ಆನ್‌ಲೈನ್‌ನಲ್ಲಿ ನಿದ್ದೆ ಮಾತ್ರೆ ಖರೀದಿಸಲು ಹೋಗಿ 62 ವರ್ಷದ ವೃದ್ಧೆಯೊಬ್ಬರು ಡಿಜಿಟಲ್ ಅರೆಸ್ಟ್‌ಗೆ ಒಳಗಾಗಿ ಬರೋಬ್ಬರಿ 77 ಲಕ್ಷ ರೂಪಾಯಿ ಹಣವನ್ನು ಕಳೆದುಕೊಂಡಿದ್ದಾರೆ. 2024ರ ಆಗಸ್ಟ್ ತಿಂಗಳಲ್ಲಿ ಮಹಿಳೆ ನಿದ್ರೆ ಮಾತ್ರೆಗಳನ್ನು ಆನ್‌ಲೈನ್‌ನಲ್ಲಿ ಹುಡುಕುತ್ತಾ ಒಂದು ವೆಬ್‌ಸೈಟ್ ತೆರೆದಿದ್ದಾರೆ. ಅಲ್ಲಿ ತನಗೆ ಅಗತ್ಯವಿರುದ ಔಷಧಿಗಳನ್ನು ಆರ್ಡರ್ ಮಾಡಿದ್ದಾರೆ. ಬಳಿಕ ಅದನ್ನು ಮರೆತಿದ್ದಾರೆ.
ಆದರೆ ಕೆಲವು ಸಮಯದ ಬಳಿಕ ಮಾದಕ ದ್ರವ್ಯ ನಿಯಂತ್ರಣ ಬ್ಯೂರೋ (NCB) ಅಧಿಕಾರಿ ಎಂದು ಹೇಳಿಕೊಂಡ ವ್ಯಕ್ತಿಯೊಬ್ಬ ಮಹಿಳೆಗೆ ಕರೆ ಮಾಡಿದ್ದು ‘ಅಕ್ರಮ ಔಷಧಿ’ಗಳನ್ನು ಖರೀದಿಸುತ್ತಿರುವುದಕ್ಕೆ ಶಿಕ್ಷೆಯಾಗಲಿದೆ ಎಂದು ಬೆದರಿಸಿ ಡಿಜಿಟಲ್ ಅರೆಸ್ಟ್‌ಗೆ ಒಳಪಡಿಸಿದ್ದಾರೆ. ಇದರಿಂದಾಗಿ ದೆಹಲಿಯ ವಸಂತ್ ಕುಂಜ್‌ನಲ್ಲಿ ಒಂಟಿಯಾಗಿ ವಾಸಿಸುವ ಮಾಜಿ ಶಿಕ್ಷಕಿ ನೀತು ಭಯಭೀತರಾಗಿದ್ದಾರೆ.
ಇದನ್ನು ಓದಿದ್ದೀರಾ? ಟೆಕ್ ಸುದ್ದಿ | ಒಟಿಪಿ ಸಂದೇಶಗಳ ಆಟೋ ಡಿಲೀಟ್ ಹಾಗೂ ಆನ್‌ಲೈನ್‌ನಲ್ಲಿ ಪಾಸ್‌ಪೋರ್ಟ್ ಅರ್ಜಿ ಸಲ್ಲಿಸುವ ವಿಧಾನ
ಇನ್ನು ಎನ್‌ಸಿಬಿಯ ವ್ಯಕ್ತಿ ಎಂದು ಹೇಳಿಕೊಂಡ ವ್ಯಕ್ತಿ “ನೀವು ದೆಹಲಿಯಲ್ಲಿ ಮಾದಕ ದ್ರವ್ಯಗಳನ್ನು ಪೂರೈಸುತ್ತಿದ್ದೀರಿ ಎಂದು ಇಲಾಖೆ ಅನುಮಾನಿಸುತ್ತಿದೆ” ಎಂದು ಮಹಿಳೆಗೆ ಹೇಳಿದ್ದಾನೆ. ಹಾಗೆಯೇ ಈ ವ್ಯಕ್ತಿ ವೃದ್ಧ ಮಹಿಳೆಗೆ ಎರಡು ಆಯ್ಕೆಗಳನ್ನು ನೀಡಿದ್ದಾನೆ. ಬ್ಯಾಂಕ್ ಖಾತೆ ವಿವರಗಳನ್ನು ಪರಿಶೀಲಿಸಲು ಸ್ವಲ್ಪ ಹಣವನ್ನು ವರ್ಗಾಯಿಸಿ ಅಥವಾ ಬಂಧನ ವಾರೆಂಟ್ ಅನ್ನು ಕಳುಹಿಸಲಾಗುವುದು, ಇವೆರಡರಲ್ಲಿ ಒಂದನ್ನು ಆಯ್ಕೆ ಮಾಡಿಕೊಳ್ಳಿ ಎಂದು ಆ ವ್ಯಕ್ತಿ ಹೇಳಿದ್ದಾನೆ. ಈ ವೇಳೆ ಮಹಿಳೆ ನೀತು ಮೂರು ಲಕ್ಷ ರೂಪಾಯಿಗಳನ್ನು ಬೇರೆ ಬೇರೆ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಿದ್ದಾರೆ.
