ಉಪರಾಷ್ಟ್ರಪತಿ ಆಯ್ಕೆ ಹೇಗೆ ನಡೆಯುತ್ತದೆ? ಚುನಾವಣಾ ಮಾನದಂಡಗಳೇನು?

Date:

Advertisements

ಭಾರತದ 14ನೇ ಉಪರಾಷ್ಟ್ರಪತಿ ಆಗಿದ್ದ ಜಗದೀಪ್ ಧನಕರ್ ಅವರು ಆರೋಗ್ಯ ಕಾರಣಗಳನ್ನು ನೀಡಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಈಗ ಭಾರತದ ಮುಂದಿನ ಉಪರಾಷ್ಟ್ರಪತಿಯನ್ನು ಆಯ್ಕೆ ಮಾಡಬೇಕಾಗಿದೆ. ಹೀಗಾಗಿ, ಹೊಸ ಉಪರಾಷ್ಟ್ರಪತಿ ಆಯ್ಕೆಗಾಗಿ ಚುನಾವಣೆಗೆ ಚುನಾವಣಾ ಆಯೋಗವು ಪ್ರಕ್ರಿಯೆ ಆರಂಭಿಸಿದೆ.

ಭಾರತದಲ್ಲಿ ರಾಷ್ಟ್ರಪತಿ ರಾಜೀನಾಮೆ ನೀಡಿದ ಸಂದರ್ಭದಲ್ಲಿ ಉಪರಾಷ್ಟ್ರಪತಿಯನ್ನು ಕಾರ್ಯಕಾರಿ ರಾಷ್ಟ್ರಪತಿಯನ್ನಾಗಿ ನೇಮಿಸಲಾಗುತ್ತದೆ. ಆದರೆ, ಉಪರಾಷ್ಟ್ರಪತಿ ಆಗಿದ್ದವರು ಮಧ್ಯದಲ್ಲಿಯೇ ರಾಜೀನಾಮೆ ನೀಡಿದರೆ, ಕಾರ್ಯಕಾರಿ ಉಪರಾಷ್ಟ್ರಪತಿಯನ್ನು ನಾಮನಿರ್ದೇಶನ ಮಾಡುವ ಅವಕಾಶ ಭಾರತೀಯ ಸಂವಿಧಾನದಲ್ಲಿಲ್ಲ. ಹೊಸದಾಗಿಯೇ ಉಪರಾಷ್ಟ್ರಪತಿಯನ್ನು ಚುನಾವಣೆ ಮೂಲಕವೇ ಆಯ್ಕೆ ಮಾಡಬೇಕು. ಆದ್ದರಿಂದ, ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಧನಕರ್ ಅವರ ರಾಜೀನಾಮೆಯನ್ನು ಸ್ವೀಕರಿಸಿ – ಅಂಗೀಕರಿಸಿದ ತಕ್ಷಣವೇ ಚುನಾವಣಾ ಆಯೋಗವು  ಚುನಾವಣಾ ಪ್ರಕ್ರಿಯೆಯನ್ನು ಆರಂಭಿಸಿದೆ.

ಚುನಾವಣಾ ಪ್ರಕ್ರಿಯೆ

ಉಪರಾಷ್ಟ್ರಪತಿಯನ್ನು ಲೋಕಸಭೆ ಮತ್ತು ರಾಜ್ಯಸಭೆಯ ಚುನಾಯಿತ ಹಾಗೂ ನಾಮನಿರ್ದೇಶಿತ ಸದಸ್ಯರನ್ನು ಒಳಗೊಂಡ ಚುನಾವಣಾ ಕಾಲೇಜಿನಲ್ಲಿ ಪರೋಕ್ಷ ಚುನಾವಣೆ ಮೂಲಕ ಚುನಾಯಿಸಲಾಗುತ್ತದೆ. ಚುನಾವಣಾ ಪ್ರಕ್ರಿಯೆಯು ರಾಷ್ಟ್ರಪತಿಯ ಚುನಾವಣೆಯಂತೆಯೇ ನಡೆಯುತ್ತದೆ. ಆದರೆ, ಚುನಾವಣೆಯಲ್ಲಿ ಚುನಾವಣಾ ಕಾಲೇಜಿನ ಸಂಯೋಜನೆ ಮಾತ್ರ ಭಿನ್ನವಾಗಿರುತ್ತದೆ.

