ಗದಗ ಜಿಲ್ಲಾದ್ಯಂತ ಯೂರಿಯಾ ಗೊಬ್ಬರ ಸಮರ್ಪಕವಾಗಿ ಸಿಗದೇ ಇರುವುದರಿಂದ ರೈತರು ಜಮೀನುಗಳಲ್ಲಿ ಉಳುಮೆ ಮಾಡುವುದರ ಬದಲಿಗೆ ಒಂದೊಂದು ಚೀಲ ಗೊಬ್ಬರಕ್ಕಾಗಿ ರಸಗೊಬ್ಬರ ಅಂಗಡಿಗಳ ಮುಂದೆ ದಿನವಿಡೀ ಸರತಿ ಸಾಲಿನಲ್ಲಿ ನಿಲ್ಲುವ ಸ್ಥಿತಿ ಉಂಟಾಗಿದ್ದು, ಸರ್ಕಾರದ ವಿರುದ್ಧ ಅನ್ನದಾತರು ಹಿಡಿಶಾಪ ಹಾಕುತ್ತಿದ್ದಾರೆ.
ಗದಗ ಗ್ರಾಮೀಣ, ಮುಳಗುಂದ, ಲಕ್ಷ್ಮೇಶ್ವರ, ಗಜೇಂದ್ರಗಡ, ನರಗುಂದ ತಾಲೂಕಿನಲ್ಲಿ ರೈತರು ಗೊಬ್ಬರದ ಅಂಗಡಿಗಳ ಮುಂದೆ ಸರದಿ ಸಾಲಿನಲ್ಲಿ ನಿಂತಿದ್ದಾರೆ. ರೈತರ ಈ ಸ್ಥಿತಿ ನಿಜಕ್ಕೂ ಮನಕಲಕುವಂತಿದೆ. ಯೂರಿಯಾ ಗೊಬ್ಬರಕ್ಕಾಗಿ ಪರದಾಟ ನಡೆಸಿರುವ ರೈತರು, ಮಳೆ-ಚಳಿ ಎನ್ನದೇ ಗೊಬ್ಬರದ ಅಂಗಡಿಗಳ ಮುಂದೆ ವಾಸ್ತವ್ಯ ಹೂಡುತ್ತಿದ್ದಾರೆ.
ಗದಗ ಜಿಲ್ಲಾ ಕೇಂದ್ರದಲ್ಲಿ ರೈತರು ಗೊಬ್ಬರಕ್ಕಾಗಿ ಪರಿತಪಿಸುತ್ತಿದ್ದಾರೆ. ನಗರದ ನಾಮಜೋಶಿ ರಸ್ತೆಯಲ್ಲಿರುವ ಗೊಬ್ಬರ ಅಂಗಡಿಯ ಮುಂದೆ ನಸುಕಿನಿಂದಲೇ ರೈತರು ಗೊಬ್ಬರದ ನಿರೀಕ್ಷೆಯಲ್ಲಿ ಸಾಲಿನಲ್ಲಿ ನಿಂತಿದ್ದಾರೆ. ಊಟ, ನಿದ್ರೆ ಬದಿಗೊತ್ತಿ ಗೊಬ್ಬರಕ್ಕಾಗಿ ರಸ್ತೆಯಲ್ಲೇ ಕಳೆಯುತ್ತಿದ್ದಾರೆ.
ರೈತರು ಯೂರಿಯಾ ಗೊಬ್ಬರವನ್ನು ಬೇಗ ಪಡೆದುಕೊಳ್ಳಲು ರಾತ್ರಿ ವಾಸ್ತವ್ಯ ಹೂಡುತ್ತಿದ್ದು, ಗಜೇಂದ್ರಗಡ ಪಟ್ಟಣದಲ್ಲಿ ವಿವಿಧ ಗ್ರಾಮದ ರೈತರು ಗೊಬ್ಬರಕ್ಕಾಗಿ ಇನ್ನಿಲ್ಲದ ಪರದಾಟ ನಡೆಸಿದ್ದಾರೆ. ಜಿಟಿ ಜಿಟಿ ಮಳೆಯಲ್ಲೂ ಹಲವೆಡೆ ಸರದಿ ಸಾಲಿನಲ್ಲಿ ನಿಂತು ಕಾದಿದ್ದಾರೆ. ಕೆಲ ರೈತರಿಗೆ ಎರಡು ಮೂರು ಚೀಲ ಮಾತ್ರ ಗೊಬ್ಬರ ದೊರೆತರೆ, ಇನ್ನೂ ಕೆಲ ರೈತರಿಗೆ ಗೊಬ್ಬರವೇ ಸಿಕ್ಕಿಲ್ಲ. ಹೆಚ್ಚಿನ ಪ್ರಮಾಣದಲ್ಲಿ ಗೊಬ್ಬರ ನೀಡುವಂತೆ ಅನ್ನದಾತರು ಒತ್ತಾಯ ಮಾಡಿದ್ದಾರೆ.