ಇದಾದ ಹತ್ತು ದಿನಗಳ ನಂತರ ನೀತು ಅವರಿಗೆ ಮತ್ತೊಂದು ಕರೆ ಬಂದಿದ್ದು ಎನ್‌ಸಿಬಿ ಅಧಿಕಾರಿ ಎಂದು ಹೇಳಿಕೊಂಡ ವ್ಯಕ್ತಿ “ನೀವು ಅಗತ್ಯ ದಾಖಲೆಗಳನ್ನು ನೀಡಿದರೆ ನೀವು ಮುಗ್ಧರು ಎಂದು ಖಚಿತಪಡಿಸುತ್ತೇನೆ. ನೀವು ಕಳೆದುಕೊಂಡ ಹಣವನ್ನೂ ಮರಳಿ ನಿಮಗೆ ಲಭಿಸುವಂತೆ ಮಾಡುತ್ತೇನೆ” ಎಂದು ಭರವಸೆ ನೀಡಿದ್ದಾನೆ.
ಇದರಂತೆ ಎರಡು ದಿನಗಳಲ್ಲಿ, 62 ವರ್ಷದ ಮಹಿಳೆಯ ಖಾತೆಗೆ 20,000 ರೂಪಾಯಿ ಜಮೆಯಾಗಿದೆ. ಇದರಿಂದಾಗಿ ತಾನು ಕಳೆದುಕೊಂಡ ಹಣ ಮರಳಿ ಪಡೆಯಲು ಸಾಧ್ಯವಿದೆ. ಆತ ಒಳ್ಳೆಯ ವ್ಯಕ್ತಿ ಎಂದು ಮಹಿಳೆ ನಂಬಿದರು ಎನ್ನಲಾಗಿದೆ. ಅದಾದ ಬಳಿಕ ತನ್ನನ್ನು ತಾನು ಎನ್‌ಸಿಬಿ ಅಧಿಕಾರಿ, ‘ಒಳ್ಳೆಯ ಪೊಲೀಸ್’ ಎಂದು ಪರಿಚಯಿಸಿಕೊಂಡ ವ್ಯಕ್ತಿ ಸೇರಿ ನಾಲ್ವರು ಪುರುಷರು ವಾಟ್ಸಾಪ್ ವಿಡಿಯೋ ಕಾಲ್ ಮಾಡಿದ್ದರು.
ಈ ನಾಲ್ವರು ತಾವು ಅಧಿಕಾರಿಗಳು ಎಂದು ಹೇಳಿಕೊಂಡಿದ್ದು ಮಹಿಳೆಯ ಮೊಬೈಲ್‌ನ ಸ್ಕ್ರೀನ್‌ಶೇರ್ ಮಾಡುವಂತೆ, ಬ್ಯಾಂಕ್ ಖಾತೆಯ ಆಪ್ ಅನ್ನು ತೆರೆಯುವಂತೆ ತಿಳಿಸಿದ್ದಾರೆ. ಹಾಗೆಯೇ ಎಲ್ಲ ಹಣವನ್ನು ಹಿಂದಿರುಗಿಸಲು ಈ ಪ್ರಕ್ರಿಯೆ ಎಂದು ಹೇಳಿದ್ದಾರೆ. ಈಗಾಗಲೇ ಆ ನಾಲ್ವರ ಪೈಕಿ ಓರ್ವ ವ್ಯಕ್ತಿಯನ್ನು ನಂಬಿದ್ದ ಮಹಿಳೆ ಈ ನಾಲ್ವರು ಹೇಳಿದಂತೆಯೇ ಮೊಬೈಲ್ ಸ್ಕ್ರೀನ್ ಶೇರ್ ಮಾಡಿ ನೆಟ್ ಬ್ಯಾಂಕಿಂಗ್ ತೆರೆದಿದ್ದಾರೆ.