ರಾಷ್ಟ್ರಪತಿ ಚುನಾವಣೆಯಲ್ಲಿ ರಾಜ್ಯಸಭೆಯ ನಾಮನಿರ್ದೇಶಿತ ಸದಸ್ಯರು ಚುನಾವಣಾ ಕಾಲೇಜಿನ ಭಾಗವಾಗಿರುವುದಿಲ್ಲ. ಆದರೆ, ಉಪರಾಷ್ಟ್ರಪತಿ ಚುನಾವಣೆಯಲ್ಲಿ ನಾಮನಿರ್ದೇಶಿತರೂ ಚುನಾವಣಾ ಕಾಲೇಜಿನ ಭಾಗವಾಗಿರುತ್ತಾರೆ. ಅಲ್ಲದೆ, ರಾಷ್ಟ್ರಪತಿ ಚುನಾವಣೆಯಲ್ಲಿ ರಾಜ್ಯಗಳ ವಿಧಾನಸಭಾ ಶಾಸಕರು ಕೂಡ ಮತದಾನದ ಹಕ್ಕು ಹೊಂದಿರುತ್ತಾರೆ. ಆದರೆ, ಉಪರಾಷ್ಟ್ರಪತಿ ಚುನಾವಣೆಯಲ್ಲಿ ಲೋಕಸಭೆ ಮತ್ತು ರಾಜ್ಯಸಭೆಯ ಸಂಸದರು ಮಾತ್ರವೇ ಮತದಾನ ಮಾಡುತ್ತಾರೆ. ರಾಜ್ಯಗಳ ವಿಧಾನಸಭೆಗಳ ಶಾಸಕರು ಮತದಾನ ಮಾಡಲು ಅವಕಾಶವಿಲ್ಲ.

ಈ ಲೇಖನ ಓದಿದ್ದೀರಾ?: ಉಪರಾಷ್ಟ್ರಪತಿ ರಾಜೀನಾಮೆಗೆ ಕಾರಣಗಳೇನು?; ಮೋದಿ-ಶಾ v/s ಧನಕರ್ – ಗುದ್ದಾಟವೇನು?

ಮತದಾನವು ಗೌಪ್ಯ ಮತಪತ್ರದ ಮೂಲಕ ನಡೆಯುತ್ತದೆ. ಚುನಾವಣಾ ಕಾಲೇಜಿನ ಸದಸ್ಯರು (ಸಂಸದರು) ಯಾವುದೇ ಪಕ್ಷದ ಶಿಸ್ತಿಗೆ ಬದ್ಧರಾಗಿ ಮತದಾನ ಮಾಡುವುದಿಲ್ಲ. ಸದಸ್ಯರು ತಮ್ಮ ಇಚ್ಚೆಯ ಅಭ್ಯರ್ಥಿಗೆ ಸ್ವತಂತ್ರವಾಗಿ ಮತದಾನ ಮಾಡುವ ಹಕ್ಕು ಹೊಂದಿರುತ್ತಾರೆ.