ಗೊಬ್ಬರಕ್ಕಾಗಿ ಗ್ರಾಮೀಣ ಪ್ರದೇಶಗಳಿಂದ ಬಂದ ರೈತರು ಕುಟುಂಬ ಸಮೇತರಾಗಿ ಸಾಲಿನಲ್ಲಿ ನಿಂತು ‘ನಮಗೂ ಗೊಬ್ಬರ ಬೇಕು’ ಎಂದು ಪಟ್ಟುಹಿಡಿದಿದ್ದಾರೆ. ದಿನವಿಡೀ ಮಳೆಯಲ್ಲಿಯೇ ಸರತಿ ಸಾಲಿನಲ್ಲಿ ನಿಂತ ರೈತರು, ಅಂಗಡಿಯಲ್ಲಿ ಕೇವಲ 150 ಕೂಪನ್‌ಗಳನ್ನು ಮಾತ್ರ ವಿತರಿಸಲಾಗುತ್ತಿದೆ ಎಂಬ ಆರೋಪ ಮಾಡುತ್ತಿದ್ದಾರೆ. ಉಳಿದವರು ಕೈಬಿಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಈ ನಡುವೆ ಗೊಬ್ಬರ ನೀಡುವ ಹೆಸರಿನಲ್ಲಿ ಹೆಚ್ಚುವರಿ ಹಣ ವಸೂಲಿ ಮಾಡಲಾಗುತ್ತಿದೆ ಎಂಬ ಆರೋಪವೂ ಕೇಳಿಬಂದಿದ್ದು, ರೈತರಿಂದ ಆಕ್ರೋಶ ವ್ಯಕ್ತವಾಗಿದೆ. ಗದಗ ಜಿಲ್ಲೆಯ ಕೇಂದ್ರದಲ್ಲೇ ಈ ರೀತಿಯ ಶೋಷಣೆ ನಡೆಯುತ್ತಿರುವುದು ನಾಚಿಕೆಗೇಡಾಗಿದ್ದು, ಕೃಷಿ ಇಲಾಖೆಯ ಅಧಿಕಾರಿಗಳು ಕುಂಭಕರ್ಣ ನಿದ್ರೆಗೆ ಜಾರಿದ್ದಾರೆಂದು ರೈತರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹೆಚ್ಚಿದ ಬೇಡಿಕೆ: ಕಳೆದ ಎಂಟು ಹತ್ತು ದಿನಗಳಿಂದ ಅತಿಯಾದ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ತೇವಾಂಶ ಹೆಚ್ಚಾಗಿ ಬೆಳೆಗಳು ರೋಗಕ್ಕೆ ತುತ್ತಾಗುತ್ತಿದ್ದು, ಬೆಳೆಗಳು ನಾಶವಾಗುತ್ತವೆ ಎಂಬ ಆತಂಕದಲ್ಲಿ ರೈತರಿದ್ದಾರೆ. ಯೂರಿಯಾ ಗೊಬ್ಬರ ಬಳಸಿದರೆ ಬೆಳೆ ಉಳಿಸಿಕೊಳ್ಳಬಹುದು ಎಂಬುದು ರೈತರ ಆಲೋಚನೆ. ಹೀಗಾಗಿ ಯೂರಿಯಾ ಗೊಬ್ಬರಕ್ಕೆ ಮುಗಿಬಿದ್ದಿದ್ದಾರೆ. ಜಿಟಿ ಜಿಟಿ ಮಳೆಯಲ್ಲೂ ಹಲವೆಡೆ ಸರತಿ ಸಾಲಿನಲ್ಲಿ ನಿಂತು ಕಾದಿದ್ದಾರೆ. ಕೆಲ ರೈತರಿಗೆ ಗೊಬ್ಬರ ದೊರೆತರೆ ಇನ್ನು ಕೆಲ ರೈತರಿಗೆ ಸಿಕ್ಕಿಲ್ಲ, ಕೆಲವೆಡೆ ರೈತರು ಹಾಗೂ ಅಂಗಡಿಕಾರರ ನಡುವೆ ವಾಗ್ವಾದಗಳು ನಡೆದಿವೆ.
