ಧರ್ಮಸ್ಥಳದಲ್ಲಿ ನಡೆದಿದೆ ಎನ್ನಲಾಗಿರುವ ಸರಣಿ ಕೊಲೆಗಳು, ಅತ್ಯಾಚಾರ ಕೃತ್ಯಗಳ ತನಿಖೆಯನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ) ಆರಂಭಿಸಿದೆ. ದಕ್ಷಿಣ ಕನ್ನಡ ಜಿಲ್ಲೆಗೆ ಎಸ್‌ಐಟಿ ತಂಡ ತೆರಳಿದ್ದು, ಅವರ ಎದುರು ಶನಿವಾರ ದೂರುದಾರ ಹಾಜರಾಗಿದ್ದಾರೆ.
ಧರ್ಮಸ್ಥಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಾವಿರಕ್ಕೂ ಹೆಚ್ಚು ಮಂದಿಯನ್ನು ಅದರಲ್ಲೂ ಹೆಣ್ಣುಮಕ್ಕಳು-ಮಹಿಳೆಯರನ್ನು ಅತ್ಯಾಚಾರ, ಕೊಲೆ ಮಾಡಲಾಗಿದೆ ಎಂದು ಅಪರಿಚಿತ ದೂರುದಾರರೊಬ್ಬರು ದೂರು ನೀಡಿದ್ದಾರೆ. ತಾವೇ ಹಲವಾರು ಮೃತದೇಹಗಳನ್ನು ಹೂತಿದ್ದು, ಅವುಗಳನ್ನು ಹೊರತೆಗೆಯುತ್ತೇನೆಂದು ಹೇಳಿದ್ದಾರೆ.
ಇದೀಗ, ಕದ್ರಿಯಲ್ಲಿರುವ ಐಬಿ ಕಚೇರಿಯಲ್ಲಿ ಎಸ್‌ಐಟಿ ತಂಡದ ಎದುರು ಹಾಜರಾಗಿದ್ದಾರೆ. ಧರ್ಮಸ್ಥಳದಲ್ಲಿ ನಡೆದಿರುವ ಕೃತ್ಯಗಳ ಬಗ್ಗೆ ವಿವರಣೆ ನೀಡಲಿದ್ದಾರೆ ಎಂದು ತಿಳಿದುಬಂದಿದೆ. ಡಿಐಜಿ ಎಂ.ಎನ್ ಅನುಚೇತ್ ಸಮ್ಮುಖದಲ್ಲಿ ವಿಚಾರಣೆ ನಡೆಯಲಿದ್ದು, ಎಸ್ಐಟಿ ಅಧಿಕಾರಿಗಳು ವಿಚಾರಣೆಗೆ ಸಿದ್ಧತೆ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ.
ಪೊಲೀಸ್ ಮಹಾ ನಿರ್ದೇಶಕ ಪ್ರಣವ ಮೊಹಾಂತಿ ನೇತೃತ್ವದಲ್ಲಿ ಎಸ್ಐಟಿ ತಂಡದಲ್ಲಿ ನೇಮಕಾತಿ ವಿಭಾಗದ ಡಿಐಜಿ ಎಂ.ಎನ್ ಅನುಚೇತ್, ಸಿಎಆರ್ ಕೇಂದ್ರದ ಡಿಸಿಪಿ ಸೌಮ್ಯಲತಾ ಹಾಗೂ ಆಂತರಿಕ ಭದ್ರತಾ ವಿಭಾಗದ ಎಸ್‌ಪಿ ಜಿತೇಂದ್ರ ಕುಮಾರ್ ದಯಾಮ ಇದ್ದಾರೆ.