ಮುಂದಿನ ಹಂತ

1952ರ ರಾಷ್ಟ್ರಪತಿ ಮತ್ತು ಉಪರಾಷ್ಟ್ರಪತಿ ಚುನಾವಣಾ ಕಾಯ್ದೆಯ ಪ್ರಕಾರ, ಚುನಾವಣಾ ಅಧಿಸೂಚನೆಯನ್ನು ಜಾರಿಗೊಳಿಸಿದ ನಂತರ, ಚುನಾವಣಾ ಆಯೋಗವು ನಾಮಪತ್ರಗಳ ಸ್ವೀಕಾರ, ಪರಿಶೀಲನೆ, ಹಿಂಪಡೆಯುವಿಕೆ, ಮತದಾನ ಹಾಗೂ ಎಣಿಕೆ ಸೇರಿದಂತೆ ಎಲ್ಲ ಪ್ರಕ್ರಿಯೆಗಳನ್ನು ಗರಿಷ್ಠ 32 ದಿನಗಳಲ್ಲಿ ಪೂರ್ಣಗೊಳಿಸಬೇಕು. ಸಂವಿಧಾನದ 68(2)ನೇ ವಿಧಿಯು ಮಧ್ಯಂತರ ಉಪರಾಷ್ಟ್ರಪತಿ ಚುನಾವಣೆಯನ್ನು ಯಾವ ಸಮಯದೊಳಗೆ ನಡೆಸಬೇಕು ಎಂಬುದಕ್ಕೆ ಯಾವುದೇ ಕಾಲಮಿತಿಯನ್ನು ನಿಗದಿಪಡಿಸುವುದಿಲ್ಲ. ಆದರೂ, ಚುನಾವಣೆಯನ್ನು ‘ಶೀಘ್ರವಾಗಿ’ ನಡೆಸಬೇಕು ಎಂದು ನಿರ್ದೇಶಿಸಿದೆ. ಈಗ ಹೊಸ ಉಪರಾಷ್ಟ್ರಪತಿಯ ಆಯ್ಕೆಯು ಆಗಸ್ಟ್‌ ಅಂತ್ಯದೊಳಗೆ ಪೂರ್ಣಗೊಳ್ಳುವ ಸಾಧ್ಯತೆ ಇದೆ.

ಮತದಾನ ಮತ್ತು ಸಂಖ್ಯಾ ಲೆಕ್ಕಾಚಾರ

ಉಪರಾಷ್ಟ್ರಪತಿಯನ್ನು ಲೋಕಸಭೆ ಮತ್ತು ರಾಜ್ಯಸಭೆ ಸಂಸದರು ಚುನಾಯಿಸುವುದರಿಂದ, ಎನ್‌ಡಿಎ ಅಭ್ಯರ್ಥಿಯು ಸುಲಭವಾಗಿ ಚುನಾಯಿತರಾಗುವ ಸಾಧ್ಯತೆ ಇದೆ. ಎರಡೂ ಸದನಗಳ ಪ್ರಸ್ತುತ ಒಟ್ಟು ಬಲವು ಆರು ಖಾಲಿ ಸ್ಥಾನಗಳನ್ನು ಒಳಗೊಂಡಂತೆ 786 ಆಗಿದೆ. 100% ಮತದಾನ ನಡೆದರೆ, ಅಭ್ಯರ್ಥಿಯೊಬ್ಬರ ಗೆಲುವಿಗೆ ಕನಿಷ್ಠ 394 ಮತಗಳ ಅಗತ್ಯವಿರುತ್ತದೆ. ಎನ್‌ಡಿಎಗೆ ಲೋಕಸಭೆಯಲ್ಲಿ 293 ಸಂಸದರು ಮತ್ತು ರಾಜ್ಯಸಭೆಯಲ್ಲಿ 129 ಸಂಸದರಿದ್ದಾರೆ. ಒಟ್ಟು 422 ಮತಗಳೊಂದಿಗೆ ಎನ್‌ಡಿಎ ಅಭ್ಯರ್ಥಿ ಗೆಲುವು ಸಧಿಸುವ ಸಂಭವ ಹೆಚ್ಚಿದೆ

ಯಾರು ಸ್ಪರ್ಧಿಸಬಹುದು

ಉಪರಾಷ್ಟ್ರಪತಿ ಸ್ಥಾನಕ್ಕೆ ಸ್ಪರ್ಧಿಸಲು, ಅಭ್ಯರ್ಥಿಯು ಭಾರತದ ನಾಗರಿಕನಾಗಿರಬೇಕು, ಕನಿಷ್ಠ 35 ವರ್ಷ ವಯಸ್ಸಿನವರಾಗಿರಬೇಕು, ರಾಜ್ಯಸಭೆಯ ಸದಸ್ಯರಾಗಿರಬೇಕು ಹಾಗೂ ಯಾವುದೇ ಲಾಭದಾಯಕ ಹುದ್ದೆಯನ್ನು ಹೊಂದಿರಬಾರದು.