ಇದನ್ನೂ ಓದಿದ್ದೀರಾ? ಕೊಡಗು | ಜನ ಜೀವನಕ್ಕೆ ಕಂಟಕರಾದ ಅರಣ್ಯ ಇಲಾಖೆ; ಶಾಸಕ ಡಾ ಮಂತರ್ ಗೌಡ ಆಕ್ರೋಶ
“3,06,185 ಹೆಕ್ಟೇರ್ ಬಿತ್ತನೆ ಗುರಿಗೆ 3,03,831 ಹೆಕ್ಟೇರ್ ಅಂದರೆ ಶೇ. 99.23ರಷ್ಟು ಬಿತ್ತನೆಯಾಗಿದೆ. ಹೆಸರು 1,25,956 ಹೆಕ್ಟೇರ್, ಗೋವಿನ ಜೋಳ 1,42,741 ಹೆಕ್ಟೇರ್ ಹಾಗೂ 14,505 ಹೆಕ್ಟೇರ್ ಪ್ರದೇಶದಲ್ಲಿ ಶೇಂಗಾ ಬೆಳೆಯನ್ನು ಬಿತ್ತಲಾಗಿದೆ. ಹೆಚ್ಚಿನ ಪ್ರದೇಶದಲ್ಲಿ ಗೋವಿನ ಜೋಳ, ಹೆಸರು ಬಿತ್ತನೆ ಮಾಡಲಾಗಿದ್ದು, ಹೆಸರು ಬೆಳೆಗೆ ಹಳದಿ ರೋಗ ಬಾಧಿಸುತ್ತಿದೆ. ರೋಗ ನಿಯಂತ್ರಣಕ್ಕೆ ಯೂರಿಯಾ ಗೊಬ್ಬರ ನೀಡುವುದು ರೈತರು ಅನುಸರಿಸುವ ವಿಧಾನ. ಮುಳಗುಂದದಲ್ಲಿ ಯೂರಿಯಾ ಗೊಬ್ಬರಕ್ಕಾಗಿ ಸರತಿಯಲ್ಲಿ ನಿಂತು ಕಾಯುತ್ತಿದ್ದಾರೆ. ಆದರೆ ಕೃಷಿ ಇಲಾಖೆ ನ್ಯಾನೂ ಯೂರಿಯಾ ಬಳಸಿ ಎಂದು ಸಲಹೆ ನೀಡಿದೆ. ಈಗಾಗಲೇ ಬೆಳೆಗಳು ಎತ್ತರಕ್ಕೆ ಬೆಳೆದಿದ್ದು, ನ್ಯಾನೂ ಯೂರಿಯಾ ಸಿಂಪಡಣೆ ಮಾಡಲು ಸಾಧ್ಯವಾಗುತ್ತಿಲ್ಲ. ಕೃಷಿ ಇಲಾಖೆ ಯೂರಿಯಾ ಗೊಬ್ಬರವನ್ನು ಸಮರ್ಪಕವಾಗಿ ಪೂರೈಕೆ ಮಾಡಬೇಕು” ಎಂಬುದು ರೈತರ ಆಗ್ರಹವಾಗಿದೆ.
“ಜಿಲ್ಲೆಯಲ್ಲಿ ಎಷ್ಟು ಪ್ರದೇಶದಲ್ಲಿ ಬಿತ್ತನೆಯಾದ ಬಗ್ಗೆ ಕೃಷಿ ಇಲಾಖೆಗೆ ಮಾಹಿತಿ ಇರುತ್ತದೆಯೋ ಅದಕ್ಕೆ ಅನುಗುಣವಾಗಿಯಾದರೂ ಯೂರಿಯಾ ಗೊಬ್ಬರ ಪೂರೈಕೆ ಮಾಡಬೇಕು. ಒಂದು ಅಥವಾ ಎರಡು ಲೋಡ್ ಗೊಬ್ಬರ ಪೂರೈಸುತ್ತಾರೆ. ಕೆಲವು ರೈತರಿಗೆ ದೊರೆತರೆ ಇನ್ನು ಕೆಲವು ರೈತರಿಗೆ ದೊರೆಯುವುದಿಲ್ಲ. ಸಮರ್ಪಕವಾಗಿ ಯೂರಿಯಾ ಗೊಬ್ಬರ ಪೂರೈಸದಿದ್ದರೆ ಹೋರಾಟ ಮಾಡಬೇಕಾಗುತ್ತದೆ” ಎಂದು ಕೆಪಿಆರ್‌ಎಸ್ ಗದಗ ಜಿಲ್ಲಾ ಮುಖಂಡ ಪೀರು ರಾಠೋಡ ಒತ್ತಾಯಿಸಿದರು.

ಶರಣಪ್ಪ ಎಚ್ ಸಂಗನಾಳ
ಗದಗ ಜಿಲ್ಲೆಯ ರೋಣ ತಾಲೂಕಿನ ಸವಡಿ ಗ್ರಾಮದವರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ. ಧ್ವನಿ ಶೈಕ್ಷಣಿಕ ಸಂಪನ್ಮೂಲ ಕೇಂದ್ರದಲ್ಲಿ ಒಂದಷ್ಟು ಕಾಲ ಕೆಲಸ. ಸದ್ಯ 'ಈ ದಿನ.ಕಾಮ್'ನಲ್ಲಿ ಮೀಡಿಯಾ ಕೋಆರ್ಡಿನೇಟರ್. ಓದು, ಪಕ್ಷಿ ವೀಕ್ಷಣೆ, ಕೃಷಿಯಲ್ಲಿ ಆಸಕ್ತಿ.