ಭಾರತ ಹಾಗೂ ಇಂಗ್ಲೆಂಡ್ ನಡುವಣ ಮ್ಯಾಂಚಿಸ್ಟರ್‌ನಲ್ಲಿ ನಡೆಯುತ್ತಿರುವ ನಾಲ್ಕನೇ ಟೆಸ್ಟ್ ಪಂದ್ಯ ರೋಚಕ ಘಟ್ಟದತ್ತ ಸಾಗಿದೆ. ಇಂಗ್ಲೆಂಡ್ ಸೊಗಸಾದ ಬ್ಯಾಟಿಂಗ್‌ಗೆ ಟೀಮ್ ಇಂಡಿಯಾದ ಆರಂಭಿಕ ಕೆ ಎಲ್ ರಾಹುಲ್ ಹಾಗೂ ನಾಯಕ ಶುಭಮನ್ ಗಿಲ್ ಭರ್ಜರಿ ತಿರುಗೇಟು ನೀಡಿದ್ದಾರೆ. ಟೀಮ್ ಇಂಡಿಯಾ ಇನ್ನು 137 ರನ್‌ಗಳ ಹಿನ್ನಡೆ ಅನುಭವಿಸುತ್ತಿದ್ದರೂ, ಉತ್ತಮ ಮೊತ್ತ ದಾಖಲಿಸಿಸುವತ್ತ ಸಾಗಿದೆ.
ಶನಿವಾರ ನಾಲ್ಕನೇ ದಿನದಾಟದಲ್ಲಿ ಇಂಗ್ಲೆಂಡ್ ಮೊದಲ ಇನಿಂಗ್ಸ್‌ನಲ್ಲಿ 7 ವಿಕೆಟ್‌ಗೆ 544 ರನ್ ಗಳಿಂದ ಆಟ ಮುಂದುವರೆಸಿತು. ಲಿಯಾಮ್ ಡಾಸನ್ (26) ಅವರಿಗೆ ವೇಗಿ ಜಸ್ಪ್ರೀತ್ ಬುಮ್ರಾ ಪೆವಿಲಿಯನ್ ದಾರಿ ತೋರಿಸಿದರು. 9ನೇ ವಿಕೆಟ್‌ಗೆ ನಾಯಕ ಬೆನ್ ಸ್ಟೋಕ್ಸ್ ಹಾಗೂ ಬ್ರೈಡನ್ ಕಾರ್ಸೆ ಜೋಡಿ ಅಮೋಘ ಜೊತೆಯಾಟದ ಕಾಣಿಕೆ ನೀಡಿತು. ಈ ಜೊಡಿಯನ್ನು ಕಟ್ಟಿ ಹಾಕುವಲ್ಲಿ ಟೀಮ್ ಇಂಡಿಯಾ ಬೌಲರ್‌ಗಳು ವಿಫಲರಾದರು. ಈ ಜೊಡಿ 97 ಎಸೆತಗಳಲ್ಲಿ 95 ರನ್ ಸಿಡಿಸಿತು.
ಇಂಗ್ಲೆಂಡ್ ನಾಯಕ ಬೆನ್ ಸ್ಟೋಕ್ಸ್ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಮಹತ್ವದ ಸಮಯದಲ್ಲಿ ಫಾರ್ಮ್‌ಗೆ ಮರಳಿದ್ದು ತಂಡಕ್ಕೆ ಆಧಾರವಾಗಿದ್ದಾರೆ. ಸ್ಟೋಕ್ಸ್ 198 ಎಸೆತಗಳಲ್ಲಿ 11 ಬೌಂಡರಿ, 3 ಸಿಕ್ಸರ್ ಸಹಾಯದಿಂದ 141 ರನ್ ಸಿಡಿಸಿದರು. ಅಂತಿಮವಾಗಿ ಇಂಗ್ಲೆಂಡ್ 669 ರನ್‌ಗಳಿಗೆ ಆಲೌಟ್ ಆಗಿದೆ. ಭಾರತದ ಪರ ರವೀಂದ್ರ ಜಡೇಜಾ 4 ವಿಕೆಟ್, ಜಸ್ಪ್ರೀತ್ ಬುಮ್ರಾ, ವಾಷಿಂಗ್ಟನ್ ಸುಂದರ್ ತಲಾ 2 ವಿಕೆಟ್ ಪಡೆದು ಮಿಂಚಿದರು.