ಅಭ್ಯರ್ಥಿಗಳ ನಾಮಪತ್ರಕ್ಕೆ ಕನಿಷ್ಠ 20 ಚುನಾವಣಾ ಸದಸ್ಯರು ಪ್ರಸ್ತಾಪಕರಾಗಿ (ಪ್ರೊಪೋಷರ್ಸ್‌) ಮತ್ತು 20 ಚುನಾವಣಾ ಸದಸ್ಯರು ಸೆಕೆಂಡರ್‌ಗಳಾಗಿ ಸಹಿ ಮಾಡಬೇಕು. ಆಗ ಮಾತ್ರವೇ ಅವರು ಸ್ಪರ್ಧಿಸಲು ಅವಕಾಶವಿರುತ್ತದೆ.

ಅಧಿಕಾರಾವಧಿ

ಉಪರಾಷ್ಟ್ರಪತಿಯು ಐದು ವರ್ಷಗಳ ಅವಧಿಗಾಗಿ ಚುನಾಯಿತರಾಗುತ್ತಾರೆ. ಆದರೆ, ಐದು ವರ್ಷಗಳ ಅಧಿಕಾರಾವಧಿ ಮುಗಿದು, ನೂತನ ಉಪರಾಷ್ಟ್ರಪತಿ ಆಯ್ಕೆ ವಿಳಂಬವಾದಲ್ಲಿ, ಚುನಾವಣೆ ನಡೆಯುವವರೆಗೂ ಅವರ ಅಧಿಕಾರವನ್ನು ವಿಸ್ತರಿಸಲು ಅವಕಾಶ ಇರುತ್ತದೆ.

ಸಂವಿಧಾನವು ಒಬ್ಬ ವ್ಯಕ್ತಿಯು ಉಪರಾಷ್ಟ್ರಪತಿಯಾಗಿ ಎಷ್ಟು ಅವಧಿಗಳಿಗೆ ಸೇವೆ ಸಲ್ಲಿಸಬಹುದು ಎಂಬುದಕ್ಕೆ ಯಾವುದೇ ನಿರ್ಬಂಧವನ್ನು ವಿಧಿಸಿಲ್ಲ. ಆದ್ದರಿಂದ, ಮಾಜಿ ಉಪರಾಷ್ಟ್ರಪತಿಯು ತಮ್ಮ ಒಂದು ಅವಧಿಯನ್ನು ಪೂರ್ಣಗೊಳಿಸಿದ ತಕ್ಷಣವೇ ಮತ್ತೆ ಸ್ಪರ್ಧಿಸಲು ಅರ್ಹರಾಗಿರುತ್ತಾರೆ. ಅವರು ನಿಗದಿತ ಪ್ರಕ್ರಿಯೆಯ ಮೂಲಕ ಚುನಾಯಿತರಾದರೆ, ಬಹು ಅವಧಿಗಳಿಗೆ ಸೇವೆ ಸಲ್ಲಿಸಬಹುದು. ಒಂದು ಅವಧಿಗಿಂತ ಹೆಚ್ಚು ಕಾಲ ಉಪರಾಷ್ಟ್ರಪತಿ ಆಗಿದ್ದವರಲ್ಲಿ ಎಸ್. ರಾಧಾಕೃಷ್ಣನ್ (1952-1962) ಮತ್ತು ಮೊಹಮ್ಮದ್ ಹಮೀದ್ ಅನ್ಸಾರಿ (2007-2017) ಪ್ರಮುಖರು. ಈ ಇಬ್ಬರೂ ಸತತ ಎರಡು ಅವಧಿಗಳಿಗೆ ಚುನಾಯಿತರಾಗಿ ಸೇವೆ ಸಲ್ಲಿಸಿದ್ದಾರೆ.

