶ್ವರ ಸ್ವಾಮೀಜಿ, ಗೊಲ್ಲಹಳ್ಳಿ ಮಠದ ಶ್ರೀ ವಿಭವ ವಿದ್ಯಾಶಂಕರ ಸ್ವಾಮೀಜಿ, ತೊರೆಮಠದ ಶ್ರೀ ಚಂದ್ರಶೇಖರ ದೇಶಿಕೇಂದ್ರ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಮಹಾಸಭಾದ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯ ಎಸ್.ಕೆ.ರಾಜಶೇಖರ್, ರಾಜ್ಯ ಪ್ರಧಾನ ಕಾರ್ಯದರ್ಶಿ ಸಾಗರನಹಳ್ಳಿ ನಟರಾಜ್, ಜಿಲ್ಲಾಧ್ಯಕ್ಷ ಡಾ.ಪರಮೇಶ್, ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ಮುಕ್ತಾಂಬ, ಜಿಲ್ಲಾಧ್ಯಕ್ಷೆ ಮಮತಾ, ತಾಲ್ಲೂಕು ಅಧ್ಯಕ್ಷ ಎಸ್.ಮಂಜುನಾಥ್, ನಿಕಟ ಪೂರ್ವ ಅಧ್ಯಕ್ಷ ಹೇರೂರು ರಮೇಶ್, ತಾಲ್ಲೂಕು ಘಟಕದ ದಿವ್ಯಪ್ರಕಾಶ್, ಯತೀಶ್, ಹೇಮಣ್ಣ, ಶಿವಕುಮಾರ್, ವಿಶ್ವಾರಾಧ್ಯ, ಶಶಿಭೂಷಣ್, ಯಶೋಧ ಇನ್ನಿತರರು ಇದ್ದರು.