ಇದನ್ನು ಓದಿದ್ದೀರಾ? ಲಾರ್ಡ್ಸ್‌ನಲ್ಲಿ ಇಂಗ್ಲೆಂಡ್ ಜಯಗಳಿಸಿದ್ದು ಹೇಗೆ? ಗೆಲುವಿಗೆ ತಂತ್ರ ರೂಪಿಸಿದ್ದು ಹೇಗಿತ್ತು?
ಸ್ಟೋಕ್ಸ್ ಸಾಧನೆ ಭಾರತದ ವಿರುದ್ಧ ಶತಕ ಬಾರಿಸಿರುವ ಬೆನ್ ಸ್ಟೋಕ್ಸ್ ಟೆಸ್ಟ್ ಕ್ರಿಕೆಟ್‌ನಲ್ಲಿ 7000 ರನ್‌ಗಳನ್ನು ಪೂರ್ಣಗೊಳಿಸಿದ್ದಾರೆ. ಈ ಮೂಲಕ ಟೆಸ್ಟ್ ಕ್ರಿಕೆಟ್‌ನಲ್ಲಿ 7 ಸಾವಿರ ರನ್ ಹಾಗೂ 200 ಕ್ಕೂ ಹೆಚ್ಚು ವಿಕೆಟ್ ಪಡೆದ ವಿಶ್ವದ ಮೂರನೇ ಆಲ್‌ರೌಂಡರ್ ಎಂಬ ಹಿರಿಮೆ ತಮ್ಮದಾಗಿಸಿಕೊಂಡರು. ಇವರಿಗಿಂತ ಮೊದಲು ಗ್ಯಾರಿ ಸೋಬರ್ಸ್ ಮತ್ತು ಜಾಕ್ವೆಸ್ ಕಾಲಿಸ್ ಈ ಸಾಧನೆ ಮಾಡಿದ್ದಾರೆ.
ಇನಿಂಗ್ಸ್ ಹಿನ್ನಡೆಯೊಂದಿಗೆ ಎರಡನೇ ಇನಿಂಗ್ಸ್ ಆರಂಭಿಸಿದ ಟೀಮ್ ಇಂಡಿಯಾದ ಆರಂಭ ಕಳಪೆಯಾಗಿತ್ತು. ಮೊದಲ ಓವರ್‌ನಲ್ಲೇ ಟೀಮ್ ಇಂಡಿಯಾದ ಆರಂಭಿಕ ಯಶಸ್ವಿ ಜೈಸ್ವಾಲ್ ಹಾಗೂ ಮೂರನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಿದ ಸಾಯಿ ಸುದರ್ಶನ್ ಔಟಾದರು.
ಖಾತೆ ತೆರೆಯುವ ಮುನ್ನವೇ ಟೀಮ್ ಇಂಡಿಯಾ ಎರಡು ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿತ್ತು. ಈ ವೇಳೆಗೆ ತಂಡಕ್ಕೆ ಆಧಾರವಾಗಿದ್ದು, ಆರಂಭಿಕ ಆಟಗಾರ ಕೆಎಲ್ ರಾಹುಲ್ ಮತ್ತು ನಾಯಕ ಶುಭಮನ್ ಗಿಲ್ ಜೋಡಿ ಅಮೋಘ ಜೊತೆಯಾಟದ ಕಾಣಿಕೆ ನೀಡಿತು.
ಈ ಜೋಡಿ 377 ಎಸೆತಗಳನ್ನು ಎದುರಿಸಿ ಅಜೇಯ 174 ರನ್‌ಗಳ ಜೊತೆಯಾಟವನ್ನು ನೀಡಿದೆ. ಕೆಎಲ್ ರಾಹುಲ್ 8 ಬೌಂಡರಿ ನೆರವಿನಿಂದ ಅಜೇಯ 87 ರನ್ ಹಾಗೂ ನಾಯಕ ಗಿಲ್ 10 ಬೌಂಡರಿ ಸಹಾಯದಿಂದ ಅಜೇಯ 78 ರನ್ ಸಿಡಿಸಿ, ಕೊನೆಯ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಭಾರತ ಇನಿಂಗ್ಸ್ ಮುನ್ನಡೆ ಸಾಧಿಸಲು 137 ರನ್ ಅವಶ್ಯಕತೆ ಇದೆ.
