ಕಾರ್ಖಾನೆಗಳಲ್ಲಿ ಕೆಲಸದ ಅವಧಿಯ ಮಿತಿಯನ್ನು 9 ಗಂಟೆಯಿಂದ 10 ಗಂಟೆಗೆ ವಿಸ್ತರಿಸುವ ಮಸೂದೆಯನ್ನು ಗೋವಾ ವಿಧಾನಸಭೆಯಲ್ಲಿ ಅಂಗೀಕರಿಸಲಾಗಿದೆ.
ಗೋವಾದಲ್ಲಿ ಮುಂಗಾರು ಅಧಿವೇಶನ ನಡೆಯುತ್ತಿದೆ. ಅಧಿವೇಶನದಲ್ಲಿ ನೀಲಕಂಠ ಹಲರ್ನಕರ್ ಅವರು ಕಾರ್ಮಿಕ ಸಚಿವ ಕಾರ್ಖಾನೆಗಳಲ್ಲಿ ದಿನನಿತ್ಯದ ಕೆಲಸದ ಅವಧಿಯನ್ನು ವಿಸ್ತರಿಸಲು ಕಾರ್ಖಾನೆ ಕಾಯ್ದೆಯಲ್ಲಿ ಕೆಲಸದ ಅವಧಿಯ ಮಿತಿಯ ನಿಯಮಗಳಿಗೆ ತಿದ್ದುಪಡಿ ತರುವ ‘ ಕಾರ್ಖಾನೆಗಳ (ಗೋವಾ ತಿದ್ದುಪಡಿ) ಮಸೂದೆ’ಯನ್ನು ಮಂಡಿಸಿದರು.
ಕಾರ್ಖಾನೆಗಳ (ಗೋವಾ ತಿದ್ದುಪಡಿ) ಮಸೂದೆ ಮೂಲಕ ಗೋವಾಕ್ಕೆ ಅನ್ವಯವಾಗುವಂತೆ ಕೇಂದ್ರ ಕಾರ್ಖಾನೆ ಕಾಯ್ದೆಯ ಸೆಕ್ಷನ್ 54ಕ್ಕೆ ತಿದ್ದುಪಡಿ ತರಲು ಮತ್ತು ವಯಸ್ಕ ಕಾರ್ಮಿಕರ ದೈನಂದಿನ ಕೆಲಸದ ಅವಧಿಯನ್ನು 10 ಗಂಟೆಗೆ ಏರಿಕೆ ಮಾಡಲು ಗೋವಾದ ಬಿಜೆಪಿ ಸರ್ಕಾರ ಮುಂದಾಗಿದೆ.
ಈ ತಿದ್ದುಪಡಿಯಿಂದಾಗಿ ಗೋವಾದಲ್ಲಿ ಕಾರ್ಮಿಕರ ವಾರದ ಕೆಲಸದ ಅವಧಿಯು ಊಟದ ಅವಧಿಯೂ ಸೇರಿದಂತೆ 54 ಗಂಟೆಗಳಿಂದ 60 ಗಂಟೆಗಳಿಗೆ ಏರಿಕೆಯಾಗಲಿದೆ. ಇದು, ಕಾರ್ಮಿಕರ ಶ್ರಮದ ಲೂಟಿಗೆ ಕಾರಣವಾಗುತ್ತದೆ ಮಾತ್ರವಲ್ಲದೆ, ಕಾರ್ಮಿಕ ಕಾಯ್ದೆಗೆ ವಿರುದ್ಧವಾಗಿದೆ ಎಂದು ಆರೋಪಿಸಲಾಗಿದೆ.