ಚಿಕ್ಕಮಗಳೂರು ಜಿಲ್ಲೆಯ ಬಾಳೆಹೊನ್ನೂರು, ಖಾಂಡ್ಯದಲ್ಲಿ ಸ್ಥಳೀಯರು ಸೋಮವಾರ ಸ್ವಯಂ ಪ್ರೇರಿತ ಬಂದ್ ಮಾಡಿದ್ದಾರೆ. ಸತತವಾಗಿ ಕಾಡಾನೆಯಿಂದ ಸಾವಿನ ಪ್ರಕರಣಗಳು ಹೆಚ್ಚಾಗಿದ್ದು, ಎರಡು ಆನೆಗಳನ್ನು ಹಿಡಿದು ಸ್ಥಳಾಂತರ ಮಾಡಲು ಅರಣ್ಯ ಇಲಾಖೆ ನಿರ್ಧರಿಸಿದೆ.

ಬಾಳೆಹೊನ್ನೂರು, ಖಾಂಡ್ಯ, ಹುಯಿಗೇರೆ, ದೇವದಾನ ಸೇರಿ ಸುತ್ತಮುತ್ತಲ ಗ್ರಾಮಗಳಲ್ಲಿ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿ ಬಂದ್ ನಡೆಸಲಾಗುತ್ತಿದೆ. ಮಲೆನಾಡು ಹಿತರಕ್ಷಣಾ ಸಮಿತಿ, ಖಾಂಡ್ಯ ನಾಗರಿಕ ರಕ್ಷಣಾ ವೇದಿಕೆ, ಮಲೆನಾಡು ಅಡಿಕೆ ಬೆಳೆಗಾರರ ಸಂಘದ ನೇತೃತ್ವದಲ್ಲಿ ಪ್ರತಿಭಟನೆ ಆರಂಭವಾಗಿದೆ ಎಂದು ಸಮಿತಿಯ ಸುಂದ್ರೇಶ್ ಈದಿನ. ಕಾಮ್ ಜೊತೆ ಮಾತಾಡಿದರು.

ಬಾಳೆಹೊನ್ನೂರಿನಲ್ಲಿ ಶಾಲಾ- ಕಾಲೇಜುಗಳನ್ನು ಸ್ಥಳೀಯರು ಬಂದ್ ಮಾಡಿಸಿದ್ದಾರೆ. ವಾಹನ ಸಂಚಾರ ಸಂಚಾರವನ್ನೂ ಬಂದ್ ಮಾಡಲಾಗಿದೆ. ಇದರಿಂದ ಚಿಕ್ಕಮಗಳೂರಿನಿಂದ ಶೃಂಗೇರಿ, ಕೊಪ್ಪ, ಎನ್.ಆರ್.ಪುರ ಸಂಪರ್ಕ ಕಡಿತಗೊಂಡಿದೆ. ವಾಹನಗಳು ಸಾಲುಗಟಿ ನಿಂತಿವೆ.

ನಾಲ್ಕು ದಿನಗಳ ಅಂತರದಲ್ಲಿ ಆನೆ ದಾಳಿಗೆ ಇಬ್ಬರು ಬಲಿಯಾಗಿದ್ದಾರೆ. ಕೂಡಲೇ ಆನೆಗಳನ್ನು ಹಿಡಿದು ಸ್ಥಳಾಂತರ ಮಾಡಬೇಕು, ಸುತ್ತಮುತ್ತಲಿನ ಜನ ವಸತಿವಿರುವ ಪ್ರದೇಶದಲ್ಲಿ ರಕ್ಷಣೆ ಕೊಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದ್ದಾರೆ.