ಉಪರಾಷ್ಟ್ರಪತಿಯ ಪಾತ್ರ

ಉಪರಾಷ್ಟ್ರಪತಿ ಹುದ್ದೆಯು ರಾಷ್ಟ್ರಪತಿ ನಂತರದ ಉನ್ನತ ಸಾಂವಿಧಾನಿಕ ಹುದ್ದೆಯಾಗಿರುತ್ತದೆ. ಉಪರಾಷ್ಟ್ರಪತಿಯು ಭಾರತದಲ್ಲಿ ರಾಷ್ಟ್ರಪತಿಯ ನಂತರ ಎರಡನೇ ಅತೀಮುಖ್ಯ ವ್ಯಕ್ತಿಯಾಗಿರುತ್ತಾರೆ. ರಾಷ್ಟ್ರಪತಿಯು ಯಾವುದೇ ಸಂದರ್ಭದಲ್ಲಿ ಕಾರ್ಯನಿರ್ವಹಿಸಲು ಸಾಧ್ಯವಾಗದಿದ್ದಾಗ, ಉಪರಾಷ್ಟ್ರಪತಿಯು ಗರಿಷ್ಠ ಆರು ತಿಂಗಳವರೆಗೆ ರಾಷ್ಟ್ರಪತಿಯಾಗಿ ಕಾರ್ಯನಿರ್ವಹಿಸುತ್ತಾರೆ.

ಉಪರಾಷ್ಟ್ರಪತಿಯು ರಾಜ್ಯಸಭೆಯ ಅಧ್ಯಕ್ಷರೂ ಆಗಿರುತ್ತಾರೆ. ಅವರು ಸಂಸತ್‌ನಲ್ಲಿ ರಾಜ್ಯಸಭೆಯ ಕಲಾಪಗಳನ್ನು ಮುನ್ನಡೆಸುತ್ತಾರೆ. ರಾಷ್ಟ್ರಪತಿಯ ಅನುಪಸ್ಥಿತಿಯಲ್ಲಿ ರಾಷ್ಟ್ರಪತಿಯ ಕಾರ್ಯಗಳನ್ನು ನಿರ್ವಹಿಸುವಾಗ, ಉಪರಾಷ್ಟ್ರಪತಿಯು ರಾಜ್ಯಸಭೆಯ ಅಧ್ಯಕ್ಷರ ಕರ್ತವ್ಯಗಳನ್ನು ನಿರ್ವಹಿಸುವುದಿಲ್ಲ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕಾಶ್ಮೀರದ ಹಳ್ಳಿಗಳಲ್ಲಿ ಮುಟ್ಟು ಈಗಲೂ ಗುಟ್ಟು: ಐದು ದಿನದ ರೋಗ ಅಂತ ಕರೀತಾರೆ!

"ಕಾಲ ಎಷ್ಟು ಬದಲಾದರೂ ಜಮ್ಮು ಮತ್ತು ಕಾಶ್ಮೀರದ ಹಲವು ಹಳ್ಳಿಗಳಲ್ಲಿ ಇಂದಿಗೂ...

NCRB report-2023 | ಹಲವು ಅಪರಾಧ ಕೃತ್ಯಗಳಲ್ಲಿ ಕರ್ನಾಟಕಕ್ಕೆ ಕುಖ್ಯಾತಿ

ಭಾರತದ ವಿವಿಧ ರಾಜ್ಯಗಳಲ್ಲಿ 2023ರಲ್ಲಿ ನಾನಾ ರೀತಿಯಲ್ಲಿ ನಡೆದಿರುವ ದಾಖಲಿತ ಅಪರಾಧ...

‘ಬುಕ್‌ ಆಫ್‌ ರೆಕಾರ್ಡ್‌’ | ಶಕ್ತಿ ಪ್ರದರ್ಶಿಸಿದ ‘ಶಕ್ತಿ ಯೋಜನೆ’!

ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿರುವ ಐದು ಗ್ಯಾರಂಟಿಗಳು ರಾಜ್ಯದ ಜನರನ್ನು ಸೋಂಬೇರಿಗಳ್ಳಾನ್ನಾಗಿ...

Bihar SIR | ಬಿಜೆಪಿ-ಚುನಾವಣಾ ಆಯೋಗದ ಕುತಂತ್ರಕ್ಕೆ 47 ಲಕ್ಷ ಮತದಾರರು ಬಲಿ

ಚುನಾವಣೆಯ ಹೊಸ್ತಿಲಿನಲ್ಲಿರುವ ಬಿಹಾರದಲ್ಲಿ ಚುನಾವಣಾ ಆಯೋಗವು ಮತದಾರರ ಪಟ್ಟಿಯ ವಿಶೇಷ ತೀವ್ರ...

Download Eedina App Android / iOS

X