ಇದಾದ ಬಳಿಕ ಮಹಿಳೆಯ ಮೊಬೈಲ್ ಹಲವು ಡೆಬಿಟ್ ಸಂದೇಶಗಳು ಬಂದಿದೆ. ಅದರಲ್ಲಿ 5 ಲಕ್ಷ ರೂ.ಗಳಿಂದ 10 ಲಕ್ಷ ರೂ.ಗಳವರೆಗಿನ ವಹಿವಾಟುಗಳು ನಡೆದಿರುವುದು ತಿಳಿದುಬಂದಿದೆ. ಮಹಿಳೆ ‘ಒಳ್ಳೆಯ ಪೊಲೀಸ್’ ಎಂದು ಹೇಳಿಕೊಂಡ ವ್ಯಕ್ತಿಗೆ ಕರೆ ಮಾಡಿದ್ದು, ಆತನ ಮೊಬೈಲ್ ಸ್ವಿಚ್ ಆಫ್ ಆಗಿತ್ತು ಎನ್ನಲಾಗಿದೆ.
ಇದನ್ನು ಓದಿದ್ದೀರಾ? ಬೆಳಗಾವಿ: ಡಿಜಿಟಲ್ ಅರೆಸ್ಟ್ : ದಂಪತಿ ಆತ್ಮಹತ್ಯೆಗೆ ಕಾರಣವಾಗಿದ್ದ ಆರೋಪಿ ಬಂಧನ
ಈ ಸಂಬಂಧ ಕಳೆದ ವರ್ಷ ಸೆಪ್ಟೆಂಬರ್ 24ರಂದು ವೃದ್ಧೆ ದೂರು ನೀಡಿದ್ದಾರೆ. ಎಸಿಪಿ ಮನೋಜ್ ಕುಮಾರ್ ಮತ್ತು ಸಬ್ ಇನ್‌ಸ್ಪೆಕ್ಟರ್ ಕರಮ್‌ವೀರ್ ನೇತೃತ್ವದ ತಂಡವು ಡಿಜಿಟಲ್ ಅರೆಸ್ಟ್‌ನ ತನಿಖೆಯನ್ನು ಪ್ರಾರಂಭಿಸಿತ್ತು. ಸುಮಾರು ಒಂಬತ್ತು ತಿಂಗಳ ನಂತರ ಅಂದರೆ 2025ರ ಜೂನ್ 24ರಂದು ಪೊಲೀಸರು ಸುಳಿವು ಪಡೆದು ಆರೋಪಿಗಳಲ್ಲಿ ಒಬ್ಬನಾದ ಅಖಿಲೇಶ್‌ನನ್ನು ದೆಹಲಿಯ ಮುಖರ್ಜಿ ನಗರದಲ್ಲಿ ಬಂಧಿಸಿದ್ದಾರೆ. ಅದಾದ ಬಳಿಕ ಆತನ ಸಹಚರರಾದ ಅಮ್ಜದ್, ಶಾಹಿದ್ ಮತ್ತು ಶಕೀಲ್ ಕೂಡಾ ತಪ್ಪೊಪ್ಪಿಕೊಂಡಿದ್ದಾರೆ. ಅವರ ಬಂಧನವೂ ನಡೆದಿದೆ.
ಇನ್ನು ನಕಲಿ ಎನ್‌ಸಿಬಿ ಅಧಿಕಾರಿ ಅಥವಾ ‘ಕೆಟ್ಟ ಪೊಲೀಸ್’ ಎಂದು ನಟಿಸಿದ ನಾಲ್ಕನೇ ಆರೋಪಿ ಹಮೀದ್ ಅನ್ನು ಜುಲೈ 1ರಂದು ಪೊಲೀಸರು ರಾಜಸ್ಥಾನದ ದೀಗ್‌ನಲ್ಲಿರುವ ಹಮೀದ್ ಮನೆಯಲ್ಲಿ ಪೊಲೀಸರು ಬಂಧಿಸಿದ್ದಾರೆ.
ಐವರು ಆರೋಪಿಗಳಿಂದ ವಶಪಡಿಸಿಕೊಂಡ ಮೊಬೈಲ್ ಫೋನ್‌ಗಳಲ್ಲಿ, ಇತರ ಹಲವು ಮಂದಿಗೆ ಲೈಂಗಿಕ ಕಿರುಕುಳ ನೀಡಿರುವ ಪುರಾವೆಗಳೂ ಸಿಕ್ಕಿವೆ ಎಂದು ವರದಿಯಾಗಿದೆ. ಈ ಬಗಗ್ಎ ಹೆಚ್ಚಿನ ತನಿಖೆ ನಡೆಯುತ್ತಿದೆ.
